'ಪಾಂಡುರಂಗಿ ಕೋದಂಡ ರಾವ್,' ಅವರು ತಮ್ಮ ಆಪ್ತ ಗೆಳೆಯ ವರ್ಗಕ್ಕೆ, ಪಿ. ಕೋದಂಡರಾವ್,[] ಎಂದು ಪರಿಚಿತರಾಗಿದ್ದಾರೆ. ಅವರೊಬ್ಬ ಆತ್ಯುತ್ತಮ ಲೇಖಕ, ವಾಗ್ಮಿ, ಚಿಂತಕ, ಸಮಾಜ ಸೇವಕ,ಬುದ್ದಿಜೀವಿ, ದೇಶವಿದೇಶಗಳನ್ನು ಸುತ್ತಿ ಭಾರತದ ರಾಯಭಾರಿಯಂತೆ ದುಡಿದರು. ವಿದ್ಯಾರ್ಥಿಯಾಗಿದ್ದ ಸಮಯದಲ್ಲಿಯೆ ರಾಷ್ಟ್ರ ಸೇವೆಗೆ ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟವರು 'ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಯ ಸದಸ್ಯ'ರಾಗಿ ಸಮರ್ಪಿತ ಜೀವನ ನಡೆಸಿದರು. ಜಾತಿ ವ್ಯತ್ಯಾಸಗಳನ್ನು ಲೆಕ್ಕಿಸದೆ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ಭಾರತೀಯರಿಗಾಗಿ ದುಡಿದರು. ನಿರ್ಭಯದ, ಸಮತೂಕದ ಅಭಿಪ್ರಾಯಗಳಿಗೆ ಅವರು ಹೆಸರಾದವರು.

ಜನನ, ಬಾಲ್ಯ, ವಿದ್ಯಾಭ್ಯಾಸ, ವೃತ್ತಿಜೀವನ

ಬದಲಾಯಿಸಿ
  • 'ಕೋದಂಡರಾವ್' ತಂದೆ-ಸೀತಾರಾವ್; ತಾಯಿ-ಜೋಗಮ್ಮ ದಂಪತಿಗಳ ಪ್ರೀತಿಯ ಮಗನಾಗಿ ಆಂಧ್ರ ಪ್ರದೇಶದ ವಿಶಾಖ ಪಟ್ಟಣದಲ್ಲಿ, ೧೮೮೯ನೇ ಡಿಸೆಂಬರ್ ೨೫ನೇ ತಾರೀಖು ಜನಿಸಿದರು. ಸೀತಾರಾವ್, ಸುಪ್ರಸಿದ್ಧ ವಿದ್ವಾಂಸ ವಂಶಕ್ಕೆ ಸೇರಿದ 'ಪಾಂಡುರಂಗಿ ಮನೆತನ' ದವರು. ಈ ವಂಶದ ಹಿರಿಯರ ನೆಲೆ-ಇಂದಿನ ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದ ಅಹಮದ್ ನಗರ. ಈಗ್ಗೆ ಮೂರೂವರೆ ಶತಮಾನದ ಹಿಂದೆ ಈ ಮನೆತನದವರು ದಕ್ಷಿಣದ ಕಡೆಗೆ ಸರಿದು ಭೀಮಾ ನದಿಯ ದಂಡೆಯಲ್ಲಿದ್ದ ಪಾಂಡುರಂಗಪಲ್ಲಿಗೆ-ಅಂದರೆ ಇಂದಿನ 'ಪಂಢರಾಪುರ'ಕ್ಕೆ–ಬಂದು ಆ ಕ್ಷೇತ್ರದಲ್ಲಿ ನೆಲೆಸಿದರು. ಪಾಂಡುರಂಗ ಪಲ್ಲಿಯನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡ ಈ ಮನೆತನಕ್ಕೆ 'ಪಾಂಡುರಂಗಿಗಳು' ಅಂದರೆ ಪಾಂಡುರಂಗ(ಪಲ್ಲಿ)ದವರು ಎಂದು ಅಡ್ಡ ಹೆಸರು ಬಂತು.
  • ಕಾಲಕ್ರಮದಲ್ಲಿ ಈ ವಿದ್ವಾಂಸರ ಮನೆತನ ಬೆಳೆದಂತೆ ಕೆಲವು ಸಂಸಾರಗಳು ಕರ್ನಾಟಕದ ಕಡೆಗೆ ಸರಿದವು. ಮತ್ತೆ ಕೆಲವು ತಮಿಳುನಾಡನ್ನು ಸೇರಿದವು. ಇನ್ನು ಕೆಲವು ತೆಲುಗು ಮಾತನಾಡುವ ಪ್ರದೇಶಕ್ಕೆ ಹೋದುವು. ಹೀಗೆ ತೆಲುಗು ಸೀಮೆಗೆ ಬಂದು ವಿಶಾಖ ಪಟ್ಟಣದಲ್ಲಿ ತಳವೂರಿ ದ ಪಾಂಡುರಂಗಿಗಳ ವಂಶಕ್ಕೆ ಸೇರಿದವರು. ೧೯೧೫ ರಲ್ಲಿ ಮದರಾಸು ವಿಶ್ವವಿದ್ಯಾಲಯದ ಪದವಿಯನ್ನು ಪಡೆದ ಬಳಿಕವೇ, ವಿ.ಎಸ್.ಶ್ರೀನಿವಾಸ ಶಾಸ್ತ್ರೀಯವರನ್ನು ಭೇಟಿ ಮಾಡಲು ಆಶಿಸಿದ ವ್ಯಕ್ತಿ ಪ್ರಚಂಡ ವಾಗ್ಮಿ: ನಿಷ್ಠಾವಂತ ದೇಶ ಸೇವಕ; ಖ್ಯಾತ ವಿದ್ವಾಂಸ; ಗಾಂಧೀಜಿಯ ವರಿಂದ ‘ನನ್ನ ರಾಜಕೀಯ ಗುರು’ ಎನಿಸಿಕೊಂಡ ಗೋಪಾಲಕೃಷ್ಣ ಗೋಖಲೆಯವರ ಪಟ್ಟ ಶಿಷ್ಯ. ವಿದ್ಯಾರ್ಥಿಯಾಗಿದ್ದಾಗ ಆ ತರುಣ ಗೋಖಲೆಯವರನ್ನು ನೋಡಿದ್ದ.
  • ಅವರ ಸ್ಫೂರ್ತಿದಾಯಕ ಭಾಷಣವನ್ನು ಕೇಳಿದ್ದ. ‘‘ವಿಶ್ವವಿದ್ಯಾಲಯದ ಪದವೀಧರರಲ್ಲಿ ಕೆಲವರಾದರೂ ಉದ್ಯೋಗ, ಅಧಿಕಾರ, ಐಶ್ವರ್ಯಗಳ ಆಸೆಯನ್ನು ಸ್ವಸಂತೋಷದಿಂದ ತೊರೆಯಬೇಕು. ಭಾರತದ ಸೇವೆಯನ್ನು ತಮ್ಮ ಬಾಳಿನ ಧರ್ಮವನ್ನಾಗಿ ಮಾಡಿ ಕೊಳ್ಳಬೇಕು’’ ಎಂದು ಅವರು ತರುಣರಿಗೆ ಕೊಟ್ಟ ಕಳಕಳಿಯ ಕರೆ ಅವನ ಹೃದಯವನ್ನು ಹೊಕ್ಕಿತ್ತು. ತಾನು ಪದವೀಧರನಾದೊಡನೆಯೇ ಗೋಖಲೆಯವರನ್ನು ಕಾಣಬೇಕು, ಅವರ ಈ ಕರೆಗೆ ಓಗೊಡಬೇಕೆಂಬ ಹಂಬಲ ಅವನ ಅಂತರಂಗದಲ್ಲಿ ಮೊಳೆತು ಬೆಳೆದಿತ್ತು.

ಅಧ್ಯಾಪಕರಾಗಿ

ಬದಲಾಯಿಸಿ
  • ಬ್ರಿಟಿಷ್ ಇಂಡಿಯ ಸರಕಾರದ ಆಡಳಿತ ವರ್ಗದಲ್ಲಿ ತಮ್ಮ ತಂದೆಯ ಬಗೆಗೆ ಇದ್ದ ಗೌರವಾದರಗಳನ್ನು ಉಪಯೋಗಿಸಿಕೊಂಡು, ತಮಗೊಂದು ಒಳ್ಳೆಯ ಕೆಲಸವನ್ನು ಗಿಟ್ಟಿಸಿಕೊಳ್ಳುವುದು ಕೋದಂಡರಾಯರಿಗೆ ಕಷ್ಟದ ಕೆಲಸವೇನಾಗಿರಲಿಲ್ಲ. ಆದರೆ ಅವರು ಹಾಗೆ ಮಾಡದೆ, ೧೯೧೫ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕರಾದರು. ಆ ವೃತ್ತಿಯಲ್ಲಿದ್ದುಕೊಂಡೇ ತಮ್ಮ ಅಧ್ಯಯನವನ್ನು ಮುಂದುವರಿಸಿ ೧೯೧೭ರಲ್ಲಿ ಎಂ.ಎ. (ಆನರ್ಸ್) ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಉತ್ತಮ ಅಧ್ಯಾಪಕರೆಂದು ಹೆಸರು ಗಳಿಸಿದರು.
  • ವಿದ್ಯಾರ್ಥಿಗಳ ಮೆಚ್ಚಿಕೆಗೆ ಪಾತ್ರರಾದರು. ನೆರವಿನ ಆವಶ್ಯಕತೆಯಿದ್ದ ಹಲಕೆಲವು ವಿದ್ಯಾರ್ಥಿಗಳಿಗೆ ತಮ್ಮಿಂದಾದ ನೆರವು ನೀಡಿ ಅವರ ಕೃತಜ್ಞತೆಗೆ ಪಾತ್ರರಾದರು. ಇದಲ್ಲದೆ, ಬೆಂಗಳೂರಿನ ಸಾಮಾಜಿಕ, ಸಾಂಸ್ಕೃತಿಕ ಜೀವನದಲ್ಲಿ ಆಸಕ್ತಿಯಿಂದ ಭಾಗವಹಿಸಿದರು. ಅನೇಕರ ಸ್ನೇಹವನ್ನೂ ಪ್ರೀತಿ ವಿಶ್ವಾಸವನ್ನೂ ಗಳಿಸಿಕೊಂಡರು.

ಕೋದಂಡರಾಯರು ಸಂಸ್ಕೃತ ಭಾಷಾ ಸಾಹಿತ್ಯಗಳಲ್ಲೂ ತರ್ಕ, ಮೀಮಾಂಸಾ ಮುಂತಾದ ದರ್ಶನಗಳಲ್ಲೂ ವಂಶಪಾರಂಪರ್ಯವಾಗಿ ಪ್ರಚಂಡ ಪಾಂಡಿತ್ಯವನ್ನು ಗಳಿಸಿದರು. ಕೋದಂಡರಾಯರ ತಂದೆ ಸೀತಾರಾಯರ ಕಾಲಕ್ಕೆ ಆಂಗ್ಲ ವಿದ್ಯಾಭ್ಯಾಸದ ಕಡೆಗೆ ತನ್ನ ದೃಷ್ಟಿಯನ್ನು ತಿರುಗಿಸಿತು. ಅವರು ಆಂಗ್ಲ ವಿದ್ಯಾಭ್ಯಾಸವನ್ನು ಪಡೆದದ್ದು ಮಾತ್ರವಲ್ಲದೆ ಅಂದು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು ಪ್ರಾಂತ ಸರಕಾರದಲ್ಲಿ ಕೆಲಸಕ್ಕೆ ಸೇರಿದರು. ನಿಷ್ಠೆಯಿಂದಲೂ ದಕ್ಷತೆಯಿಂದಲೂ ಕೆಲಸ ಮಾಡಿದರು.

  • ಅಷ್ಟು ಮಾತ್ರವಲ್ಲ-ತಮ್ಮ ಅಧಿಕಾರ ಜೀವನ, ಸಾಮಾಜಿಕ ಜೀವನ ಎರಡರಲ್ಲೂ ಸತ್ಯವಂತರೆಂದೂ ಶೀಲವಂತರೆಂದೂ ಖ್ಯಾತರಾದರು. ಎಲ್ಲರ ಆದರ ಗೌರವಗಳಿಗೆ ಪಾತ್ರರಾದರು. ಅಷ್ಟು ಮಾತ್ರವಲ್ಲ ಕಾಲಕ್ರಮದಲ್ಲಿ 'ಡೆಪ್ಯುಟಿ ಕಲೆಕ್ಟರ್' ಆದರು. ಈಗ್ಗೆ ಒಂದು ಕಾಲು ಶತಮಾನದ ಹಿಂದೆ ಬ್ರಿಟಿಷ್ ಇಂಡಿಯಾ ಸರ್ಕಾರದಲ್ಲಿ ಭಾರತೀಯರಿಗೆ ದೊರೆಯಬಹುದಾಗಿದ್ದ ದೊಡ್ಡ ಹುದ್ದೆಗಳಲ್ಲಿ ಅದೂ ಒಂದು. ಅಂದಿನ ಬೆಲೆಗಳ ದೃಷ್ಟಿಯಿಂದ ನೋಡಿದರೆ, ಆ ಹುದ್ದೆಗೆ ಅಂದು ದೊರೆಯುತ್ತಿದ್ದ ಸಂಬಳ ಕೂಡ ದೊಡ್ಡದೇ.
  • ಆದ್ದರಿಂದ ಸೀತಾರಾಯರು ಯಾವ ವಿಧವಾದ ದುರ್ಮಾರ್ಗದ ಗಳಿಕೆಗೂ ಮನಕೊಡದೆ ತಮಗೆ ದೊರೆಯುತ್ತಿದ್ದ ಸಂಬಳದಿಂದಲೇ ಸುಖಜೀವನ ನಡೆಸುತ್ತಿದ್ದುದಲ್ಲದೆ ತಕ್ಕಮಟ್ಟಿನ ಉಳಿತಾಯವನ್ನೂ ಮಾಡಿದ್ದರು. ಆದರೆ ಅವರು ತಮ್ಮ ಈ ಉಳಿಕೆಯನ್ನು ಕೂಡಿಟ್ಟದ್ದ ‘ಅರ‍್ಬತ್‌ನಾಟ್ ಬ್ಯಾಂಕ್’ ಅನಿರೀಕ್ಷಿತವಾಗಿ ದಿವಾಳಿಯಾದದ್ದರಿಂದ ರಾಯರ ಆರ್ಥಿಕ ಸ್ಥಿತಿಗೆ ಬಲವಾದ ಪೆಟ್ಟುಬಿದ್ದಂತೆ ಆಯಿತು. ಅಷ್ಟು ಮಾತ್ರವಲ್ಲ ಹಣದ ಗಳಿಕೆ, ಉಳಿತಾಯಗಳೆರಡರಲ್ಲೂ ಅವರ ಆಸಕ್ತಿ ಬಹುಮಟ್ಟಿಗೆ ತಗ್ಗಿತು.
  • ತಮ್ಮಸಂಬಳದ ಹಣವನ್ನು ಪೂರ್ಣವಾಗಿ ತಮ್ಮ ಮನೆಯವರ ಕೈಗೆ ತಂದು ಕೊಟ್ಟು ಬಿಡುತ್ತಿದ್ದುದು ಮಾತ್ರವಲ್ಲದೆ, ಅದನ್ನು ಖರ್ಚು ಮಾಡುವ ಹೊಣೆಗಾರಿಕೆಯನ್ನೂ ಅವರಿಗೇ ವಹಿಸಿಬಿಟ್ಟರು. ‘ನಾನು ನಿವೃತ್ತನಾದ ಮೇಲೂ ನಾನು ಬದುಕಿರುವವರೆಗೆ ವಿರಾಮ ವೇತನ ಬರುತ್ತದೆ. ಸಂಸಾರ ಹೇಗೋ ಸಾಗುತ್ತದೆ. ಆದರೆ ನನ್ನ ಅನಂತರ ಸಂಸಾರ ನಡೆಸಿಕೊಂಡು ಹೋಗಲು ನೀವು ಈಗಿನಿಂದಲೇ ಕೊಂಚ ಕೊಂಚ ಹಣ ಕೂಡಿಟ್ಟುಕೊಳ್ಳುತ್ತಾ ಹೋದರೆ ನಿಮಗೇ ಅನುಕೂಲ ಅಲ್ಲವೆ?’’ ಎಂದಿಷ್ಟು ಸೂಚನೆ ಮಾತ್ರ ಕೊಟ್ಟರು.

ತಂದೆ-ತಾಯಿಯರ ಆದರ್ಶ, ಪ್ರಭಾವ

ಬದಲಾಯಿಸಿ
  • ಕೋದಂಡರಾಯರ ತಂದೆಯವರು ಸುಧಾರಕ ಮನೋವೃತ್ತಿಯವರು. ಹಿಂದಿನಿಂದ ನಡೆದು ಬಂದಿದ್ದ ಶವಸಂಸ್ಕಾರ ಪದ್ಧತಿ, ಶ್ರಾದ್ಧ ಮುಂತಾದವುಗಳಲ್ಲಿ ಅವರಿಗೆ ನಂಬಿಕೆಯಿರಲಿಲ್ಲ. ಆದರೆ ತಾಯಿ ಜೋಗಮ್ಮನವರು, ಸಂಪ್ರದಾಯಸ್ಥರು. ವ್ರತ, ಪೂಜೆ, ಉಪವಾಸ ಮುಂತಾದವುಗಳಲ್ಲಿ ಅವರಿಗೆ ಅಪಾರ ನಂಬಿಕೆ. ಅವನ್ನು ತಪ್ಪದೆ ಆಚರಿಸುತ್ತಿದ್ದರು. ಹೀಗೆ ಬಾಲ್ಯದಿಂದಲೂ ಸತ್ಪ್ರಭಾವಗಳಿಗೆ ಒಳಗಾದ ರಾಯರು ತುಂಬ ಚಿಕ್ಕ ವಯಸ್ಸಿನವರಾಗಿದ್ದಾಗಿನಿಂದಲೇ ತಾವು ಮುಂದೆ ಏನು ಮಾಡಬೇಕು, ಹೇಗೆ ಬಾಳಬೇಕು ಎಂಬುದನ್ನು ಕುರಿತು ಯೋಚಿಸತೊಡಗಿದ್ದರು.
  • ತಾವು ಪದವೀಧರರಾಗುವ ಹೊತ್ತಿಗೆ ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೂ ಬಂದಿದ್ದರು. ೧೯೧೫ ರ ಮೊದಲ ಭಾಗದಲ್ಲಿ ಅವರು ತಮ್ಮ ತಂದೆಗೆ ಬರೆದ ಪತ್ರದಿಂದ ಇದು ವ್ಯಕ್ತವಾಗುತ್ತದೆ. ಅದರಲ್ಲಿ ಅವರು,‘‘ಆಂಗ್ಲ ಸರಕಾರದ ಚಾಕರಿಗೆ ಸೇರುವುದನ್ನು ನನ್ನ ಮನಸ್ಸು ಒಪ್ಪದು. ಹಣ ಗಳಿಸಬೇಕೆಂಬ ಆಸೆಯೂ ನನಗಿಲ್ಲ. ತ್ಯಾಗಕ್ಕೆ ಅವಕಾಶವಿರುವ ಯಾವುದಾದರೂ ಒಂದು ವೃತ್ತಿಯನ್ನು ಕೈಗೊಳ್ಳಬೇಕೆಂದಿದ್ದೇನೆ. ದುರ್ಮಾರ್ಗದಿಂದ ಹಣ ಗಳಿಸುವ ಬಗೆಗೆ ನೀವು ತುಂಬ ಕೋಪಗೊಳ್ಳುವಿರಿ ಎಂಬುದು ನಿಮ್ಮಲ್ಲಿ ನನ್ನ ಗೌರವವನ್ನೂ ಪ್ರೀತಿಯನ್ನೂ ಹೆಚ್ಚಿಸಿದೆ.
  • ಹಣಗಳಿಸಲು ನಿಮಗೆ ಅನೇಕ ಅವಕಾಶಗಳಿದ್ದರೂ ದುಡ್ಡನ್ನು ಗುಡ್ಡೆ ಹಾಕಬೇಕೆಂಬ ಮೋಹಕ್ಕೆ ನೀವು ಒಳಗಾಗದೆ ಇದ್ದದ್ದು ನನಗೆ ಅಭಿಮಾನದ ಸಂಗತಿ. ನಿಮ್ಮ ಮಕ್ಕಳಾದ ನಮಗೆ ನೀವು ಐಶ್ವರ್ಯವನ್ನು ಕೂಡಿಡಲಿಲ್ಲವಲ್ಲ ಎಂದು ಸ್ವಲ್ಪವೂ ವ್ಯಸನವಿಲ್ಲ’’ ಎಂದಿದ್ದಾರೆ. ಅಂತೂ ತಮ್ಮ ವ್ಯಕ್ತಿಸ್ವಾಂತಂತ್ರ್ಯಕ್ಕೆ ಅಡ್ಡಿಯನ್ನು ಉಂಟುಮಾಡದೆ ಇರುವಂಥ, ಪರಿಶುದ್ಧ, ತ್ಯಾಗಮಯ ಜೀವನವನ್ನು ನಡೆಸಬೇಕೆಂದು ನಿರ್ಧರಿಸಿದ್ದರು. ಅದರಂತೆಯೇ ನಡೆದುಕೊಂಡರು.

ಗೋಖಲೆಯವರನ್ನು ಭೇಟಿಮಾಡುವ ಆಶೆ

ಬದಲಾಯಿಸಿ

ಅವರು ಪದವೀಧರನಾಗುವುದಕ್ಕೆ ಕೆಲವು ತಿಂಗಳ ಮೊದಲೇ (೧೯೧೫ ನೇ ಫೆಬ್ರವರಿ ೧೯ ರಂದು) ಗೋಖಲೆಯವರು ತೀರಿಕೊಂಡರು. ಇದರಿಂದ ಸಹಜವಾಗಿ ತರುಣ ಕೋದಂಡರಾವ್ ಗೆ ತುಂಬ ವ್ಯಸನವಾಯಿತು. ಹಾಗೆಯೇ ಗೋಖಲೆಯವರು ೧೯೦೫ ರಲ್ಲಿ ಸ್ಥಾಪಿಸಿದ್ದ ನಿಸ್ವಾರ್ಥ ದೇಶ ಸೇವಕರ ಸಂಘವಾದ ‘‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’’ ಯನ್ನು (ಭಾರತ ಸೇವಕರ ಸಂಘವನ್ನು) ಸೇರಬೇಕು; ತನ್ನ ಇಡೀ ಬಾಳನ್ನು ದೇಶಸೇವೆಗಾಗಿ, ಜನಸೇವೆಗಾಗಿ ಮೀಸಲು ಮಾಡಬೇಕು ಎಂಬ ಇಚ್ಛೆಯೂ ಅವನಲ್ಲಿ ಬಲವಾಯಿತು.

ಶ್ರೀನಿವಾಸ ಶಾಸ್ತ್ರಿಗಳ ಹಿತವಚನ

ಬದಲಾಯಿಸಿ
  • ಬಿ.ಎ. (ಆನರ್ಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಬಳಿಕ, ವಿ.ಎಸ್.ಶ್ರೀನಿವಾಸ ಶಾಸ್ತ್ರಿಗಳನ್ನು ಕಾಣಲು ಹೊರಟರು. ಗೋಪಾಲ ಕೃಷ್ಣ ಗೋಖಲೆಯವರ ನಿಧನಾನಂತರ ಶಾಸ್ತ್ರಿಗಳು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಅಧ್ಯಕ್ಷರಾಗಿ ನೇಮಿಸಲ್ಪಟ್ಟಿದ್ದರು. ತನ್ನ ಇಡೀ ಬಾಳನ್ನು ತ್ಯಾಗಮಯ ಜೀವನಕ್ಕಾಗಿ ಮುಡಿಪಿಡಲು ನಿರ್ಧರಿಸಿ ಬಂದಿದ್ದ ತರುಣ ರಾಯರನ್ನು ಶಾಸ್ತ್ರಿಗಳು ಮೆಚ್ಚಿಕೊಂಡರು. ಅವನ ಸರಳತೆ, ಸೇವಾಸಕ್ತಿ ಮತ್ತು ದೃಢ ಸಂಕಲ್ಪಗಳಿಗೆ ಮಾರುಹೋದರು. ತರುಣನ ಸೌಜನ್ಯ ಸುಂದರ ರೂಪುಗಳೂ ಅವರನ್ನು ಆಕರ್ಷಿಸಿದುವು. ‘‘ನೀನಿನ್ನೂ ಚಿಕ್ಕ ವಯಸ್ಸಿನವನು. ಜೀವಮಾನ ಪರಿಯಂತ ತ್ಯಾಗದ ಬಾಳನ್ನು ನಡೆಸುವ ಪ್ರತಿಜ್ಞೆಯನ್ನು ಕೈಗೊಳ್ಳಲು ತಕ್ಕ ವಯಸ್ಸಲ್ಲ ನಿನ್ನದು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಬೇಕು ಎಂಬ ನಿನ್ನ ದೃಢ ನಿರ್ಧಾರದ ಕುರುಹಾಗಿ ನೀನು ತ್ಯಾಗ ಮಾಡಬಹುದಾದ್ದು ಈಗ ನಿನ್ನಲ್ಲಿ ಏನಿದೆ? ನನ್ನ ಮಾತನ್ನು ಕೇಳು, ನಿನಗೆ ತೃಪ್ತಿ ಕೊಡುವಂಥ ಯಾವುದಾದರೂ ಕೆಲಸವನ್ನು ಕೆಲಕಾಲ ಮಾಡು. ಹಾಗೆ ಮಾಡಿದ ಮೇಲೂ ಸೊಸೈಟಿಯನ್ನು ಸೇರಬೇಕೆಂಬ ಆಸೆ ನಿನ್ನಲ್ಲಿ ಇನ್ನೂ ಉಳಿದಿದ್ದರೆ, ಆಗ ನನ್ನಲ್ಲಿಗೆ ಬಾ’’ ಎಂದು ಸೂಚಿಸಿದರು.
  • ತಂದೆಯ ಈ ಆದೇಶದಂತೆ ಮನೆಯ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಕೆಲಸ ತುಂಬ ಚಿಕ್ಕವಯಸ್ಸಿನವರಾಗಿದ್ದಾಗಲೇ ಕೋದಂಡರಾಯರ ಮೇಲೆ ಬಿತ್ತು- ಸಂತೋಷದಿಂದ ಒಪ್ಪಿಕೊಂಡರು. ಮನೆಯವರೆಲ್ಲರಿಗೂ ಮೆಚ್ಚುಗೆಯಾಗುವಂತೆ ಆ ಕಾರ್ಯವನ್ನು ನಿರ್ವಹಿಸಿದರು. ತಂದೆಯ ಸರಳ ಜೀವನ, ಕಾರ್ಯಶ್ರದ್ಧೆ, ಕೆಲಸದ ಅಚ್ಚುಕಟ್ಟು, ಸೇವಾಸಕ್ತಿ-ಇವು ಚಿಕ್ಕಂದಿನಿಂದಲೂ ಕೋದಂಡರಾಯರ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಇದರಿಂದಾಗಿ ಅವರು ನಡವಳಿಕೆಯಲ್ಲಿ ತಂದೆಯವರ ತರಹವೇ ಇತ್ತು. ಕೋದಂಡರಾಯರಿಗೆ ಒಬ್ಬರು ಚಿಕ್ಕಪ್ಪ ಇದ್ದರು. ಅವರ ಹೆಸರು ಜಾನಕೀರಾವ್. ಅವರಿಗೆ ಮಕ್ಕಳಿರಲಿಲ್ಲ. ಆದ್ದರಿಂದ ಅವರು ತಮ್ಮ ಅಣ್ಣ, ಅತ್ತಿಗೆಯರೊಡನೆ ಮಾತನಾಡಿ ಚುರುಕುಬುದ್ಧಿಯ ಸುಂದರ ಬಾಲಕ ಕೋದಂಡನನ್ನು ದತ್ತು ತೆಗೆದುಕೊಂಡರು. ತಮ್ಮ ಮನೆಗೆ ಕರೆದುಕೊಂಡು ಹೋದರು.
  • ಜಾನಕೀರಾಯರ ಹೆಂಡತಿ ವೆಂಕಟಸುಬ್ಬಮ್ಮ ತುಂಬ ಪ್ರೀತಿಯಿಂದ ಕಂಡರು. ನೆರೆಹೊರೆಯವರೆಲ್ಲ ಅಚ್ಚರಿಪಡುವಂತೆ ತಮ್ಮ ‘ಮಗ’ ನನ್ನು ಬೆಲೆಬಾಳುವ ಬಟ್ಟೆಬರೆ, ಆಭರಣಗಳಿಂದ ಅಲಂಕರಿಸಿ ಮೆರೆಸಬೇಕೆಂದು ಅವರ ಆಸೆ. ಆಕೆಗೆ ಇದು ಒಂದು ಚಟವೇ ಆಗಿತ್ತು. ಆದರೆ ಈ ಆಡಂಬರ ಬಾಲಕ ಕೋದಂಡನಿಗೆ ಸರಿಬೀಳುತ್ತಿರಲಿಲ್ಲ. ಒಮ್ಮೆ ತನ್ನ ತಂದೆಯ ಮನೆಗೆ ಬಂದವನು ಮತ್ತೆ ಚಿಕ್ಕಮ್ಮನ ಮನೆಗೆ ಹೋಗಲೇ ಇಲ್ಲ. ಸೀತಾರಾಯರೇ ಕೋದಂಡನನ್ನು ತಮ್ಮೊಡನೆ ಇಟ್ಟುಕೊಂಡು ಅವನ ವಿದ್ಯಾಭ್ಯಾಸಕ್ಕೆ ತಾವೇ ವ್ಯವಸ್ಥೆ ಮಾಡಿದರು. ಮುಂದೆ ಆಸ್ತಿಪಾಸ್ತಿಯನ್ನು ವಿಭಾಗ ಮಾಡುವ ಯೋಚನೆ ಮಾಡಿದಾಗ ಸೀತಾರಾಯರು, ತಮ್ಮ ತಂದೆ ತೀರಿಕೊಂಡ ಮೇಲೆ ತಮ್ಮ ಗಳಿಕೆಯ ಒಂದು ಭಾಗವನ್ನು ತಮ್ಮ ಮನೆಯವರಿಗೆ ಕೊಡುತ್ತಲೂ ಇದ್ದರು.

ಇನ್‌ಫ್ಲೂಯೆಂಜಾ ವ್ಯಾಧಿ

ಬದಲಾಯಿಸಿ

೧೯೧೮ರಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕ ಜಾಡ್ಯವಾಗಿ ದೇಶದಲ್ಲೆಲ್ಲ ಹರಡಿತು. ಅನೇಕಾನೇಕರನ್ನು ಬಲಿ ತೆಗೆದುಕೊಂಡಿತು. ತಕ್ಕ ಔಷಧಿ ಉಪಚಾರವಿಲ್ಲದೆ ನರಳುತ್ತಿದ್ದ ಜನರಿಗೆ ಈ ಸೇವೆ ಸಲ್ಲಿಸಲು ಕೋದಂಡರಾಯರು ಮುಂದಾದರು. ಪೌರಸಭೆ ಮತ್ತು ವೈದ್ಯಕೀಯ ಇಲಾಖೆಯ ಮುಖ್ಯಸ್ಥರನ್ನೂ, ಸಾರ್ವಜನಿಕ ಮುಖಂಡರನ್ನೂ ಕಂಡರು. ಅವರೆಲ್ಲರ ಸಹಕಾರದಿಂದ ಬೆಂಗಳೂರಿನಲ್ಲಿ ಮನೆಮನೆಗೂ ಔಷಧಿ, ಗಂಜಿ ಇವನ್ನು ಹಂಚುವ ವ್ಯವಸ್ಥೆ ಮಾಡಿದರು. ಈ ಸೇವೆಯಿಂದಾಗಿ ಅನೇಕ ಸಹಸ್ರ ಜನರು ಬದುಕಿಕೊಂಡರು; ಚೇತರಿಸಿಕೊಂಡರು.

ಸಮಾಜ ಸೇವೆ

ಬದಲಾಯಿಸಿ
  • ಕೋದಂಡರಾಯರು ಕಾಲೇಜಿನಲ್ಲಿ ಕಲಿತದ್ದು ಸಸ್ಯಶಾಸ್ತ್ರ.ಆದರೆ ಅವರ ಆಸಕ್ತಿ ಅದಷ್ಟಕ್ಕೇ ಮೀಸಲಾಗಿರಲಿಲ್ಲ. ಸಾಹಿತ್ಯ, ನಾಟಕ ಮತ್ತಿತರ ಲಲಿತ ಕಲೆಗಳಲ್ಲಿ ಅವರಿಗೆ ಆಸ್ಥೆಯಿತ್ತು. ಅಂದಿನ ಕಾಲಕ್ಕೆ ಬೆಂಗಳೂರಿನಲ್ಲಿದ್ದ ವಿದ್ವಾಂಸರ, ರಸಿಕರ, ಕಲಾವಿದರ, ಕಲಾಪ್ರೇಮಿಗಳ ಪ್ರಮುಖ ಕೂಟ ಎಂದರೆ ಎ.ಡಿ.ಎ. (ಆಮೆಚ್ಯೂರ್ ಡ್ರಮ್ಯಾಟಿಕ್ ಅಸೋಸಿಯೇಷನ್). ಕೋದಂಡರಾಯರು ಈ ಸಂಸ್ಥೆಯ ಸದಸ್ಯರಾದರು. ತಮ್ಮ ಸೌಜನ್ಯ, ಕಾರ್ಯಶ್ರದ್ಧೆ, ಉತ್ಸಾಹಗಳಿಂದ ಸಂಸ್ಥೆಯ ಸದಸ್ಯರೆಲ್ಲರ ಪ್ರೀತಿ, ವಿಶ್ವಾಸಗಳಿಗೆ ಪಾತ್ರರಾದರು.
  • ಸ್ವಲ್ಪಕಾಲಾನಂತರ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಸಂಸ್ಥೆ ೧೯೧೯ ರಲ್ಲಿ ಬೆಂಗಳೂರಿನಲ್ಲಿ ಒಂದು ದೊಡ್ಡ ಕಲಾ ಮಹೋತ್ಸವವನ್ನು ಏರ್ಪಡಿಸಲು ಪ್ರೇರಕರಾದರು ಮತ್ತು ಅದನ್ನು ಯಶಸ್ವಿಗೊಳಿಸಲು ಶ್ರಮಿಸಿದರು. ವಿಶ್ವಕವಿ ರವೀಂದ್ರನಾಥ ಠಾಕೂರರು ಈ ಉತ್ಸವದ ಅಧ್ಯಕ್ಷತೆ ವಹಿಸಿದ್ದರೆಂಬುದು ಹೆಮ್ಮೆಯ ವಿಚಾರ. ಈ ಮಹೋತ್ಸವವಾದ ಎರಡು ವರ್ಷಗಳ ಅನಂತರ ಇಂಥದೇ ಇನ್ನೊಂದು ಮಹೋತ್ಸವವನ್ನೂ ಭಾರತೀಯ ನಾಟಕ ಸಮ್ಮೇಳನವನ್ನೂ ಬೆಂಗಳೂರಿನಲ್ಲಿ ನಡೆಸಲು ರಾಯರು ಕಾರಣರಾದರು.
  • ಅವರ ವಿವಿಧ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಆಸಕ್ತಿಗಳಿಂದಾಗಿ ಬೆಂಗಳೂರಿನ ನಗರ ಜೀವನದಲ್ಲಿ ಒಬ್ಬ ಗಣ್ಯವ್ಯಕ್ತಿಯ ಸ್ಥಾನಕ್ಕೆ ಏರಿದರು. ಆದರೂ ತಾವು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಿ ತಮ್ಮ ಇಡೀ ಜೀವನವನ್ನು ಭಾರತದ ಸೇವೆಗಾಗಿ ಸಮರ್ಪಿಸಿ ಕೊಳ್ಳಬೇಕೆಂಬ ಹೆಬ್ಬಯಕೆಯ ಕನಸಿತ್ತು.

ಈಡೇರಿದ ಕನಸು

ಬದಲಾಯಿಸಿ
  • ಈ ಹೊತ್ತಿಗೆ ಕೋದಂಡರಾಯರು ಬೆಂಗಳೂರಿನಲ್ಲಿ ನೆಲೆಸಿ ಆರು ವರ್ಷಗಳಾಗಿದ್ದವು. ಈ ಅವಧಿಯಲ್ಲಿ ಅವರು ಶಿಕ್ಷಣ, ಕಲೆ, ಸಮಾಜಸೇವಾರಂಗಗಳಲ್ಲಿ ತಮ್ಮ ಮನಸ್ಸಿಗೆ ತೃಪ್ತಿಯಾಗುವ ರೀತಿಯಲ್ಲಿ ದುಡಿದಿದ್ದರು. ಇದರ ವಿವರಗಳನ್ನು ಶ್ರೀನಿವಾಸ ಶಾಸ್ತ್ರಿಗಳಿಗೆ ತಿಳಿಸಿದಾಗ, ಅವರನ್ನು 'ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಗೆ ಸದಸ್ಯ'ನನ್ನಾಗಿ ಸೇರಿಸಿಕೊಳ್ಳಲು ಒಪ್ಪಿಕೊಂಡರು. ಇದರಿಂದ ಕೋದಂಡರಾಯರಿಗೆ ತುಂಬಾ ಆನಂದವಾಯಿತು.
  • ರಾಯರು ತಮ್ಮ 'ಸೆಂಟ್ರಲ್ ಕಾಲೇಜಿ'ನ ಕೆಲಸಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿ, ಆಗಿನ ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ 'ಬ್ರಜೇಂದ್ರನಾಥ ಸೀಲ್', ರಿಗೆ ತಮ್ಮ ಅಪೇಕ್ಷೆಯನ್ನು ತಿಳಿಸಿದಾಗ, ಅವರು ಅದನ್ನು ಒಪ್ಪದೆ, ‘ನೀನು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸೇರಿ ಭಾರತ ರಾಷ್ಟ್ರಕ್ಕೆ ಸಲ್ಲಿಸಬಹುದಾದ ಸೇವೆಯನ್ನೇ ನಮ್ಮ ವಿಶ್ವವಿದ್ಯಾನಿಲಯದ ಮೂಲಕವೂ ಸಲ್ಲಿಸಬಹುದು. ಇಲ್ಲಿ ನಿನಗೆ ಉತ್ತಮ ಭವಿಷ್ಯವಿದೆ. ಇಲ್ಲೆ ಇರು’’ ಒಂದು ಒತ್ತಾಯಪಡಿಸಿದರು.
  • ಕೋದಂಡರಾಯರು, ತಾವು 'ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'ಯನ್ನು ಸೇರಲು ಬಹು ಹಿಂದೆಯೇ ಗುಪ್ತ ಪ್ರತಿಜ್ಞೆ ಮಾಡಿದ್ದ ಸಂಗತಿಯನ್ನು ತಿಳಿಸಿ, ವಿಶ್ವವಿದ್ಯಾನಿಲಯದಿಂದ ಬಿಡುಗಡೆ ಹೊಂದಿದರು. ಶ್ರೀನಿವಾಸ ಶಾಸ್ತ್ರಿಗಳನ್ನು ಕಂಡು, ಮಾತನಾಡಿ ಅವರ ಆಜ್ಞೆಯಂತೆ ಸೊಸೈಟಿ ಯ ಇಂಗ್ಲಿಷ್ ವಾರಪತ್ರಿಕೆ ‘ಸರ್ವೆಂಟ್ಸ್ ಆಫ್ ಇಂಡಿಯಾ’ ದ ಸಂಪಾದಕ ವರ್ಗದಲ್ಲಿ ಕೆಲಸ ಮಾಡಲು ಪುಣೆಗೆ ಹೋದರು.
  • ಸೊಸೈಟಿಯ ಧ್ಯೇಯಗಳು, ವಿವಿಧ ವಿಚಾರಗಳಲ್ಲಿ ಅದರ ನಿಲುವು-ಒಲವು, ಕಾರ್ಯನೀತಿಗಳನ್ನು ರಾಯರು ಈ ಹೊತ್ತಿಗಾಗಲೆ ಚೆನ್ನಾಗಿ ಅಧ್ಯಯನ ಮಾಡಿದ್ದರು. ಇಂಗ್ಲಿಷ್‌ನಲ್ಲಿ ತಮ್ಮ ಲೇಖನ ಶಕ್ತಿಯನ್ನೂ ಚೆನ್ನಾಗಿ ಬೆಳೆಸಿಕೊಂಡಿದ್ದರು. ಇದರಿಂದಾಗಿ ಅವರು ಯಾವುದೇ ವಿಚಾರದಲ್ಲಿ ಸೊಸೈಟಿಯ ಅಭಿಪ್ರಾಯ ಏನೆಂಬುದನ್ನು ಸ್ಪಷ್ಟವಾಗಿ ನಿರೂಪಿಸಬಲ್ಲವರಾಗಿದ್ದರಿಂದ, ಅವರ ಲೇಖನಗಳು ಸಹಜವಾಗಿಯೇ ಎಲ್ಲರ ಮೆಚ್ಚಿಕೆಗೆ ಪಾತ್ರವಾದವು.

೧೯೨೨ ರಲ್ಲಿ

ಬದಲಾಯಿಸಿ
  • ೧೯೨೨ ರಲ್ಲಿ – ಶ್ರೀನಿವಾಸ ಶಾಸ್ತ್ರಿಗಳು ಕೋದಂಡರಾಯರನ್ನು ವಿಧ್ಯುಕ್ತವಾಗಿ ತಮ್ಮ ಸೊಸೈಟಿಯ ಸದಸ್ಯರನ್ನಾಗಿ ಅಂಗೀಕರಿಸಿದರು. ಸಿಮ್ಲಾದಲ್ಲಿ ನಡೆದ ಗಂಭೀರ ಖಾಸಗಿ ಸಮಾರಂಭದಲ್ಲಿ ಅವರಿಗೆ ಸದಸ್ಯರ ಪ್ರತಿಜ್ಞೆಯನ್ನು ಉಪದೇಶಿಸಿದರು. 'ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಯ ಸದಸ್ಯ'ರಾಗಿ, ಜನಹಿತಕ್ಕಾಗಿ ತಮ್ಮ ಜೀವನವನ್ನು ಮುಡಿಪಿಡಬೇಕೆಂಬ ರಾಯರ ಆಸೆ ಈಡೇರಿತು.
  • ಸದಸ್ಯತ್ವವನ್ನು ಪಡೆದ ಸ್ವಲ್ಪಕಾಲಾನಂತರ ಕೋದಂಡರಾಯರು ಸೊಸೈಟಿಯ ಹಿರಿಯ ಸದಸ್ಯರಾದ ವಿ. ವೆಂಕಟಸುಬ್ಬಯ್ಯನವರೊಡನೆ ಕೆಲಸ ಮಾಡುವುದಕ್ಕಾಗಿ ಮದ್ರಾಸಿಗೆ ಬಂದರು; ಆದರೆ ಅವರ ಪಾಲಿಗೆ ಬಂದ ಕೆಲಸ, 'ಅಸ್ಪಶ್ಯರ ನೆರವಿನ ಕಾರ್ಯ'.

‘ನಾನು ಜಾತ್ಯತೀತ ಭಾರತೀಯ’

ಬದಲಾಯಿಸಿ
  • ಆಗಿನ ಮದರಾಸು ಪ್ರಾಂತದಲ್ಲಿ ‘ಅರುಂಧತೀಯ’ ರೆಂಬ ಒಂದು ವರ್ಗದ ಜನ ಇದ್ದರು. ಇವರ ಪ್ರಧಾನ ವೃತ್ತಿ ಚರ್ಮದ ಕೆಲಸ. ಇವರು ಮಹರ್ಷಿ ವಶಿಷ್ಠರ ಪತ್ನಿಯಾದ ಅರುಂಧತಿಯ ಕುಲದವರು ಎಂಬ ಪ್ರತೀತಿ ಇತ್ತು. ಆದರೂ ಹಿಂದೂ ಸಮಾಜ ಇವರನ್ನು ಅಸ್ಪ ಶ್ಯರಂತೆ ಕಾಣುತ್ತಿತ್ತು. ಅಷ್ಟು ಮಾತ್ರವಲ್ಲ, ಇತರ ಅಸ್ಪ ಶ್ಯ ವರ್ಗಗಳವರು ಕೂಡಾ ಇವರನ್ನು ತಮಗಿಂತ ಕೆಳಮಟ್ಟದವರೆಂದು ಭಾವಿಸುತ್ತಿದ್ದರು. ‘‘ಅರುಂಧತೀಯ’’ ಕುಲಕ್ಕೆ ಸೇರಿದ ಎಲ್.ಸಿ.ಗುರುಸ್ವಾಮಿ ಎಂಬುವರು ಮದರಾಸು ಪ್ರಾಂತದ ಶಾಸನಸಭೆಯ ಸದಸ್ಯರಾಗಿದ್ದರು.
  • ಅಲ್ಲದೆ ತಮ್ಮ ಜನರ ಸ್ಥಿತಿಗತಿಗಳನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದರು. ಇವರಿಗೆ ಸಲಹೆಗಾರರಾಗಿ ಕೆಲಸ ಮಾಡಲು ಕೋದಂಡರಾಯರನ್ನು ನೇಮಿಸಲಾಯಿತು. ‘ಯಾವ ಜಾತಿ ಮತಗಳ ಭೇದವೂ ಇಲ್ಲದೆ ಎಲ್ಲ ಭಾರತೀಯರನ್ನು ಸಹೋದರರಂತೆ ಕಾಣಬೇಕು ಮತ್ತು ಎಲ್ಲರ ಉನ್ನತಿಗಾಗಿ ದುಡಿಯಬೇಕು’ ಎಂಬುದು ರಾಯರು ಸೊಸೈಟಿಯ ಸದಸ್ಯರಾಗಿ ಕೈಗೊಂಡಿದ್ದ ಪ್ರತಿಜ್ಞೆಯ ಒಂದು ಅಂಶ;
  • ಹಾಗೆಯೇ ಸೊಸೈಟಿಯ ಸದಸ್ಯರು ‘‘ಜಾತಿ ವ್ಯವಸ್ಥೆಯಲ್ಲಿ ತೀರಾ ಕೆಳಮಟ್ಟದವರೂ ದಲಿತರೂ ಆಗಿರುವವರ ಉದ್ಧಾರಕ್ಕಾಗಿ ದುಡಿಯಬೇಕು’’ ಎಂಬುದು ಗೋಪಾಲಕೃಷ್ಣ ಗೋಖಲೆಯವರು ಸೊಸೈಟಿಯ ಸದಸ್ಯರಿಗೆ ಕೊಟ್ಟಿದ್ದ ಆದೇಶಗಳಲ್ಲಿ ಒಂದು.

ಹಿಂದುಳಿದ ವರ್ಗದವರ ಸೇವೆ

ಬದಲಾಯಿಸಿ
  • ತಮಗೆ ವಹಿಸಿದ 'ಅಸ್ಪಶ್ಯರ ಉದ್ಧಾರದ ಕಾರ್ಯ'ವನ್ನು ರಾಯರು ಸಂತೋಷದಿಂದ ಕೈಗೊಂಡರು. ಅರುಂಧತೀಯರು ವಾಸಿಸುತ್ತಿದ್ದ ಕೇರಿಗಳಿಗೆ ಹೋದರು. ಅವರ ಗುಡಿಸಿಲುಗಳ ಒಳಹೊಕ್ಕು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಗುರುಸ್ವಾಮಿಯವರೊಡನೆ ಸಮಾಲೋಚನೆ ನಡೆಸಿ ಆರುಂಧತೀಯರ ಪುರೋಭಿವೃದ್ಧಿಗೆ ಸಹಾಯಕವಾದ ಸಲಹೆಗಳನ್ನು ಕೊಟ್ಟರು; ಕಾರ್ಯಕ್ರಮಗಳನ್ನು ಸೂಚಿಸಿದರು. ೧೯೨೬ರಲ್ಲಿ ಕಾವೇರಿ ನದಿಯಲ್ಲಿ ಮಹಾಪ್ರವಾಹ ಬಂದು ತಮಿಳುನಾಡಿನ ಹಲವಾರು ಪ್ರದೇಶಗಳು ತೊಂದರೆಗೊಳಗಾದವು.
  • ಕೋದಂಡರಾಯರು ಆ ಪ್ರದೇಶಗಳ ಜನರಿಗೆ ನೆರವನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದರು. ಹಳ್ಳಿಹಳ್ಳಿಗೂ ಹೋದರು. ಹಳ್ಳಿಗಳ ಮುಖಂಡರನ್ನೂ ಅಧಿಕಾರಿಗಳನ್ನೂ ಕಂಡು ಕಷ್ಟದಲ್ಲಿದ್ದವರಿಗೆ ನೆರವನ್ನು ಒದಗಿಸುತ್ತಿದ್ದರು. ಈ ಕಾರ್ಯದಲ್ಲಿ ತೊಡಗಿದ್ದಾಗ ರಾಯರು ಸ್ವಂತ ಸುಖಗಳ ಕಡೆಗೆ ಲಕ್ಷ್ಯ ಕೊಡುತ್ತಿರಲಿಲ್ಲ. ದೊರೆತಲ್ಲಿ ದೊರೆತಂಥ ಊಟ. ವಿಶ್ರಾಂತಿಯ ವಿಚಾರವೂ ಅಷ್ಟೇ. ದೊರತಲ್ಲಿ ದೊರೆತಂಥ ಸ್ಥಳ. ಈ ಸಂಬಂಧದಲ್ಲಿ ಅವರು ಯಾವ ರೀತಿಯಲ್ಲಿಯೂ ಜಾತಿಮತಗಳನ್ನು ಲಕ್ಷಿಸುತ್ತಿರಲಿಲ್ಲ.
  • ಆದರೆ ಯಾವಾಗಲೂ ಒಂದು ನಿಯಮವನ್ನು ಮಾತ್ರ ತಪ್ಪದೆ ಪಾಲಿಸುತ್ತಿದ್ದರು. ಎಲ್ಲೇ ಆಗಲಿ ಮಾಂಸಾಹಾರವನ್ನು ಮಾತ್ರ ತೆಗೆದುಕೊಳ್ಳುತ್ತಿರಲಿಲ್ಲ. ಇದನ್ನು ಬಲ್ಲ ಮಾಂಸಾಹಾರಿ ಮಿತ್ರರು ರಾಯರನ್ನು ತಮ್ಮ ಮನೆಗಳಿಗೆ ಊಟಕ್ಕೆ ಕರೆದಾಗಲೆಲ್ಲ ರಾಯರಿಗೆ ಶಾಕಾಹಾರವನ್ನೇ ಒದಗಿಸು ತ್ತಿದ್ದರು. ರಾಯರು ಎಲ್ಲ ಜಾತಿ, ಕುಲ, ಮತಗಳವರೊಡನೆಯೂ ಒಂದೇ ರೀತಿಯಲ್ಲಿ ವ್ಯವಹರಿಸುತ್ತಿದ್ದರು. ಪಕ್ಷಪಾತವನ್ನು ತೋರುತ್ತಿರಲಿಲ್ಲ. ಇದರಿಂದಾಗಿ ರಾಯರು ಯಾವ ಜಾತಿಯವರು ಎಂಬ ಬಗೆಗೆ ಅವರ ಪರಿಚಯಸ್ಥರಲ್ಲೇ ಭಿನ್ನಾಭಿಪ್ರಾಯಗಳುಂಟಾಗಿ ಅವು ವಿರಸದ ಮಟ್ಟವನ್ನು ಮುಟ್ಟಿದ್ದೂ ಉಂಟು!
  • ಅವರ ಬಂಧುಗಳಲ್ಲಿ ಹಲವರು ಜಾತಿಗೆಟ್ಟವರೆಂದು ಭಾವಿಸಿ ಅವರನ್ನು ತಮ್ಮ ಜೊತೆಯಲ್ಲಿ ಊಟಕ್ಕೆ ಕೂರಿಸಿಕೊಳ್ಳುತ್ತಿರಲಿಲ್ಲ. ಇದರಿಂದ ರಾಯರು ಬೇಸರಗೊಳ್ಳುತ್ತಿರಲಿಲ್ಲ. ಒಳ್ಳೆಯ ಮಾತು ಗಳಿಂದಲೇ ಅವರ ಈ ಸಂಪ್ರದಾಯ ಶರಣತೆಯನ್ನು ತಿದ್ದಲು ಪ್ರಯತ್ನಿಸುತ್ತಿದ್ದರು. ಯಾವುದೇ ಜನಾಂಗ, ಕುಲ, ಜಾತಿ, ಮತಗಳಿಗೆ ಸೇರಿದವರೇ ಆಗಿರಲಿ, ಮಾನವರೆಲ್ಲರೂ ಒಂದೇ ಎಂಬುದು ರಾಯರ ದೃಢನಂಬಿಕೆಯಾಗಿತ್ತು.

ಕೋದಂಡರಾಯರ ನಿಲವುಗಳು

ಬದಲಾಯಿಸಿ

‘‘ಎಲ್ಲರಂತೆ ನಾನೂ ನನ್ನ ತಂದೆ ತಾಯಿಯರು ಯಾರಾಗಿರಬೇಕು ಎಂಬುದನ್ನು ಆರಿಸಿಕೊಳ್ಳಲಿಲ್ಲ. ಅವರು ಬ್ರಾಹ್ಮಣರಾಗಿದ್ದರು. ಆದ್ದರಿಂದ ನಾನು ಬ್ರಾಹ್ಮಣ ಎನಿಸಿಕೊಂಡೆ! ನಾನು ಬ್ರಾಹ್ಮಣನೂ ಅಲ್ಲ. ಸಂಪ್ರದಾಯಸ್ಥ ಹಿಂದುವೂ ಅಲ್ಲ. ನಾನು ಜಾತ್ಯತೀತ ಭಾರತೀಯ’’ ಎನ್ನುತ್ತಿ ದ್ದರು. ತಮ್ಮ ಜೀವನಕಾಲ ಪರ್ಯಂತ ಅವರು ಈ ನಂಬಿಕೆಗೆ ಅನುಸಾರವಾಗಿಯೇ ನಡೆದು ಕೊಂಡರು.

ಶಾಸ್ತ್ರಿಗಳ ಜೊತೆಗೆ

ಬದಲಾಯಿಸಿ
  • ಕೋದಂಡರಾಯರು ಸೊಸೈಟಿಯನ್ನು ಸೇರಿದ ಮೇಲೆ ಸೊಸೈಟಿಯ ಅಧ್ಯಕ್ಷ ಶ್ರೀನಿವಾಸ ಶಾಸ್ತ್ರಿಗಳು ಅವರನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ರಾಯರ ಉತ್ತಮ ನಡವಳಿಕೆ, ಕಾರ್ಯತತ್ಪರತೆ, ಶ್ರದ್ಧೆ, ಮಾನವೀಯತೆಗಳು ಅವರ ಮೆಚ್ಚುಗೆಗೆ ಪಾತ್ರವಾದವು. ಅವರನ್ನು ತಮ್ಮ ಜತೆಯಲ್ಲಿಯೇ ಇಟ್ಟುಕೊಂಡು ಅವರ ವ್ಯಕ್ತಿತ್ವವನ್ನು ಬೆಳೆಸಬೇಕೆಂದು ಆಶಿಸಿ, ತಮ್ಮ ಆಪ್ತಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
  • ಇದರಿಂದಾಗಿ ರಾಯರು ಆ ಕಾಲದ ಅನೇಕ ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಪಡೆದದ್ದಲ್ಲದೆ ನಾನಾ ಸಭೆ, ಸಮ್ಮೇಳನ ಮುಂತಾದ ಚಟುವಟಿಕೆಗಳನ್ನು ಹತ್ತಿರದಿಂದ ಕಂಡು ತಮ್ಮ ರಾಜಕೀಯ ಮತ್ತು ಜನಜೀವನದ ಜ್ಞಾನವನ್ನು ಬೆಳೆಸಿಕೊಳ್ಳುವುದು ಸಾಧ್ಯವಾಯಿತು. ರಾಯರು ಶಾಸ್ತ್ರಿಗಳ ಆಪ್ತ ಕಾರ್ಯದರ್ಶಿಯಾಗಿದ್ದ ಸುಮಾರು ಹತ್ತು ವರ್ಷಗಳ ಅವಧಿಯಲ್ಲಿ ಅವರು ಭಾರತಕ್ಕೆ ಸ್ವಾತಂತ್ರ್ಯಕೊಡುವ ಸಂಬಂಧದಲ್ಲಿ ಲಂಡನ್‌ನಲ್ಲಿ ನಡೆದ ಎರಡು ದುಂಡುಮೇಜಿನ ಪರಿಷತ್ತುಗಳಲ್ಲಿ, ಹಾಗೆಯೇ ಭಾರತ ಮತ್ತು ದಕ್ಷಿಣ ಆಫ್ರಿಕದ ಸರ್ಕಾರಗಳ ಪ್ರತಿನಿಧಿಗಳ ನಡುವೆ ದಕ್ಷಿಣ ಆಫ್ರಿಕಾದ ಭಾರತೀಯರ ಸ್ಥಿತಿಗತಿಗಳನ್ನು ಉತ್ತಮಗೊಳಿಸುವ ಸಂಬಂಧದಲ್ಲಿ ಕೇಪ್‌ಟೌನ್‌ನಲ್ಲಿ ನಡೆದ ಎರಡು ದುಂಡುಮೇಜಿನ ಪರಿಷತ್ತುಗಳಲ್ಲಿ ಶಾಸ್ತ್ರಿಗಳ ಜತೆಯಲ್ಲಿ ಇದ್ದರು.
  • ಶಾಸ್ತ್ರಿಗಳು ದಕ್ಷಿಣ ಆಫ್ರಿಕದಲ್ಲಿ ಭಾರತ ಸರ್ಕಾರದ ಪರವಾಗಿ 'ಏಜೆಂಟ್ ಜನರಲ್' ಆಗಿದ್ದಾಗಲೂ ಸಹಿತ ಅವರೊಡನಿದ್ದರು. ಆ ಅವಧಿಯಲ್ಲಿ, ಪೂರ್ವ ಆಫ್ರಿಕದ ಕೀನ್ಯ, ಉಗಾಂಡ, ತಾಂಗನಿಕ, ಝಾಂಝಿಬಾರ್‌ಗಳಿಗೆ ಭೇಟಿ ಕೊಟ್ಟು ಅಲ್ಲಿದ್ದ ಭಾರತೀಯ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದರು. ೧೯೨೯ರಲ್ಲಿ 'ದಾರ್-ಉಸ್-ಸಲಾಮ್‌'ನಲ್ಲಿ ನಡೆದ ಮೊಟ್ಟ 'ಮೊದಲನೆಯ ತಾಂಗನಿಕ ಭಾರತೀಯ ಸಮ್ಮೇಳನದ ಅಧ್ಯಕ್ಷತೆ' ವಹಿಸಿ ಮಾರ್ಗದರ್ಶನ ಮಾಡಿದರು. ಈ ಪ್ರವಾಸಗಳಿಂದಾಗಿ ಭಾರತದಿಂದ ಹೊರ ದೇಶಗಳಿಗೆ ವಲಸೆಹೋಗಿದ್ದ ಭಾರತೀಯರ ಸಮಸ್ಯೆಗಳ ನಿಕಟ ಪರಿಚಯ ರಾಯರಿಗೆ ಉಂಟಾಯಿತು. ಮತ್ತು ಆ ಸಮಸ್ಯೆಗಳನ್ನು ಪರಿಹರಿಸಲು ಅವರು ತಕ್ಕಮಟ್ಟಿನ ನೆರವು ನೀಡಿದರು.

ಗಾಂಧೀಜಿಯವರ ಜೊತೆ

ಬದಲಾಯಿಸಿ
  • ಹರಿಜನರ ಉದ್ಧಾರದ ಸಂಬಂಧದಲ್ಲಿ ರಾಯರಿಗೆ ವಿಶೇಷ ಆಸಕ್ತಿಯನ್ನು ಗಮನಿಸಿ, ಮಹಾತ್ಮ ಗಾಂಧೀಜಿಯವರು ೧೯೩೨ರಲ್ಲಿ ಯೆರವಾಡ ಸೆರೆಮನೆಯಲ್ಲಿದ್ದಾಗ ಅಲ್ಲಿಂದಲೇ ಹರಿಜನ ಚಳವಳಿಯನ್ನು ಕೈಗೊಂಡ ಸಂದರ್ಭದಲ್ಲಿ ತಮ್ಮ ಕೆಲಸಕ್ಕೆ ಕೋದಂಡರಾಯರ ನೆರವನ್ನು ಕೇಳಿದರು. *ರಾಜಕೀಯವಾಗಿ ರಾಯರು ಮತ್ತು ಗಾಂಧೀಜಿಯವರ ನಡುವೆ ಪ್ರಬಲವಾದ ಭಿನ್ನಾಭಿಪ್ರಾಯವಿತ್ತು. ಆದರೂ ಹರಿಜನೋದ್ಧಾರವು ಆವಶ್ಯಕವೆಂಬ ನಂಬಿಕೆ ರಾಯರಿಗೆ ಇದ್ದದ್ದರಿಂದ ಅವರು ಗಾಂಧೀಜಿಯವರಿಗೆ ಪೂರ್ಣ ಸಹಕಾರವನ್ನು ಕೊಟ್ಟು ಅವರ ಪ್ರಶಂಸೆಗೆ ಪಾತ್ರರಾದದ್ದು ವಿಶೇಷ ವಿಚಾರ.

ವಿದೇಶಗಳಲ್ಲಿ

ಬದಲಾಯಿಸಿ
  • ಕೋದಂಡರಾಯರು ವಿಶಾಲವಾಗಿ ಅಭ್ಯಾಸಮಾಡಿದ ತೀಕ್ಷ್ಣಮತಿಗಳು. ಯಾವುದೇ ವಿಚಾರವನ್ನು ಕುರಿತು ಅವರು ಆಳವಾಗಿ ವಿಚಾರ ಮಾಡುತ್ತಿದ್ದರು. ಅವರು ಭಾರತದ ಹಾಗೂ ಅನೇಕ ವಿದೇಶಗಳ ವಿದ್ಯಾಸಂಸ್ಥೆಗಳು ಮತ್ತು ವಿದ್ವತ್ಸಂಘಗಳಲ್ಲಿ ಅನೇಕ ಪ್ರಭಾವೀ ಜನಪ್ರಿಯ ಭಾಷಣಗಳನ್ನು ಮಾಡಿದರು.
  • ೧೯೩೫ ರಿಂದ ಸುಮಾರು ಒಂದೂವರೆ ವರ್ಷಕಾಲ ಅವರು ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಟ್ರನಿಡಾಡ್, ಬ್ರಿಟಿಷ್ ಗಯಾನ, ಡಚ್ ಗಯಾನ, ಫಿಜಿ, ಜಪಾನ್, ಚೀನ, ಸಯಾಮ್, ಫ್ರೆಂಚ್ ಇಂಡೋ ಚೀನ, ಡಚ್ ಈಸ್ಟ್ ಇಂಡೀಸ್, ಸಿಂಹಳ (ಶ್ರೀಲಂಕಾ) ಗಳಲ್ಲಿ ಅಧ್ಯಯನ ಪ್ರವಾಸ ಮಾಡಿ ಅಲ್ಲಿನ ಭಾರತೀಯ ಮೂಲದ ಜನರ ಸಮಸ್ಯೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಅಮೆರಿಕದ ಯೇಲ್, ಹಾಗೂ ಹವಾಯಿ ವಿಶ್ವವಿದ್ಯಾಲಯದಲ್ಲಿ

ಬದಲಾಯಿಸಿ
  • ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದ ಜನಾಂಗ ಸಂಬಂಧಗಳ ವಿಭಾಗ ರಾಯರನ್ನು ಆ ವಿಚಾರವಾಗಿ ಅಧ್ಯಯನ ಮಾಡಲು ಆಹ್ವಾನಿಸಿತ್ತು. ಅದಕ್ಕನುಗುಣವಾಗಿ ರಾಯರು ೧೯೩೪-೩೫ರ ಅವಧಿಯಲ್ಲಿ ಆ ಕಾರ್ಯದಲ್ಲಿ ನಿರತರಾದರು. ಆ ಸಂದರ್ಭದಲ್ಲಿ ಅವರು ನಡೆಸಿದ ಸಂಶೋಧನೆಗಳು ಬಹಳ ಅಮೂಲ್ಯವಾದವು ಎಂದು ಹೊಗಳಲ್ಪಟ್ಟವು. ಯೇಲ್ ಮತ್ತು ಹವಾಯ್ ವಿಶ್ವವಿದ್ಯಾನಿಲಯಗಳು ೧೯೩೬ರಲ್ಲಿ ಪೆಸಿಫಿಕ್ ಪ್ರದೇಶದ ವಿದ್ಯಾಭ್ಯಾಸವನ್ನು ಕುರಿತು ಒಂದು ವಿಚಾರಸಂಕಿರಣ ಸಮ್ಮೇಳನವನ್ನು ಹೊನಲುಲುನಲ್ಲಿ ಏರ್ಪಡಿಸಿದ್ದವು.
  • ಇದರಲ್ಲಿ ಭಾಗವಹಿಸಲು ರಾಯರಿಗೆ ಆಹ್ವಾನ ಬಂದಿತ್ತು. ಅಲ್ಲಿಗೆ ಅವರು ಹೋದರು. ಸಮ್ಮೇಳನದಲ್ಲಿ ಒಂದು ವಿಷಾದಕರ ಘಟನೆ ನಡೆಯಿತು. ಆ ಹಿಂದೆ ಭಾರತದಲ್ಲಿ ಕೆಲಕಾಲ ವಿದ್ಯಾಧಿಕಾರಿಯಾಗಿ ಕೆಲಸ ಮಾಡಿದ್ದ ಒಬ್ಬ ಬ್ರಿಟಿಷ್ ತಜ್ಞ ತನ್ನ ಭಾಷಣದಲ್ಲಿ ಭಾರತವನ್ನೂ ಭಾರತೀಯರನ್ನೂ ಕುರಿತು ಹೀನಾಯಕರವಾಗಿ ದೂಷಿಸಿದ. ಆ ಮಹಾಸಮ್ಮೇಳನದಲ್ಲಿ ಇದ್ದ ಒಬ್ಬರೇ ಭಾರತೀಯರೆಂದರೆ ಕೋದಂಡರಾಯರು. ಬ್ರಿಟಿಷ್ ತಜ್ಞನ ದೂಷಣೆಗಳು ಅವರ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿದವು.
  • ತಮ್ಮ ರಾಷ್ಟ್ರದ ಮತ್ತು ಜನಾಂಗದ ಗೌರವವನ್ನು ಎತ್ತಿಹಿಡಿಯಲು ತಾವು ಆತನ ಹೇಳಿಕೆಗಳನ್ನು ಖಂಡಿಸಲು ರಾಯರು ಮುಂದಾದರು. ಆದರೆ ಸಭಾಧ್ಯಕ್ಷ, ‘‘ಇಲ್ಲಿ ಇಂಥ ವಾದವಿವಾದಗಳಿಗೆ ನಾನು ಅವಕಾಶ ಕೊಡುವುದಿಲ್ಲ’’ ಎಂದು ನಿರಾಕರಿಸಿದನು. ತಾವು ಭಾರತೀಯರಾಗಿ ಅತ್ಯಾವಶ್ಯಕವಾಗಿ ನೆರವೇರಿಸಬೇಕಾಗಿದ್ದ ಕರ್ತವ್ಯವನ್ನು ನೆರವೇರಿಸಲು ಆಗಲಿಲ್ಲವೆಂದು ರಾಯರು ತುಂಬಾ ವಿಹ್ವಲರಾದರು.
  • ಸಮ್ಮೇಳನಕ್ಕೆ ಬಂದಿದ್ದ ಮಹಿಳೆ, 'ಮಿಸ್ ಮೇರಿ ಲೂಯೀಸ್ ಕ್ಯಾಂಪ್ ಬೆಲ್' ಚಿಂತಾಗ್ರಸ್ತರಾಗಿದ್ದ ರಾಯರಿಗೆ ಸಹಾನುಭೂತಿ ತೋರಿದಳು. ಅಷ್ಟು ದೊಡ್ಡ ಸಮೂಹದಲ್ಲಿ ಏಕಾಕಿತನವನ್ನು ಅನುಭವಿಸುತ್ತಿದ್ದ ರಾಯರನ್ನು ಕಂಡು ಅವರೊಡನೆ ಮಾತಾಡಿ ಅವರನ್ನು ಸಾಂತ್ವನಗೊಳಿಸಲು ಪ್ರಯತ್ನಿಸಿದಳು. ಇದರಿಂದ ಇಬ್ಬರಲ್ಲಿ ಪರಸ್ಪರ ಪರಿಚಯ ಬೆಳೆಯಿತು. ಒಬ್ಬರ ಸ್ವಭಾವ ಇನ್ನೊಬ್ಬರಿಗೆ ಮೆಚ್ಚುಗೆಯಾಯಿತು. ಸಮ್ಮೇಳನ ಮುಗಿದ ಮೇಲೆ ಅವರಿಬ್ಬರು ತಮ್ಮ ತಮ್ಮ ಸ್ಥಳಗಳಿಗೆ ಪ್ರಯಾಣ ಮಾಡಿದರು.
  • ಆದರೂ ಆ ಹೊತ್ತಿಗಾಗಲೇ ಅವರಲ್ಲಿ ಪರಸ್ಪರ ಗೌರವ, ಅಭಿಮಾನ ಗಳು ಬೆಳೆದಿದ್ದವು. ಹೀಗೆ ರಾಯರಿಗೆ ಪರಿಚಿತಳಾದ ಮಹಿಳೆ, 'ಮಿಸ್ ಮೇರಿ ಲೂಯೀಸ್ ಕ್ಯಾಂಪ್ ಬೆಲ್' ಅಮೆರಿಕದ ಒಹೈ ಪ್ರಾಂತಕ್ಕೆ ಸೇರಿದವರು; ವಿದ್ಯಾವತಿ. ಮಕ್ಕಳ ಶಿಕ್ಷಣದಲ್ಲಿ ವಿಶೇಷ ತರಬೇತಿಯನ್ನು ಪಡೆದು ಉಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಾ ಇದ್ದ ಮೇರಿ, ಷಿಕಾಗೋ ಮತ್ತು ಹವಾಯ್ ವಿಶ್ವವಿದ್ಯಾನಿಲಯಗಳ ಕಲಾಶಿಕ್ಷಣ ಶಿಬಿರಗಳಲ್ಲೂ ಶಿಕ್ಷಣ ಪಡೆದಿದ್ದರು.
  • 'ಹೊನಲುಲು'ನಲ್ಲಿ ಇದ್ದಕಾಲದಲ್ಲಿ 'ಮಿಸ್ ಮೇರಿ' ಹಾಗೂ ಕೋದಂಡರಾಯರಿಗೆ ಚೆನ್ನಾಗಿ ಪರಿಚಯ ಬೆಳೆದದ್ದರಿಂದ ಅಲ್ಲಿಂದ ಬೇರೆಯಾಗಿ ಮುಂದೆ ರಾಯರು ಭಾರತಕ್ಕೆ ಬಂದ ಮೇಲೂ ಇವರಿಬ್ಬರ ನಡುವೆ ಆಗಾಗ ಪತ್ರವ್ಯವಹಾರ ನಡೆಯುತ್ತಲೇ ಇತ್ತು. ಸುಮಾರು ಒಂದು ವರ್ಷದ ಅನಂತರ ಮೇರಿ, ತಾನು ಕೋದಂಡರಾಯರನ್ನು ಮದುವೆ ಮಾಡಿಕೊಳ್ಳಲು ಆಶಿಸುತ್ತಿರುವುದಾಗಿ ಪತ್ರ ಬರೆದರು. ಆ ಮುಂಚೆ ಇವರಿಬ್ಬರ ನಡುವೆ ಅಂಥ ಪ್ರಸ್ತಾಪ ನಡೆದೇ ಇರಲಿಲ್ಲ.
  • ಮೇರಿಯ ಸೂಚನೆಯನ್ನು ಕುರಿತು ರಾಯರು ಬಹಳವಾಗಿ ಯೋಚಿಸಿ ಆಕೆ ಅಮೆರಿಕದಿಂದ ಭಾರತಕ್ಕೆ ಬಂದು ಇಲ್ಲಿನ ಸಾಮಾಜಿಕ ಸ್ಥಿತಿ ಮತ್ತು ವಾತಾವರಣಕ್ಕೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಗಬಹುದೆಂದೂ ಶ್ರೀಮಂತರಲ್ಲದ ತಮ್ಮೊಡನೆ ಸಂಸಾರ ನಡೆಸುವುದು ಶ್ರಮದಾಯಕ ವಾಗಬಹುದೆಂದೂ ತಿಳಿಸಿ ಈ ಮದುವೆಯ ಆಲೋಚನೆಯನ್ನು ಬಿಡುವಂತೆ ತಿಳಿಸಿದರು. ಅಲ್ಲದೆ ತಮ್ಮ ಮನೆಕೆಲಸಗಳನ್ನು ಕೂಡ ತಾವೇ ಮಾಡಿ ಕೊಳ್ಳಬೇಕಾಗುವುದು ಅನಿವಾರ್ಯವಾದದ್ದರಿಂದ ಅಂಥ ಕೆಲಸ ಮಾಡುವ ಬಿಳಿಯ ಜನಾಂಗದ ಹೆಣ್ಣು ಮಗಳನ್ನು ಭಾರತದಲ್ಲಿರುವ ಬ್ರಿಟಿಷ್ ಅಧಿಕಾರಿ ಸಮಾಜ ಅವಹೇಳನ ದೃಷ್ಟಿಯಿಂದ ನೋಡಬಹುದೆಂದು, ಇದು ಅಸಹನೀಯವಾಗಬಹುದೆಂದು ತಿಳಿಸಿದರು.
  • ಆದರೆ ಈ ಕಷ್ಟಕಾರ್ಪಣ್ಯಗಳು ಯಾವುವೂ ಆಕೆಯ ನಿರ್ಧಾರವನ್ನು ಬದಲಿಸಲಿಲ್ಲ. ತಾನು ಭಾರತಕ್ಕೆ ಬರುವುದಾಗಿಯೂ ಅವರನ್ನು ಮದುವೆಯಾಗಲು ಬಯಸುವುದಾಗಿಯೂ ಆಕೆ ಕೋದಂಡರಾಯರಿಗೆ ಪತ್ರ ಬರೆದರು. ಅದಕ್ಕೆ ಉತ್ತರವಾಗಿ ರಾಯರು, ‘‘ಭಾರತಕ್ಕೆ ಬರಲೇಬೇಕೆಂದು ನೀನು ಅಪೇಕ್ಷಿಸುವುದಾದರೆ ಬಾ; ಬರುವಾಗ ಅಮೆರಿಕಕ್ಕೆ ಮರುಪ್ರಯಾಣದ ಟಿಕೆಟನ್ನು ತೆಗೆದುಕೊಂಡೇ ಬಾ. ಇಲ್ಲಿನ ಸ್ಥಿತಿಗತಿಗಳು ನಿನಗೆ ಒಗ್ಗದಿದ್ದರೆ ನೀನು ಹಿಂದಕ್ಕೆ ಹೋಗಬಹುದು. ಬಂದ ಮೇಲೆ ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕೆಂಬ ನಿರ್ಬಂಧವೇನೂ ಇಲ್ಲ’ ಎಂದು ಬರೆದರು.
  • ಈ ಕಾಗದದಿಂದ ಆಕೆ ವಿಚಲಿತಳಾಗಲಿಲ್ಲ. ತಾನು ಮರುಪ್ರಯಾಣದ ಟಿಕೆಟ್‌ನ್ನು ತೆಗೆದುಕೊಂಡೇ ಭಾರತಕ್ಕೆ ಬರುವುದಾಗಿ ತಿಳಿಸಿದರು. ಅದರಂತೆ ೧೯೩೭ ರಲ್ಲಿ ಪುಣೆಗೆ ಬಂದರು. ಅಲ್ಲಿನ ಪರಿಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡು ಅನಂತರ ಕೋದಂಡರಾಯರನ್ನು ಮದುವೆಯಾದರು. ಪಕ್ವವಾದ ಅಭಿಮಾನ, ಪ್ರೀತಿ, ತ್ಯಾಗಗಳ ಆಧಾರದ ಮೇಲೆ ರೂಪುಗೊಂಡ ಇವರಿಬ್ಬರ ವಿವಾಹ ಜೀವನ, ಕೊನೆಯವರೆಗೂ ಸುಖಮಯವಾಗಿಯೇ ಇತ್ತು.
  • ರಾಯರು ತಮ್ಮ ಪತ್ನಿಯನ್ನು ತಮ್ಮ 'ವಿವಾಹಿತ ಸ್ನೇಹಿತೆ' ಎಂದು ಭಾವಿಸಿದ್ದರು. ಆಕೆಯನ್ನು ಅತ್ಯಂತ ಗೌರವದಿಂದಲೂ ಸಹಾನುಭೂತಿಯಿಂದಲೂ ಕಾಣುತ್ತಿದ್ದರು. ಮನೆಕೆಲಸಗಳನ್ನು ಮಾಡಲು ಅವರು ಸೇವಕವರ್ಗವನ್ನು ಇಟ್ಟುಕೊಂಡಿರಲಿಲ್ಲವಾಗಿ, ಮನೆಕೆಲಸಗಳಲ್ಲಿ ತಮ್ಮ ಹೆಂಡತಿಗೆ ಜೊತೆಜೊತೆಯಾಗಿ ದುಡಿಯುತ್ತಿದ್ದರು. ಆಕೆಯೂ ಅಷ್ಟೆ. ರಾಯರ ಬೌದ್ಧಿಕ ಜೀವನದಲ್ಲಿ ಸಮಭಾಗಿಯಾಗಿ ಅವರಿಗೆ ಸಹಾಯ ಮಾಡುತ್ತಿದ್ದರು.

ಬರಹಗಾರರಾಗಿ

ಬದಲಾಯಿಸಿ
  • ಕೋದಂಡರಾಯರ ತಿಳುವಳಿಕೆ, ಅಧ್ಯಯನ ಬಹುಮುಖವಾದದ್ದು. ಅವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿದ್ದಾಗಲೂ ಅನಂತರವೂ ತಮ್ಮ ರಾಷ್ಟ್ರ ಮತ್ತು ಪ್ರಾಂತೀಯ ಸರ್ಕಾರಗಳು ರಚಿಸಿದ ಅನೇಕ ಸಮಿತಿಗಳ ಸದಸ್ಯರಾಗಿ ಉತ್ತಮವಾದ ಸೇವೆ ಸಲ್ಲಿಸಿದರು. ಔದ್ಯೋಗೀಕರಣ, ವಿದ್ಯಾಭ್ಯಾಸ, ಸಮಾಜ ಸುಧಾರಣೆ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಸಾಧಿಸಬೇಕಾದ ಮತ್ತು ಸಾಧಿಸಬಹುದಾದ ಕಾರ್ಯಗಳನ್ನು ಕುರಿತು ಅನೇಕ ಸಲಹೆ ಸೂಚನೆಗಳನ್ನು ಈ ಸಮಿತಿಗಳ ಮೂಲಕ ನೀಡಿದ್ದಾರೆ.
  • ಮೈಸೂರು, ಉತ್ಕಲ, ಗುಜರಾತ್, ಬರೋಡ ಮತ್ತು ಆನಂದ್ ವಿಶ್ವವಿದ್ಯಾನಿಲಯಗಳಲ್ಲಿ ವಿಶೇಷ ಭಾಷಣ ಮತ್ತು ಪ್ರಚಾರೋಪನ್ಯಾಸಗಳನ್ನು ಮಾಡಿದ್ದಾರೆ, ಇವುಗಳಲ್ಲಿ ಹಲವು ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಕೋದಂಡರಾಯರು ಉತ್ತಮ ಲೇಖಕರು. ಅತ್ಯುತಮ ಭಾಷಣ ಮತ್ತು ಲೇಖನಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಪರಿಣಾಮಕಾರಿಯಾಗಿಯೂ ಉಪಯೋಗಿಸುತ್ತಿದ್ದರು. ಅವರು ಬರೆದ, ಅವರ ಜೀವನವನ್ನು ರೂಪಿಸಿದ ಗುರುಗಳಾದ ಶ್ರೀನಿವಾಸ ಶಾಸ್ತ್ರಿಗಳ ‘ರಾಜಕೀಯ ಜೀವನ ಚರಿತ್ರೆ’ ಗ್ರಂಥ, ಅಲ್ಲದೆ
  • ರಾಜಾಜಿ,
  • ಸಿ.ಪಿ.ರಾಮಸ್ವಾಮಿ ಅಯ್ಯರ್‌ರಂಥ ಗಣ್ಯ ವ್ಯಕ್ತಿಗಳ ಮೆಚ್ಚುಗೆಗೆ ಪಾತ್ರವಾಗಿದ್ದುದಲ್ಲದೆ ೧೯೬೪ ರ ವಾಟುಮಲ್ ಸ್ಮಾರಕ ಪುರಸ್ಕಾರವನ್ನು ಪಡೆಯಿತು.[]
  • ‘ಈಸ್ಟ್ ವರ್ಸಸ್ ವೆಸ್ಟ್, ಡಿನೈಯಲ್ ಆಫ್ ಕಾಂಟ್ರಾಸ್ಟ್’
  • ಸಾಮಾನ್ಯವಾಗಿ ಪೌರ್ವಾತ್ಯ-ಪಾಶ್ಚಿಮಾತ್ಯ ಸಂಸ್ಕೃತಿ, ನಾಗರಿಕತೆಗಳು ಬೇರೆ ಬೇರೆಯಾಗಿದ್ದು ಅವುಗಳ ನಡುವೆ ವೈಷಮ್ಯವಿದೆಯೆಂದು ಸಾಮಾನ್ಯ ಜನರ ಮತ್ತು ಅನೇಕ ವಿದ್ವಾಂಸರ ಅಭಿಪ್ರಾಯ. ಆದರೆ ಈ ಭಾವನೆ ಸರಿಯಾದದ್ದಲ್ಲ. ಮಾನವ ಜನಾಂಗದ ನಾಗರಿಕತೆಯ ಬೆಳವಣಿಗೆಯ ಮೂಲಾಂಶವೆಲ್ಲ ಒಂದೇ, ಅವುಗಳು ಪರಸ್ಪರ ವಿರುದ್ಧವೆಂದು ತಿಳಿಯುವುದು ತಪ್ಪು ಎಂಬ ವಾದವನ್ನು ಈ ಗ್ರಂಥದಲ್ಲಿ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೋದಂಡರಾಯರು ಪ್ರತಿಪಾದಿಸಿದ್ದಾರೆ.
  • ಭಾರತದ ಸುಪ್ರಸಿದ್ಧ ತತ್ವಜ್ಞಾನಿ ಎಸ್. ರಾಧಾಕೃಷ್ಣನ್ ಅವರು ‘ಆ ಗ್ರಂಥದಲ್ಲಿ ಕಂಡುಬರುವ ಪಾಂಡಿತ್ಯ, ಮುಕ್ತ ವಿಚಾರ ಧೋರಣೆ, ಇವು ನನ್ನ ಮನಸ್ಸಿಗೆ ತುಂಬಾ ಹಿಡಿಸಿತು. ಗ್ರಂಥದ ವಸ್ತುವಿನ ನಿರೂಪಣೆ ಶುದ್ಧ ವೈಜ್ಞಾನಿಕ ರೀತಿಯದಾಗಿದೆ ಮತ್ತು ಈ ವಿಚಾರವನ್ನು ಕುರಿತ ಸಾಹಿತ್ಯಕ್ಕೆ ಈ ಗ್ರಂಥ ಗಮನಾರ್ಹವಾದ ಕೊಡುಗೆಯಾಗಿದೆ’’ ಎಂದಿದ್ದಾರೆ.

‘ಕರೆಂಟ್ ಹಿಸ್ಟರಿ

ಬದಲಾಯಿಸಿ
  • ಪತ್ರಿಕೆಗಳಿಗೆ ಲೇಖನಗಳನ್ನೂ ಸಾರ್ವಜನಿಕ ವಿಚಾರಗಳಿಗೆ ಸಂಬಂಧಿಸಿದ ಅಭಿಪ್ರಾಯ ಪತ್ರಗಳನ್ನೂ ಬರೆಯುವುದು ಕೋದಂಡರಾಯರ ಒಂದು ಅಭ್ಯಾಸವಾಗಿತ್ತು. ಆ ಲೇಖನ ‘ಸಾಲು ಮರಗಳನ್ನು ಕಡಿಯಬೇಡಿ’ ಎಂದು ಸಾರ್ವಜನಿಕರನ್ನು ಕೇಳಿಕೊಳ್ಳುವ ಪುಟ್ಟ ಪತ್ರ ಇರಬಹುದು; ಅಥವಾ ದೊಡ್ಡದೊಂದು ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಸ್ಯೆಗೆ ಸಂಬಂಧಿಸಿದ್ದೇ ಇರಬಹುದು. ಅದು ಸ್ಪಷ್ಟವಾಗಿ ವಸ್ತುನಿಷ್ಠವಾಗಿ, ತರ್ಕಬದ್ಧವಾಗಿ ಇರುತ್ತಿತ್ತು. ಇದರಿಂದಾಗಿ ಅದು ಎಲ್ಲರ ಮನ್ನಣೆಗೂ ಪಾತ್ರವಾಗುತ್ತಿತ್ತು.
  • ಅಮೆರಿಕದ ‘ಕರೆಂಟ್ ಹಿಸ್ಟರಿ ’ ಎಂಬ ಪತ್ರಿಕೆಗೆ ಬರೆದ ಲೇಖನಗಳು ಎಂಥ ಮಾನ್ಯತೆಯನ್ನು ಗಳಿಸಿದವು ಎಂಬುದನ್ನು ಕುರಿತು ಎರಡು ಮಾತು ಹೇಳಬಹುದು. ೧೯೫೩ ರ ಡಿಸೆಂಬರ್‌ನಲ್ಲಿ ಅವರು ಬರೆದ ‘ಇಂಡಿಯಾ -ದಿ ರಿಪಬ್ಲಿಕನ್ ಡೊಮಿನಿಯನ್’ ಎಂಬ ಲೇಖನವನ್ನು ಪ್ರಮುಖ ಗ್ರಂಥ ಭಂಡಾರಿಗಳ ಸಮಿತಿಯು ಆ ತಿಂಗಳಲ್ಲಿ ಪ್ರಕಟವಾದ ಹತ್ತು ಅತ್ಯುತ್ತಮ ಪತ್ರಿಕಾ ಲೇಖನಗಳಲ್ಲಿ ಒಂದೆಂದು ಪರಿಗಣಿಸಿತು. ೧೯೫೯ ರ ಮಾರ್ಚ್ ತಿಂಗಳ ‘ಕರೆಂಟ್ ಹಿಸ್ಟರಿ’ ಪತ್ರಿಕೆಯಲ್ಲಿ ಪ್ರಕಟವಾದ ‘ದಿ ಕಾಶ್ಮೀರ್ ಡಿಸ್‌ಪ್ಯೂಟ್’ ಲೇಖನಕ್ಕೂ ಇದೇ ಮನ್ನಣೆ ದೊರೆಯಿತು.
  • ೧೯೫೩ರ ಜುಲೈನ ‘ಕರೆಂಟ್ ಹಿಸ್ಟರಿ’ ಯಲ್ಲಿ ಪ್ರಕಟವಾದ ‘ಇಂಡಿಯನ್ ಇಂಟರೆಸ್ಟ್ ಇನ್ ಆಫ್ರಿಕ’ ಲೇಖನದ ಬಗೆಗೆ ಈ ಪತ್ರಿಕೆಯ ಸಂಪಾದಕರು, ‘‘ನಮ್ಮ ಈ ತಿಂಗಳ ಸಂಚಿಕೆ ನಾವು ಪ್ರಕಟಿಸಿರುವ ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಇದರಲ್ಲಿ ನಿಮ್ಮ ಲೇಖನ ಈ ಸಂಚಿಕೆಯ ಲೇಖನಗಳ ಪೈಕಿ ಅತ್ಯುತ್ತಮ’ ಎಂದು ರಾಯರಿಗೆ ತಿಳಿಸಿದ್ದರು. ಯಾವುದೇ ವಿಚಾರವನ್ನು ಕುರಿತು ಬರೆಯುವುದಕ್ಕೆ ಅಥವಾ ಭಾಷಣ ಮಾಡುವುದಕ್ಕೆ ಮೊದಲು ರಾಯರು ಆ ವಿಚಾರವಾಗಿ ಸಾಧ್ಯವಾದಷ್ಟು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದರು.
  • ಅವನ್ನು ತೀಕ್ಷ್ಣವಾದ ವಿಮರ್ಶೆಗೆ ಒಳಗು ಮಾಡುತ್ತಿದ್ದರು. ತಮ್ಮ ವೈಚಾರಿಕ ಬುದ್ಧಿಗೆ ಸರಿಯೆಂದು ತೋರಿದ್ದನ್ನು ತರ್ಕಬದ್ಧವಾದ ರೀತಿಯಲ್ಲಿ ಪ್ರತಿಪಾದಿಸುತ್ತಿದ್ದರು. ಅದೂ ಸರಳವಾಗಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ.[]

ಸರ್ವೆಂಟ್ಸ್ ಆಫ್ ಇಂಡಿಯ ಸೊಸೈಟಿಗೆ ರಾಜೀನಾಮೆ

ಬದಲಾಯಿಸಿ
  • ಇಂಗ್ಲಿಷ್ ಅಂತರರಾಷ್ಟ್ರೀಯ ವ್ಯಾಪ್ತಿಯುಳ್ಳ ಭಾಷೆಯಾದ್ದರಿಂದ ಭಾರತ ಈ ಭಾಷೆಯನ್ನು ತನ್ನ ಆಡಳಿತ ಭಾಷೆಯನ್ನಾಗಿಯೂ ಉಚ್ಚ ವಿದ್ಯಾಭ್ಯಾಸದ ಮಾಧ್ಯಮವನ್ನಾಗಿಯೂ ಎಂದೆಂದಿಗೂ ಉಳಿಸಿಕೊಳ್ಳಬೇಕೆಂಬುದು ರಾಯರ ಖಚಿತವಾದ ಅಭಿಪ್ರಾಯವಾಗಿತ್ತು. ಅವರು ದೀರ್ಘ ಕಾಲದಿಂದ ತಮ್ಮ ಈ ಅಭಿಪ್ರಾಯವನ್ನು ಬಹಿರಂಗವಾಗಿ ಪ್ರತಿಪಾದಿಸುತ್ತಲೂ ಇದ್ದರು. ಅವರ ಈ ನಿಲುವನ್ನು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ವಿರೋಧಿಸಿಯೂ ಇರಲಿಲ್ಲ.
  • ಆದರೆ ಅದೇನು ಕಾರಣವೋ ೧೯೫೮ ನೆಯ ಜನವರಿ ತಿಂಗಳಲ್ಲಿ ರಾಯರಿಗೆ ಒಂದು ಟೆಲಿಗ್ರಾಂ ಬಂತು-ಸರ‍್ವೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯಿಂದ ‘ನೀವು ಇನ್ನು ಮುಂದೆ ಇಂಗ್ಲಿಷ್ ಅನ್ನು ವಿರೋಧಿಸಬೇಕು; ಹಿಂದಿಗೆ ಬೆಂಬಲ ಕೊಡಬೇಕು’’ ಎಂದು ಆಜ್ಞೆ ಮಾಡಿ, ಈ ಆಜ್ಞೆಯಂತೆ ತಮ್ಮ ನಿಲುವನ್ನು ಬದಲಾಯಿಸುವುದು ಅವಮಾನಕರ, ಅನೈತಿಕ ಅನ್ನಿಸಿತು ರಾಯರಿಗೆ. ಅವರು ತಮ್ಮ ನಿಲುವನ್ನು ಬದಲಾಯಿಸಲಿಲ್ಲ.
  • ಮುಂದೆ ಜೂನ್ ತಿಂಗಳಿನಲ್ಲಿ ಸೊಸೈಟಿಯ ಸಕಲ ಸದಸ್ಯ ಸಭೆ ಸೇರಿದಾಗ, ಕೋದಂಡರಾಯರು ತಮ್ಮ ಸೊಸೈಟಿಯ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಕೆಂದು ನಿರ್ಣಯವಾಯಿತು. ತಮ್ಮಿಂದಾಗಿ ಸೊಸೈಟಿಯಲ್ಲಿ ವಿರಸವುಂಟಾಗಬಾರದೆಂದು ರಾಯರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟರು. ಮೂವತ್ತೇಳು ವರ್ಷಗಳ ಬಾಂಧವ್ಯ ಕೊನೆಗೊಂಡಿತು. ಮೂವತ್ತೇಳು ವರ್ಷಗಳ ಕಾಲ ಏಕಪ್ರಕಾರವಾಗಿ ಅತ್ಯಂತ ನಿಷ್ಠೆಯಿಂದ ತಾವು ಸೇವೆ ಸಲ್ಲಿಸಿದ ಸಂಸ್ಥೆಯಿಂದ, ರಾಯರು ಹೊರಗೆ ಬಂದರು.
  • ಸೊಸೈಟಿಗೆ ರಾಜೀನಾಮೆ ಕೊಟ್ಟ ಮೇಲೆ ರಾಯರು ತಮ್ಮ ಮಿತ್ರರ ಸೂಚನೆಯಂತೆ, ಬೆಂಗಳೂರಿನಲ್ಲಿ ನೆಲಸಿದರು. ಸೊಸೈಟಿಯಿಂದ ಬರುತ್ತಿದ್ದ ಮಾಸಾಶನ ತಪ್ಪಿತಾದರೂ ತಮ್ಮ ಲೇಖನವೃತ್ತಿಯಿಂದ ದೊರೆಯುತ್ತಿದ್ದಷ್ಟು ಆದಾಯದಿಂಲೇ ಸರಳ ಜೀವನ ನಡೆಸತೊಡಗಿದರು. ತಮ್ಮಿಂದಾದ ಸಮಾಜಸೇವಾ ಕಾರ್ಯವನ್ನು ಕೂಡ ತಪ್ಪದೆ ಮುಂದುವರೆಸಿಕೊಂಡು ಬಂದರು.

ಸಮರ್ಪಿತ ಜೀವನ

ಬದಲಾಯಿಸಿ

ರಾಯರು ನಮ್ಮ ರಾಷ್ಟ್ರಕ್ಕೆ ಮತ್ತು ನಮ್ಮ ಸಮಾಜಕ್ಕೆ ಸಲ್ಲಿಸಿದ ಸೇವೆ ಗಮನಾರ್ಯವಾದದ್ದು. ಜನತೆ, ರಾಯರು ೭೭ ವರ್ಷದವರಾಗಿದ್ದಾಗ -೧೯೬೬ ನೆಯ ಜನವರಿ ೯ ನೆಯ ತಾರೀಖಿನಂದು-ಅವರನ್ನು ಸಾರ್ವಜನಿಕವಾಗಿ ಸತ್ಕರಿಸಿ, ಒಂದು ನಿಧಿಯನ್ನು ಅರ್ಪಿಸಿತು. ರಾಯರು ಈ ನಿಧಿಯ ಗಣನೀಯ ಭಾಗವನ್ನು ಸಾರ್ವಜನಿಕ ಹಿತಕ್ಕಾಗಿಯೇ ವೆಚ್ಚಮಾಡಿದರು. ತಮ್ಮ ದೇಹಾಲಸ್ಯವನ್ನೂ ಲಕ್ಷಿಸದೆ. ಕೊನೆಯವರೆಗೂ ಜನಹಿತ ಕಾರ್ಯಗಳಲ್ಲಿ ಆಸಕ್ತರಾಗಿದ್ದರು.

ಕೋದಂಡರಾಯರು ತಮ್ಮ ೮೬ ನೆಯ ವಯಸ್ಸಿನಲ್ಲಿ, ೧೯೭೫ ನೆಯ ಜುಲೈ ೨೩ ರಂದು ಬೆಂಗಳೂರಿನಲ್ಲಿ ನಿಧನರಾದರು. ಪತ್ನಿ ಆತ್ಮೀಯವಾಗಿ ಅರಿತಿದ್ದರು. ‘‘ಆಧುನಿಕ ಋಷಿ ದಂಪತಿಗಳು’’ ಎನ್ನುತ್ತಿದ್ದರು. ಸತ್ಯ, ನಿಷ್ಠೆ, ತ್ಯಾಗ, ಪರಹಿತಸಾಧನೆಗಳೇ ರೂಪುವೆತ್ತಂತಿದ್ದ ಋಷಿ ಸಮಾನ ದಂಪತಿ ಗಳೆಂದು ಹೆಸರಾಗಿದ್ದರು. 'ಲಾಲ್ ಬಾಗ್', ನಿಂದ ಎಮ್.ಎನ್.ಕೃಷ್ಣರಾವ್ ಪಾರ್ಕ್' ಗೆ ಹೋಗುವ ರಸ್ತೆಯಲ್ಲಿ ಅವರ ಬಂಗಲೆ ಇತ್ತು.

ಉಲ್ಲೇಖಗಳು

ಬದಲಾಯಿಸಿ
  1. P.Kodanda rao-A profile, DR G. V. L. N. SARMA
  2. Political Science in India: An Index to Twelve Political Science Journals of-ಪಿ.ಕೋದಂಡಾರಾವ್
  3. World Cat, The Right Honourable V. S. Srinivasa Sastri,... : a political biography. P. Kodanda Rao.