ಪೊಮೆಟೊ ಕೃಷಿ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
'ಪೊಮೆಟೊ' ಎಂಬುದು'ಪೊಟೆಟೊ'(ಆಲೂಗೆಡ್ಡೆ) ಮತ್ತು 'ಟೊಮೆಟೊ' ಪದಗಳ ಮಿಶ್ರಣದಿಂದ ಉಂಟಾದ ಹೊಸ ಪದ. ಪದ ಮಿಶ್ರಣ ಮಾತ್ರವಲ್ಲ, ಸಸ್ಯಗಳ ಮಿಶ್ರಣ ಕೂಡಾ ಇದೆ. ಆಲೂಗೆಡ್ಡೆ ಮತ್ತು ಟೊಮೆಟೊ ಎರಡೂ ಬೆಳೆಗಳು ಒಂದೇ ಗಿಡದಲ್ಲಿ ಬೆಳೆಯುವುದನ್ನು ಕಾಣುವುದೇ ಇಲ್ಲಿರುವ ವಿಶೇಷ. ಇದರಲ್ಲಿ ಅಡಗಿರುವ ಸಾಮಾನ್ಯ ತಂತ್ರಜ್ಞಾನ ಎಂದರೆ ಕಸಿ ಮಾಡುವಿಕೆ. ಉಳಿದ ಕಸಿ ಮಾಡಿರುವಂತಹ ಸಸ್ಯಗಳ ಹಾಗೆಯೇ 'ಪೊಮೆಟೊ' ಗಿಡ, ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಬೆಳೆಯುವುದಿಲ್ಲ. ಏಕೆಂದರೆ ಇವೆರಡು ಸಸ್ಯಗಳ ತಳಿಗಳು ಬೇರೆಯೇ ಆಗಿವೆ. ಆದರೆ ಅವು ಆಹಾರ ಮತ್ತು ಬೆಳವಣಿಗೆಗೋಸ್ಕರ ಪರಸ್ಪರ ಅವಲಂಬಿತವಾಗಿರುತ್ತವೆ.
ಕಸಿ ಮಾಡುವ ವಿಧಾನ ಹಾಗೂ ಪಾಲಿಸಬೇಕಾದ ಕೆಲವು ನಿಯಮಗಳು:
- ೧೨ ವಾರಗಳಲ್ಲಿ ಹೂ ಬಿಟ್ಟು ಹಣ್ಣು ಬೆಳೆಯುವಂತಹ ಟೊಮೆಟೊ ಗಿಡಗಳನ್ನು ಬಳಸಿದರೆ ಉತ್ತಮ.
- ಎರಡು ಸಸ್ಯಗಳ ಕಾಂಡದ ದಪ್ಪ ಒಂದೇ ರೀತಿ ಇರಬೇಕು.
- ಆಲೂಗೆಡ್ಡೆ ಗಿಡವು ಕೆಳಭಾಗವಾಗಿ (ಕಾಂಡ+ಬೇರುಗಳು) ಹಾಗೂ ಟೊಮೆಟೊ ಗಿಡವು ಮೇಲ್ಭಾಗವಾಗಿ(ಕಾಂಡ+ ಎಲೆ+ ಹೂವುಗಳು) ಸರಿಯಾಗಿ ಇರುವಂತೆ ಜೋಡಿಸಬೇಕು.
- ಈ ಎರಡೂ ಸಸ್ಯಗಳ ಕುಟುಂಬ ಒಂದೇ ಆಗಿದ್ದು (Solanaceae), ಹಲವಾರು ರಾಸಾಯನಿಕಗಳು ಒಂದಕ್ಕೊಂದು ಹೋಲುತ್ತವೆ. ಆದ್ದರಿಂದ ಕಸಿ ಮಾಡಿ ಜೋಡಿಸಿದ ಗಿಡಗಳು ಸಾಯವು.
- ಹೀಗೆ ಆಲೂಗೆಡ್ಡೆ ಗಿಡವು ನೀರು ಮತ್ತು ಆಹಾರವನ್ನು ಬೇರುಗಳ ಮೂಲಕ ಹೀರಿಕೊಂಡರೆ, ಟೊಮೆಟೊ ಗಿಡವು ಎಲೆಗಳ ಮೂಲಕ ಬೆಳಕನ್ನು ಹೀರಿ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಸಹಾಯ ಮಾಡುತ್ತವೆ.
ಹೆಚ್ಚಾಗಿ ಕಸಿ ಮಾಡಿದಂತಹ ಎಲ್ಲಾ ಸಸ್ಯಗಳು ಇದೇ ರೀತಿಯಲ್ಲಿ ಬೆಳೆಯುತ್ತವೆ. ಈ ವಿಧಾನದಿಂದ ಬೆಳೆದ ತರಕಾರಿ ಅಥವಾ ಹಣ್ಣು-ಹಂಪಲುಗಳಿಂದ ಜೀವ ಸಂಕುಲಕ್ಕೆ ಯಾವ ಹಾನಿಯೂ ಇಲ್ಲ. ಅದಲ್ಲದೆ ಈ ತಂತ್ರಜ್ಞಾನದಿಂದ ಎರಡು ರೀತಿಯ ಬೆಳೆಗಳನ್ನು ಒಂದೇ ಗಿಡದಿಂದ ಪಡೆಯಬಹುದಾಗಿದೆ. ಇದರಿಂದ ಕಡಿಮೆ ಜಮೀನಿನಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ಉತ್ಪನ್ನ ಸಾಧ್ಯವಾಗುತ್ತದೆ. ಹೀಗೆ ಸಮಯ, ಸ್ಥಳಾವಕಾಶ ಹಾಗು ಪರಿಶ್ರಮದ ಉಳಿತಾಯ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಕಸಿ ವಿಧಾನವು ಸೂಕ್ಷಾಣು ಜೀವಿಗಳಿಂದ ಸಸ್ಯಗಳಿಗೆ ರಕ್ಷಣೆ ಸಿಗುತ್ತದೆ ಎಂದು ಹೇಳಲಾಗಿದೆ. ಈ ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕಸಿ ವಿಧಾನದಿಂದ ಪೊಮೆಟೊ ಬೆಳೆ ಉತ್ಪನ್ನ, ಜೀವವಿಜ್ಞಾನವು ಈ ಲೋಕಕ್ಕೆ ನೀಡಿದ ಉತ್ತಮ ಕೊಡುಗೆ ಎಂದು ಹೇಳಬಹುದು. ಆದುದರಿಂದ ಪೊಮೆಟೊ ಕೃಷಿಯು ಜೀವವಿಜ್ಞಾನದಲ್ಲಿ ಹುಟ್ಟಿದಂತಹ ಹೊಸ ಚಿಗುರಾಗಿದೆ.