ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ, ಉಳ್ಳಾಲ

ಭಗವಾನ್ ಆದಿನಾಥ ಸ್ವಾಮಿ, ಭ| ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ , ಊಳ್ಳಾಲ ಭಗವಾನ್ ಆದಿನಾಥ ಸ್ವಾಮಿ, ಭ ಪಾರ್ಶ್ವನಾಥ ಸ್ವಾಮಿ ಬಸದಿ ಮೇಲಂಗಡಿ, ಉಳ್ಳಾಲ ಕರ್ನಾಟಕದ ಬಸದಿಗಳಲ್ಲಿ ಒಂದಾಗಿದೆ.

ಸ್ಥಳ ಬದಲಾಯಿಸಿ

ಶ್ರೀ ಆದಿನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿ ಒಂದೇ ಗರ್ಭಗೃಹದಲ್ಲಿ ಸಮಾನವಾಗಿ ಪೂಜಿಸಲ್ಪಡುವ ಈ ಬಸದಿಯು ಮಂಗಳೂರು ತಾಲೂಕಿನ ಉಳ್ಳಾಲದ ಮೇಲಂಗಡಿ ಬಸ್ತಿಪಡ್ಪು ಎಂಬಲ್ಲಿದೆ. ಮಂಗಳೂರಿನಿಂದ ಇಲ್ಲಿಗೆ ೧೪ ಕಿಲೋಮೀಟರ್ ದೂರ. ಅರಬೀ ಸಮುದ್ರ ಕಿನಾರೆಯಿಂದ ಇಲ್ಲಿಗೆ ಕೇವಲ ಅರ್ಧ ಕಿಲೋಮೀಟರ್. ಸಮೀಪದಲ್ಲಿ ಒಂದು ಮಸೀದಿ ಹಾಗೂ ಶ್ರೀ ಸೋಮನಾಥೇಶ್ವರ ದೇವಾಲಯಗಳಿವೆ. ಒಂದು ಕಿಲೋಮೀಟರ್ ದೂರ ಉತ್ತರ ದಿಕ್ಕಿನಲ್ಲಿ ನೇತ್ರಾವತಿ ನದಿಯು ಹರಿಯುತ್ತದೆ. ಇದಕ್ಕೆ ಸಮೀಪದಲ್ಲಿರುವ ಬಸದಿಗಳೆಂದರೆ ಶ್ರೀ ಆದಿನಾಥ ಸ್ವಾಮಿ ಬಸದಿ- ೧೨ ಕಿಲೋಮೀಟರ್ ದೂರ ಮಂಗಳೂರಿನಲ್ಲಿದೆ. ಕೇರಳ ರಾಜ್ಯದ ಮಂಜೇಶ್ವರದ ಚತುರ್ಮುಖ ಬಸದಿ ೧೫ ಕಿಲೋ ಮೀಟರ್ ದೂರದಲ್ಲಿದೆ. ಉಳ್ಳಾಲದಲ್ಲಿ ಪ್ರಸಿದ್ಧವಾಗಿರುವ ಅಬ್ಬಕ್ಕ ರಾಣಿ ವೃತ್ತದಿಂದ ಕೇವಲ ೨೦೦ ಮೀಟರ್ ದೂರದಲ್ಲಿದೆ. ಸಾಕಷ್ಟು ಸಿಟಿ ಬಸ್‌ಗಳ ಸೇವೆ ಲಭ್ಯವಿದೆ. ಸ್ವಂತ ವಾಹನದಲ್ಲಿ ಬರುವವರಿಗೆ ಬಸದಿಯ ತನಕ ಒಳ್ಳೆಯ ಮಾರ್ಗ ವ್ಯವಸ್ಥೆ ಇದೆ. ಈ ಬಸದಿಯು ಮೂಡುಬಿದರೆ ಶ್ರೀ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಸೇರಿದೆ.

ಇತಿಹಾಸ ಬದಲಾಯಿಸಿ

ಪರಿಸರದಲ್ಲಿ ಜೈನ ಶ್ರಾವಕರ ಅಧಿಕೃತ ಮನೆಗಳಿಲ್ಲದಿದ್ದರೂ, ಪರ್ವನದಿಗಳಲ್ಲಿ ಶುಕ್ರವಾರದಂದು ಮುಖ್ಯವಾಗಿ ಎಲ್ಲಾ ಶ್ರಾವಣ ಶುಕ್ರವಾರಗಳಂದು, ಮಂಗಳೂರಿನಿಂದ ಜೈನ ಶ್ರಾವಕರು ಕುಟುಂಬ ಸಮೇತರಾಗಿ ಇಲ್ಲಗೆ ಆಗಮಿಸಿ, ಅಭಿಷೇಕ ಪೂಜೆಗಳನ್ನು ಮಾಡಿಸುತ್ತಾರೆ. ಇದರಿಂದಾಗಿ ಹಿಂದೆ ಹಾಳು ಕೊಂಪೆಯಂತಿದ್ದ ಈ ಜಿನಾಲಯದ ಪರಿಸರವು ಈಗ ಹೊಸ ಚೇತನದಿಂದ ಕಂಗೊಳಿಸುವAತಾಗಿದೆ. ಬಸದಿಯ ಟ್ರಸ್ಟ್ನ ಕುಟುಂಬದವರು ಇದರ ಹೆಚ್ಚಿನ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಹಿಂದೆ ಇದನ್ನು ರಾಣಿ ಅಬ್ಬಕ್ಕ ದೇವಿಯ ಬಸದಿಯೆಂದೂ ಕರೆಯಲಾಗುತ್ತಿತ್ತು. ಸಂಶೋಧನೆಯಿಂದ ತಿಳಿದು ಬಂದ ಅನುಸಾರ ಈ ಬಸದಿಯನ್ನು ಉಳ್ಳಾಲದ ಜೈನ ರಾಣಿ ಅದೇ ಹಿರಿಯ ಅಬ್ಬಕ್ಕ ದೇವಿಯು ಕ್ರಿ.ಶ ೧೫೫೦ರಲ್ಲಿ ನಿರ್ಮಿಸಿದ್ದಳು. ಚೌಟ ಅರಸು ಮನೆತನದ ರಾಜಕುಮಾರಿ ಅಬ್ಬಕ್ಕ ದೇವಿಯನ್ನು ಬಂಗವಾಡಿಯ ಬಂಗ ಅರಸ ಲಕ್ಷಪರಂಪರೆ ವಿವಾಹ ಮಾಡಿಕೊಟ್ಟಿದ್ದರಿಂದ ಬಂಗರ ರಾಜ್ಯಕ್ಕೆ ಸೇರಿದ್ದ ಈ ಉಳ್ಳಾಲದಲ್ಲಿ ಅರಮನೆ ಕಟ್ಟಿಕೊಂಡು ಅವಳು ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದಳು. ಇದರಿಂದಾಗಿ ತನ್ನ ಪತಿಯ ಅರಮನೆಯ ದೇವರಾದ ಶ್ರೀ ಆದಿನಾಥ ಸ್ವಾಮಿಯನ್ನೂ ತವರು ಮನೆಯ ದೇವರಾದ ಶ್ರೀ ಪಾರ್ಶ್ವನಾಥ ಸ್ವಾಮಿಯನ್ನು ತನ್ನ ಬಸದಿಯಲ್ಲಿ ಸಮಾನವಾಗಿ ಪ್ರತಿಷ್ಟಾಪಿಸಿಕೊಂಡು ಆರಾಧನೆ ನಡೆಸುತ್ತಿದ್ದಳು. ಈ ಸಮಾನ ಗೌರವವನ್ನು ಹೊಂದಿದ್ದ ರಾಣಿ ಅಬ್ಬಕ್ಕ ದೇವಿ ಇತರ ಧರ್ಮಗಳಿಗೂ ಆಶ್ರಯವನ್ನು ಕೊಟ್ಟು ಸರ್ವಧರ್ಮ ಸಮನ್ವಯತೆಯ ತತ್ವವನ್ನು ಪಾಲಿಸಿಕೊಂಡು ಬರುತ್ತಿದ್ದಳು. ಈ ಕಾರಣದಿಂದಾಗಿಯೇ ಪೋರ್ಚುಗೀಸರು ಇವಳ ರಾಜ್ಯದ ಮೇಲೆ ದಾಳಿ, ಅತಿಕ್ರಮಣ ಮಾಡಿದಾಗ ಸ್ವಧರ್ಮೀಯರಂತೆ, ಹಿಂದೂಗಳೂ ಮುಸಲ್ಮಾನರೂ ರಾಣಿಯ ಪಕ್ಷ ವಹಿಸಿ ವೀರಾವೇಶದಿಂದ ಹೋರಾಟ ಮಾಡಿದ್ದರು. ಈಕೆಯ ವ್ಯಕ್ತಿತ್ವವನ್ನು ಈಕೆಯ ಸರ್ವಧರ್ಮ ಸಮನ್ವಯತೆಯನ್ನು ಸಮುದ್ರ ಯುದ್ಧದ ಹೋರಾಟವನ್ನು ನಮ್ಮಲ್ಲಿ ಹಲವರು ಮರೆತಿದ್ದರೂ, ಪೋರ್ಚುಗೀಸರ ಇತಿಹಾಸದಲ್ಲಿ ಅವೆಲ್ಲ ದಾಖಲಾಗಿವೆ. ಈಕೆಯ ಮಹೋನ್ನತ ವ್ಯಕ್ತಿತ್ವದ ಪುರಾವೆಯಾಗಿ ಈ ಜಿನಾಲಯ ಊಳಿದುಕೊಂಡು ಬಂದಿದೆ ಎಂದರೆ ಅತಿಶಯೋಕ್ತಿಯಲ್ಲ![೧]

ವಿನ್ಯಾಸ ಬದಲಾಯಿಸಿ

ಈ ಬಸದಿಯ ಪರಿಸರದಲ್ಲಿ ಪಾರಿಜಾತ ಗಿಡದಂತೆ, ಇತರ ವಿವಿಧ ಜಾತಿಯ ಹೂ ಗಿಡಗಳನ್ನು ಬೆಳೆಸಲಾಗಿದೆ. ಬಸದಿಯ ಸೋಪಾನಗಳನ್ನು ಏರಿದಾಗ ಎಡ ಬಲಗಳಲ್ಲಿ ಸಿಗುವ ಗೋಪುರವನ್ನು ವಾದ್ಯ ವಾಲಗವನ್ನು ನುಡಿಸಲು, ಭಕ್ತ ಶ್ರಾವಕ ವೃಂದ ವಿರಮಿಸಲು ಮತ್ತು ಧಾರ್ಮಿಕ ಸಭೆ-ಸಮಾರಂಭ ನಡೆಯುವಾಗ ಶ್ರೋತೃವೃಂದ ಆಸೀನರಾಗಲು ಉಪಯೋಗಿಸಲಾಗುತ್ತದೆ. ಧರ್ಮ ದ್ರವ್ಯಗಳನ್ನು ಶೇಖರಿಡಿಸಲು ಇಲ್ಲಿರುವ ಕೋಣೆಗಳನ್ನು ಉಪಯೋಗಿಸಲಾಗುತ್ತದೆ. ಮುಂದೆ ಇರುವ ಪ್ರಾರ್ಥನಾ ಮಂಟಪದ ಅಂತ್ಯದಲ್ಲಿ, ತೀರ್ಥಂಕರ ಮಂಟಪದ ಎದುರಿನ ಗೋಡೆಗಳ ಎಡ-ಬಲಗಳಲ್ಲಿ ದ್ವಾರಪಾಲಕರ ಉನ್ನತ ವರ್ಣ ಚಿತ್ರಗಳಿವೆ. ಇದನ್ನು ದಾಟಿ ಗರ್ಭಗೃಹದ ಕಡೆಗೆ ಹೋಗುವಾಗ ಸಿಗುವ ತೀರ್ಥಂಕರ ಮಂಟಪದ ಮಧ್ಯದಲ್ಲಿ ಶ್ರೀ ಪದ್ಮಾವತಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇದರ ಇಕ್ಕೆಲಗಳಲ್ಲಿ ಗಂಧ ಕುಟಿ ಇದೆ. ಇಲ್ಲಿ ಪವಿತ್ರವಾದ ಜಿನಬಿಂಬಗಳೂ ಹಾಗೂ ಮಂಗಲ ವಸ್ತುಗಳಿವೆ. ಇಲ್ಲಿ ಎಲ್ಲವೂ ವ್ಯವಸ್ಥಿತವಾಗಿರುವುದನ್ನು ನೋಡಿದಾಗ ಮನಸ್ಸು ಸಂತೋಷಗೊಳ್ಳುತ್ತದೆ. ಗರ್ಭಗೃಹದ ಶಿಲಾಪೀಠ, ಇದರ ಎದುರಿನ ಆರು ಶಿಲಾಸ್ತಂಭಗಳ ಮಂಟಪ, ಅಲ್ಲಿರುವ ಕೆತ್ತನೆಗಳ ಮೇಲೆ ಭುವನೇಶ್ವರಿಯಲ್ಲಿ ಕಂಡುಬರುವ ಅಧೋಮುಖ ಕಮಲ ಇವು ವಿಜಯನಗರ ಕಾಲದ ಶಿಲ್ಪ ವಿನ್ಯಾಸವನ್ನು ತೋರಿಸುವುದಲ್ಲದೆ, ಈ ಬಸದಿಯ ನಿರ್ಮಾಪಕರ ಶ್ರದ್ಧೆ ಮತ್ತು ಇದನ್ನು ಉಳಿಸಿಕೊಂಡಿರುವವರ ಆಸಕ್ತಿಯ ದ್ಯೋತಕಗಳಾಗಿವೆ. ಬಳಿಯಲ್ಲಿ ತೂಗುಗಂಟೆ, ಜಯಗಂಟೆಗಳನ್ನು ತೂಗು ಹಾಕಲಾಗಿದೆ. ಮಾತೆ ಪದ್ಮಾವತಿ ದೇವಿಗೆ ಅಲಂಕಾರ ಪೂಜೆ ನಡೆಯುತ್ತದೆ. ಅಭೀಷ್ಟ ಫಲ ಪದ್ಮಾವತೀ ಅಮ್ಮನವರಿಗೆ ಹರಕೆಯ ರೂಪದಲ್ಲಿ ವಿಶೇಷ ಸಂದರ್ಭಗಳಲ್ಲಿ ಲಕ್ಷ ಹೂವಿನ ಪೂಜೆ ಸಂಪನ್ನಗೊಳ್ಳುತ್ತದೆ.

ವಿಧಿ-ವಿಧಾನ ಬದಲಾಯಿಸಿ

ಸಾಮಾನ್ಯವಾಗಿ ಪದ್ಮಾವತೀ ಪೂಜಾ ಸಂದರ್ಭಗಳಲ್ಲಿ ಪುಷ್ಪ ವರ ಪ್ರಸಾದ ಆಗುತ್ತಿದೆ. ಹಿರಿಯ ಅಬ್ಬಕ್ಕರಾಣಿ, ಕಿರಿಯ ಅಬ್ಬಕ್ಕರಾಣಿಯರು ರಾಜಕೀಯ ವಿಪ್ಲವಗಳ ಸಂಘರ್ಷ, ಒತ್ತಡಗಳ ವಾತಾವರಣದಲ್ಲಿ ಭ| ಆದಿನಾಥ, ಭ| ಪಾರ್ಶ್ವನಾಥ, ಮಾತೆ ಪದ್ಮಾವತೀ ದೇವಿಯರ ಉಪಾಸನೆಯಿಂದ ಶಾಂತಿಯನ್ನು, ನೆಮ್ಮದಿಯನ್ನು ಪಡೆಯುತ್ತಿದ್ದರೆಂಬ ಪ್ರತೀತಿ ಇದೆ. ಬಸದಿಯ ಮೂಲ ನಾಯಕ ಬಿಂಬಗಳು ಶ್ವೇತವರ್ಣದ ಅಮೃತಶಿಲಾಮೂರ್ತಿಗಳು, ರ‍್ಯಂಕಾಸನ ಭಂಗಿ ಭ| ಆದಿನಾಥ ಸ್ವಾಮಿ ಮೂರ್ತಿಯ ತಳದಲ್ಲಿ ವೃಷಭ ಲಾಂಛನ ಭ| ಪಾರ್ಶ್ವನಾಥ ಶಿರೋಭಾಗದಲ್ಲಿ ಸರ್ಪಫಣಿ ಇದೆ. ವಿಧಿ-ವಿಧಾನಗಳಿಗೆ ಸರಿಯಾಗಿ ನಿತ್ಯ ನೈವೇದ್ಯ ಪೂಜೆಗಳು ನಡೆಯುತ್ತವೆ. ಇಲ್ಲಿ ಪದ್ಮಾವತೀ ದೇವಿಗೆ ಹರಕೆ ವಿಶೇಷ. ಇವೇ ಸಂದರ್ಭಗಳಲ್ಲಿ ಲಕ್ಷ ಹೂವಿನ ಪೂಜೆ, ಅಲಂಕಾರ ಪೂಜೆ, ವರಹ ಪೂಜೆಗಳು ನಡೆಯುತ್ತವೆ. ವಿಶೇಷವಾಗಿ ಭಾದ್ರಪದ ಮಾಸ, ಶ್ರಾವಣ ಮಾಸಗಳಲ್ಲಿ, ಶುಕ್ರವಾರದ ಶುಭ ದಿನಗಳಲ್ಲಿ ಶ್ರೀ ಪದ್ಮಾವತೀ ದೇವಿಗೆ ವಿಶೇಷ ಪೂಜೆ ಸಂಪನ್ನಗೊಳ್ಳುತ್ತಿದೆ. ಇತರ ಮತೀಯರು ಕೂಡಾ ಇಂಥ ಪೂಜೆಗಳನ್ನು ಸಲ್ಲಿಸುತ್ತಾರೆ. ಬಸದಿಯಲ್ಲಿ ಪ್ರಾತಃಕಾಲ, ಸಂಧ್ಯಾಕಾಲ ಪೂಜೆ ನಿತ್ಯ ನಡೆಯುತ್ತಿದೆ. ಪ್ರತಿ ವರ್ಷವೂ ಶ್ರಾವಣ ಶುಕ್ಲ ಸಪ್ತಮಿಯನ್ನು ‘ಮುಕುಟ ಸಪ್ತಮಿ’ ಎಂದರೆ ಭ| ೧೦೦೮ ಪಾರ್ಶ್ವನಾಥ ಸ್ವಾಮಿಯ ಮೋಕ್ಷ ಕಲ್ಯಾಣ ಮಂಗಲ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯುತ್ತವೆ. ಕಲಿಕಂಡ ಯಂತ್ರಾರಾಧನೆ, ನವಗ್ರಹ ಶಾಂತಿ, ಸಂಧಿ ಶಾಂತಿ, ಮೃತ್ಯುಂಜಯ ಆರಾಧನೆಗಳೂ ಇಲ್ಲಿ ನಡೆಯುತ್ತವೆ. ಇದು ಈ ಬಸದಿಯ ವಿಶೇಷ. ಪ್ರತಿವರ್ಷ ಮಾರ್ಚ್ ತಿಂಗಳ ೨೦ ಮತ್ತು ೩೦ ದಿನಾಂಕಗಳ ನಡುವೆ ಜಿನಾಲಯದ ವಾರ್ಷಿಕ ದಿನೋತ್ಸವ ನಡೆಯುತ್ತದೆ. ಪೂಜ್ಯ ಭಾರತ ಭೂಷಣ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ವರ್ಯರು, ಮೂಡು ಬಿದಿರೆ ಜೈನ ಮಠ- ಪರಮಪೂಜ್ಯರ ಪಾವನ ಸಾನಿಧ್ಯದಲ್ಲಿ ಈ ದಿನವನ್ನು ಕಲಾಭಿಷೇಕ, ದೇವಿ ಪದ್ಮಾವತಿಯಮ್ಮನವರ ವಿಶೇಷ ಪೂಜೆ, ಕ್ಷೇತ್ರಪಾಲ ಪೂಜೆ, ಧಾರ್ಮಿಕ ಸಭೆ, ಉಪಹಾರಗಳೊಂದಿಗೆ ಸಾಂಗವಾಗಿ ಸಂಪನ್ನಗೊಳಿಸುತ್ತಾರೆ. ಬಸದಿಯ ಅಂಗಳದ ಎಡಮೂಲೆಯಲ್ಲಿ ಕ್ಷೇತ್ರಪಾಲನಿಗಾಗಿ ಚಿಕ್ಕ ಗುಡಿ ಇದೆ. ಪೂಜೆಯ ಬಲಿ ಕಲ್ಲುಗಳಿವೆ. ಬಸದಿಯ ಸುತ್ತಲೂ ಕರ್ಗಲ್ಲು, ಕಾಂಕ್ರೀಟ್‌ಗಳ ಸುಮಾರು ೯ ಅಡಿ ಎತ್ತರದ ಪ್ರಾಕಾರ ಗೋಡೆಯಿದೆ. ಬಸದಿಯ ಮೇಲುಸ್ತುವಾರಿ, ಧಾರ್ಮಿಕ ಕಾರ್ಯಕ್ರಮಗಳು, ಸ್ವಚ್ಛತೆ, ರಕ್ಷಣೆಗಳನ್ನು ನೋಡಿಕೊಳ್ಳುವ ಏಕವ್ಯಕ್ತಿ ಕಾರ್ಯಾಲಯವಿದೆ.

ಉಲ್ಲೇಖಗಳು ಬದಲಾಯಿಸಿ

  1. ಶೆಣೈ, ಉಮಾನಥ.ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೬ ed.). ಉಜಿರೆ: ಮಂಜುಶ್ರೀ ಪ್ರಿಂಟರ್ಸ್. p. ೨೮೨.