ನಾಗನನ್ನು ಒಳಗೊಂಡ ಸ್ಥಳೀಯ ದೈವ ಸಮೂಹಗಳಿಗೆ ಜಿಲ್ಲೆಯ ಪ್ರಧಾನ ಭೂತ ಮಧ್ಯಮ ಜನಾಂಗಗಳಲ್ಲಿ ಒಂದಾದ ಪಾಣರು ಗ್ರಾಮ ಮಟ್ಟದಲ್ಲಿ ಅಥವಾ ಮನೆತನದ ಮಟ್ಟದಲ್ಲಿ ನಡೆಸುವ ವೈದಿಕೇತರ ಆಚರಣೆ ಪಾಣರಾಟ. ಸ್ಥಳೀಯ ಬ್ರಾಹ್ಮಣೇತರ ಜನವರ್ಗದ ದೃಷ್ಠಿಯಲ್ಲಿ ನಾಗರೂಪಿಯಾದ ಸ್ವಾಮಿ ಒಂದು ಆರ್ಯೇತರ ದೈವ ಭೂಮಿ ಪುತ್ರನೆಂದು ಜನ ನಂಬುವ ನಾಗ ಅಥವಾ ಸ್ವಾಮಿಯನ್ನು ಕರಾವಳಿಯ ಅತ್ಯಂತ ಪ್ರಭಾವಿ ಕೃಷಿ ಮೂಲದ ನಾಡವರು ತಮ್ಮ ಆರಾಧ್ಯ ದೈವವೆಂದು ನಂಬುತ್ತಾರೆ. ತಮ್ಮ ಮನೆಯ ಆವರಣದೊಳಗಿನ ನಾಗನಿಗೆ ಬ್ರಾಹ್ಮಣರಿಂದ ಉಪಚಾರ ನಡೆಸಿದರೆ ತಮ್ಮ ಮನೆ ದೈವವಾದ ಸ್ವಾಮಿಗೆ ನಿತ್ಯದಲ್ಲಿ ಹೂ ನೀರು ಹಾಕಿ ತಾವೇ ಅರ್ಚಿಸುತ್ತಾರೆ. ಪಾರಣಾಟದ ಒಂದು ಅಂಗವಾಗಿ ಜರುಗುವುದು ಸ್ವಾಮಿಕೋಲ ಹಾಗೂ ನಾಗನ ಕೋಲ. ಈ ಆಚರಣೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ, ಉಡುಪಿ ತಾಲೂಕುಗಳಲ್ಲಿ ಮಾತ್ರ ಜರುಗುತ್ತದೆ. ಇದನ್ನು ನಡೆಸಿಕೊಡುವ ಪಾಣರ ಭಾಷೆ ಕನ್ನಡ. ಅಸ್ಪೃಶ್ಯ ಜನ ವರ್ಗಕ್ಕೆ ಸೇರಿದ ಇವರನ್ನು ನಲ್ಕೆಯರೆಂದು ಕರೆಯುತ್ತಾರೆ.

ಸ್ವಾಮಿಯ ಸಂಕೇತ ಬದಲಾಯಿಸಿ

ಬೃಹತ್ ಗಾತ್ರದ ಹುತ್ತ ಮಳೆಗೆ ಈ ಹುತ್ತ ಕರಗದಂತೆ ಅದರ ಮೇಲೆ ಸೂರು ಕಟ್ಟಲಾಗುತ್ತದೆ. ಸ್ವಾಮಿಯ ಗುಡಿ ಸಾಮಾನ್ಯವಾಗಿ ನಾಡರ ಮನೆಯ ಆವರಣದ ಹೊರ ವಲಯದಲ್ಲಿ ಇರುತ್ತದೆ. ಊರ ದೈವದ ಗುಡಿಯ ಪಕ್ಕದಲ್ಲಿ ಇರುವುದುಂಟು.

ಆರಾಧನಾ ವಿಧಾನ ಬದಲಾಯಿಸಿ

ಪಾಣಾರಾಟವು ಊರ ದೈವದ ಗುಡಿಗಳಲ್ಲಿ ವಾರ್ಷಿಕ ಆಚರಣೆಯ ಅಂಗವಾಗಿ ಹಾಗು ಕುಟುಂಬದ ನೆಲೆಯಲ್ಲಿ ನಾಡವರ ಮನೆಯ ಆವರಣದೊಳಗೆ ಸ್ವಾಮಿ ಗುಡಿಯ ಇದಿರು ಜರುಗುತ್ತದೆ. ಊರ ಗುಡಿಗಳಲ್ಲಿ ಜರುಗಿದಾಗ ಅದು ಊರಿನ ಹತ್ತೂ ಸಮಸ್ತರ ಕೂಡುವಿಕೆಯಿಂದ ಒಂದು ಸಾಮಾಜಿಕ ಆಚರಣೆಯ ರೂಪವನ್ನು ತಳೆಯುತ್ತದೆ. ಮನೆತನದ ಮಟ್ಟದಲ್ಲಿ ಜರುಗಿದಾಗ ಕೌಟುಂಬಿಕ ಆಚರಣೆಯ ಸ್ವರೂಪವನ್ನು ಹೊಂದುತ್ತದೆ. ಸ್ವಾಮಿಯವರಿಗೆ ಭೂ ಸಂಪತ್ತು ಕಾಪಾಡುವ ಅಂದರೆ ಕಾಲಕಾಲಕ್ಕೆ ಮಳೆ ಬಿದ್ದು ನೆಲದಲ್ಲಿ ಫಲ ಸಮೃದ್ಧಿ ಹೆಚ್ಚುವಂತೆ ಮಾಡುವ ದೈವ ಸಂತಾನದ ಅಧಿದೇವತೆಯೂ ಹೌದು. ಪಾಣರಾಟ ಜರುಗುವುದು ರಾತ್ರಿ ಹೊತ್ತಿನಲ್ಲಿ. ಈ ಆಚರಣೆಯನ್ನು ನಡೆಸಿ ಕೊಡುವವರು ಪಾಣರೆಂದ ಅಸ್ಪೃಶ್ಯ ವರ್ಗದವರು. ಗುಡಿಯ ಯಜಮಾನ ವರ್ಗದವರು ಸಾಮಾನ್ಯವಾಗಿ ಬಂಟರು ಅಥವಾ ನಾಡವರು. ಇತರ ಬ್ರಾಹ್ಮಣೇತರ ವರ್ಗದವರು ಆಚರಣೆಯ ವಿವಿಧ ಅಂಗಗಳಲ್ಲಿ ಭಾಗಿಯಾಗಿರುತ್ತಾರೆ. ಬ್ರಾಹ್ಮಣರು ಈ ಆಚರಣೆಯಲ್ಲಿ ಪಾಲ್ಗೊಳ್ಳುವುದೇ ಇಲ್ಲ. ಪಾಣರಾಟ ವಿವಿಧ ಆಚರಣೆ ಆರಂಭವಾಗುವುದೇ ಸ್ವಾಮಿಕೋಲದಿಂದ. ಪಾಣರು ತೊಡುವ ಅರ್ಧ ನಾರಿ ವೇಷವು ನಾಗಮಂಡಲದ ವೈದ್ಯರ ಅರ್ಧನಾರಿ ವೇಷವನ್ನು ಬಹುಪಾಲು ಹೋಲುತ್ತದೆ. ಸ್ವಾಮಿಯ ಹೋಲಿಕೆ ಹಾಡುಗಳನ್ನು ಕಸಿವೇಶ ತೊಟ್ಟ ಪಾಣ ಹಾಡುತ್ತಿರುವಾಗ ಇನ್ನೊಬ್ಬ ಪಾಣ ಯಕ್ಷಗಾನದ ಕೇದಗೆ, ಮುಂದಲೆ ಕೀರಿಟವನ್ನು ಹೋಲುವ ವೇಶ ತೊಟ್ಟು ಕುಣಿದು ಹೋಗುತ್ತಾನೆ. ಇದು ಅವರ ಪಾಲಿಗೆ ಸ್ವಾಮಿ ಕೋಲ. ಈ ಸ್ವಾಮಿ ಕೋಲದ ಸಂದರ್ಭದಲ್ಲಿ ಹೇಳುವ ಹೊಗಳಿಕೆಯಲ್ಲಿ ನಾಗನ ಹುಟ್ಟು ಈ ಭೂಮಿಗೆ ನಾಗ ಬಂದುದರ ಹಿನ್ನಲೆಯ ವಿವರ ಸಿಗುತ್ತದೆ. ಅವರು ನಾಗನನ್ನು ನಾಗಲಿಂಗ ಎಂದು ಕರೆಯುತ್ತಾರೆ.

ಉಲ್ಲೇಖ ಬದಲಾಯಿಸಿ

  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.