ಪಾರ್ಶ್ವನಾಥ ಸ್ವಾಮಿ ಅಬ್ಬಣಬೆಟ್ಟು ಬಸದಿ, ಮೂಡೂರು
ಮಾರ್ಗ
ಬದಲಾಯಿಸಿಬಸದಿಯ ಹೆಸರು ಪಾಂಡಿ ಬಸ್ತಿ ಯಾನೆ ಅಬ್ಬಣಬೆಟ್ಟು ಬಸದಿ. ಇದು ಕಾರ್ಕಳ ತಾಲೂಕು, ಮೂಡೂರು ಗ್ರಾಮದ ಮೂಡೂರು ಎಂಬಲ್ಲಿದೆ. ಈ ಬಸದಿಗೆ ಹತ್ತಿರದಲ್ಲಿರುವ ಇನ್ನೊಂದು ಬಸದಿ ಬಜರ್ಕಳ ಬಸದಿ. ಅದು ಸುಮಾರು ಎರಡು ಕಿಲೋ ಮೀಟರ್ ದೂರದಲ್ಲಿದೆ. ಬಸದಿಗೆ ಬರುವ ದಾರಿ, ಕಾರ್ಕಳದಿಂದ ಬಜಗೋಳಿ- ಬಜಗೋಳಿಯಿಂದ- ಕೆರ್ವಾಶೆ ಮಾರ್ಗ- ಮಧ್ಯೆ ಒಳಗೆ ಅರ್ಧ ಕಿ.ಮೀ. ದೂರದಲ್ಲಿ ಬಸದಿಯಿದೆ.
ಇತಿಹಾಸ ಮತ್ತು ರಚನೆ
ಬದಲಾಯಿಸಿಈ ಬಸದಿಯನ್ನು ಸುಮಾರು ೨೫೦ ವರ್ಷಗಳ ಹಿಂದೆ ಪಾಂಡ್ಯತಿಕಾರಿ ಮತ್ತು ದೇವತಿಕಾರಿ ಕಟ್ಟಿಸಿದ್ದರೆಂದು ಹೇಳುತ್ತಾರೆ. ಮೇಗಿನ ನೆಲೆ ಇದ್ದು ಅಲ್ಲಿ ಶ್ರೀ ಆದಿನಾಥ ಸ್ವಾಮಿ ಮೂರ್ತಿ ಇತ್ತು. ಈಗ ಅದನ್ನು ಕೆಳಗೆ ತಂದು ತೀರ್ಥಂಕರ ಗಂಧಕುಟಿಯಲ್ಲಿ ಇಡಲಾಗಿದೆ. ಅದಕ್ಕೆ ಪೂಜೆ ಇಲ್ಲ. ಪದ್ಮಾವತಿ ಅಮ್ಮನವರ ಮತ್ತು ಬ್ರಹ್ಮದೇವರ ಮೂರ್ತಿ ಇದೆ. ಬಸದಿಗೆ ಮಾನಸ್ತಂಭ ಇಲ್ಲ. ಬಸದಿಯ ಬಳಿಯಲ್ಲಿ ಎರಡು ಪಾರಿಜಾತ ಹೂವಿನ ಗಿಡಗಳಿವೆ. ಹತ್ತಿರದಲ್ಲಿ ಬೇರೆ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. ಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡಬಲ ಬದಿಗಳಲ್ಲಿರುವ ಗೋಪುರವ್ನು ವಿಶೇಷ ಪೂಜಾ ಸಮಯದಲ್ಲಿ ಕುಳಿತುಕೊಳ್ಳಲು ಉಪಯೋಗಿಸಲಾಗುತ್ತಿದೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರ ಪಾಲಕರ ಚಿತ್ರಗಳಿವೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳ ಮಂಟಪವಿದೆ. ಅಲ್ಲಿ ಜಯಘಂಟೆ ತೂಗುಹಾಕಲಾಗಿದೆ. ಅಲ್ಲಿಂದ ಮುಂದುವರಿದು ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥ ಮಂಟಪ (ಘಂಟೆ ಮಂಟಪ) ಎಂದು ಕರೆಯುತ್ತಾರೆ. ಅಲ್ಲಿ ಭಟ್ಟಾರಕರ ಮರದ ಪೀಠ ಮತ್ತು ಪಾದುಕೆ ಇವೆ. ಇದಕ್ಕೆ ತೀರ್ಥಂಕರರ ಮಂಟಪ ಎನ್ನುವರು.[೧]
ಮೂರ್ತಿ ವಿನ್ಯಾಸ ಮತ್ತು ಪೂಜೆ
ಬದಲಾಯಿಸಿಗಂಧಕುಟಿಯ ಬಳಿಯಲ್ಲಿ ಗಣಧರ ಪಾದ, ಶ್ರುತ, ಇಪ್ಪತ್ತನಾಲ್ಕು ತೀರ್ಥಂಕರರ ಕಂಚಿನ ೨೪ ಮೂರ್ತಿಗಳು ಬಳಪ ಕಲ್ಲಿನ ತೀರ್ಥಂಕರರ ಮೂರ್ತಿ, ಮಂದರ ಇವೆ. ಇವರಿಗೆ ಯಾವಾಗಲೂ ಪೂಜೆ ನಡೆಯುತ್ತದೆ. ಇಲ್ಲಿ ಶ್ರೀ ಪದ್ಮಾವತಿ ದೇವಿಯ ಪೂಜೆ ನಡೆಯುತ್ತದೆ. ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ, ಪೂಜೆ ಮಾಡಲಾಗುತ್ತದೆ. ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿದೆ. ಅಮ್ಮನವರ ಕಾಲ ಬಳಿ ಕುಕ್ಕುಟ ಸರ್ಪದ ಬೆಳ್ಳಿ ಮೂರ್ತಿ ಇದೆ. ಮದುವೆಯ ವಿಚಾರ, ಶುಭ ಕೆಲಸಗಳಿಗೆ ಹೂ ಹಾಕಿ ನೋಡುವ ಕ್ರಮ ಇದೆ. ಇಲ್ಲಿನ ಬಿಂಬಗಳ ಪೀಠದಲ್ಲಿ ತೀರ್ಥಂಕರ ಸಂಖ್ಯೆಗಳು ನಮೂದಿಸಲ್ಪಟ್ಟಿವೆ. ಬೇರೆ ಹಳೆಗನ್ನಡ ಬರವಣಿಗೆಯೂ ಇದೆ. ಮೂಲನಾಯಕ- ಶ್ರೀ ಪಾರ್ಶನಾಥ ಸ್ವಾಮಿಯ ಮೂರ್ತಿ ನಸು ಕೆಂಪು ಬಣ್ಣದ ಶಿಲೆಯದ್ದು. ಎತ್ತರ ೨೧ ಇಂಚು, ರ‍್ಯಂಕಾಸನ ಭಂಗಿ ಮತ್ತು ಮಕರ ತೋರಣದ ಪ್ರಭಾವಳಿಯ ಕೆಳಭಾಗದಲ್ಲಿದೆ. ಮೂಲ ಸ್ವಾಮಿಗೆ- ಜನ್ಮಾಭಿಷೇಕ, ಹಬ್ಬ ಹರಿದಿನಗಳಲ್ಲಿ ಆರಾಧನೆ, ನೋಂಪಿ, ಹರಕೆ ಪೂಜೆ, ನವರಾತ್ರಿಗಳಲ್ಲಿ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಜಲಾಭಿಷೇಕ, ಮಾಡಲಾಗುತ್ತದೆ. ನಿತ್ಯ ಸ್ವಾಮಿಯ ಬಿಂಬಕ್ಕೆ ಪೂಜೆ ನಡೆಯುತ್ತದೆ. ಅದಕ್ಕೆ ವಜ್ರಲೇಪನ ಮಾಡಿಲ್ಲ. ಬಸದಿಯಲ್ಲಿ ಬೆಳಿಗ್ಗೆ ಒಂದು ಬಾರಿ ಮಾತ್ರ ಪೂಜೆ ನಡೆಯುತ್ತದೆ. ೧೯೯೭ನೇ ಇಸವಿಯಲ್ಲಿ ಅರ್ಚಕರಿಂದ ಒಂದು ದಿನದ ಧಾಮ ಸಂಪ್ರೋಕ್ಷಣೆ ನಡೆದಿದೆ. ಪದ್ಮಾವತಿ ಅಮ್ಮನವರಿಗೆ , ಲಕ್ಷ ಹೂವಿನ ಪೂಜೆ, ನಾಗರಪಂಚಮಿ, ನವರಾತ್ರಿ, ದೀಪಾವಳಿ, ಆರಾಧನೆಗಳು, ನವಗ್ರಹ ಶಾಂತಿಗಳು, ಯಗಾದಿ, ಮಹಾವೀರ ಜಯಂತಿ, ಹುಣ್ಣಿಮೆ, ಶುಕ್ರವಾರ ನೋಂಪಿ, ಋಗುಪಾಕರ್ಮ, ಆಚರಣೆಗಳು ನಡೆಯುತ್ತವೆ. ಧನುರ್‌ಮಾಸ ಪೂಜೆ ನಡೆಯುತ್ತದೆ. ಬಸದಿಯ ವಾರ್ಷಿಕ ದೀಪೋತ್ಸವವು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಬಸದಿಯ ಅಂಗಳದ ಎಡ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಅಲ್ಲಿ ತ್ರಿಶೂಲ ಮತ್ತು ನಾಗರಕಲ್ಲು ಇವೆ. ಇವೆಲ್ಲವನ್ನು ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಕ್ಷೇತ್ರಪಾಲ ವiತ್ತು ನಾಗರಕಲ್ಲಿಗೆ ನಿತ್ಯಪೂಜೆ ನಡೆಯುತ್ತದೆ. ಬಸದಿಯ ಸುತ್ತಲೂ ಮಣ್ಣಿನ ಪ್ರಾಕಾರಗೋಡೆ ಇದೆ.
ಬಸದಿಯ ಐತಿಹ್ಯ
ಬದಲಾಯಿಸಿಸದ್ರಿ ಬಸದಿಯು ಬಹಳ ಪುರಾತನವಾಗಿದ್ದು ಸಾಧಾರಣ ೨೦೦-೨೫೦ ವರ್ಷಗಳು ಆಗಿರಬಹುದೆಂದು ಕೆಲವು ಹಿರಿಯರ ಅಭಿಪ್ರಾಯವಾಗಿದೆ. ನಿತ್ಯ ಪೂಜಾ ಮಂತ್ರ ಪಠಣದ ಪ್ರಕಾರ ದೇವತಿಕಾರಿ ಮತ್ತು ಪಾಂಡ್ಯತಿಕಾರಿಯವರು ಕಟ್ಟಿಸಿದರೆಂದು ತಿಳಿದು ಬರುತ್ತದೆ. ಈಗ ಇರುವ ಬಸದಿಯ ಹಿಂಭಾಗದ ಬನದಲ್ಲಿ ‘ಮೂಲಸ್ವಾಮಿ’ ಮತ್ತು ‘ಪದ್ಮಾವತಿ’ ಅಮ್ನೋರ ಮೂರ್ತಿ ಮಣಿನಡಿಯಲ್ಲಿ ಸಿಕ್ಕಿತೆಂದು ಹೇಳುತ್ತಾರೆ. ಅತಿಕಾರಿಗಳ ಸಂಬAಧಿಕರಾದ ಪದ್ಮಾವತಿ ಎಂಬ ಮಹಿಳೆ ಬನದಲ್ಲಿ ಬಹಿರ್ದೆಸೆಗೆ ಕೂತಾಗ ಹುಲ್ಲು ತನ್ನಿಂದ ತಾನೇ ಮೇಲಕ್ಕೆ ಬಂದುದನ್ನು ನೋಡಿ ಹೆದರಿ ಮನೆಯವರಿಗೆ ತಿಳಿಸಿದರು. ಆ ಪ್ರದೇಶವನ್ನು ಅಗೆದು ನೋಡಿದಾಗ ನಸು ಕೆಂಪು ಬಣ್ಣದ ಮೂಲಸ್ವಾಮಿಯ ಶಿಲಾ ಮೂರ್ತಿ ಮತ್ತು ಕಂಚಿನ ಅಮ್ಮನವರ ಮೂರ್ತಿಸಿಕ್ಕಿರುವುದೆಂದು ಪ್ರತೀತಿ. ಅತಿಕಾರಿಗಳು ಬನದ ಬಳಿಯಲ್ಲಿ ಬಸದಿ ನಿರ್ಮಿಸಿ ದೇವರ ಬಿಂಬಗಳನ್ನು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ. ಅದಕ್ಕೆ ಪಾಂಡಿ ಬಸದಿ ಎಂದು ನಾಮಕರಣ ಮಾಡಿದರು.
ಉಲ್ಲೇಖಗಳು
ಬದಲಾಯಿಸಿ- ↑ ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೮೮.