ಪವಿತ್ರವಾರ
ಕ್ರೈಸ್ತ ಆರಾಧನಾ ವರ್ಷದಲ್ಲಿ ಪವಿತ್ರವಾರಕ್ಕೆ ವಿಶಿಷ್ಟ ಸ್ಥಾನವಿದೆ. ಶುಭಶುಕ್ರವಾರದ ಹಿಂದಿನ ಭಾನುವಾರವು ಗರಿಗಳಹಬ್ಬವಾಗಿಯೂ ಆನಂತರದ ಭಾನುವಾರವು ಪುನರುತ್ಥಾನದಹಬ್ಬವಾಗಿಯೂ ಆಚರಿಸಲ್ಪಡುತ್ತದೆ. ಈ ಎರಡು ಆದಿತ್ಯವಾರಗಳ ನಡುವಿನ ಸಪ್ತಾಹವೇ ಪವಿತ್ರವಾರ ಎನಿಸಿಕೊಳ್ಳುತ್ತದೆ.
ಯೇಸುಕ್ರಿಸ್ತ ಬೆಥಾನಿಯಿಂದ ಜೆರುಸಲೇಮ್ಗೆ ಪಯಣಿಸಿದಾಗ ಯೆಹೂದ್ಯರು ಗರಿಗಳನ್ನು ಹಿಡಿದು ಯೇಸುವನ್ನು ಹಾಡುತ್ತಾ ಹೊಗಳುತ್ತಾ ಸಾಗಿದರು. ಚರ್ಚುಗಳಲ್ಲಿ ಇಂದು ಅದನ್ನು ಪುನರಾವರ್ತಿಸುವುದೇ ಗರಿಗಳ ಹಬ್ಬ.
ಅನಂತರ ಬರುವ ಗುರುವಾರದಂದು ಯೇಸುಕ್ರಿಸ್ತರು ತಮ್ಮ ಶಿಷ್ಯರೊಂದಿಗೆ ಕೊನೆಯಭೋಜನ ಮಾಡಿ ಅಂತಿಮ ಸಂದೇಶ ನೀಡುವ ಆಚರಣೆಯನ್ನೂ ಚರ್ಚುಗಳಲ್ಲಿ ಪುನರಾವರ್ತಿಸುತ್ತಾರೆ.
ಮರುದಿನ ಶುಭಶುಕ್ರವಾರ. ಅಂದು ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಆ ದಿನ ಶೋಕಾಚರಣೆಗಾಗಿ ಜಗತ್ತಿನಾದ್ಯಂತ ಕ್ರೈಸ್ತರು ಉಪವಾಸ ಆಚರಿಸಿ ಚರ್ಚುಗಳಲ್ಲಿ ಇಡೀ ದಿನ ಪ್ರಾರ್ಥನೆ ಹಾಗೂ ಪವಿತ್ರಗ್ರಂಥ ಪಾರಾಯಣ ಮಾಡುತ್ತಾರೆ. ಶಿಲಬೆಯಾತ್ರೆ ಎಂಬ ಆಚರಣೆಯಲ್ಲಿ ಕ್ರಿಸ್ತನ ಅಂತಿಮ ಕ್ಷಣಗಳನ್ನು ಧ್ಯಾನಿಸುವುದೂ ಇರುತ್ತದೆ.
ಶನಿವಾರದಂದು ನಡುರಾತ್ರಿ ಕೆಂಡದಿಂದ ದೀಪ ಹೊತ್ತಿಸಿ ಹೊಸಬೆಳಕನ್ನು ಘೋಷಿಸಲಾಗುತ್ತದೆ. ಆನಂತರ ಎಲ್ಲರೂ ಭಕ್ತಿಭಾವದಿಂದ ಯೇಸುಕ್ರಿಸ್ತನ ಪುನರುತ್ಥಾನವನ್ನು ಹಾಡುತ್ತಾ ನಲಿಯುತ್ತಾರೆ. ಅದರೊಂದಿಗೆ ಪವಿತ್ರ ಗ್ರಂಥ ಪಠಣಗಳೂ ಹಬ್ಬದ ವಿಶೇಷ ಪ್ರಾರ್ಥನೆಗಳೂ ಇರುತ್ತವೆ. ಚರ್ಚುಗಳಲ್ಲಿನ ಆ ಸಂಭ್ರಮದ ವಾತಾವರಣ ಭಾನುವಾರವೂ ಮುಂದುವರಿದು ಬಹುದಿನಗಳ ಕಾಲ ನೆಲೆಗೊಂಡಿರುತ್ತದೆ. ಇದನ್ನೇ ಈಸ್ಟರ‍್ ಸೀಸನ್ ಎನ್ನುತ್ತಾರೆ.