ಪಾರಣೆ ಎಂದರೆ ಉಪವಾಸ ವ್ರತಾನಂತರ ದಿನದಲ್ಲಿ ಮಾಡುವ ಮೊದಲ ಭೋಜನ. ಪಾರ ತೀರ ಕರ್ಮ ಸಮಾಪ್ತ ಎಂಬ ಧಾತುವಿನಿಂದ ಪಾರಣಾ ಶಬ್ದ ನಿಷ್ಪನ್ನವಾಗಿದೆ. ಅಂದರೆ ಉಪವಾಸ ಸಮಾಪ್ತಿ ದ್ಯೋತಕ ಭೋಜನವೇ ಪಾರಣೆ. ಉಪವಾಸವ್ರತಗಳಲ್ಲಿ ಶ್ರೀಕೃಷ್ಣಾಷ್ಟಮಿ, ಶ್ರೀರಾಮನವಮಿ, ಮಹಾಶಿವರಾತ್ರಿ ಮತ್ತು ವರ್ಷ ಮಧ್ಯದಲ್ಲಿರುವ ಇಪ್ಪತ್ತುನಾಲ್ಕು ಏಕಾದಶಿಗಳು ಮುಖ್ಯವಾದುವು. ಇವುಗಳಲ್ಲಿ ಶ್ರೀಕೃಷ್ಣಾಷ್ಟಮಿ ಮತ್ತು ಶ್ರೀರಾಮನವಮಿಗಳಲ್ಲಿ ತಿಥಿ ಮಾತ್ರ ಪ್ರಧಾನವಾಗಿರುತ್ತದೆ. ಏಕಾದಶಿಯನ್ನು ಬಿಟ್ಟು ಉಳಿದವು ಆಯಾ ದೇವತೆಗಳ ಉತ್ಸವ ನಿಮಿತ್ತವಾದುವು.

ಶ್ರೀಕೃಷ್ಣನ ಅವತಾರ ಚಾಂದ್ರಮಾನದಂತೆ ಶ್ರಾವಣಮಾಸ ಕೃಷ್ಣಪಕ್ಷದ ಅಷ್ಟಮೀ ತಿಥಿ ಇರುವ ಮಧ್ಯರಾತ್ರಿ ಕಾಲದಲ್ಲಿ-ಸೌರಮಾನದಂತೆ ಸಿಂಹಮಾಸ ಕೃಷ್ಣಪಕ್ಷದ ಅಷ್ಟಮೀ ತಿಥಿ ಇರುವ ಮಧ್ಯರಾತ್ರಿ ವೇಳೆಯಲ್ಲಿ. ಶ್ರೀಕೃಷ್ಣನ ಅವತಾರ ಕಾಲದಲ್ಲಿ ರೋಹಿಣೀ ನಕ್ಷತ್ರವೂ ಇತ್ತು. ಈ ಮೂರನ್ನೂ ನಿಮಿತ್ತವಾಗಿಟ್ಟುಕೊಂಡು ಶ್ರೀಕೃಷ್ಣನ ಜನ್ಮದಿವಸವನ್ನು ಆಚರಿಸುವುದು ರೂಢಿಯಲ್ಲಿದೆ. ತಿಥಿಯನ್ನು ಪ್ರಧಾನವಾಗಿಟ್ಟುಕೊಂಡು ವ್ರತವನ್ನು ಆಚರಿಸುವವರಿಗೆ ಆ ಅಷ್ಟಮೀ ತಿಥಿ ಮುಗಿದ ಬಳಿಕ ಪಾರಣೆ. ನಕ್ಷತ್ರವನ್ನು ಪ್ರಧಾನವಾಗಿಟ್ಟುಕೊಂಡಿರುವವರಿಗೆ ರೋಹಿಣೀ ನಕ್ಷತ್ರ ದಿವಸದಲ್ಲಿ ಮುಗಿದ ಬಳಿಕ ಪಾರಣೆ-ತಿಥಿ ಭ್ರಾಂತೇ ಚ ಪಾರಣಂ ಎಂದು ಶಾಸ್ತ್ರದಲ್ಲಿ ವಿಹಿತವಾಗಿರುವುದರಿಂದ.

ಶ್ರೀರಾಮನ ಅವತಾರ ಚಾಂದ್ರಮಾನದಂತೆ ಚೈತ್ರಮಾಸ ಶುಕ್ಲಪಕ್ಷದ ನವಮೀ ತಿಥಿಯಲ್ಲಿ. ಸೌರಮಾನದಂತೆ ಮೇಷಮಾಸ ಶುಕ್ಲಪಕ್ಷದ ನವಮೀ ತಿಥಿಯಲ್ಲಿ. ಶ್ರೀರಾಮನ ಅವತಾರಕಾಲದಲ್ಲಿ ಪುನರ್ವಸು ನಕ್ಷತ್ರವೂ ಇತ್ತು. ಈ ಶ್ರೀರಾಮನವಮಿಗೆ ಸಂಬಂಧಪಟ್ಟ ಪಾರಣೆಯಲ್ಲೂ ತಿಥಿಯನ್ನೆ ಪ್ರಧಾನವಾಗಿಟ್ಟುಕೊಂಡಿರುವವರಿಗೆ ತಿಥಿ ಮುಗಿದ ಬಳಿಕವೂ ನಕ್ಷತ್ರವನ್ನು ಪ್ರಧಾನವಾಗಿಟ್ಟುಕೊಂಡಿರುವವರಿಗೆ ಪುನರ್ವಸು ನಕ್ಷತ್ರ ಮುಗಿದ ಬಳಿಕವೂ ಪಾರಣೆಯ ಆಚರಣೆ.

ಶಿವರಾತ್ರಿ ವ್ರತಾಚರಣೆಗೆ ಮಾಘಮಾಸ ಕೃಷ್ಣಪಕ್ಷದ ಚತುರ್ದಶೀ ಅರ್ಧರಾತ್ರಿಯ ಕಾಲದಲ್ಲಿರುವ ದಿವಸ ಮುಖ್ಯ. ಈ ವ್ರತದಲ್ಲಿ ಶಿವರಾತ್ರಿ ವ್ರತವನ್ನು ಆಚರಿಸಿದ ಮಾರನೆಯ ದಿವಸ ಪಾರಣೆ. ಒಂದು ವೇಳೆ ಬೆಳಿಗ್ಗೆ ಚತುರ್ದಶೀ ತಿಥಿ ಇದ್ದರೂ ಆ ತಿಥಿಯಲ್ಲೇ ಪಾರಣೆ ಮಾಡಬಹುದು.

ಪಾರಣೆ ಮಾಡಬೇಕಾದುದು ಹಗಲಿನಲ್ಲಿ. ರಾತ್ರಿಯಲ್ಲಲ್ಲ. ಆದರೆ ಶ್ರೀಕೃಷ್ಣ ಜಯಂತೀ ವ್ರತದಲ್ಲಿ ಮಾತ್ರ ರಾತ್ರಿಯಲ್ಲೂ ಉತ್ಸವಾಂತ್ಯದಲ್ಲಿ ಪಾರಣೆ ಮಾಡಲು ಅವಕಾಶ ಉಂಟು. ಮಹಾನಿಶಿಯಲ್ಲಿ ಭೋಜನಮಾಡಬಾರದು. ಪಾರಣೆ ನಿಮಿತ್ತ ಫಲಾಹಾರ ತೆಗೆದುಕೊಳ್ಳಬಹುದು. ಶಿವರಾತ್ರಿಯ ಮಾರನೆಯ ದಿನ ಅಮಾವಾಸ್ಯೆ ಆಚರಣೆ ಇದ್ದರೆ ಆ ದಿವಸ ಬೆಳಿಗ್ಗೆ ಪಾರಣೆ ಮಾಡಲು ಊಟಮಾಡುವ ಅವಕಾಶವಿಲ್ಲದಿರುವುದರಿಂದ ಅದ್ಭಿಸ್ತುಪಾರಣಂ ಕುರ್ಯಾತ್ ಎಂದು ತಿಳಿಸಿರುವಂತೆ ಸ್ವಲ್ಪ ನೀರನ್ನು ಸೇವಿಸುವುದರ ಮೂಲಕ ಪಾರಣೆಯನ್ನು ಆಚರಿಸಬೇಕು. ನಿರ್ದಿಷ್ಟ ವೇಳೆಯಲ್ಲಿ ಪಾರಣೆ ಮಾಡಲು ಕಾರಣಾಂತರಗಳಿಂದ ಆಗದಿದ್ದಾಗ ಈ ಕ್ರಮವನ್ನೇ ಅನುಸರಿಸಬಹುದು.

ಬ್ರಹ್ಮಾಂಡೋದರ ಮಧ್ಯೇ ತು ಯಾನಿ ತೀರ್ಥಾನಿ ಸಂತಿ ವೈ
ಪೂಜಿತಾನಿ ಭವಂತೀಹ ಭೂತಾಹೇ ಪಾರಣೇಕೃತೇ

ಎಂಬ ವಾಕ್ಯದಂತೆ ಶಿವರಾತ್ರಿಯ ಮಾರನೆಯ ದಿನ ಚತುರ್ದಶೀ ತಿಥಿಯಲ್ಲಿ ಪಾರಣೆ ಮಾಡುವುದರಿಂದ ಸರ್ವತೀರ್ಥಗಳ ಸ್ನಾನಫಲ ಲಭಿಸುತ್ತದೆ.

ಏಕಾದಶೀ ವ್ರತಾಚರಣೆಯ ದಿವಸ ಉಪವಾಸವಿದ್ದು ಮಾರನೆಯ ದಿವಸ ದ್ವಾದಶೀ ನಿಮಿತ್ತ ಪಾರಣೆಯನ್ನು ಮಾಡಬೇಕು. ದ್ವಾದಶೀ ದಿವಸ ಶ್ರವಣನಕ್ಷತ್ರ ಸೇರಿದರೆ ಆ ದಿವಸ ಪಾರಣೆ ಮಾಡಕೂಡದು. ಆ ದಿವಸದಲ್ಲಿ ಶ್ರವಣದ್ವಾದಶೀ ಪ್ರಯುಕ್ತ ಉಪವಾಸವಿದ್ದು ತ್ರಯೋದಶೀ ದಿವಸ ಪಾರಣೆ ಮಾಡಬೇಕು. ದ್ವಾದಶೀ ತಿಥಿಯ ಕಲ ಪ್ರಮಾಣದ ನಾಲ್ಕನೆಯ ಒಂದು ಭಾಗವನ್ನು ಏಕಾದಶೀ ತಿಥಿಯ ಕಾಲಪ್ರಮಾಣಕ್ಕೆ ಸೇರಿಸಿದ ಮೊತ್ತ ದ್ವಾದಶೀ ದಿವಸದಲ್ಲೂ ಬಂದರೆ ಆ ಕಾಲ ಕಳೆಯುವರೆಗೂ ಪಾರಣೆ ಮಾಡಕೂಡದು. ಇದಕ್ಕೆ ಹರಿವಾಸರ ಎಂದು ಹೆಸರು. ಹರಿವಾಸರದ ಕಾಲ ಕಳೆದ ಬಳಿಕ ಪಾರಣೆ ಮಾಡಬೇಕು.

ಅ ಕಾ ಭಾಸಿತ ಪಕ್ಷೇಷು ಮೈತ್ರ ಶ್ರವಣ ರೇವತೀ
        ಸಂಗಮೇ ನ ಹಿ ಭೋಕ್ತವ್ಯಂ ದ್ವಾದಶದ್ವಾದಶೀರ್ಹರೇತ್

ಎಂಬ ಪ್ರಮಾಣದಂತೆ ಆಷಾಢಮಾಸ ಶುಕ್ಲಪಕ್ಷದ್ವಾದಶೀ ದಿವಸ ಅನೂರಾಧಾ ನಕ್ಷತ್ರ ಸೇರಿದರೆ ಕಾರ್ತಿಕಮಾಸ ಶುಕ್ಲಪಕ್ಷದ್ವಾದಶೀ ದಿವಸ ಶ್ರವಣನಕ್ಷತ್ರ ಸೇರಿದರೆ, ಭಾದ್ರಪದ ಮಾಸ ಶುಕ್ಲಪಕ್ಷ ದ್ವಾದಶೀದಿವಸ ರೇವತೀ ನಕ್ಷತ್ರ ಸೇರಿದರೆ ಈ ತಿಥಿ ನಕ್ಷತ್ರಗಳ ಯೋಗ ಕಾಲದಲ್ಲಿ ಪಾರಣೆ ಮಾಡಕೂಡದು. ಮಾಡಿದಲ್ಲಿ ಹನ್ನೆರಡು ದ್ವಾದಶಿಗಳ ಆಚರಣೆಯ ಫಲ ನಷ್ಟವಾಗುತ್ತದೆ.

ಶರನ್ನವರಾತ್ರಿಯ ಒಂಬತ್ತು ದಿನಗಳಲ್ಲೂ ಉಪವಾಸವಿದ್ದು ದಶಮೀ ದಿವಸಪಾರಣೆ ಮಾಡಬೇಕು.

ಸಾಮಾನ್ಯವಾಗಿ ದ್ವಾದಶೀ ಪಾರಣೆ ಭೋಜನದಲ್ಲಿ ಅಗಸೇಸೊಪ್ಪು ಮತ್ತು ನೆಲ್ಲಿಚಟ್ಟನ್ನು ಉಪಯೋಗಿಸುವುದು ರೂಢಿಯಲ್ಲಿದೆ. ನೆಲ್ಲಿಚಟ್ಟನ್ನು ಸೇವಿಸುವುದರಿಂದ ಆ ದಿನದಲ್ಲಿ ಅಸಂಭಾವ್ಯರೊಡನೆ ಮಾತನಾಡುವುದರಿಂದ ಉಂಟಾದ ದೋಷ ನಾಶವಾಗುತ್ತದೆ. ದ್ವಾದಶೀ ಪಾರಣೆಯ ದಿವಸ ಪರಾನ್ನಭೋಜನ, ಸ್ತ್ರೀಸಂಗ, ಹಗಲು ನಿದ್ರೆ ಮಾಡುವುದು ಮೊದಲಾದವು ನಿಷಿದ್ಧವಾಗಿದೆ.

ಯುಕ್ತ ಉಪವಾಸ ಹಾಗೂ ಯುಕ್ತ ಪಾರಣೆಗಳಿಂದ ಆಯುರಾರೋಗ್ಯ ವೃದ್ಧಿಯೆಂದು ಶಾಸ್ತ್ರಗಳು ಹೇಳುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪಾರಣೆ&oldid=893990" ಇಂದ ಪಡೆಯಲ್ಪಟ್ಟಿದೆ