ಪುನ್ನಾಗ ಮರವು ಗಟ್ಟಿಫರೆ (ಕ್ಲೂಸಿಯೇಸೀ) ಕುಟುಂಬಕ್ಕೆ ಸೇರಿದ ವನ್ಯ ವೃಕ್ಷ. ಸುರಹೊನ್ನೆ, ಪಿನ್ನೇಕಾಯಿ, ಹೊಮ್ಮೆ ಪರ್ಯಾಯ ನಾಮಗಳು. ಕ್ಯಾಲೊಫಿಲಮ್ ಐನೊಫಿಲಮ್ ಇದರ ಶಾಸ್ತ್ರೀಯ ನಾಮ. ಇಂಗ್ಲಿಷಿನಲ್ಲಿ ಅಲೆಕ್ಸಾಂಡ್ರಿಯನ್ ಲಾರೆಲ್ ಎಂದು ಕರೆಯಲಾಗುತ್ತದೆ. ಈ ಮರದ ಪರಿಮಳಭರಿತ ಹೂಗಳನ್ನು ದೇವತೆಗಳು ಉಪಯೋಗಿಸುತ್ತಾರೆಂಬ ಭಾವನೆಯಿದೆ. ಸುರಹೊನ್ನೆ ಎಂಬ ಹೆಸರು ಬರಲು ಇದೇ ಕಾರಣವಿರಬೇಕು. ಭಾರತ, ಅಂಡಮಾನ್, ಬರ್ಮ, ಶ್ರೀಲಂಕಾಗಳಲ್ಲಿ ಇದು ಹೇರಳವಾಗಿ ಬೆಳೆಯುತ್ತದೆ.

ನಿತ್ಯ ಹರಿದ್ವರ್ಣ ಮರ ಇದು. ಹೆಚ್ಚು ಎತ್ತರಕ್ಕೆ ಬೆಳೆಯದು. ನೆಲ ಫಲವತ್ತಾಗಿದ್ದರೆ ಸುಮಾರು 8 ಮೀ. ಎತ್ತರಕ್ಕೆ ಬೆಳೆಯುತ್ತದೆ. ಪುನ್ನಾಗದ ಎಲೆಗಳ ಮೇಲ್ಭಾಗ ಹಸಿರು ಬಣ್ಣದ್ದು. ತಳ ಭಾಗ ಬೂದು ಬಣ್ಣದ್ದು. ಇದರ ಹೂಗಳು ಸುಗಂಧಯುಕ್ತವಾಗಿರುವುದರಿಂದ ಅಲಂಕಾರಕ್ಕಾಗಿ ಇದನ್ನು ಬೆಳೆಸುವುದಿದೆ.

ಉಪಯೋಗಗಳು ಬದಲಾಯಿಸಿ

ಕೆಂಪು ಮಿಶ್ರಿತ ಬಿಳಿ ಇಲ್ಲವೆ ಕಂದು ಬಣ್ಣದಿಂದ ಕೂಡಿರುವ ಈ ಮರದ ಚೌಬೀನೆ ಭಾರವಾಗಿದೆ. ಇದನ್ನು ಸಂಸ್ಕರಿಸಿ ಉಪಯೋಗಿಸಿದರೆ ಹೆಚ್ಚು ಬಾಳಿಕೆ ಬರುತ್ತದೆ. ಕಂಬ, ಜಂತಿ, ತೊಲೆ, ಪೀಠೋಪಕರಣಗಳ ಹಾಗೂ ರೈಲ್ವೆ ಸ್ಲೀಪರುಗಳ ತಯಾರಿಕೆಯಲ್ಲಿ ಪುನ್ನಾಗದ ಚೌಬೀನೆಯನ್ನು ಬಳಸುತ್ತಾರೆ. ನೀರಿನ ಸಂಪರ್ಕದಲ್ಲಿದ್ದರಂತೂ ಈ ಚೌಬೀನೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಎನ್ನಲಾಗಿದೆ. ಆದ್ದರಿಂದ ಹಡಗು, ದೋಣಿಗಳಲ್ಲೂ ಇದನ್ನು ಬಳಸುವುದಿದೆ.

ಪುನ್ನಾಗದ ಬೀಜಗಳಿಂದ ಕಪ್ಪುಮಿಶ್ರಿತ ಹಸುರು ಬಣ್ಣದ ಮತ್ತು ಮಂದವಾದ ಎಣ್ಣೆ ಲಭಿಸುತ್ತದೆ. ಇದಕ್ಕೆ ಸಹಿಸಲಶಕ್ಯವಾದ ವಾಸನೆಯುಂಟು. ಇದನ್ನು ಸಾಬೂನು ತಯಾರಿಕೆಗೂ ದೀಪಗಳಲ್ಲಿ ಉರಿಸಲೂ ಬಳಸಲಾಗುತ್ತದೆ. ವಾತರೋಗ ಹಾಗೂ ಚರ್ಮರೋಗಗಳಿಗೆ ಈ ಎಣ್ಣೆಯನ್ನು ಲೇಪಿಸುವುದಿದೆ. ಕುಷ್ಠ ರೋಗದಿಂದುಂಟಾಗುವ ನೋವನ್ನು ಕಡಿಮೆ ಮಾಡಲು ಈ ಎಣ್ಣೆಯನ್ನು ಚುಚ್ಚುಮದ್ದಾಗಿ ಉಪಯೋಗಿಸುವುದುಂಟು. ಮೆರುಗೆಣ್ಣೆಯಾಗಿಯೂ ಇದನ್ನು ಬಳಸುತ್ತಾರೆ. ಕಾಯಿಧೂಪ ಮರದ ಗೋಂದಿನೊಡನೆ ಪುನ್ನಾಗದ ಮೇಣವನ್ನು ಬೆರೆಸಿ ದೋಣಿಗಳಲ್ಲಿ ಹಲಗೆಗಳ ಸಂದುಗಳನ್ನು ಮುಚ್ಚಲು ಉಪಯೋಗಿಸುವುದುಂಟು.

ಪುನ್ನಾಗದ ಹಲವು ಭಾಗಗಳಿಗೆ ಔಷಧಿಯ ಮಹತ್ವವುಂಟು. ಇದರ ತೊಗಟೆಯಲ್ಲಿ ಟ್ಯಾನಿನ್ ಎಂಬ ವಸ್ತುವಿದೆ. ತೊಗಟೆಯನ್ನು ಜಜ್ಜಿ ಹಿಂಡಿದಾಗ ಬರುವ ರಸವನ್ನು ವಿರೇಚಕವಾಗಿ ಉಪಯೋಗಿಸುತ್ತಾರೆ. ಪುಡಿ ಮಾಡಿದ ತೊಗಟೆಯ ಕಷಾಯದಿಂದ ಹುಣ್ಣುಗಳನ್ನು ತೊಳೆಯುವುದುಂಟು. ಬೀಜಗಳಿಂದ ತೆಗೆದ ಎಣ್ಣೆ ಗನೋರಿಯ ರೋಗಕ್ಕೆ ಮದ್ದು.

ಪುನ್ನಾಗದ ತೊಗಟೆಯ ಮೇಣವನ್ನು ಗಾಯ ಮತ್ತು ಹುಣ್ಣುಗಳನ್ನು ವಾಸಿ ಮಾಡಲು ಉಪಯೋಗಿಸುತ್ತಾರೆ. ಶರೀರದ ಒಳ ಅಂಗಾಂಗಗಳಲ್ಲಿ ಸಂಭವಿಸುವ ರಕ್ತಸ್ರಾವವನ್ನು ತಡೆಗಟ್ಟಲು ತೊಗಟೆಯ ಕಷಾಯ ಉಪಯುಕ್ತ. ಬಾತುಕೊಂಡಿರುವ ಕಣ್ಣುಗಳ ಮೇಲೆ ನೀರಿನಲ್ಲಿ ನೆನೆಸಿದ ಎಲೆಗಳನ್ನು ಹಚ್ಚಿದರೆ ಗುಣ ಕಂಡುಬರುತ್ತದೆ. ಎಲೆಗಳಲ್ಲಿ ಸ್ಯಾಪೋನಿನ್ ಮತ್ತು ಹೈಡ್ರೋಸೈಯನಿಕ್ ಆಮ್ಲಗಳಿರುವುದರಿಂದ ಇವು ಮೀನುಗಳಿಗೆ ಪ್ರಾಣಾಂತಿಕ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪುನ್ನಾಗ&oldid=912948" ಇಂದ ಪಡೆಯಲ್ಪಟ್ಟಿದೆ