ಪಾಟಿ ಸವಾಲು ಎಂದರೆ ನ್ಯಾಯಾಲಯದಲ್ಲಿ ಪಕ್ಷಕಾರನೊಬ್ಬ ಹಾಜರುಪಡಿಸಿದ ಸಾಕ್ಷಿಯ ವಿಚಾರಣೆಯಿಂದ ವ್ಯಕ್ತಪಟ್ಟ ವಿಷಯಗಳನ್ನು ತಾಳೆ ನೋಡುವ ಉದ್ದೇಶದಿಂದ ಅಥವಾ ಮುಚ್ಚಿಡಲಾದ ವಿಷಯಗಳನ್ನು ಹೊರಗೆಡಹುವ ಉದ್ದೇಶದಿಂದ ಪ್ರತಿಪಕ್ಷಕಾರ ಅಥವಾ ಅವನ ವಕೀಲ ಆ ಸಾಕ್ಷಿಗೆ ಪ್ರಶ್ನೆ ಹಾಕಿ ನಡೆಸುವ ಪರೀಕ್ಷೆ; ಪ್ರತಿ ಪರೀಕ್ಷೆ; ಅಡ್ಡ ವಿಚಾರಣೆ (ಕ್ರಾಸ್ ಎಕ್ಸಾಮಿನೇಷನ್). ಸವಾಲು ಎಂಬುದು ಅರಬ್ಬೀ ಪರ್ಷಿಯನ್ ಮೂಲದ ಉರ್ದು ಭಾಷೆಯ ಶಬ್ದ. ಸವಾಲು ಎಂದರೆ ಪ್ರಶ್ನೆ. `ಪಾಟಿ ಎಂಬುದು `ಪ್ರತಿ ಎಂಬುದರ ವಿಕೃತರೂಪ.

ಸಾಕ್ಷಿಗಳ ವಿಚಾರಣೆಯಲ್ಲಿ ಪಾಟಿ ಸವಾಲಿಗೆ ಬಹಳ ಮಹತ್ತ್ವವಿದೆ. 1972ರ ಭಾರತೀಯ ಸಾಕ್ಷ್ಯ ಅಧಿನಿಯಮದ 137 ಮತ್ತು 138ನೆಯ ಪ್ರಕರಣಗಳಲ್ಲಿ ಸಾಕ್ಷಿಯ ಪರೀಕ್ಷೆಯನ್ನು ಕುರಿತ ವಿವರಣೆ ಇದೆ. ದಾವೆಯ ಒಬ್ಬ ಪಕ್ಷಕಾರ ತನ್ನ ಪಕ್ಷವನ್ನು ಸಮರ್ಥಿಸಲು ಒಬ್ಬ ಸಾಕ್ಷಿಯನ್ನೊ ಹಲವು ಸಾಕ್ಷಿಗಳನ್ನೂ ಕರೆಸುವುದುಂಟು. ಸಾಕ್ಷಿಗಳ ಹೇಳಿಕೆಗಳನ್ನು ಕುರಿತು ವಿಚಾರಿಸುವುದು ಮುಖ್ಯ ವಿಚಾರಣೆ. ವಾದ ವಿಷಯದ ಬಗ್ಗೆ ಅಥವಾ ಸುಸಂಗತ ಸಂಗತಿಗಳ ಬಗ್ಗೆ ನೇರ ಪ್ರಶ್ನೆ ಮಾಡಿ ಉತ್ತರ ಪಡೆಯುವುದನ್ನು ಸಾಕ್ರಟೀಸನ (ಸೋಕ್ರಾಟಿಕ್) ಪದ್ಧತಿ (ಪ್ರಶ್ನೋತ್ತರ ಪದ್ಧತಿ) ಎಂದು ಹೇಳುತ್ತಾರೆ. ದಾವೆಯ ಪ್ರತಿಪಕ್ಷಕಾರ ಆ ಸಾಕ್ಷಿಗೆ ಪ್ರಶ್ನೆಗಳನ್ನು ಹಾಕಿ ಪರೀಕ್ಷಿಸಬಹುದಾಗಿದೆ. ಇದೇ ಪಾಟಿ ಸವಾಲು. ದಾವೆ ಹೂಡಿದ ಪಕ್ಷಕಾರ ಹಾಜರುಪಡಿಸಿದ ಸಾಕ್ಷಿಯನ್ನು ಪ್ರತಿವಾದಿ ಅಥವಾ ಅವನ ವಕೀಲ ಪ್ರಶ್ನೆ ಹಾಕಿ ಪರೀಕ್ಷೆ ಮಾಡುತ್ತಾನೆ. ಪ್ರತಿ ಪ್ರಶ್ನೆ ಹಾಕಿ ಸಾಕ್ಷಿಯನ್ನು ಪರೀಕ್ಷಿಸಿದ ಬಳಿಕ ಮೂಲ ದಾವೆದಾರ ಆ ಸಾಕ್ಷಿಗೆ ಮತ್ತೆ ಕೆಲವು ಪ್ರಶ್ನೆಗಳನ್ನು ಕೇಳಿ ಪಾಟಿ ಸವಾಲಿನಲ್ಲಿ ಉಂಟಾಗಿರಬಹುದಾದ ಸಂಶಯಗಳನ್ನು ನಿವಾರಿಸಿ ವಿಷಯವನ್ನು ಸ್ಪಷ್ಟಪಡಿಸಲು ಯತ್ನಿಸಬಹುದಾಗಿದೆ. ಇದು ಪುನರ್ವಿಚಾರಣೆ. ಇದನ್ನು ಸಫಾಯಿ ಬಯಾನ್ ಎಂದೂ ಹೇಳುವುದುಂಟು.

ಪುನರ್ವಿಚಾರಣೆ ನಡೆದಾಗ ನ್ಯಾಯಾಲಯದ ಅನುಮತಿಯಿಂದ ಪಕ್ಷಕಾರ ಹೊಸದೊಂದು ವಿಷಯವನ್ನು ಪ್ರಸ್ತಾಪಿಸಿದರೆ ಪ್ರತಿ ಪಕ್ಷಕಾರ ಮತ್ತೆ ಆ ವಿಷಯದ ಬಗ್ಗೆ ಪಾಟಿ ಸವಾಲು ಮಾಡಬಹುದಾಗಿದೆ.

ಪಾಟಿ ಸವಾಲು ಮಾಡಲು ಅವಕಾಶ ದೊರೆತಾಗ ಕೆಲವು ಅಡ್ಡ ಪ್ರಶ್ನೆಗಳನ್ನು ಕೇಳಬಹುದಾಗಿದೆಯೆಂದೂ ಅರ್ಥ ವಿವರಣ ಕೋಶದಲ್ಲಿ ಪಿ. ರಾಮನಾಥ ಅಯ್ಯರ್ ಹೇಳಿದ್ದಾರೆ. ಸಾಕ್ಷಿಯ ನಿಷ್ಠೆ, ಪ್ರಾಮಾಣಿಕತೆ, ಸೂಕ್ಷ್ಮ ವ್ಯವಹಾರಜ್ಞಾನ, ಸ್ಮರಣಶಕ್ತಿ, ಒಲವು ಅಥವಾ ಸಾಕ್ಷಿದಾರನ ಹಿತಾಸಕ್ತಿ ಇವನ್ನು ಪರೀಕ್ಷಿಸುವುದೇ ಪಾಟಿ ಸವಾಲಿನ ಮುಖ್ಯ ಉದ್ದೇಶವೆಂಬುದಾಗಿ ಲಾ ಲೆಕ್ಸಿಕಾನ್‍ನಲ್ಲಿ ವೆಂಕಟರಾಮಯ್ಯನವರು ವಿವರಿಸಿದ್ದಾರೆ.

ಸಾಕ್ಷಿಯ ಪರೀಕ್ಷೆಯಲ್ಲಿ ಪಾಟಿ ಸವಾಲು ಎರಡನೆಯ ಮಹತ್ತ್ವದ ಹಂತವಾಗಿದೆ. ಸತ್ಯವನ್ನು ಕಂಡುಹಿಡಿಯಲು ಮತ್ತು ಅಸತ್ಯವನ್ನು ಬಯಲಿಗೆಳೆಯಲು ಇದೊಂದು ಪ್ರಬಲ ಸಾಧನವೆಂಬುದನ್ನು ಎಲ್ಲ ಮುಂದುವರಿದ ದೇಶಗಳ ಕಾನೂನು ವ್ಯವಸ್ಥೆಗಳಲ್ಲೂ ಒಪ್ಪಿಕೊಳ್ಳಲಾಗಿದೆ. ಪಾಟಿ ಸವಾಲು ಎಂಬುದು ಒಂದು ಇಬ್ಬಾಯಿ ಖಡ್ಗ. ಉಪಯೋಗಿಸುವವರು ಬಹು ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಅದು ಅವರಿಗೇ ಅಪಾಯಕಾರಿ ಎಂದು ವಿಧಿಕೋವಿದರು ಎಚ್ಚರಿಸಿದ್ದಾರೆ.

ನ್ಯಾಯಾಧೀಶರು ಪ್ರಶ್ನೆ ಕೇಳಲು ಭಾರತದ ಸಾಕ್ಷ್ಯ ಅಧಿನಿಯಮದ ಪ್ರಕರಣ 165ರ ಮೇರೆಗೆ ಅವಕಾಶವಿದೆ. ಪಾಟಿ ಸವಾಲುಗಳನ್ನು ಯಾರು, ಯಾವಾಗ, ಎಷ್ಟು ಮಟ್ಟಿಗೆ, ಯಾವ ಉದ್ದೇಶಕ್ಕಾಗಿ ಕೇಳಬಹುದು ಮತ್ತು ಯಾವಾಗ ಕೇಳಬಹುದು ಮತ್ತು ಯಾವಾಗ ಕೇಳಬಾರದು ಎಂಬ ವಿವರಣೆಗಳು ಭಾರತೀಯ ಸಾಕ್ಷ್ಯ ಅಧಿನಿಯಮದ 139ರಿಂದ 157ರ ವರೆಗಿನ ಪ್ರಕರಣಗಳಲ್ಲಿವೆ.

ಕೌಟಿಲ್ಯ ಪಾಟಿ ಸವಾಲಿನ ಬಗ್ಗೆ ವಿವರವಾಗಿ ಹೇಳದಿದ್ದರೂ ವಾಕ್ಯ ಕರ್ಮಾನುಯೋಗ ಎಂಬ ಪ್ರಯೋಗವನ್ನು ಬಳಸಿದ್ದಾನೆ; ಪ್ರಶ್ನೆ ಹಾಕಿ ಅಥವಾ ಸಾಕ್ಷಿದಾರರ ಹಾವಭಾವಗಳಿಂದ ಸತ್ಯಾಂಶವನ್ನು ಪರೀಕ್ಷಿಸಬಹುದಾಗಿದೆ ಎಂದು ಸೂಚಿಸಿದ್ದಾನೆ.

ನ್ಯಾಯಾಧೀಶರೇ ಪ್ರಶ್ನೆಗಳನ್ನು ಹಾಕುತ್ತಿದ್ದರು ಎಂದೂ ಪ್ರತಿಪ್ರಶ್ನೆಯ ವಿಧಾನ ಅಷ್ಟೊಂದು ವಿಸ್ತಾರವಾಗಿರಲಿಲ್ಲವೆಂದೂ ಪ್ರಾಚೀನ ಭಾರತದ ಧರ್ಮಶಾಸ್ತ್ರಗಳಲ್ಲಿ ಸಿಕ್ಕುವ ಆಧಾರಗಳ ಮೇರೆಗೆ ಪಿ.ವಿ.ಕಾಣೆ ತಿಳಿಸಿದ್ದಾರೆ. ಆದರೆ ಸಾಕ್ಷಿ ಸತ್ಯ ನುಡಿಯುವವನೇ ಅಥವಾ ಅವನು ಸಾಕ್ಷ್ಯ ನುಡಿಯಲು ಸಮರ್ಥನಾಗಿರುವವನೇ ಎಂಬುದನ್ನು ಮಾತ್ರ ಪರೀಕ್ಷಿಸುವ ಬಗ್ಗೆ ಭಾರತದ ಪಾಟಿ ಸವಾಲಿನ ಪ್ರಾಚೀನ ಕ್ರಮ ಆಧುನಿಕ ಐರೋಪ್ಯ ದೇಶಗಳಲ್ಲಿ ಮತ್ತು ಇಂಗ್ಲೆಂಡಿನಲ್ಲಿ ಅನುಸರಿಸುವ ವಿಧಾನಕ್ಕೆ ಸಮೀಪಗತವಾಗಿದೆಯೆಂದು ಪಿ.ವಿ.ಕಾಣೆ ಅಭಿಪ್ರಾಯಪಟ್ಟಿದ್ದಾರೆ. ದಾವೆ ಸಿವಿಲ್ ಸ್ವರೂಪದ್ದಾಗಿರಲಿ, ಕ್ರಿಮಿನಲ್ ಸ್ವರೂಪದ್ದಾಗಿರಲಿ, ಇಂಗ್ಲಿಷ್ ನ್ಯಾಯ ವಿಚಾರಣಾ ಪದ್ಧತಿಯಲ್ಲಿ ಪಾಟಿ ಸವಾಲಿನ ಕ್ರಮ ಬಹಳ ಮಹತ್ವದ ಸ್ಥಾನ ಪಡೆದಿದೆಯೆಂಬುದನ್ನು ವಿವರಿಸಿದ್ದಾರೆ.

ಪ್ರಾಚೀನ ಭಾರತದಲ್ಲಿ ನ್ಯಾಯಾಧೀಶರೇ ಸಾಕ್ಷಿಗೆ ಪಾಟಿ ಸವಾಲುಗಳನ್ನು ಹಾಕುತ್ತಿದ್ದರು. ಈ ಕ್ರಮ ಬಹು ಕಠೋರವಾಗಿತ್ತು ಮತ್ತು ಒಂದು ಬಗೆಯ ಚಿತ್ರಹಿಂಸೆಯಾಗಿತ್ತು ಎಂದು ಜಯಸ್ವಾಲ್ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಕೆ.ಟಿ.ವರದಾಚಾರ್ಯರ್ ಒಪ್ಪಿಲ್ಲ. ಅಂದಿನ ಕ್ರಮ ಸ್ವಲ್ಪ ಕಠಿಣವಾಗಿದ್ದರೂ ಅದನ್ನು ಚಿತ್ರಹಿಂಸೆಯೆಂದು ಹೇಳುವುದು ಅತಿಶಯೋಕ್ತಿಯಾದೀತು. ಪಾಟಿ ಸವಾಲಿನ ಕ್ರಮ ಪ್ರಾಚೀನ ಭಾರತದಲ್ಲಿ ನಿಜವಾಗಿಯೂ ಕಠೋರವಾಗಿರಲಿಲ್ಲ. ಸಾಕ್ಷಿಗೆ ಯಾವ ಬಗೆಯ ಬೆದರಿಕೆಯನ್ನೂ ಹಾಕುತ್ತಿರಲಿಲ್ಲ. ಸಾಕ್ಷಿ ನಿರ್ಭಯವಾಗಿ ಸತ್ಯವನ್ನು ನುಡಿದರೆ ದಂಡನೆಯಲ್ಲೂ ಸ್ವಲ್ಪಮಟ್ಟಿನ ಉಪಶಮನ ದೊರೆಯುತ್ತಿತ್ತು. ಆದರೆ ಇಂಥ ದಂಡನೆಯ ಉಪಶಮನ ಯಾವುದೇ ಬಗೆಯ ಪ್ರಲೋಭನೆಯಾಗಿರಲಿಲ್ಲ ಎಂದು ವಿವರಿಸಿ, ಬೀಲ್ ಅವರ ಬುದ್ಧಿಸ್ಟ್ ರಿಕಾಡ್ರ್ಸ್ ಎಂಬ ಗ್ರಂಥದಲ್ಲಿ ನಿರೂಪಿತವಾದ ಚೀನಾ ಯಾತ್ರಿಕ ಹ್ಯೂಯೆನ್‍ತ್ಸಾಂಗನ ವರದಿಗಳಿಂದ ಉಲ್ಲೇಖಗಳನ್ನು ಕೊಟ್ಟಿದ್ದಾರೆ.

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • Wellman, F. (2007) [1903]. The Art of Cross-Examination. Standard Publications. ISBN 1-59462-647-2.
  • Mahoney, K. (2008). Relentless Criminal Cross-Examination. James Publishing Company. ISBN 978-1-58012-125-5.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: