ಪೀಠಿಕೆ ಬದಲಾಯಿಸಿ

ತುಳುನಾಡಿನ ದೈವಶಕ್ತಿಗಳಲ್ಲಿ ಇದೂ ಕೂಡ ಒಂದು. ಈ ದೈವಶಕ್ತಿಗಳಲ್ಲಿ ಅನೇಕ ಪ್ರಾಣಿಗಳೂ ಸೇರಿಕೊಂಡಿವೆ. ಇತರ ದೈವಗಳಂತೆ ಪಿಲ್ಚಂಡಿ (ಪಿಲಿಚಂಡಿ/ ಹುಲಿಚಂಡಿ) ಕೂಡ ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿಯಾಗಿದೆ.

ಕಥಾಸಾರ ಬದಲಾಯಿಸಿ

ಈಶ್ವರ ಮತ್ತು ಪಾರ್ವತಿ ದೇವರ ಅನುಗ್ರಹದಿಂದ ಒಂದು ಗಂಡು ಒದು ಹೆಣ್ಣು ಕೇಂಜವ ಹಕ್ಕಿಗಳು ಜನನಕ್ಕೆ ಬಂದವು. ಈ ಜೊತೆ ಹಕ್ಕಿಗಳಿಗೆ ತಿರುಗಾಡಲು ಮರ, ಕುಳ್ಳಿರಲು ‘ಕುರೆಕಲ್ಲು'(ಕುಳಿತುಕೊಳ್ಳುವ ಕಲ್ಲು), ತಿನ್ನಲು ಕದಿರನ್ನು ಈಶ್ವರ ದೇವರು ನಿರ್ಮಿಸಿಕೊಟ್ಟರು. ಜೊತೆ ಹಕ್ಕಿಗಳು ಬಹಳ ಸಂತೋಷದಿಂದ ಬದುಕುತಿದ್ದವು. ಹೀಗಿರುವಾಗ ಒಂದು ದಿನ ಹೆಣ್ಣು ಕೇಂಜವ ಗಂಡಿನೊಡನೆ “ನೋಡು ಕೇಂಜವ ನಮ್ಮನ್ನು ದೇವರು ಗಂಡು ಹೆಣ್ಣುಗಳಾಗಿ- ಅಂದರೆ ಅಣ್ಣ ತಂಗಿಯರಾಗಿ ಜನ್ಮಿಸಿದರು. ನಮ್ಮ ಸಂತತಿ ನಮ್ಮ ಕಾಲದಲ್ಲಿ ಅಳಿದು ಹೋಗುವುದು, ನೀನು ಈಶ್ವರ ದೇವರಲ್ಲಿಗೆ ಹೋಗಿ ಬಾ, ನಮ್ಮ ಅಣ್ಣ ತಂಗಿಯರ ಭಾವವವನ್ನು ಕಡಿದು ಸತಿಪತಿಗಳಾಗಿ ಅನುಗ್ರಹಿಸಲು ಬೇಡಿಕೊಳ್ಳೋಣ” ಎಂದು ಹೇಳಿತು. ಅಷ್ಟು ಮಾತನ್ನು ಕೇಳಿಕೊಂಡು ಗಂಡು ಕೇಂಜವ ಈಶ್ವರ ದೇವರ ಸನ್ನಿದಾನಕ್ಕೆ ಬಂದು ಪ್ರಾರ್ಥಿಸಿತು. ದೇವರು ಗಂಡು ಕೇಂಜವನ ಮೊರೆಯನ್ನು ಕೇಳಿಸಿಕೊಂಡರು. ದೇವರು ಗಂಡು ಕೇಂಜವನನ್ನು ಮೂಡು ಮುಖವಾಗಿ ನಿಲ್ಲಿಸಿದರು. ಹೆಣ್ಣು ಹಕ್ಕಿಯನ್ನು ಪಡುಗಡೆ ಮುಖ ಮಾಡಿದರು. ಅವರ ಬಲಿ ವಿಂಗಡಿಸಿ ಬಣ್ಣ ಬರೆದರು. ಇನ್ನು ಮುಂದೆ ನೀವೂ ಅಣ್ಣ ತಂಗಿಯರಲ್ಲ ಸತಿಪತಿಗಳೆಂದು ಅನುಗ್ರಹಿಸಿ ದೇವರು ಕೇಂಜವ ದಂಪತಿಗಳಿಗೆ ಗಂಡು ಸಂತಾನದ ಫಲವನ್ನು ಅನುಗ್ರಹಿಸಿದರು. ಸ್ವಲ್ಪ ಕಾಲ ಕಳೆಯಿತು. ಹೆಣ್ಣು ಕೇಂಜವ ಹಕ್ಕಿ ಗರ್ಭ ಧರಿಸಿತು. ಹೆಣ್ಣು ಕೇಂಜವಕ್ಕೆ ಬಡಗು ಕಡೆಗಿರುವ ಮಾವುರಿ ಗಂಗೆಯಲ್ಲಿ ಇರುವ ತಾವರೆ ಹೂವಿನ ಮಧುವನ್ನು ತಿನ್ನಬೇಕೆಂಬ ಬಯಕೆಯಾಯಿತು. ಹೆಣ್ಣು ಕೇಂಜವ ಹಕ್ಕಿಯ ಆಸೆ ತೀರಿಸಲು ಗಂಡು ಕೇಂಜವ ಹಕ್ಕಿ ತಾವರೆ ಹೂವನ್ನು ಹುಡುಕಿ ಮಾವೂರಿ ಗಂಗೆ ಸೇರಿತು. ತಾವರೆ ಹೂವಿಗೆ ಕೊಕ್ಕು ಹಾಕಿತು. ಅಷ್ಟರಲ್ಲಿ ಸೂರ್ಯ ದೇವರು ಪಡುಗಡಲು ಸೇರಿ ತಾವರೆ ಮುಚ್ಚಿಕೊಂಡಿತು. ಗಂಡು ಕೇಂಜವನ ಕೊಕ್ಕು ತಾವರೆಯಲ್ಲಿ ಸಿಲುಕಿ ವಿಲವಿಲ ಒದ್ದಾಡಿಕೊಂಡಿತು. ಕೊನೆಗೆ ತಮ್ಮನ್ನು ಉಂಡು ಮಾಡಿದ ಈಶ್ವರ ದೇವರಿಗೆ ಹರಕೆ ಹೊತ್ತಿತು. “ನನ್ನ ಪತಿ ತಿರುಗಿ ಬಂದರೆ ನಾನು ಮೊದಲಿಡುವ ತತ್ತಿಯನ್ನು ನಿಮಗೆ ಪಾದಾರ್ಪಣೆಯಾಗಿ ಅರ್ಪಿಸುತ್ತೇನೆ” ಎಂದಿತು. ಹೆಣ್ಣು ಕೇಂಜವನ ಹರಕೆ ದೇವರ ಪಾದಕ್ಕೆ ಸೇರಿತು. ಮೂಡು ಬಾಗಿಲಲ್ಲಿ ಸೂರ್ಯ ದೇವರು ಉದಿಸಿ ಬಂದರು. ಗಂಡು ಕೇಂಜವ ತಾವರೆಯ ಮಧುವನ್ನು ತಂದು ಹೆಂಡತಿಗೆ ಉಣಿಸಿತು. ಹೆಣ್ಣು ಕೇಂಜವದ ಗರ್ಭ ಬಲಿಯತೊಡಗಿತು. ಆಗ ಗಂಡು ಹಕ್ಕಿಯ ಬಳಿಯ ಅಶ್ವಥ ವೈಕ್ಷದಲ್ಲಿ ಬೆಳ್ಳಿಯ ಯಮಗೂಡು ಕಟ್ಟಿತು. ಆ ಗೂಡಿನಲ್ಲಿ ಹೆಣ್ಣು ಹಕ್ಕಿ ಕುಳಿತು ತತ್ತಿ ಇಟ್ಟಿತು. ತತ್ತಿಯ ಅಂದ ಚೆಂದವನ್ನು ಕಂಡು ಕುಣಿದು ಕುಪ್ಪಳಿಸುತ್ತಿದ್ದ ಗಂಡು ಕೇಂಜವನಿಗೆ ಹೆಣ್ಣು ಕೇಂಜವ ಹರಕೆಯ ವೃತ್ತಾಂತವನ್ನು ತಿಳಿಸಿತು. ದೇವರ ಹರಕೆ ಸಂದಾಯ ಮಾಡಲು ಗಂಡು ಹೆಣ್ಣುಗಳ ರೆಕ್ಕೆ-ರೆಕ್ಕೆ ಜೋಡಿಸಿಕೊಂಡವು. ಅದರಲ್ಲಿ ತತ್ತಿಯನ್ನಿರಿಸಿ ಈಶ್ವರ ದೇವರ ಸನ್ನಿದಾನಕ್ಕೆ ಹಾರಿದವು. ಆ ಸಮಯದಲ್ಲಿ ದೇವರು ಕೆಳಗಿನ ಸಿರಿ ಲೋಕದಲ್ಲಿರಲಿಲ್ಲ. ಅವರು ಮೇಲೆ ಲೋಕದಲ್ಲೂ ಇರಲಿಲ್ಲ. ಮಧ್ಯ ಭಾಗದಲ್ಲಿ ನಾಗ ದೇವರಿಗೆ ಸತ್ಯ ನೆರಳಿನ ಅಡಿ ಭಾಗದಲ್ಲಿ ಸಮಾರಾಧನೆ ನಡೆಯುತ್ತಿತ್ತು. ಗಂಡು ಹೆಣ್ಣು ಕೇಂಜವಗಳು ಈಶ್ವರ ದೇವರ ಸಿರಿಮುಡಿಯಲ್ಲಿ ಕುಳಿತುಕೊಂಡವು. ದೇವರು ತಲೆಯೆತ್ತಿ ನೋಡಿದಾಗ ಕೇಂಜವಗಳನ್ನು ಕಂಡರು. ಕೇಂಜವ ಹಕ್ಕಿಗಳು ಪಾದ ಕಾಣಿಕೆಯಾಗಿ ಅರ್ಪಿಸಿದ ಮೊದಲ ತತ್ತಿಯ ಅಂದ ಚೆಂದವನ್ನು ಕಂಡು ದೇವರು ಮರುಳಾದರು. ಆ ತತ್ತಿಯನ್ನು ‘ಕಲ್ಲಕಲೆಂಬಿ’ಯ(ಶಿಲೆ ಕಲ್ಲಿನಿಂದ ತಯಾರಿಸಿದ ಕವಾಟ) ಬಾಗಿಲನ್ನು ತೆಗೆಸಿ ಮುತ್ತಿನ ದಿಂಬಿನ ಮಧ್ಯೆ ಇರಿಸಿದರು. ತತ್ತಿಯ ಕಾವಲಿಗಾಗಿ ಜರಕೋರಿ ಜಂಬೂರಿಯ ಮಗನಾದ ಕೀಲ ಜಾಂಬವನನ್ನು ನೇಮಿಸಿದರು. ಈಶ್ವರ ದೇವರ ಬಳಿ ಸಾವಿರ ಎಮ್ಮೆ ಸಾವಿರ ದನಗಳಿದ್ದವು. ಪಾರ್ವತಿದೇವಿ ಈ ಗೋವುಗಳನ್ನೆಲ್ಲಾ ಪ್ರೀತಿಯಿಂದ ಸಾಕಿ ಸಲಹುತ್ತಿದ್ದರು. ಒಂದು ದಿನ ಪಾರ್ವತಿ ದೇವಿ ಪತಿಯೊಡನೆ ಈ ಸಾವಿರ ಸಂಖ್ಯೆಯ ಗೋವುಗಳನ್ನು ನಾನು ಈವರೆಗೆ ಸಾಕಿಕೊಂಡು ಬಂದೆ, ಇನ್ನು ಮುಂದೆ ಇದು ನನ್ನಿಂದಾಗುವ ಕಾರ್ಯವಲ್ಲ ಎಂದರು. ಪಾರ್ವತಿ ದೇವಿಯ ಮಾತುಗಳನ್ನು ಕೇಳಿಸಿಕೊಂಡ ಪರಮೇಶ್ವರ ಏಳು ಲೋಕದ ಕೋಪ ತಾಳಿದರು. ‘ಕಲ್ಲೆಕಲೆಂಬಿ’ಯ ಬಾಯಿಮುಚ್ಛಳವನ್ನು ಹಾರಿಸಿಬಿಟ್ಟರು. ಮುತ್ತಿನ ದಿಂಬನ್ನು ಪಾರ್ವತಿ ದೇವಿಯತ್ತ ಎಸೆದರು. ಅದು ಪಾರ್ವತಿ ದೇವಿಯನ್ನು ಬಿಟ್ಟು ಚಾವಡಿಯ ಮದ್ದೋಲಿ ಕಂಬಕ್ಕೆ (ಮನೆಯ ಚಾವಡಿಯಲ್ಲಿರುವ ಆಧಾರ ಸ್ತಂಭ) ತಾಗಿತು. ಆ ಪೆಟ್ಟಿಗೆಯಲ್ಲಿದ್ದ ತತ್ತಿ ಒಡೆಯಿತು. ಅದರಿಂದ ಕುಮಾರನ ಉದ್ಭವವಾಯಿತು. ದೊಡ್ಡದಾದ ಹೊಟ್ಟೆ, ಅಗಲವಾದ ಕಿವಿ, ದುಂಡಗಿನ ಮೂಗು, ಹಸಿರು ಬಣ್ಣದ ಮೈ, ಅದರಲ್ಲಿ ಮುತ್ತಿನಂಥ ಬೊಟ್ಟುಗಳು, ಮುತ್ತಿನ ಬಣ್ಣದ ಮೈಮೇಲೆ ಹಸಿರು ಬೊಟ್ಟು, ಈ ರೀತಿ ಅಪೂರ್ವ ಆಕೃತಿಯ ಹುಲಿಯ ರೂಪದ ಕುಮಾರ ಜನ್ಮ ತಳೆದ. ಈಶ್ವರ ದೇವರು ಕುಮಾರನ ಉದ್ಭವವನ್ನು ಕಂಡು ಸಮಾಧಾನಗೊಂಡರು. “ಕುಮಾರ ನಿನ್ನ ಸೃಷ್ಟಿ ಬಹಳ ಒಳ್ಳೆಯದೇ ಆಯಿತು. ನೀನು ಬಹಳ ಬಲವಂತ ಕುಮಾರ. ನಮ್ಮ ಮನೆಯಲ್ಲಿ ಸಾವಿರ ಸಂಖ್ಯೆಯ ಗೋವುಗಳಿವೆ, ನೀನು ಸಾವಿರ ಗೋವುಗಳನ್ನು ಮೇಯಿಸಿಕೊಂಡು ಬಾ” ಎಂದು ದೇವರು ಅಪ್ಪಣೆಯನ್ನು ಕೊಟ್ಟನು. ಆ ಪ್ರಕಾರ ಕುಮಾರ ಮೇವುಗಳನ್ನು ಮೇಯಿಸಲು ತೊಡಗಿದನು. ‘ಅನಿಲಂದಡ್ಕ’ ಎಂಬಲ್ಲಿ ವಿಶಾಲವಾಗಿ ಹಬ್ಬಿರುವ ನೆಲ್ಲಿಮರ. ಅದರ ಆಶ್ರಯದಲ್ಲಿ ಸಾವಿರ ಗೋವುಗಳು ನೆಲ್ಲಿಕಾಯಿ ತಿಂದು ಮೇಲ್ಬಾಗದಿಂದ ಹರಿದು ಬರುವ ನೀರನ್ನು ಕುಡಿಯುತ್ತಿದ್ದವು. ಕುಮಾರನು ಕೆಳ ಭಾಗದಲ್ಲಿ ಹರಿದು ಬರುವ ನೀರನ್ನು ಕುಡಿಯುತ್ತಿದ್ದ. ಆ ನೀರನ್ನು ಕುಡಿದ ಕುಮಾರನ ಮನಸ್ಸಿನಲ್ಲೊಂದು ಕೆಟ್ಟ ಯೋಚನೆ ಹುಟ್ಟಿಕೊಂಡಿತು. “ಈ ಗೋವುಗಳು ನೆಲ್ಲಿಕಾಯಿಯನ್ನು ತಿಂದು ಕುಡಿದ ನೀರು ಇಷ್ಟೊಂದು ರುಚಿ ಇರುವಾಗ ಈಶ್ವರ ದೇವರ ಸಾವಿರ ಗೋವುಗಳು ಎಷ್ಟು ರುಚಿ ಇರಲಿಕ್ಕಿಲ್ಲ” ಎಂದು ಅನ್ಯಾಯದ ಮಾರ್ಗವನ್ನು ಆಲೋಚಿಸಿದ ಕುಮಾರ. ಪರಮೇಶ್ವರನ ಕೋಪದ ದೆಸೆಯಿಂದ ಹುಟ್ಟಿದ ಕುಮಾರನಿಗೆ, ಹುಟ್ಟಿದ ಕಾರಣದಿಂದಲೆ ಈ ಕೆಟ್ಟ ಯೋಚನೆ ಸ್ವಾಭಾವಿಕವಾಗಿ ಬಂದು ಬಿಟ್ಟಿತು. ಈ ರೀತಿ ದುರಾಲೋಚನೆಯಲ್ಲಿ ಕುಮಾರ ಲೆಕ್ಕಚಾರ ಮಾಡಿದ. ಒಂದು ದಿನ ಅಮವಾಸ್ಯೆ ಕಳೆಯಿತು. ಕುಮಾರನು ಕುಟಿಲ ಬುದ್ದಿಯಿಂದ ಈಶ್ವರ ದೇವರ ಸಿರಿ ಮೆಚ್ಚಿನ ಕಪಿಲೆ ದನದ ಗೋಣು ಮುರಿದ. ಬಿಸಿ ನೆತ್ತರನ್ನು ಮನಸೋ ಇಚ್ಛ ಹೀರಿ ತೃಪ್ತಿ ಪಡೆದ. ಬಾಯಿತುಂಬ ಕಪಿಲೆಯ ಮಾಂಸವನ್ನು ತುಂಬಿಕೊಂಡ. ಸಂತಸದಲ್ಲಿ ಕುಮಾರನು ಕುಣಿದು ಕುಪ್ಪಳಿಸಿದ. ಕುಮಾರನಲ್ಲಿ ಕ್ರೌರ್ಯ ತುಂಬಿಕೊಂಡಿತು. ಕುಮಾರನಲ್ಲಿ ದುಷ್ಟ ಪ್ರವೃತ್ತಿ ಬೆಳೆಯುತ್ತಾ ಸಾಗಿತು. ಈ ರೀತಿ ಕುಮಾರನ ಆಹಾರಕ್ಕಾಗಿ ದಿನದಿಂದ ದಿನಕ್ಕೆ ವಾರದಿಂದ ವಾರಕ್ಕೆ ಈಶ್ವರ ದೇವರ ಸಾವಿರ ಪಡೆಯ ಗೋವುಗಳ ಸಂಖ್ಯೆ ಕ್ಷೀಣಿಸತೊಡಗಿತು. ಇದನ್ನು ತಿಳಿದ ದೇವರು ಸಮಯ ನೋಡಿ ಶೋಧಿಸಿದರು. ಇದು ಬಲು ಬಲುಮೆಯ ಕುಮಾರನ ಕಾರಸ್ಥಾನ ಎಂದು ತಿಳಿದರು. ಇದಕ್ಕೊಂದು ಪರಿಹಾರ ಅಗತ್ಯ ಎಂದು ದೇವರು ಬಗೆದರು. ಈಶ್ವರ ದೇವರು ಕುಮಾರನನ್ನು ಕರೆದರು. “ನಾನಿರುವ ರಾಜ್ಯದಲ್ಲಿ ನೀನು ಬಾಳಿ ಬದುಕಬೇಕಾದರೆ ಕಪ್ಪು ಕಾಗೆಗೆ ಬಿಳಿ ಪುಕ್ಕ ಬಿಳಿ ಕಾಗೆಗೆ ಕಪ್ಪು ಪುಕ್ಕ ಬರಬೇಕು. ಸಮುದ್ರದ ಹೊಯ್ಗೆಯಲ್ಲಿ ಉಪ್ಪನ್ನು ಕಡೆದು ಜನಿವಾರ ಹಾಕಿಕೊಳ್ಳಬೇಕು ಹಾಗಿದ್ದರೆ ನಾನಿದ್ದ ರಾಜ್ಯದಲ್ಲಿ ನೀನು ನೆಲೆಸಬಹುದು. ಅದು ನಿನ್ನಿಂದ ಅಸಾಧ್ಯ. ಇಂದಿನಿಂದ ನೀನು ಪಿಲ್ಚಂಡಿ(ಹುಲಿಚಂಡಿ)” ಎಂದು ನಾಮಕರಣ ಮಾಡಿದರು. ನಿನ್ನನ್ನು ಇಂದು ಸ್ವಾಮಿ ಲೋಕದಿಂದ ಭೂಮಿ ಲೋಕಕ್ಕೆ ಕಳುಹಿಸಿ ಕೊಡುತ್ತಿದ್ದೇನೆ. ಮುಂದೆ ಮಹಮ್ಮಾಯಿಯ ವಾಹನವಾಗು. ಭಕ್ತರನ್ನು ರಕ್ಷಿಸುತ್ತಿರು” ಎಂದು ವರ ನೀಡಿದರು. ಆ ಪ್ರಕಾರ ಪಿಲ್ಚಂಡಿ ಈಶ್ವರ ದೇವರ ಅಪ್ಪಣೆ ಪಡೆದು ಭೂಲೋಕಕ್ಕೆ ಇಳಿದು ಬಂದ. ಮಮ್ಮಾಯಿಯನ್ನು ಭೇಟಿ ಮಾಡಿದ. ಅವರ ವಾಹನವಾದ. ಪಿಲ್ಚಂಡಿ ಮುಂದೆ ಬರುವಾಗ ಘಟ್ಟದ ತಪ್ಪಲಲ್ಲಿ, ಸಾರಮಾನಿ (ಸಾವಿರ ಸಂಖ್ಯೆಯ ದೈವಗಳು) ದೈವಗಳು, ಇರ್ವರು ಬೈದೇರುಗಳು(ಕೋಟಿ ಚೆನ್ನಯ್ಯ) ಗಂಗೆಯನ್ನು ಸೇರಿ ಜಳಕಮಾಡಿ ಶುದ್ಧಿಯಾಗಲು ಕಾದುಕೊಂಡಿದ್ದರು. ಅವರಿಗೆ ಒಂದು ಅಡ್ಡಿಯಿತ್ತು’ ಬಬ್ಬರ್ಯ’ ಎಂಬ ಹೆಸರಿನ ದೈವವು ಘಟ್ಟಕ್ಕೊಂದು ಕಾಲು, ಸಮುದ್ರ ತಟಕ್ಕೊಂದು ಕಾಲು ಇಟ್ಟು ನಿಂತಿತ್ತು. “ಗಂಗಾ ಸ್ನಾನ ಮಾಡಬೇಕಿದ್ದರೆ ತನ್ನ ಕಾಲಡಿಯಿಂದ ನುಸುಳಿಕೊಂಡು ಹೋಗಿ ಎಂದು ಅಟ್ಟಹಾಸ ಮೆರೆಯುತ್ತಿದ್ದ. ಅಲ್ಲಿಂದ ಸಾರಮಾಣಿ ದೈವಗಳು ಬಬ್ಬರ್ಯನ ಮಾತಿನಂತೆ ನಡೆದರೆ ತಮ್ಮ ಸ್ಥಾನಮಾನ ಮತ್ತು ಗೌರವಕ್ಕೆ ಕುಂದುಂಟಾಗುವುದು. ಹಾಗಾಗಿ ಅವು ಸಹಾಯಕ್ಕಾಗಿ ಕಾದಿದ್ದವು. ಆವಾಗ ಪಿಲ್ಚಂಡಿ ಬಂದು ತನ್ನಿಂದ ಏನು ಸಹಾಯ ಬೇಕು ಎಂದು ವಿಚಾರಿಸಿದ. ಆಗ ಬೈದೇರುಗಳು(ಕೋಟಿಚೆನ್ನಯ) “ನೀನು ಬಬ್ಬರ್ಯನ ಕಾಲನ್ನು ಎತ್ತುವಂತೆ ಮಾಡಿದರೆ ನಮ್ಮ ಅರವತ್ತಾರು ಗರೋಡಿಗಳಲ್ಲಿ ಬಡಗು ಬದಿಗೆ ಬಾಗಿಲನ್ನಿರಿಸಿ ನಿನಗೆ ಮೊದಲ ಗಂಧ, ಮೊದಲ ವೀಳ್ಯ, ಮರೆಯದೆ ಕೊಡಿಸುತ್ತೇವೆ” ಎಂದು ಭರವಸೆ ಕೊಟ್ಟರು. ಈ ಮಾತನ್ನು ಕೇಳಿಸಿಕೊಂಡ ಪಿಲ್ಚಂಡಿ ಸೂಟೆಗೆ(ಬೆಂಕಿ ಹಚ್ಚಲು ತೆಂಗಿನ ಸೋಗೆಯ ಒಣಗಿದ ಗರಿಗಳನ್ನು ಒಂದುಗೂಡಿಸಿ ತಯಾರಿಸುವ ವಸ್ತು) ಬೆಂಕಿ ಹಚ್ಚಿ ಬೆಳಗಿದ. ಬೆಂಕಿಯನ್ನು ಬಬ್ಬರ್ಯನ ಕಾಲಿಗೆ ಹಿಡಿದ. ಬಬ್ಬರ್ಯ ಕಾಲೆತ್ತಿದೊಡನೆ ಇನ್ನೋರ್ವ “ ಕಡ್ತಾಕಾರ್ಗೆ’ಯ(ಕಾರ್ಯಭಾರದ) ದೈವ ‘ಕೋಡಿಯ ಬಬ್ಬು’ ತನ್ನ ಅಡ್ಯನ(ಲೋಹದಿಂದ ತಯಾರಿಸಿದ ವೃತ್ತಾಕಾರದ ರಕ್ಷಾ ಸಾಧಾನ) ಎಂಬ ಆಯುಧವನ್ನೆತ್ತಿ ಅಡ್ಡ ಹಿಡಿದ. ಬಬ್ಬರ್ಯನ ಕಾಲನ್ನು ‘ಬಾಲ್’ ಎಂಬ ಆಯುಧದಿಂದ ಕಡಿದ. ಆ ಬಳಿಕ ಬಬ್ಬರ್ಯ ಬಬ್ಬುವಿನ ಮಾತಿನಂತೆ ಪಡುಗಡಲ ತಡಿಯ ‘ಪರಿಯಾಳ’ ರಾಜ್ಯಕ್ಕೆ ತೆರಳಿದ. ಮೀನುಗಾರರ ಆರಾಧ್ಯ ದೈವವಾಗಿ ಮೆರೆದ. ಇತ್ತ ಬೈದೇರುಗಳು ಮತ್ತು ಸಾರಮಾಣಿ ದೈವಗಳುಗಂಗೆ ಮಿಂದು ಸುದ್ದಿ ಪಡೆದರು. ಮಾಡಿದ ವಾಗ್ದಾನ ಪ್ರಕಾರ ತುಳುನಾಡಿನಾದ್ಯಂತ 66 ಗರಡಿಗಳಲ್ಲಿ ಪಿಲ್ಚಂಡಿಗೆ ಒಂದು ಮಣೆ ಮಂಚದಲ್ಲಿ ಸೇವೆ ಕೊಡುವ ವ್ಯವಸ್ಥೆ ಮಾಡಿದರು. ಆ ಬಳಿಕ ಪಿಲ್ಚಂಡಿ ದೈವ ಆಯಾಯ ಪ್ರದೇಶಗಳಲ್ಲಿ ಪ್ರಸರಣಗೊಂಡು ಅಸಂಖ್ಯಾ ಭಕ್ತರಿಂದ ಹೋಮ ನೇಮ ಸ್ವೀಕರಿಸಿ ನೆಲೆಗೊಂಡಿತು.

ಆರಾಧನೆ ವಿಧಿ ವಿಧಾನ ಬದಲಾಯಿಸಿ

ಪಿಲ್ಚಂಡಿ ದಶ‍ನಾವೇಶವೂ ಧೂಮಾವತಿಯ ತೆರನಾಗಿರುವುದು. ಕತ್ತರಿಮಂಚ ಉಯ್ಯಾಲೆಯಲ್ಲಿ ಕೂಡ ಪಿಲ್ಚಂಡಿಯನ್ನು ಗುಡಿಯೊಳಗೆ ನಂಬುವರು. ಅಷ್ಟು ಮಾತ್ರವಲ್ಲ ಪಿಲ್ಚಂಡಿಯನ್ನು ನಂಬಿರುವ ಎಲ್ಲಾ ಠಾಣ್ಯಗಳಲ್ಲಿ ಹುಲಿಯ ಗಾತ್ರದ ಅಂದವಾದ ಮರದಿಂದ ಕೆತ್ತಲ್ಪಟ್ಟ ಬಿಂಬವನ್ನು ಗುಡಿಯ ಹೊರಭಾಗದಲ್ಲಿ ಬಣ್ಣಕೊಟ್ಟು ನಿಲ್ಲಿಸುವರು. ಈ ಬಿಂಬದ ತಳಭಾಗದಲ್ಲಿ ಪೀಠವನ್ನು ಜೋಡಿಸುತ್ತಾರೆ. ಪೀಠದ ಅಡಿಯಲ್ಲಿ ನಾಲ್ಕು ಮರದ ಚಕ್ರಗಳನ್ನು ಅಳವಡಿಸಿರುವರು. ಪಿಲ್ಚಂಡಿಯ ವಾರ್ಷಿಕ ಕೋಲದ ಸಮಯದಲ್ಲಿ ಈ ಬಿಂಬವನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಿ ಸುತ್ತು ಎಳೆಯುವ ಸಂಪ್ರದಾಯ ಕೆಲವಡೆ ಇದೆ. ಕೋಲದ ಚಪ್ಪರ ಧೂಮವತಿಯ ಚಪ್ಪರಕ್ಕೆ ಹೋಲನೆ ಇರುವುದು. ಕೋಲದಲ್ಲಿ ಗಗ್ಗರ, ಸಿರಿ, ಅಣಿ ಮೊದಲಾದವುಗಳಲ್ಲಿ ವ್ಯತ್ಯಾಸವಿಲ್ಲ. ಹುಲಿಯ ರೂಪದ ಕಂಚಿನ ಮೊಗ ತಲೆಗೆ ಕಟ್ಟುತ್ತಾರೆ. ಖಡ್ಸಲೆ, ಮಣಿ,ಚಾವಲ ಮೊದಲಾದವು ಇವೆ. ಪಿಲ್ಚಂಡಿಗೆ ಬಂಟ ಎಂಬ ಸೇವಕ ಇದ್ದಾನೆ. ಮುದ್ರೆ ಎಂಬ ಅನ್ನ ನೈವೆದ್ಯ ಹರಿಕೆ ಪಿಲ್ಚಂಡಿಯನ್ನು ಸಂತೃಪ್ತಿ ಪಡಿಸುವ ಹರಕೆ.ಪಿಲ್ಚಂಡಿ ಧೈವ ಇದ್ದಲ್ಲಿ ಬಬ್ಬಾರ್ಯ ಧೈವವನ್ನು ನಂಬುವುದು ಕಡ್ಡಾಯವಾಗಿದೆ. ಮೊದಲು ಪಿಲಿಚಂಡಿಗೆ ಕೋಲವಾದ ಬಳಿಕ ಬಬ್ಬಾರ್ಯ ಕೋಲ ನಡೆಯುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. ಬನ್ನಂಜೆ ಬಾಬು ಅಮೀನ್, ತುಳುನಾಡ ದೈವಗಳು ಪುಸ್ತಕ, ಕೆಮ್ಮಲಜೆ ಜಾನಪದ ಪ್ರಕಾಶನ,2010