ಪೀಚೆಕತ್ತಿಯು ಕೊಡವ ಪುರುಷರ ಸಾಂಪ್ರದಾಯಕ ಉಡುಗೆಯ ಒಂದು ವಸ್ತು. ಅವರು ಮೊಣಕಾಲಿನ ಸ್ವಲ್ಪ ಕೆಳಗೆ ಬರುವಷ್ಟು ಉದ್ದನೆಯ ‘ಕುಪ್ಯ’ವೆಂದು ಕೊಡವ ಭಾಷೆಯಲ್ಲಿ ಕರೆಯಲ್ಪಡುವ ಕಪ್ಪು ಬಣ್ಣದ ನಿಲುವಂಗಿಯನ್ನು ತೊಡುತ್ತಾರೆ. ಸೊಂಟಕ್ಕೆ ರೇಶ್ಮೆಯ ಉದ್ದಕ್ಕೂ ಚಿನ್ನದ ಬಣ್ಣದ ಜರತಾರಿಯಿರುವ ಕೆಂಪು ಬಟ್ಟೆಯನ್ನು ಕಟ್ಟುತ್ತಾರೆ. ಇದಕ್ಕೆ ‘ಚೇಲೆ’ ಎನ್ನುವರು. ದೇಹದ ಮುಂಭಾಗಕ್ಕೆ ಬರುವಂತೆ ಬಲಭಾಗದಲ್ಲಿ ಪೀಚೆ ಕತ್ತಿಯನ್ನು ತೊಡುವರು.


ಪೀಚೆಕತ್ತಿಯನ್ನು ಉಮ್ಮತ್ ಕತ್ತಿಯೆಂದೂ, ಚಳಕತ್ತಿಯೆಂದೂ ಕರೆಯುವರು.

ಪೀಚೆಕತ್ತಿ (ಒರೆಯಿಂದ ತೆಗೆದಿರಿಸಿದೆ)

ಈ ಕತ್ತಿಯು ಸುಮಾರು ೧೬ ಸೆಂಟಿಮೀಟರ್ ಉದ್ದ ಮತ್ತು ೩ ಸೆಂಟಿಮೀಟರ್ ಅಗಲದ ಉಕ್ಕಿನ ಅಲಗಿನಿಂದ ಕೂಡಿದ್ದು, ಸುಮಾರು ೧೨ ಸೆಂಟಿಮೀಟರ್ ಉದ್ದದ ಹಿಡಿಕೆಯಿಂದೊಡಗೂಡಿದೆ. ಹಿಡಿಕೆಯ ಮೇಲೆ ಬೆಳ್ಳಿಯ ಹೊದಿಕೆಯಿದ್ದು, ಕುಸುರಿ ಕೆಲಸ ಮಾಡಲಾಗಿರುತ್ತದೆ. ಹಿಂದಿನ ಕಾಲದಲ್ಲಿ ಬೆಳ್ಳಿಯ ಹೊದಿಕೆಯೊಡನೆ ದಂತವನ್ನೂ ಸೇರಿಸಲಾಗುತಿತ್ತು. ಹಿಡಿಕೆಯ ತುದಿಯನ್ನು ನವಿಲಿನ ತಲೆಯಂತೆ ರೂಪಿಸಿದ್ದು ಕಣ್ಣಿಗೆ ಹರಳನ್ನು ಕೂಡಿಸಿರುತ್ತಾರೆ. ಅದರ ನೆತ್ತಿಯಲ್ಲಿ ಮೂರ್ನಾಲ್ಕು ಬೆಳ್ಳಿಯ ಪುಟ್ಟ ಲೋಲಕಗಳನ್ನು ಜೋಡಿಸಿದ್ದು, ಅವುಗಳ ಕೊನೆಯಲ್ಲಿ ಹವಳ, ಮುತ್ತು ಅಥವ ಕೆಂಪಿನ ಮಣಿಗಳನ್ನು ಪೋಣಿಸಲಾಗಿದೆ.


ಕತ್ತಿಯ ಒರೆಯ ಮೇಲೂ ಬೆಳ್ಳಿಯ ಅಥವಾ ದಂತದ ಇಲ್ಲವೆ ಬಣ್ಣದ ಪಕಳೆಗಳ ಹೊದಿಕೆಯಿದ್ದು, ಕುಸುರಿ ಬಿಡಿಸಿದ ಚಿತ್ರಗಳಿಗೆ ಚಿನ್ನದ ಗಿಲೀಟನ್ನು ಹಾಕಲಾಗಿರುತ್ತದೆ. ಸಾಮಾನ್ಯವಾಗಿ ಸೂರ್ಯ ಮತ್ತು ಚಂದ್ರರ ಚಿತ್ರವಿರುವದಲ್ಲದೆ ಕೊಡವರ ಚಿಹ್ನೆಯಾದ ಪೀಚೆ ಕತ್ತಿ ಮತ್ತು ಒಡಿಕತ್ತಿಯ ಚಿತ್ತಾರವಿರುತ್ತದೆ. ಒರೆಯ ಮೇಲ್ಭಾಗಕ್ಕೆ ಸುಮಾರು ೧೦ ಸೆಂಟಿಮೀಟರ್ ಉದ್ದದ ಸರಪಳಿಯೊಂದನ್ನು ಜೋಡಿಸಲಾಗಿದೆ. ಇದರ ಕೊನೆಯಲ್ಲಿ ಗಂಟೆಯಾಕಾರದ ಗುಬುಟವಿದೆ. ಇದರ ಅಂಚಿನ ಸುತ್ತಲೂ ಸಣ್ಣ-ಸಣ್ಣ ಲೋಲಕವನ್ನು ತೂಗುಹಾಕಿದ್ದು, ಪ್ರತಿಯೊಂದರ ಕೊನೆಯಲ್ಲಿ ಕೆಂಪು ಮಣಿಯೊಂದನ್ನು ಸಿಕ್ಕಿಸಿರುತ್ತಾರೆ.


ಗುಬುಟದ ಒಳಗಿನಿಂದ ಎರಡೆಳೆ ಸರಪಳಿಯೊಂದು ಹೊರಟಿದ್ದು ಇದು ಸುಮಾರು ೪೫ ಸೆಂಟಿಮೀಟರ್ ಉದ್ದವಿದೆ. ಇದರ ಪ್ರತಿ ಕೊಂಡಿಯಲ್ಲಿ ಒಂದೊಂದು ಪುಟ್ಟ ಮಾವಿನಾಕಾರವನ್ನು ನೇತು ಹಾಕಿದೆ. ಒಂದು ಸರಪಳಿ ಇನ್ನೊಂದಕ್ಕಿಂತ ಸ್ವಲ್ಪ ಉದ್ದವಾಗಿದ್ದು ಧರಿಸಿದಾಗ ಒಂದರ ಮೇಲಿನ್ನೊಂದು ಕುಳಿತುಕೊಳ್ಳದೆ ಬೇರೆಯಾಗಿ ಎದ್ದು ಕಾಣುವಂತಿರುತ್ತದೆ. ಈ ಜೋಡಿ ಸರಪಳಿಗಳ ಕೊಯಲ್ಲಿ ಪದಕವೊಂದಿದ್ದು, ಇದರ ಅಂಚಿಗೆ ಕೋವಿ ಮತ್ತು ಒಡಿಕತ್ತಿಯ ಪುಟ್ಟ ಆಕಾರಗಳು, ಕಿವಿಸಟ್ಟುಗ, ಹಲ್ಲುಗಳೆಡೆಗಳನ್ನು ಶುಭ್ರಗೊಳಿಸುವ ಮುಳ್ಳು (tooth pick), ಚಿಮ್ಮಟ, ಇತ್ಯಾದಿಗಳನ್ನು ಬೆಳ್ಳಿಯಿಂದ ಮಾಡಿ ನೇತಾಡಿಸಲಾಗಿದೆ. ಪದಕ ಮತ್ತು ಸರಳಿಗಳನ್ನು ಜೋಡಿಸಿರುವೆಡೆಯೇ ಸುಮಾರು ಮೂರು ಸೆಂಟಿಮೀಟರ್ ಉದ್ದದ U ಆಕಾರದ ಕೊಂಡಿಯಿದೆ. ಇಡೀ ಸರಪಳಿಯನ್ನು ಬೆಳ್ಳಿಯಿಂದ ಮಾಡಲಾಗಿದೆ.


ಒರೆಯ ಬಾಯಿಯ ಬಳಿ ಮಗುಚಿದ U ಆಕಾರದ ಕೊಂಡಿಯೊಂದಿದೆ. ದೇಹದ ಬಲ ಮುಂಭಾಗದಲ್ಲಿ ಕುಪ್ಯ ಮತ್ತು ಚೇಲೆಯ ನಡುವೆ ಪೀಚೆಕತ್ತಿಯನ್ನು ತೂರಿಸಿ, ಚೇಲೆ ಕಟ್ಟಿನ ಮೇಲ್ಭಾಗದಲ್ಲಿ ಈ ಕೊಂಡಿಯನ್ನು ಸಿಕ್ಕಿಸಲಾಗುವದು. ಸರಪಳಿಯ ಕೊನೆಯಲ್ಲಿರುವ ಕೊಂಡಿಯನ್ನು ಬೆನ್ನ ಮಧ್ಯದಲ್ಲಿ ಚೇಲೆಗೆ ಸಿಕ್ಕಿಸಲಾಗುವದು.


ಹಿಂದೆ ಯುದ್ಧದಲ್ಲಿ ಹೋರಾಡುವಾಗ ಹತ್ತಿರ ಬಂದ ಶತ್ರುವಿನಿಂದ ರಕ್ಷಿಸಿಕೊಳ್ಳಲು ಪೀಚೆಕತ್ತಿಯ ಉಪಯೋಗವಾಗುತಿತ್ತು. ಈಗ ಬರೇ ಅಲಂಕಾರಕ್ಕಾದರೂ, ಪದ್ಧತಿಯನ್ನು ಅನುಸರಿಸುವ ಸಂದರ್ಭದಲ್ಲಿ ತೆಂಗಿನಕಾಯನ್ನು ಒಡೆಯಲೂ, ಕಾಯಿಯ ಚೂರನ್ನು ತೆಗೆಯಲೂ ಬಳಸಲಾಗುತ್ತಿದೆ.


ಬಾಹ್ಯ ಕೊಂಡಿಗಳು

ಬದಲಾಯಿಸಿ

http://www.michaelbackmanltd.com/1239.html