ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಎಂದರ್ಥ. ಪುದಿಯ ಅರಿ ಎನ್ನುವದರ ಸಮಾಸ ಪುತ್ತರಿ. ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ಹೊಸ ಅಕ್ಕಿಯನ್ನು, ವಾಸ್ತವವಾಗಿ ಭತ್ತದ ಕದಿರನ್ನು, ಮನೆಗೆ ತರುವ ಸುಗ್ಗಿ ಹಬ್ಬ ಪುತ್ತರಿ.

ಆಚರಣೆಸಂಪಾದಿಸಿ

 • ಇದು ಎರಡು ದಿನಗಳಲ್ಲಿ ನಡೆಯುತ್ತದೆ. ಒಂದು ‘ಪಾಡಿ ಪೊಳ್ದ್’; ಇನ್ನೊಂದು ‘ನಾಡ್ ಪೊಳ್ದ್’. ಮೊದಲನೆಯದು ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರುವ ಹಬ್ಬ. ಇನ್ನೊಂದು ಇದರ ಮರುದಿನ ಕೊಡಗಿನಲ್ಲೆಲ್ಲಾ ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ. ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ‘ಕದಿರು ತೆಗೆಯಲು’ ಅರ್ಥಾತ್, ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ.
 • ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರಿನೊಳಗೆ ಬರುತ್ತದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯಾದರೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಪುತ್ತರಿ ಹಬ್ಬದ ಅಂಗವಾಗಿ ಕೊಡಗಿನಲ್ಲೆಲ್ಲಾ ಕೋಲಾಟವೇ ಮೊದಲಾದ ಹಲವು ಜಾನಪದ ನೃತ್ಯಗಳ ಪ್ರದರ್ಶನಗಳು ನಡೆಯುತ್ತವೆ. ಕುಟುಂಬದ ಪ್ರತಿ ಸದಸ್ಯನೂ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳಲು ಐನ್ ಮನೆಗೆ ಬಂದೇ ಬರಬೇಕು. ಅಷ್ಟೇ ಅಲ್ಲದೆ ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ಪುತ್ತರಿಗೆ ಐನ್ ಮನೆಯಲ್ಲಿ ಬಂದು ಸೇರಬೇಕೆಂಬ ಕಟ್ಟಳೆಯಿದೆ.

ಈಡುಸಂಪಾದಿಸಿ

 • ಕದಿರು ತೆಗೆಯುವ ದಿನಕ್ಕೆ ಒಂದು ವಾರಕ್ಕೆ ಮೊದಲು ಪುತ್ತರಿ ಹಬ್ಬದ ಪ್ರಯುಕ್ತ ನಡೆಯಲಿರುವ ಕೋಲಾಟ, ‘ಪರಿಯ ಕಳಿ’, ಮೊದಲಾದ ಆಟಗಳ ತಾಲೀಮಿಗೆ ‘ಈಡು’ ತೆಗೆಯುವದು ಎಂದು ಹೆಸರು. ರಾತ್ರಿ ಏಳು-ಏಳೂವರೆಗೆ ಪ್ರತಿ ಕುಟುಂಬ ದಿಂದ ಒಬ್ಬನಂತೆ ಇದರಲ್ಲಿ ಭಾಗವಹಿಸುವರು. ಊರ ‘ತಕ್ಕ’(ಮುಖ್ಯಸ್ಥ)ನ ನೇತೃತ್ವದಲ್ಲಿ ಊರ ‘ಮಂದಿ’ನಲ್ಲಿ (ಮೈದಾನದಲ್ಲಿ) ಈ ಆಟಗಳಲ್ಲಿ ನುರಿತವರು ತರಬೇತು ನೀಡುವರು.
 • ಊರು ಮತ್ತು ನಾಡಿನ ಮಂದುಗಳಲ್ಲಿ ಮುಂದೆ ನಡೆಯುವ ಸ್ಪರ್ಧೆಗಳಲ್ಲಿ ಯುವಕರು ಪಾಲ್ಗೊಂಡು ಉತ್ತಮ ಪ್ರದರ್ಶನಗಳನ್ನಿತ್ತು ಗ್ರಾಮಕ್ಕೆ ಕೀರ್ತಿಯನ್ನು ತರಲೆಂದು ಇದರ ಉದ್ದೇಶ. ಸುಮಾರು ನೂರು ವರ್ಷಗಳಿಗೆ ಹಿಂದೆ ಪ್ರತಿ ಕುಟುಂಬದಿಂದ ಕಡಿಮೆಯೆಂದರೆ ಒಬ್ಬನಾದರೂ ಈಡಿಗೆ ಊರ ತಕ್ಕನ ಮನೆಗೆ ಹೋಗಿ, ಅಲ್ಲಿ ರಾತ್ರಿಯೂಟವನ್ನು ಮುಗಿಸಿಕೊಂಡು ಮಂದಿಗೆ ಹೋಗುತ್ತಿದ್ದರು. ಹೋಗುವಾಗ ನಾಲ್ಕು ಜನರು ದುಡಿಗಳನ್ನು ಬಾರಿಸುತ್ತಾ ಕೊಡವ ಜಾನಪದ ಹಾಡುಗಳನ್ನು ಹಾಡುತ್ತಿದ್ದರು.
 • ಅವರ ಮುಂದೆ ಊರಿನ ಮೇದರು ಅಥವಾ ಹರಿಜನರು ದೋಳು, ವಾಲಗಗಳನ್ನು ಬಾರಿಸುತ್ತಾ ನಡೆಯುತ್ತಿದ್ದರು. ಮಂದ್ ತಲಪಿದ ನಂತರ ‘ಅರಪುವತರ’ ಹಾಕಿ ‘ನಾಡೆ’ ಕರೆಯುವರು. ನಾಡೆ ಕರೆಯುವದು ಹಾಸ್ಯಮಯವಾದ ಒಂದು ಸಣ್ಣ ಪ್ರಹಸನದ ಪ್ರದರ್ಶನ. ಇದರಲ್ಲಿ ಇಬ್ಬರಿಂದ ನಾಲ್ಕೈದು ಜನ ಭಾಗವಹಿಸುವರು.
 • ಇದಾದ ಬಳಿಕ ದೋಳಿನ ಹೊಡೆತದ ಮಟ್ಟಿಗೆ ಸರಿಯಾಗಿ ಕುಣಿಯುತ್ತಾ ಕೋಲಾಟವಾಡುವರು. ತದನಂತರ ‘ಪರಿಯಕಳಿ’ಯನ್ನಾಡುವರು. ಕೊನೆಗೆ ಸಾಮೂಹಿಕ ಕುಣಿತವನ್ನು ಕುಣಿದು, ಎಲ್ಲರು ಮಂದಿನಿಂದ ತಕ್ಕನ ಮನೆಗೆ ಹೋಗಿ, ದುಡಿ-ತಾಳಗಳನ್ನು ಹಿಂತಿರುಗಿಸಿ, ತಮ್ಮ-ತಮ್ಮ ಮನೆಗಳಿಗೆ ಹೋಗುವರು.

ಹಬ್ಬಕ್ಕೆ ಸಿದ್ಧತೆಸಂಪಾದಿಸಿ

 • ಹಿಂದೆ ಗ್ರಾಮದಲ್ಲಿ ಹಲವಾರು ಕಸುಬುದಾರರಿದ್ದಾಗ, ಹಬ್ಬಕ್ಕೆ ಬೇಕಾದ ಕುಕ್ಕೆ, ಚಾಪೆ, ಸಟ್ಟುಗ, ಕುತ್ತಿ, ಕುಡುಗೋಲು, ಕುಡಿಕೆ, ಇತ್ಯಾದಿಗಳನ್ನು ಹೊಸದಾಗಿ ತಯಾರಿಸಿ ಪ್ರತಿಯೊಂದು ಮನೆಗೂ ಕೊಂಡೊಯ್ದು ಕೊಡುತ್ತಿದ್ದರು. ಇವರಿಗೆ ಹುರಿದಕ್ಕಿಯ ಹಿಟ್ಟು, ಹುತ್ತರಿ ಗೆಣಸು, ಬೆಲ್ಲ. ಎಳ್ಳು, ಇತ್ಯಾದಿಗಳನ್ನು ಮನೆಯವರು ಕೊಡುತ್ತಿದ್ದರು. ಈಗ ಹಿಂದಿನ ವರ್ಷಗಳಲ್ಲಿ ಬಳಸಿದ್ದನ್ನೇ ಉಪಯೋಗಿಸುವರು; ಇಲ್ಲವೇ ಅಂಗಡಿಗಳಿಂದ ತರುವರು.
 • ಊರಿನ ಅರ್ಚಕನು ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಿ, ತೀರ್ಥವನ್ನೂ ತೇಯ್ದ ಗಂಧವನ್ನೂ ಪ್ರತಿಮನೆಗೂ ವಿತರಿಸುವನು. ಇವನಿಗೆ ಅಕ್ಕಿ, ತೆಂಗಿನಕಾಯಿ, ಬೆಲ್ಲ ಮತ್ತು ಬಾಳೆಹಣ್ಣುಗಳನ್ನು ಕೊಡುವರು. ಹಬ್ಬ ಪ್ರಯುಕ್ತ ಪ್ರತಿಯೊಬ್ಬರೂ ತಮ್ಮ ಮನೆಗಳಿಗೆ ಸುಣ್ಣಬಣ್ಣಗಳನ್ನು ಬಳಿದು, ಮನೆಯ ಅಂಗಳ, ಕಣ, ಕೊಟ್ಟಿಗೆಗಳು, ಮೊದಲಾದುವನ್ನು ಕಳೆ ತೆಗೆದು, ಗುಡಿಸಿ, ಸಾರಿಸಿ ಚೊಕ್ಕಟಗೊಳಿಸುವರು.

ನೆರೆ ಕಟ್ಟುವದುಸಂಪಾದಿಸಿ

 • ನೆಲ್ಲಕ್ಕಿ ನಡುಬಾಡೆಯ ಮನೆಯ (ಮಧ್ಯದಲ್ಲಿರುವ ವಿಶಾಲವಾದ ಹಜಾರದ) ತೂಗುದೀಪವನ್ನು ಹಚ್ಚಿ, ಅದರ ಕೆಳಗೆ ತಾಳೆಯೋಲೆಯ ಚಾಪೆಯನ್ನು ಹಾಸಿ, ಅದರ ಮೇಲೆ ‘ಪುತ್ತರಿ ಪಚ್ಚೆಯ’(ಹುತ್ತರಿಗಾಗಿ ನೆಯ್ದ ಬಿದಿರಿನ ಕುಕ್ಕೆ)ವನ್ನಿಟ್ಟು, ಅದರಲ್ಲಿ ಮಾವಿನೆಲೆ, ಅಶ್ವತ್ಥದೆಲೆ ಮತ್ತು ‘ಪುತ್ತರಿ ನಾರ್’(ಒಂದು ವಿಧದ ಮರದ ಕಾಂಡದಿಂದ ತೆಗೆಯಲ್ಪಡುವ ನಾರು) ಇಡುವರು.
 • ಇನ್ನೊಂದು ಕುಕ್ಕೆಯಲ್ಲಿ ಹಳೆಯ ಭತ್ತವನ್ನು ತುಂಬಿ, ಅದರ ಮೇಲೆ ಒಂದು ಸೇರಿನಲ್ಲಿ ಭತ್ತ, ಒಂದು ಅಚ್ಚೇರಿನಲ್ಲಿ ಅಕ್ಕಿ, ಪುತ್ತರಿ ಕುಡಿಕೆ (ಮಣ್ಣಿನ ಸಣ್ಣ ಕುಡಿಕೆ)ಯಲ್ಲಿ ಹುರಿದಕ್ಕಿಯ ಹಿಟ್ಟನ್ನು ತುಂಬಿಸಿಡುವರು. ಬಿದಿರಿನಲ್ಲಿ ತಯಾರಿಸಿದ ಅರೆಮೊಳ ದುದ್ದದ ಕುತ್ತಿಯಲ್ಲಿ ಸ್ವಲ್ಪ ಹಾಲು, ಜೇನು, ತುಪ್ಪ, ಎಳ್ಳು, ಶುಂಠಿ, ತೆಂಗಿನಕಾಯಿಯ ಚೂರು, ಇತ್ಯಾದಿಗಳನ್ನು ಹಾಕಿ ಈ ಕುತ್ತಿಯನ್ನು ಚಾಪೆಯ ಮೇಲಿಡುವರು. ಪಕ್ಕದಲ್ಲೇ ಕುಡುಗೋಲನ್ನಿಡುವರು.
 • ಒಂದು ಮುಕ್ಕಾಲಿಯ ಮೇಲೆ ಕಂಚಿನ ಒಂದು ತಳಿಗೆಯಲ್ಲಿ ಅಕ್ಕಿಯನ್ನು ತುಂಬಿಸಿ, ಹಚ್ಚಿದ ಹಣತೆಯೊಂದನ್ನು ಅದರ ಮೇಲಿಟ್ಟು, ಪಕ್ಕದಲ್ಲಿ ವೀಳ್ಯದೆಲೆ-ಅಡಕೆಗಳನ್ನಿಡುವರು. ಇದಕ್ಕೆ ತಳಿಯತಕ್ಕಿ ಬೊಳಕ್ ಎನ್ನುವರು. ಸ್ವಲ್ಪ ಅಕ್ಕಿಯನ್ನು ಮೊದಲೇ ನೀರಲ್ಲಿ ನೆನೆಸಿಟ್ಟಿದ್ದು, ಅದನ್ನು ದೋಸೆ ಹಿಟ್ಟಿನಂತೆ ರುಬ್ಬಿಟ್ಟುಕೊಳ್ಳುವರು.
 • ನೆರೆಕಟ್ಟಿದ ಮೇಲೆ, ತೊಂಡೆಕಾಯಿಯಂತಿರುವ ‘ಪೀರಕೆ’ಯನ್ನು ಅಡ್ಡಕ್ಕೆ ಕತ್ತರಿಸಿ, ಅದನ್ನು ಈ ಹಿಟ್ಟಿನಲ್ಲಿ ಅದ್ದಿ, ಕುಡುಗೋಲಿಗೆ, ಕುತ್ತಿಗೆ, ಸೇರು ಮತ್ತು ಅಚ್ಚೇರಿಗೆ, ಕುಡಿಕೆಗೆ ಹಾಗೂ ಮನೆಯ ಕಿಟಿಕಿ ಬಾಗಿಲುಗಳಿಗೆ ಮುದ್ರೆಯನ್ನೊತ್ತುವರು. ಇವೆಲ್ಲಾ ಕೆಲಸಗಳನ್ನು ಮೊದಲೇ ನಿಶ್ಚಯವಾದ ಮುಹೂರ್ತದಲ್ಲಿ ಮನೆಯ ಯಜಮಾನನು ಅಥವಾ ಅವನ ನೇತೃತ್ವದಲ್ಲಿ ಇತರರು ಮಾಡುವರು.

ಫಲಾಹಾರಸಂಪಾದಿಸಿ

 • ಎಲ್ಲರೂ ಒಟ್ಟಿಗೆ ಕುಳಿತು ಬೇಯಿಸಿದ ‘ಪುತ್ತರಿ ಕಳಂಜಿ’ಯನ್ನು (ಹುತ್ತರಿ ಗೆಣಸನ್ನು) ಜೇನು ಮತ್ತು ತುಪ್ಪದಲ್ಲಿ ಅದ್ದಿಕೊಂಡು ತಿನ್ನುವರು. ನಂತರ ಕದಿರು ತೆಗೆಯುವ ಮುಹೂರ್ತಕ್ಕೆ ಸ್ವಲ್ಪ ಮೊದಲು ಎಲ್ಲರೂ ನೆಲ್ಲಕ್ಕಿ ನಡುಬಾಡೆಯ ತೂಗುದೀಪದೆದುರು ನಿಲ್ಲುವರು. ಮನೆಯ ಯಜಮಾನನು, ಗುರು-ಕಾರಣರನ್ನೂ, ಇತರ ದೇವರನ್ನೂ ಪ್ರಾರ್ಥಿಸಿ, ಹಬ್ಬವನ್ನು ನಡೆಸಿ ಸುಗಮವಾಗಿ ಮನೆಗೆ ಹೊಸ ಕದಿರನ್ನು ತರಲು ಬೇಡಿಕೊಳ್ಳುತ್ತ ಕುತ್ತಿಯನ್ನು ಕೈಗೆತ್ತಿಕೊಳ್ಳುವನು.
 • ಅದನ್ನು ಅಲ್ಲಿಂದ ಗದ್ದೆಗೆ ತೆಗೆದುಕೊಂಡು ಹೋಗಿ ಕದಿರು ಕುಯ್ಯಲು ಆಯ್ಕೆಯಾದವನಿಗೆ ಕೊಡುವರು. ಇವನು ಈ ಕೆಲಸಕ್ಕೆ ಯೋಗ್ಯ ನಕ್ಷತ್ರದಲ್ಲಿ ಹುಟ್ಟಿದವನಾಗಿರತಕ್ಕದ್ದು. ಕುತ್ತಿಯನ್ನೆತ್ತಿಕೊಂಡವನ ಹೊರತು ಉಳಿದವರು ಹಿರಿಯರ ಕಾಲ್ಮುಟ್ಟಿ ನಮಸ್ಕರಿಸುವರು. ‘ತಳಿಯತಕ್ಕಿ ಬೊಳಕ’ನ್ನು ಒಬ್ಬ ಕನ್ಯೆಯ ಕೈಗೆ ಕೊಡುವರು. ಉಳಿದವರು ಕುಕ್ಕೆ, ಚಾಪೆ, ಇತ್ಯಾದಿಗಳನ್ನೆತ್ತಿಕೊಳ್ಳುವರು. ಒಬ್ಬನು ಕೋವಿಯನ್ನೆತ್ತಿಕೊಳ್ಳುವನು. ಮಕ್ಕಳು ಪಟಾಕಿಗಳನ್ನೆತ್ತಿಕೊಳ್ಳುವರು. ಕೆಲವೆಡೆ ದುಡಿ-ತಾಳಗಳನ್ನೂ ತೆಗೆದುಕೊಳ್ಳುವರು. ಹೀಗೆ ಮನೆಯವರೆಲ್ಲರೂ ತಮ್ಮ ಗದ್ದೆಗೆ ತೆರಳುವರು.

ಕದಿರು ತೆಗೆಯುವದುಸಂಪಾದಿಸಿ

 • ಎಲ್ಲರೂ ಕದಿರು ತೆಗೆಯಲೆಂದು ನಿಶ್ಚಿತವಾದ ಗದ್ದೆಯ ಜಾಗಕ್ಕೆ ಬರುವರು. ಕುತ್ತಿ ತೆಗೆದವನು ಬೆಳೆಯನ್ನು ಪೂಜಿಸಿ, ಕುತ್ತಿಯಲ್ಲಿರುವದನ್ನೆಲ್ಲಾ ಬುಡಕ್ಕೆ ಸುರಿದು ನೈವೇದ್ಯ ಮಾಡಿ, "ಪೊಲಿ ಪೊಲಿ ದೇವಾ!" ಎಂದು ಗಟ್ಟಿಯಾಗಿ ಪ್ರಾರ್ಥಿಸುವನು. ‘ಪೊಲಿ’ಯೆಂದರೆ ಹೆಚ್ಚಾಗು ಎಂದರ್ಥ. ಕೂಡಲೆ ಕೋವಿಯನ್ನೆತ್ತಿಕೊಂಡವನು ಅದನ್ನು ಆಕಾಶಕ್ಕೆ ಹಿಡಿದು ಗುಂಡು ಹಾರಿಸುವನು. ಎಲ್ಲರೂ, "ಪೊಲಿ ಪೊಲಿ ದೇವಾ!" ಎಂದು ಉಚ್ಚ ಕಂಠದಲ್ಲಿ ಪ್ರಾರ್ಥಿಸಲಾರಂಭಿಸುವರು.
 • ಕುತ್ತಿಯವನು ಮೊದಲಿಗೆ ಬೆಳೆದು ಭತ್ತದ ತೆನೆಗಳಿರುವ ಮೂರು ಪೈರುಗಳನ್ನು ಬುಡದಿಂದ ಕತ್ತರಿಸಿ, ಅದನ್ನು ಪಕ್ಕದಲ್ಲಿ ನಿಂತಿರುವವನಿಗೆ ಕೊಡುವನು. ಹೀಗೆಯೇ ಇನ್ನಷ್ಟು ಪೈರುಗಳನ್ನು ಕತ್ತರಿಸಿ ಅಲ್ಲಿ ನೆರೆದ ಎಲ್ಲರಿಗೂ ಕೊಡುವನು. ಎಲ್ಲರೂ "ಪೊಲಿ ಪೊಲಿ ದೇವಾ!" ಎಂದು ಪ್ರಾರ್ಥಿಸುತ್ತಾ ಮನೆಗೆ ತೆರಳುವರು. ಮಕ್ಕಳು ಗುಂಡಿನ ಜತೆಯಲ್ಲಿಯೇ ಪಟಾಕಿಗಳನ್ನು ಸಿಡಿಸಲಾರಂಭಿಸುವರು.
 • ಕುತ್ತಿಯನ್ನೆತ್ತಿಕೊಂಡವನು ಮನೆಗೆ ಬರುವಾಗ ದಾರಿಯಲ್ಲಿರುವ ಕೈಮಡದಲ್ಲಿ (‘ಕಾರಣ’ರೆಂದು ಪೂಜಿಸಲ್ಪಡುವ ಮನೆತನದ ಹಿರಿಯರನ್ನು ಸಂಕೇತಿಕವಾಗಿ ಪ್ರತಿಷ್ಠಾಪಿಸಲಾಗಿರುವ ಸಣ್ಣ ಗುಡಿ) ಒಂದು ಹಣತೆಯನ್ನು ಹಚ್ಚಿ, ಅದರ ಬಾಗಿಲಿಗೆ ಕದಿರನ್ನು ಕಟ್ಟುವನು. ಅವನು ಮನೆಯನ್ನು ಪ್ರವೇಶಿಸುವಾಗ ಒಬ್ಬ ಕನ್ಯೆ ಅಥವಾ ಮುತ್ತೈದೆಯು ತೊಳೆಯಲು ಅವನ ಕಾಲ್ಗಳಿಗೆ ನೀರು ಹಾಕಿ, ಕುಡಿಯಲು ಗಿಂಡಿಯಲ್ಲಿ ಹಾಲನ್ನು ಕೊಡುವಳು.
 • ತಂದ ಕದಿರಿನ ಒಂದೊಂದು ಎಳೆಯನ್ನು ಕಣದ ನಡುಗಂಭಕ್ಕೆ, ಕೈಮಡದ ಬಾಗಿಲಿಗೆ, ಮನೆಯ ಎಲ್ಲಾ ಕಿಟಿಕಿ-ಬಾಗಿಲುಗಳಿಗೆ, ಬಾವಿಗೆ ಕೊಟ್ಟಿಲುಗಳಿಗೆ, ಕಣಜಕ್ಕೆ, ಮನೆಯ ದೈನಂದಿನ ಉಪಯೋಗದ ವಸ್ತುಗಳಿಗೆ, ಇತ್ಯಾದಿಗಳಿಗೆ ಒಂದೊಂದು ಅಶ್ವತ್ಥದೆಲೆಯಲ್ಲಿ ಸುತ್ತಿ ಪುತ್ತರಿ ನಾರಿನಿಂದ ಕಟ್ಟುವರು. ಮನೆಯ ಮುಂಬಾಗಿಲಿಗೆ ಕಲಾತ್ಮಕವಾಗಿ ನೇಯ್ದು ತೋರಣ ಕಟ್ಟುವರು.

ಏಳಕ್ಕಿ ಪುಟ್ಟ್ಸಂಪಾದಿಸಿ

ಅಕ್ಕಿಹಿಟ್ಟು, ಎಳ್ಳು, ಶುಂಠಿ, ತೆಂಗಿನ ತುರಿ, ಹಾಗಲಕಾಯಿಯ ಮುಳ್ಳು, ಪೆರಂಬು ಕೊಡಿ ಮತ್ತು ಕಲ್ಲುಹರಳುಗಳನ್ನು ಬಾಳೆಹಣ್ಣು, ಹಾಲು ಮತ್ತು ಜೇನಿನೊಡನೆ ಕಲಸಿ, ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಚಾಪೆಯ ಮೇಲೆ ಹಾಸಿದ ಅಶ್ವತ್ಥದೆಲೆಗಳ ಮೇಲೆ ಇವನ್ನಿಡುವರು. ಆಮೇಲೆ ಇವನ್ನು ಒಂದೊಂದಾಗಿ ಅಂಗೈಯಲ್ಲಿರಿಸಿಕೊಂಡು, ಗತಿಸಿದ ಪಿತೃಗಳ ಹೆಸರನ್ನು ಹೇಳಿ ನಡುಬಾಡೆಯ ಮಾಡಿಗೆ ಎಸೆಯುವರು. ಅವು ಅಲ್ಲಿಗೆ ಅಂಟಿಕೊಂಡರೆ ಪಿತೃಗಳು ಸ್ವೀಕರಿಸಿದರು ಎಂಬ ನಂಬಿಕೆ.

ಊಟಸಂಪಾದಿಸಿ

ಬೆಲ್ಲ ಸೇರಿಸಿ ಅಕ್ಕಿಯ ಪಾಯಸವನ್ನು ಮಾಡುವಾಗ ತಂದ ಹೊಸ ಕದಿರಿನಿಂದ ಕೆಲವು ಭತ್ತದ ಕಾಳುಗಳನ್ನು ತೆಗೆದು ಸುಲಿದು ಅಕ್ಕಿಯನ್ನು ಸೇರಿಸುವರು. ಕಿವುಚಿದ ಬಾಳೆ ಹಣ್ಣುಗಳೊಡನೆ ಹುರಿದಕ್ಕಿ ಹಿಟ್ಟನ್ನು ಕಲಸಿ ತಂಬುಟ್ಟನ್ನು ತಯಾರಿಸುವರು. ಮುತ್ತೈದೆಯು ಇದರಲ್ಲಿ ಸ್ವಲ್ಪವನ್ನು ಕೈಮಡ ಮತ್ತು ಮೀದಿಕೋಂಬರೆ(ದೇವರ ಕೋಣೆ)ಯಲ್ಲಿ ಮೀದಿ (ನೈವೇದ್ಯ) ಇಡುವಳು. ಬಳಿಕ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಪಾಯಸವನ್ನೂ ಎಳ್ಳು ಮತ್ತು ತುಪ್ಪವನ್ನು ಸೇರಿಸಿಕೊಂಡು ತಂಬುಟ್ಟನ್ನೂ ಸೇವಿಸುವರು.

ಕೋಲಾಟಸಂಪಾದಿಸಿ

ಮರುದಿನ ಮಧ್ಯಾಹ್ನದ ಊಟವಾದ ನಂತರ ಎಲ್ಲರೂ ಸಾಂಪ್ರದಾಯಕ ಉಡುಗೆ-ತೊಡುಗೆಗಳನ್ನು ಧರಿಸಿ ಊರಿನ ಮಂದ್‌ಗೆ ಹೋಗುವರು. ಅಲ್ಲಿರುವ ಅರಳೀಮರದ ಸುತ್ತಲೂ ದೊಡ್ಡ ವೃತ್ತಾಕಾರದಲ್ಲಿ ಪುರುಷರು ಕುಣಿಯುತ್ತಾ ದೋಳು-ವಾಲಗಗಳ ನಿನಾದಕ್ಕೆ ‘ಪೊಯಿಲೇ’ ಹಾಡನ್ನು ಹೇಳುತ್ತಾ ವಿವಿಧ ಪ್ರಕಾರಗಳ ಕೋಲಾಟಗಳನ್ನಾಡುವರು. ಇವರು ಎರಡೂ ಕೈಗಳಲ್ಲಿ ಆಳುದ್ದನೆಯ ಬೆತ್ತದ ಕೋಲುಗಳನ್ನು ಹಿಡಿದುಕೊಳ್ಳುವರು. ಕಿರುಬೆರಳ ಗಾತ್ರದ ಮೂರು-ನಾಲ್ಕು ಕೋಲುಗಳನ್ನು ಬುಡದಲ್ಲಿ ಕಟ್ಟಿ, ಹಿಡಿಕೆಯನ್ನು ಮಾಡಲಾಗಿದ್ದು ತಳಕ್ಕೆ ಕಿರುಗೆಜ್ಜೆಗಳನ್ನು ಕಟ್ಟಲಾಗಿರುತ್ತದೆ.

ಪರಿಯಕಳಿಸಂಪಾದಿಸಿ

 • ಕೋಲಾಟಗಳೆಲ್ಲಾ ಮುಗಿದ ಮೇಲೆ ಇಬ್ಬರು ಗಂಡಸರು ಬೆತ್ತದ ಗುರಾಣಿಯನ್ನೂ, ಅರೆಯಾಳುದ್ದದ ಕೋಲನ್ನೂ ಹಿಡಿದು ‘ಪರಿಯಕಳಿ’ಯನ್ನಾಡುವರು. ಮೊದಲು ಮೇದನ ದೋಳಿನ (ಪರೆಯ) ಹೊಡೆತದ ಲಯವನ್ನು ಅನುಸರಿಸಿ ಇಬ್ಬರು ಸ್ಪರ್ಧಿಗಳು ನರ್ತಿಸುವರು. ಬಳಿಕ ಕುಕ್ಕರುಗಾಲಲ್ಲಿ ಎದುರು-ಬದುರಾಗಿ ಕುಳಿತು, ಕೋಲಿನಿಂದ ಇನ್ನೊಬ್ಬನ ಮೊಣಕಾಲಿನ ಕೆಳಗೆ ಹೊಡೆಯುವರು. ಎದುರಾಳಿಯು ತನ್ನ ಗುರಾಣಿಯಿಂದ ಹೊಡೆತವನ್ನು ತಡೆಯುವನು.
 • ಈ ಹೊಡೆದಾಟದಲ್ಲಿ ಒಬ್ಬನದಕ್ಕಿಂತ ಇನ್ನೊಬ್ಬನದು ಮೇಲುಗೈಯಾದರೆ ಇದಕ್ಕೆಂದೇ ನಿಯಮಿಸಲ್ಪಟ್ಟ ಮೇಲ್ವಿಚಾರಕನು ಮಧ್ಯೆ ಪ್ರವೇಶಿಸಿ ತಡೆ ಮಾಡುವನು. ಒಟ್ಟು ಮೂರು ಸುತ್ತು ಆಡಿ ಆಟವನ್ನು ನಿಲ್ಲಿಸುವರು. ಆ ಸ್ಥಳದಿಂದ ಹೋಗುವ ಮೊದಲು ಸ್ಪರ್ಧಿಗಳು ಒಬ್ಬರನ್ನೊಬ್ಬರು ಆಲಿಂಗಿಸಿಕೊಳ್ಳುವರು. ಇದರ ಮರುದಿನ ನಾಲ್ಕೈದು ಗ್ರಾಮಗಳ ಜನರು ‘ನಾಡು ಮಂದ್’ನಲ್ಲಿ ಸೇರಿ ಇದೇರೀತಿ ಕೋಲಾಟ ಮತ್ತು ಪರಿಯಕಳಿಯನ್ನಾಡುವರು.

ಮನೆ ಹಾಡುವದುಸಂಪಾದಿಸಿ

 • ಊರು ಕೋಲು ಆದ ಬಳಿಕ ಗಂಡಸರು ತಕ್ಕನ ಮನೆಗೆ ಹೋಗುವರು. ಅಲ್ಲಿ ನಾಲ್ವರು ದುಡಿಗಳನ್ನೆತ್ತಿಕೊಂಡು, ತಕ್ಕನ ಮನೆತನದ ಕಾರಣರನ್ನು, ಪಿತೃಗಳನ್ನು ಮತ್ತು ಜೀವಂತವಾಗಿರುವವರೆಲ್ಲರನ್ನು ಕುರಿತು ಜಾನಪದ ಮಟ್ಟಿನ ಹಾಡುಗಳನ್ನು ಹಾಡುವರು. ಇದಕ್ಕೆ ಒಂದು ನಿರ್ದಿಷ್ಟ ಮೊತ್ತದ ಹಣವನ್ನು ಈ ನಾಲ್ವರಿಗೆ ಮನೆಯವರು ಕೊಡುವರು.
 • ಆ ವರ್ಷ ಮದುವೆಯಾದವರನ್ನೂ, ಹುಟ್ಟಿದ ಮಕ್ಕಳನ್ನೂ, ಆ ಮನೆಯಲ್ಲಿ ಯಾರಾದರೂ ನಂಟರಿದ್ದರೆ ಅವರನ್ನೂ ಕುರಿತು ಹಾಡಿ ಅವರಿಂದಲೂ ಹಣವನ್ನು ಪಡೆಯುವರು. ಹೀಗೆ ಪ್ರತಿಮನೆಗೂ ಹೋಗಿ ಅಲ್ಲಿನ ಕಾರಣರನ್ನೂ ಕುಟುಂಬದವರನ್ನೂ ಕುರಿತು ಬೆಳಗಾಗುವವರೆಗೆ ಹಾಡುವರು. ಊರಿನ ಎಲ್ಲಾ ಮನೆಗಳಿಗೂ ಆ ರಾತ್ರಿ ಹೋಗಲಾಗದಿದ್ದರೆ, ಮರು ದಿನ ನಾಡು ಕೋಲಿನ ನಂತರ ಬಾಕಿ ಮನೆಗಳಿಗೆ ಹೋಗಿ ಹಾಡಿ ಮುಗಿಸುವರು. ಈ ರೀತಿ ಮನೆ ಹಾಡಿ ಗಳಿಸಿದ ಹಣದಲ್ಲಿ ಊರೊರ್ಮೆಯನ್ನು ಮಾಡುವರು.

ಊರೊರ್ಮೆಸಂಪಾದಿಸಿ

ಹುತ್ತರಿ ಮುಗಿದ ಬಳಿಕ ಒಂದು ನಿಶ್ಚಿತ ಸಂಜೆ ಊರಿನ ಪ್ರತಿ ಮನೆಯಿಂದ ಒಬ್ಬನಂತೆ ಕಾಡುಮರಗಳ ತೋಪಿನಲ್ಲಿ ಕುಳಿತು ಸಾಮೂಹಿಕ ಭೋಜನವನ್ನು ಮಾಡುವರು. ಬೇಟೆ ನಿಷಿದ್ಧವಾಗಿಲ್ಲದಿದ್ದ ಕಾಲದಲ್ಲಿ ಬೆಳಿಗ್ಗೆ ಊರು ಬೇಟೆಯನ್ನಾಡಿ, ಸಂಜೆಯ ಔತಣಕ್ಕೆ ಸಿದ್ಧಪಡಿಸುತ್ತಿದ್ದರು. ಊರಿನ ಜನರಲ್ಲಿ ಏನಾದರೂ ವೈಮನಸ್ಯವಿದ್ದರೆ ಹಿರಿಯರು ರಾಜಿ ಮಾಡಿಸುವರು.

ಆಧಾರ ಗ್ರಂಥಗಳುಸಂಪಾದಿಸಿ

 1. ‘ಪಟ್ಟೋಲೆ ಪಳಮೆ’, ನಡಿಕೇರಿಯಂಡ ಚಿಣ್ಣಪ್ಪ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೭೫.
 2. ‘ಕೊಡವರ ಮೂಲ ಪದ್ಧತಿಗಳು’ - ಪೇರಿಯಂಡ ಚಂಗಪ್ಪ
 3. Kodavas - B D Ganapathy - Jyothi Prakashana, Madikeri - ೧೯೮೦
"https://kn.wikipedia.org/w/index.php?title=ಪುತ್ತರಿ&oldid=808654" ಇಂದ ಪಡೆಯಲ್ಪಟ್ಟಿದೆ