ಪಾಕ ಶಬ್ದವು ಬೇಯಿಸು, ಹಣ್ಣಾಗು ಮೊದಲಾದ ಉಷ್ಣ ಸ್ಪರ್ಶದಿಂದಾಗುವ ಪರಿಣಾಮವೆಂಬ ಮುಖ್ಯಾರ್ಥವನ್ನುಳ್ಳ ಪಚ್ ಧಾತುವಿನಿಂದ ನಿಷ್ಪನ್ನವಾದ ಶಬ್ದ. ಸಾಹಿತ್ಯ ವಿಮರ್ಶೆಯಲ್ಲಿ ಶಬ್ದ ಮತ್ತು ಅರ್ಥಗಳ ಸಂಬಂಧದಲ್ಲಿ ಉಂಟಾಗುವ ಹದವನ್ನು ಸೂಚಿಸುತ್ತದೆ. ಕಾವ್ಯ ಸೌಂದರ್ಯಸಾಧನಗಳಲ್ಲಿ ಇದೂ ಒಂದೆಂದು ಮಧ್ಯಕಾಲೀನ ಅಲಂಕಾರಿಕರಿಂದ ಅಂಗೀಕೃತವಾಗಿದ್ದರೂ ಸಿದ್ಧಾಂತದ ಪರಿಷ್ಕರಣಕ್ಕೆ ಕಾರಣರಾದ ಮಮ್ಮಟ, ರುಯ್ಯಕ, ವಿಶ್ವನಾಥ, ಜಗನ್ನಾಥ ಮೊದಲಾದ ಪ್ರಸಿದ್ಧ ಆಲಂಕಾರಿಕರಿಂದ ಪ್ರಸ್ತಾಪಿಸಲ್ಪಟ್ಟಿಲ್ಲ. ಇದರ ಸ್ವರೂಪವನ್ನು ವಿವೇಚಿಸಲು ಪ್ರಯತ್ನಪಟ್ಟಿರುವ ಕೆಲವರಲ್ಲೂ ಲಕ್ಷಣೋದಾಹರಣೆಗಳ ವಿಚಾರದಲ್ಲಿ ಮತಭೇದ, ಸಂದಿಗ್ಧತೆಗಳು ಕಂಡುಬರುತ್ತವೆ.

ಪಾಕದ ಭಾವನೆ ಪ್ರಾಯಃ, ಭರತ, ಭಾಮಹ, ದಂಡಿ, ರುದ್ರಟ-ಇವರ ಗ್ರಂಥಗಳಲ್ಲಿ ಕಂಡುಬರುವುದಿಲ್ಲ. ವಾಮನನ ಕಾವ್ಯಾಲಂಕಾರ ಸೂತ್ರವೃತ್ತಿಯ ಒಂದನೆಯ ಅಧಿಕಾರಣದ ಎರಡನೆಯ ಅಧ್ಯಾಯದ ಹದಿನೈದನೆಯ ಸೂತ್ರದ ಸಂದರ್ಭದಲ್ಲಿ -

ಯತ್ಪದಾನಿ ತ್ಯಜಂತ್ಯೇವ ಪರಿವೃತ್ತಿಸಹಿಷ್ಣುತಾಂ
ತಂ ಶಬ್ದನ್ಯಾಸ ನಿಷ್ಣಾತಾಃ ಶಬ್ದಪಾಕಂ ಪ್ರಚಕ್ಷತೇ

ಎಂಬಲ್ಲಿ ಮೊಟ್ಟಮೊದಲಾಗಿ ಶಬ್ದಪಾಕವೆಂಬ ಮಾತು ಕಂಡುಬರುತ್ತದೆ. ಅನಂತರ ಅದೇ ಗ್ರಂಥದ ಮೂರನೆಯ ಗುಣವಿವೇಚನಾಧಿಕರಣದ ಕೊನೆಯಲ್ಲಿ

ಗುಣಸ್ಫುಟಿತಸಾಕಲ್ಯಂ ಕಾವ್ಯಪಾಕಂ ಪ್ರಚಕ್ಷತೇ
ಚೂತಸ್ಯಪರಿಣಾಮೇನ ಸಚಾಯಮುಪಮೀಯತೇ
ಸುಪ್ತಿಙï ಸಂಸ್ಕಾರ ಮಾತ್ರಂ ಯತ್ಕ್ಲಿಷ್ಟ ವಸ್ತುಗುಣಂ ಭವೇತ್
ಕಾವ್ಯಂವೃಂತಾಕ ಪಾಕಂ ತಜ್ಯಗುಪ್ಯಂತೇ ಜನಾಸ್ತತಃ

ಎಂಬಲ್ಲಿ ಕಾವ್ಯಪಾಕಂ ಮತ್ತು ವೃತಾಕಪಾಕ ಎಂಬ ಶಬ್ದಗಳು ಕಂಡುಬರುತ್ತವೆ. ಇದರಿಂದ ಶಬ್ದಪಾಕವೆಂಬುದು ಪದಗಳ ಬದಲಾವಣೆಯನ್ನು ಸಹಿಸದ ವಿನ್ಯಾಸ ವಿಶೇಷವೆಂದೂ ಕಾವ್ಯಪಾಕವೆಂಬುದು ಕಾವ್ಯದಲ್ಲಿ ಗುಣಗಳೆಲ್ಲ ಸ್ಫುಟವಾಗಿ ಕಾಣುವಂತಿದ್ದು ಮಾವಿನಕಾಯಿ ಪಕ್ವವಾಗುವುದಕ್ಕೆ ಹೋಲಿಸಬಹುದಾದ ಒಂದು ವೈಶಿಷ್ಟ್ಯವೆಂದೂ ವಾಮನನ ಅಭಿಪ್ರಾಯವಿದ್ದಂತೆ ಕಾಣುತ್ತದೆ.

ರಾಜಶೇಖರನ (880-920) ಕಾವ್ಯಮೀಮಾಂಸೆಯಲ್ಲಿ ಪಾಕದ ವಿಷಯದಲ್ಲಿ ವಿಸ್ತಾರವಾದ ಚರ್ಚೆ ಮತ್ತು ಸಮೀಕ್ಷೆ ಕಂಡುಬರುತ್ತದೆ. ಸಂತತವಾದ ಕಾವ್ಯಾಭ್ಯಾಸದ ಮೂಲಕ ಕವಿಯ ಮಾತು ಪಾಕಗೊಳ್ಳುತ್ತದೆಯೆಂದು ಹೇಳಿ ಪಾಕವೆಂಬುದು ಪರಿಣಾಮ ಅಥವಾ ಸಾಶಬ್ದ್ಯವೆಂಬ ಮಂಗಲನ ಮತವನ್ನೂ ಅದಕ್ಕೆ ವಿರುದ್ಧವಾದ ಮೇಲ್ಕಂಡ ವಾಮನೀಯರ ಮತವನ್ನೂ ಇಲ್ಲಿ ಉಲ್ಲೇಖಿಸಿ, ನಿರಾಕರಿಸಲಾಗಿದೆ. ಇಯಮ ಶಕ್ತಿರ್ನಪುನಃ ಪಾಕಃ, ಯದೇಕಸ್ಮಿನ್ವಸ್ತುನಿಮಹಾಕವೀನಾಮನೇ ಕೋಪಿಪಾಠಃ ಪರಿಪಾಕವಾನ್ ಭವತಿ, ತಸ್ಮಾದ್ರಸೋಚಿತ ಶಬ್ದಾರ್ಥಸೂಕ್ತಿನಿಬಂಧನಃ ಪಾಕಃ (ಎಂದರೆ ಇದು ಪಾಕವಲ್ಲ, ಕೇವಲ ಅಶಕ್ತಿ, ಏಕೆಂದರೆ ಒಂದೇ ವಸ್ತುವನ್ನು ಕುರಿತ ಮಹಾಕವಿಗಳ ಅನೇಕ ವಿಧವಾದ ಶಬ್ದವಿನ್ಯಾಸಗಳೂ ಪರಿಪಾಕವನ್ನು ಹೊಂದಿರಬಹುದು. ಆದಕಾರಣ ರಸಾನುಗುಣವಾದ ಶಬ್ದಾರ್ಥವಿನ್ಯಾಸವೇ ಪಾಕ) ಎಂಬ (ತನ್ನ ಹೆಂಡತಿ) ಅವಂತಿಸುಂದರಿ ಅಭಿಪ್ರಾಯವನ್ನು ಅನುಮೋದಿಸಿ ಕೊನೆಗೆ ಇದು ಕಾರ್ಯಾನುಮೇಯ ಮತ್ತು ಸಹೃದಯಪ್ರಸಿದ್ಧಿ ಸಿದ್ಧವೆಂಬ ಅಂಶಗಳನ್ನು ರಾಜಶೇಖರ ಸ್ಪಷ್ಟಪಡಿಸುತ್ತಾನೆ. ಇವನ ಮತಾನುಸಾರ ಪಾಕದಲ್ಲಿ 1 ಪಿಚುಮಂದಪಾಕ (ಬೇವು), 2 ಬದರ (ಬೋರೆಹಣ್ಣು) ಪಾಕ, 3 ಮೃದ್ವೀಕಾ (ದ್ರಾಕ್ಷಿ) ಪಾಕ, 4 ವಾರ್ತಾಂಕ (ಬದನೆಕಾಯಿ) ಪಾಕ, 5 ತಿಂತಿಡೀ(ಣೀ)ಕ (ಹುಣಿಸೆಹಣ್ಣು) ಪಾಕ, 6 ಸಹಕಾರ (ಮಾವಿನಹಣ್ಣು) ಪಾಕ, 7 ಕ್ರಮುಕ (ಅಡಿಕೆ) ಪಾಕ, ತ್ರಪುಸ (ಸೌತೇಕಾಯಿ) ಪಾಕ ಮತ್ತು 9 ನಾರಿಕೇಲ (ತೆಂಗಿನಕಾಯಿ) ಪಾಕ ಎಂಬ ಒಂಬತ್ತು ಭೇದಗಳು ಆದಿ, ಮಧ್ಯ ಮತ್ತು ಅಂತ್ಯದ ರುಚಿಯ ಆಧಾರದ ಮೇಲೆ ಗುರ್ತಿಸಲ್ಪಟ್ಟಿವೆ. ಕೆಲವರು ಅವ್ಯವಸ್ಥಿತವಾದ ಪಾಕವನ್ನು ಕಪಿತ್ಥ (ಬೇಲದಕಾಯಿ) ಪಾಕವೆಂದು ಕರೆಯುತ್ತಾರೆಂದು ಹೇಳಿ ತಾನು ಹೇಳಿರುವ ಒಂಬತ್ತು ಪಾಕಗಳಲ್ಲಿ ಮೃದ್ವೀಕಾ, ಸಹಕಾರ ಮತ್ತು ನಾರಿಕೇಲ ಪಾಕಗಳು ಅತ್ಯುತ್ತಮವೆಂದೂ ಮಧ್ಯಮವಾದ ಬದರ, ತಿಂತಿಡೀಕ ಮತ್ತು ತ್ರಪುಸ ಪಾಕಗಳು ಸಂಸ್ಕಾರವನ್ನಪೇಕ್ಷಿಸುತ್ತವೆಂದೂ ಕುಕವಿತ್ವ ಚಿಹ್ನೆಗಳಾದ ಉಳಿದ ಮೂರು ಪಾಕಗಳು ಸರ್ವಥಾ ತ್ಯಾಜ್ಯವೆಂದೂ ರಾಜಶೇಖರನ ಅಭಿಪ್ರಾಯ.

ಭವಭೂತಿಯ ಯತ್ಪ್ರೌಢಿತ್ವಮುದಾರಕಾ ಎಂಬಲ್ಲಿಯ ಪ್ರೌಢಿಗೆ ವ್ಯಾಖ್ಯಾನಕಾರ ಪೂರ್ಣಸರಸ್ವತಿ ಪಾಕವೆಂದು ಅರ್ಥ ಹೇಳಿ ಭೋಜನ ಸರಸ್ವತೀಕಂಠಾಭರಣದಲ್ಲಿಯ ಉಕ್ತೇಃ ಪ್ರೌಢಿಃ ಪರೀಪಾಕಃ ಪ್ರೋಚ್ಯತೆ ಪ್ರೌಢಿಸಂಜ್ಞಯಾ ಎಂಬ ಲಕ್ಷಣವನ್ನು ಉದ್ಧರಿಸಿದ್ದಾನೆ.

ಪಾಕವೆಂಬುದನ್ನು ಭೋಜ ಪ್ರೌಢಿಯೆಂಬ ಶಬ್ದಗುಣವನ್ನಾಗಿ ಅಂಗೀಕರಿಸಿದ್ದಾನೆ. ವಾಮನ ಹೇಳಿರುವ ಶಬ್ದಗಳ ಪರಿವೃತ್ತಿವೈಮುಖ್ಯಭೋಜನ ಮತಾನುಸಾರ ಶಯ್ಯಾ ಎಂಬ ಶಬ್ದಾಲಂಕಾರವಾಗುತ್ತದೆ. ಆದರೆ ಪಾಕ ಅಥವಾ ಪ್ರೌಢಿ ಶಬ್ದಗುಣ ವಾಮನನ ಮತಾನುಸಾರವೂ ಶಬ್ದಪಾಕ ಮತ್ತು ಕಾವ್ಯಪಾಕ ಇವು ಬೇರೆ ಬೇರೆಯೆಂಬುದನ್ನು ಮೇಲೆ ಸ್ಪಷ್ಟಪಡಿಸಿದೆ.

ಆಗ್ನಿಪುರಾಣದಲ್ಲಿ ಪ್ರೌಢಿಯೆಂಬುದು ಆರು ವಿಧವಾದ ಅರ್ಥಗುಣಗಳಲ್ಲಿ ಒಂದೆಂದೂ ಪಾಕವೆಂಬುದು ಆರು ಉಭಯಗುಣಗಳಲ್ಲಿ ಒಂದೆಂದೂ ಅಂಗೀಕೃತವಾಗಿದೆ. ಉಕ್ತೇಃ ಪರಿಣತಿಃ ಕಾಪಿ ಪಕ ಇತ್ಯಭೀಧಿಯತೆ ಎಂಬುದಾಗಿ ಪಾಕದ ಲಕ್ಷಣವನ್ನು ನಿರೂಪಿಸಿ ಅದು ನಾಲ್ಕು ವಿಧವೆಂದೂ ಅವುಗಳಲ್ಲಿ ಮೃದ್ವೀಕಾಪಾಕ ಆದ್ಯಂತಗಳೆರಡರಲ್ಲೂ ಸುರಸವೆಂದು ಹೇಳಲಾಗಿದೆ.

ಚಮತ್ಕಾರ ಚಂದ್ರಿಕಾದ ಕರ್ತೃ ವಿಶ್ವೇಶ್ವರನಾದರೋ ಭೋಜ ಹೇಳಿರುವ ಗುಣಗಳಲ್ಲಿ ಪ್ರೌಢಿಯೊಂದನ್ನು ಮಾತ್ರ ತೆಗೆದು ಹಾಕಿ ಉಳಿದ ಇಪ್ಪತ್ತಮೂರು ಗುಣಗಳನ್ನು ಸಾಮಾನ್ಯವಾಗಿ ಕಾವ್ಯಗುಣಗಳನ್ನಾಗಿ ಅಂಗೀಕರಿಸಿದ್ದಾನೆ. ಪ್ರೌಢಿಯನ್ನು ರೀತಿ, ವೃತ್ತಿ, ಶಯ್ಯಾ ಇವುಗಳೊಡನೆ ಪ್ರತ್ಯೇಕವಾಗಿ ವಿವರಿಸಿದ್ದಾನೆ.

ಭೋಜನ ಸರಸ್ವತೀಕಂಠಾಭರಣಕ್ಕೆ ವ್ಯಾಖ್ಯಾನ ರಚಿಸಿರುವ ರತ್ನೇಶ್ವರ ಶಬ್ದಪಾಕದಂತೆ ಅರ್ಥಪಾಕಗಳನ್ನೂ ಅಂಗೀಕರಿಸಿರುವುದಲ್ಲದೆ ನಾರಿಕೇಲ ಪಾಕ ಮೃದ್ವೀಕಾ ಪಾಕ ಮತ್ತು ಸಹಕಾರ ಪಾಕಗಳ ಸ್ವರೂಪವನ್ನು ವಿಶದವಾಗಿ ವರ್ಣಿಸಿದ್ದಾನೆ. ಕೆಲವರಿಂದ ಹೇಳಲ್ಪಟ್ಟಿರುವ ವಾರ್ತಾಕ ಪಾಕವೆಂಬುದು ಕೇವಲ ಸುಶಬ್ದತಾಗುಣವೆಂದೂ ಇನ್ನು ಕೆಲವರಿಂದ ಅಂಗೀಕರಿಸಲ್ಪಟ್ಟಿರುವ ನೀಲಕಪಿತ್ಥ ಪಾಕಾದಿಗಳು ಇಲ್ಲವೇ ಇಲ್ಲವೆಂದೂ ಹೇಳಿರುತ್ತಾನೆ. ಇವನ ಮತಾನುಸಾರ ಪಾಕವೆಂಬುದು-

ಪದಾನಾಮಾವಾಪೋದ್ವಾಪಾಭ್ಯಾಂ ಸನ್ನಿವೇಶಚಾರುತ್ವೇ
ನಯೋಯಮಾಭ್ಯಾಸಿಕೋ ನಾಲಿಕೇರ ಪಾಕಃ, ಮೃದ್ವೀಕಾ
ಪಾಕಃ ಇತ್ಯಾದಿ ವಾಕ್ಯಪರಿಪಾಕಃ ಸಾಪ್ರೌಢಿರಿತ್ಯುಚ್ಯತೆ.

ಪ್ರತಾಪರುದ್ರೀಯಕಾರನಾದ ವಿದ್ಯಾನಾಥ ಮತ್ತು ಏಕಾವಲೀಕಾರನಾದ ವಿದ್ಯಾಧರ ಇವರು ಈ ಗೊಂದಲವನ್ನೆಲ್ಲ ಪರಿಹರಿಸಿ ಪಾಕವನ್ನು ಅರ್ಥಗಂಭೀರಿಮಾ ಎಂದು ಲಕ್ಷಿಸಿದ್ದಾರೆ. ವಿದ್ಯಾನಾಥ ದ್ರಾಕ್ಷಾಪಾಕ, ನಾಲಿಕೇರ ಪಾಕ ಎಂಬ ಎರಡು ಭೇದಗಳನ್ನು ಮಾತ್ರ ಗುರ್ತಿಸಿ ಉದಾಹರಿಸಿದ್ದಾನೆ. ದ್ರಾಕ್ಷಾಪಾಕ ಬಹಿರಂತಃ ಸ್ಫುರದ್ರಸಃ ಎಂದರೆ ಕಾವ್ಯದ ಹೊರಗೂ ಒಳಗೂ ಸ್ಫುರಿಸುವ ರಸವುಳ್ಳದ್ದು. ಆದರೆ ನಾಲಿಕೇರ ಪಾಕ ಅಂತರ್ಗೂಡ ರಸೋದಯಃ ಎಂದರೆ ಗೂಢವಾಗಿ ಒಳಗೆ ಅಡಗಿರುವ ರಸವನ್ನುಳ್ಳದು ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ದ್ರಾಕ್ಷಾಪಾಕವೆಂಬುದು ಕಾಲಿದಾಸಾದಿಗಳ ಕಾವ್ಯಗಳಲ್ಲಿ ಹೇಗೋ ಹಾಗೆ ಅಲ್ಪಪ್ರಯತ್ನದಿಂದ ರಸಾಸ್ವಾದವನ್ನುಂಟುಮಾಡುವಂಥಹುದೆಂದೂ ನಾಲಿಕೇರ ಪಾಕವೆಂಬುದು ಭಾರವಿ, ಮಾಘ ಮೊದಲಾದವರ ಕಾವ್ಯಗಳಲ್ಲಿ ಹೇಗೋ ಹಾಗೆ ಕಠಿನ ಪ್ರಯತ್ನದಿಂದ ಶಬ್ದಾರ್ಥಗಳ ಜುಂಗು, ಕರಟಗಳನ್ನು ಭೇದಿಸಿದ. ಅನಂತರವೇ ಸಿಕ್ಕಬಹುದಾದ ತಿರುಳನ್ನುಳ್ಳದ್ದು ಎಂದೂ ಎರಡೇ ವಿಧವಾದ ಪಾಕಗಳು ವ್ಯವಹಾರದಲ್ಲಿ ನಿಂತಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪಾಕ&oldid=967317" ಇಂದ ಪಡೆಯಲ್ಪಟ್ಟಿದೆ