ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ

ಪರಿಸರ ಸಂರಕ್ಷಣೆಗಾಗಿ ಗಟ್ಟಿ ಕಸದ ನಿರ್ವಹಣೆ

ಬದಲಾಯಿಸಿ

ಗಟ್ಟಿ ಕಸ ಉತ್ಪತ್ತಿಯಾಗುವ ಸ್ಥಳದಲ್ಲಿಯೇ ಅದರ ವಸ್ತುಗಳ ವಿಂಗಡಣೆ ಯಾಗುವುದು ಅತ್ಯಂತ ಪ್ರಮುಖ ಅಂಶ. ಮನೆಯಲ್ಲಿಯೇ ಗಟ್ಟಿ ಕಸವನ್ನು ಜೈವಿಕ ಕಸ, ಪ್ಲಾಸ್ಟಿಕ್ ಹಾಗೂ ಇತರೆ ಕಸಗಳೆಂದು ಪ್ರತ್ಯೇಕಗೊಳಿಸುವ ಅಗತ್ಯವಿದೆ. ಆದ್ದರಿಂದ ನಗರಸಭೆ ಆಧಿಕಾರದವರು ಶ್ರೀಸಾಮಾನ್ಯರಲ್ಲಿ ಕಸ ವಿಂಗಡಣೆಯ ಪ್ರಾಮುಖ್ಯತೆಯನ್ನು ತಿಳಿಸಲು ಹಾಗೂ ಕೆಲವು ವಸ್ತುಗಳ ಪುನರ್ಬಳಕೆ ಹಾಗೂ ಪುನರ್‌ಉತ್ಪಾದನೆಯನ್ನು ಪ್ರೋತ್ಸಾಹಿಸಲು ಅರಿವಿನ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಕಸ ವಿಂಗಡಣೆಯಲ್ಲಿ ಜನ ಸಮುದಾಯ ಭಾಗವಹಿಸುವಂತೆ ಮಾಡಲು ನಗರಸಭೆಯವರು ಹಂತ ಹಂತದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಈ ಉದ್ದೇಶಕ್ಕಾಗಿ ನಗರಸಭೆ ಅಧಿಕಾರದವರು ಸ್ಥಳೀಯ ನಿವಾಸಿಗಳ ಸಂಘಗಳೊಡನೆ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೆ ತ್ರೈಮಾಸಿಕ ಸಭೆಗಳನ್ನು ಕ್ರಮಬದ್ಧವಾಗಿ ನಡೆಸಬೇಕು. ಪ್ರತಿ ಬೀದಿಯ ಮನೆಗಳಿಂದ ಪ್ರತ್ಯೇಕಗೊಂಡ ಕಸವನ್ನು ನಗರಸಭೆ ಸಂಗ್ರಹಿಸಬೇಕು.

ನಾಳೆ ರಜೆ ಮನೆಗೆ ಹೋಗಿ

ನಗರ ಗಟ್ಟಿ ಕಸದ ಸಂಗ್ರಹಣೆ

ಗಟ್ಟಿ ಕಸವನ್ನು ಒಂದೆಡೆ ಕೂಡಿಡಲು ನಗರಸಭೆ ಅಧಿಕಾರದವರು ಅಗತ್ಯವಿರುವ ಎಚ್ಚರಿಕೆ ವಹಿಸಿ ಸಂಗ್ರಹ ಮಾಡುವರು. ಅದರ ಸುತ್ತಮುತ್ತ ಯಾವುದೇ ಅನೈರ್ಮಲ್ಯ ಉಂಟಾಗದಂತೆ ನೋಡಿಕೊಳ್ಳಬೇಕು. ಕಸ ಸಂಗ್ರಹಣೆಗೆ ಸಿದ್ಧತೆ ಮಾಡಿಕೊಳ್ಳುವಾಗ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು.

1. ಆಯಾ ಪ್ರದೇಶದ ಗಟ್ಟಿ ಕಸ ಉತ್ಪಾದನೆಯ ಪ್ರಮಾಣ ಹಾಗೂ ಜನಸಂಖ್ಯಾ ಸಾಂದ್ರತೆಯನ್ನು ಗಮನಿಸಿ ಸೂಕ್ತವಾದ ಕಸ ಸಂಗ್ರಹಣೆಯ ವ್ಯವಸ್ಥೆಗೊಳಿಸಬೇಕು. ಬಳಕೆದಾರರಿಗೆ ಸಿಗುವಂತಹ ಸ್ಥಳದಲ್ಲಿ ಕಸದ ಸಂಗ್ರಹ ತೊಟ್ಟಿಗಳಿರಬೇಕು.

2. ನಗರಸಭೆ ಅಧಿಕಾರದವರು ಅಥವಾ ಯಾವುದೇ ಪ್ರತಿನಿಧಿಗಳು ಒದಗಿಸುವ ಕಸ ಸಂಗ್ರಹದ ತೊಟ್ಟಿಗಳು ತೆರೆದ ಬಾಯಿ ಹೊಂದಿರಬಾರದು. ಕಸವು ಗಾಳಿಗೆ ತೆರೆದಿರಬಾರದು. ಅಲ್ಲದೆ ನೋಡಲು ಅಂದವಾಗಿರಬೇಕು ಹಾಗೂ ಬಳಕೆದಾರರಿಗೆ ಅನುಕೂಲಕರವಾಗಿರಬೇಕು.

ಸಂಗ್ರಹ ಅನುಕೂಲಗಳು ಅಥವಾ ಕಸದ ತೊಟ್ಟಿಗಳು ‘ಸುಲಭವಾಗಿ’ ಬಳಕೆಗೆ ಬರುವಂತಿರಬೇಕು. ಅವುಗಳನ್ನು ಬಳಸುವುದಕ್ಕೆ, ಸಾಗಿಸುವುದಕ್ಕೆ ಹಾಗೂ ವರ್ಗಾಯಿಸುವುದಕ್ಕೆ ಸುಲಭವಿರುವಂತೆ ವಿನ್ಯಾಸಗೊಳಿಸಿರಬೇಕು. ಜೈವಿಕ ವಿಘಟನೆ ಹೊಂದುವ ಕಸವನ್ನು ತುಂಬುವ ತೊಟ್ಟಿಗಳಿಗೆ ಹಸಿರು ಬಣ್ಣ ಹಚ್ಚಿರಬೇಕು. ಪುನರ್ಬಳಕೆ ಮಾಡಬಹುದಾದ ಕಸವನ್ನು ತುಂಬುವ ತೊಟ್ಟಿಗಳಿಗೆ ಬಿಳಿಯ ಬಣ್ಣ ಹಚ್ಚಿರಬೇಕು. ಹಾಗೂ ಇನ್ನುಳಿದ ಕಸವನ್ನು ತುಂಬಲು ಬಳಸುವ ತೊಟ್ಟಿಗಳಿಗೆ ಕಪ್ಪು ಬಣ್ಣ ಹಚ್ಚಿರಬೇಕು.

ಕಸವನ್ನು ಬರಿಗೈಗಳಿಂದ ಮುಟ್ಟುವುದನ್ನು ನಿಷೇಧಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಕಾರ್ಮಿಕರ ಸುರಕ್ಷತೆಗೆ ಬೇಕಾದ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಕೈಗಳಿಂದ ಕಸವನ್ನು ಮುಟ್ಟಬಹುದು.

ನಗರದ ಗಟ್ಟಿ ಕಸ ಸಂಸ್ಕರಣೆ

ಬದಲಾಯಿಸಿ

ನಗರಸಭೆ ಅಧಿಕಾರವು ಮಣ್ಣಿನ ಕೊರಕಲುಗಳಿಗೆ ಗಟ್ಟಿ ಕಸವನ್ನು ತುಂಬಲು ಆದಷ್ಟು ಕಡಿಮೆ ಮಾಡಲು ಅಗತ್ಯವಾದ ತಂತ್ರಜ್ಞಾನವನ್ನು ಅಥವಾ ಹಲವು ವಿಧಾನಗಳ ಸಂಯೋಜನೆಯನ್ನು ಬಳಸಿಕೊಳ್ಳಬೇಕು. ಉದಾಹರಣೆಗೆ :

  • ಜೈವಿಕವಾಗಿ ವಿಘಟನೆ ಹೊಂದುವ ಕಸವನ್ನು ಕಾಂಪೋಸ್ಟೀಕರಣ ವಿಧಾನದಿಂದ ಗೊಬ್ಬರ ತಯಾರಿಸಬಹುದು ಅಥವಾ ಎರೆಹುಳು ಕೃಷಿಯಿಂದ ಎರೆಹುಳು ಗೊಬ್ಬರ ತಯಾರಿಸಬಹುದು ಅಥವಾ ಮತ್ತಾವುದೇ ಯುಕ್ತವಾದ ಜೈವಿಕ-ಕ್ರಿಯೆಯಿಂದ ಕಸವನ್ನು ಸ್ಥಿರೀಕರಿಸಬಹುದು.
  • ಯೋಗ್ಯವಾದ ವಸ್ತುಗಳನ್ನು ಪುನರ್ಬಳಕೆಗೆ ನೀಡಬೇಕು.
  • ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಕೆಲವು ಕಸಗಳನ್ನು ದಹನ ಮಾಡಿ ಶಕ್ತಿ ಪಡೆಯಬಹುದು ಅಥವಾ ಹಾಗೆಯೇ ಸುಟ್ಟು ಹಾಕಬಹುದು.
  • ಮತ್ತಾವುದೇ ಸೂಕ್ತ ತಂತ್ರಜ್ಞಾನವನ್ನು ಬಳಸಲು ಹಾಗೂ ಯುಕ್ತ ವಿಧಿ ವಿಧಾನಗಳನ್ನು ಅನುಸರಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಸಂಪರ್ಕಿಸಿ ಅನುಮತಿ ಪಡೆಯಬಹುದು.

ನಗರ ಗಟ್ಟಿ ಕಸ ವಿಲೇವಾರಿ

ಬದಲಾಯಿಸಿ

ಪುನರ್ಬಳಕೆ ಮಾಡಲು ಸಾಧ್ಯವಿಲ್ಲದ ಹಾಗೂ ಜೈವಿಕ ವಿಘಟನೆಗೆ ಒಳಪಡದ ಗಟ್ಟಿ ಕಸವನ್ನು ಕೊರಕಲು, ಗುಂಡಿಗಳನ್ನು ತುಂಬಲು ಸೀಮಿತಗೊಳಿಸಬೇಕು. ಸಂಸ್ಕರಣೆಯ ಪೂರ್ವದಲ್ಲಿ ಬೇರ್ಪಡಿಸಿದ ಹಾಗೂ ಅನಂತರ ಉಳಿದ ಗಟ್ಟಿ ಕಸವನ್ನು ಗುಂಡಿಗಳನ್ನು ತುಂಬಲು ಬಳಸಬಹುದು. ಮಿಶ್ರವಾಗಿರುವ ತ್ಯಾಜ್ಯವನ್ನು ಗುಂಡಿ ತುಂಬಲು ಬಳಸಬಾರದು. ಕಸ ಸಂಸ್ಕರಣೆಗೆ ಸಾಧ್ಯವೇ ಇಲ್ಲ ಎನ್ನುವಂತಹ ಗಟ್ಟಿ ಕಸವನ್ನು ಗುಂಡಿ ತುಂಬಲು ಬಳಸಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಅಥವಾ ಪರ್ಯಾಯ ಅನುಕೂಲಗಳು ಇಲ್ಲದಿರುವ ಸಂದರ್ಭಗಳಲ್ಲಿ ಸೂಕ್ತ ಕ್ರಮಗಳನ್ನು ಅನುಸರಿಸಿ ಗಟ್ಟಿ ಕಸವನ್ನು ಗುಂಡಿ ತುಂಬಲು ಬಳಸಬಹುದು

ಜೈವಿಕವಾಗಿ ವಿಘಟನೆಯಾಗದ ಗಟ್ಟಿ ಕಸದ ನಿರ್ವಹಣೆ

ಬದಲಾಯಿಸಿ

ಜೈವಿಕವಾಗಿ ವಿಘಟನೆಯಾಗದ ಕಸದಲ್ಲಿ ಆಸ್ಬೆಸ್ಟಾಸ್‌ನಿಂದ ಜಿಂಕ್ ಬ್ಯಾಟರಿಗಳವರೆಗೆ ವಿವಿಧ ವಸ್ತುಗಳಿರುತ್ತವೆ. ಪಾಲಿಥೀನ್ ಹಾಗೂ ಅದರ ಸಂಬಂಧಿತ ವಸ್ತುಗಳು ನಗರದ ಗಟ್ಟಿ ಕಸದಲ್ಲಿ ಹೇರಳವಾಗಿ ದೊರೆಯುತ್ತವೆ. ಇಂತಹ ಕಸದ ಅನೇಕ ವಸ್ತುಗಳನ್ನು ಭೂಮಿ, ನೀರು ಹಾಗೂ ವಾಯುಮಂಡಲಕ್ಕೆ ಬಿಡುಗಡೆ ಮಾಡಿದರೆ ಗಮನಾರ್ಹ ಪರಿಸರ ಸಮಸ್ಯೆಗಳನ್ನು ಉಂಟು ಮಾಡುತ್ತವೆ.

ಎರೆಹುಳ ಕೃಷಿ

ಬದಲಾಯಿಸಿ

ಜೈವಿಕ ಕಸವನ್ನು ರಸವನ್ನಾಗಿ ಪರಿವರ್ತಿಸುವ ಅತ್ಯುತ್ತಮ ಮಾರ್ಗವೇ ಎರೆಹುಳ ಕೃಸಿ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿನ ಪ್ರಾಧ್ಯಾಪಕರಾದ ಡಾ. ರಾಧಾ ಕಾಳೆಯವರು ಎರೆಹುಳುಗಳ ಕೃಷಿ ವಿಧಾನವನ್ನು ಕಂಡುಹಿಡಿದಿದ್ದಾರೆ. ಎಲ್ಲ ರೀತಿಯ ಜೈವಿಕ ವಸ್ತುಗಳನ್ನು ತಿಂದು ಉತ್ತಮವಾದ ಎರೆಗೊಬ್ಬರ ತಯಾರಿಸುವ ಎರೆಹುಳುಗಳ ವಿವಿಧ ಜಾತಿಗಳಿವೆ. ಯೂಡ್ರಿಲಸ್, ಯೂಜಿನಿಯೆ, ಐಸೀನಿಯ ಫೀಟಿಡೆ ಮತ್ತು ಪೆರಿಯಾನಿಕ್ಸ್ ಎಕ್ಸ್‌ವೇಟಸ್ ಎಂಬ ಹೆಸರಿನ ಎರೆಹುಳಗಳು ತುಂಬ ಉಪಯುಕ್ತವಾದವು.

ಗೃಹ, ಸಮುದಾಯ ಹಾಗೂ ನಗರಸಭಾ ಮಟ್ಟದಲ್ಲಿ ಎರೆಹುಳ ಕೃಷಿ ಮಾಡಬಹುದು. ಗೃಹಮಟ್ಟದಲ್ಲಾದರೆ 1x1x0.3 ಮೀಟರ್ ಅಳತೆ ಸಿಮೆಂಟಿನ ತೊಟ್ಟಿ ಅಥವಾ ಪ್ಲಾಸ್ಟಿಕ್ ತೊಟ್ಟಿಗಳಲ್ಲಿ ಸುಮಾರು ೨೦೦೦ ಎರೆಹುಳಗಳನ್ನು ಸಾಕಬಹುದು. ಎರೆಹುಳುಗಳಿರುವ ತೊಟ್ಟಿಯು ನೇರವಾಗಿ ಬಿಸಿಲು ಅಥವಾ ಮಳೆ ಬೀಳದಿರುವ ಸ್ಥಳದಲ್ಲಿರಬೇಕು. ತೊಟ್ಟಿಯ ಬಾಯಿಯನ್ನು ಜಾಲರಿಯಿರುವ ಮುಚ್ಚಳದಿಂದ ಮುಚ್ಚಬೇಕು. ಇದರಿಂದ ಎರೆಹುಳುಗಳನ್ನು ಇಲಿ, ಹೆಗ್ಗಣ, ಮುಂತಾದ ಪರಭಕ್ಷಕ ಜೀವಿಗಳಿಂದ ರಕ್ಷಿಸಲು ಸಾಧ್ಯ. ತೊಟ್ಟಿಯ ತಳಭಾಗದಲ್ಲಿ ತೆಂಗಿನ ನಾರು ಮತ್ತು ಮರದ ಹೊಟ್ಟಿನಂತಹ ವಸ್ತುಗಳನ್ನು ಹರಡಬೇಕು. ಅದರ ಮೇಲೆ, ದನ, ಕುದುರೆ, ಕೋಳಿ ಮುಂತಾದ ಸಾಕುಪ್ರಾಣಿಗಳ ಸಗಣಿಯನ್ನು ಅಡುಗೆಮನೆಯ ಕಸದೊಂದಿಗೆ ಬೆರೆಸಬೇಕು. ಈ ಮಿಶ್ರಣವು ಎರೆಹುಳಗಳಿಗೆ ಉತ್ತಮ ಆಹಾರವಾಗುವುದು. ದಿನದ ಎಲ್ಲ ಕಾಲದಲ್ಲಿಯೂ ಈ ಮಿಶ್ರಣವನ್ನು ತಿನ್ನುವ ಎರೆಹುಳುಗಳು ಆಹಾರದ ಶೇ. ೫-೧೦ರಷ್ಟನ್ನು ಮಾತ್ರ ಜೀರ್ಣಿಸಿಕೊಂಡು ಉಳಿದದ್ದನ್ನು ಹಿಕ್ಕೆಗಳ ರೂಪದಲ್ಲಿ ವಿಸರ್ಜಿಸುತ್ತದೆ. ನಾವು ಹಾಕಿದ ಆಹಾರದ ಮಿಶ್ರಣವೆಲ್ಲ ಹಿಕ್ಕೆಯಾದ ನಂತರ ಅದನ್ನು ಶಂಕಾಕೃತಿಯಲ್ಲಿ ರಾಶಿ ಹಾಕಬೇಕು. ೨೪ ಗಂಟೆಗಳಲ್ಲಿ ಎರೆಹುಳುಗಳು ರಾಶಿಯ ತಳಭಾಗಕ್ಕೆ ಸೇರುತ್ತವೆ. ಹುಳವಿಲ್ಲದ ಭಾಗವನ್ನು ಪ್ರತ್ಯೇಕಿಸಿ ಗಾಳಿಯಲ್ಲಿ ಒಣಗಲು ಬಿಡಬೇಕು. ಅನಂತರ ಆ ಗೊಬ್ಬರವನ್ನು ೩ ಮಿ.ಮೀ. ಅಳತೆಯ ಜರಡಿಯನ್ನು ಬಳಸಿಕೊಂಡು ಸೋಸಬೇಕು. ಗೊಬ್ಬರದಲ್ಲಿರಬಹುದಾದ ಹುಳು ಮತ್ತು ಮೊಟ್ಟೆಗಳನ್ನು ಈ ವಿಧಾನದಿಂದ ಬೇರ್ಪಡಿಸುವುದು ಸುಲಭ. ಈಗ ಜರಡಿಯಿಂದ ಕೆಳಗೆ ಬಂದ ಗೊಬ್ಬರವನ್ನು ಚೀಲಗಳಲ್ಲಿ ಹಾಕಿಡಬೇಕು. ಈ ಗೊಬ್ಬರವನ್ನು ಕಾಂಪೋಸ್ಟ್ ಮತ್ತು ಸಾವಯವ ಗೊಬ್ಬರದಂತೆ ತೋಟದ ಬೆಳೆಗಳಿಗೆ, ಮನೆಯಂಗಳದ ಗಿಡಗಳಿಗೆ ಹಾಗೂ ತರಕಾರಿ ಬೆಳೆಯಲು ಬಳಸಬಹುದು. ನಗರಸಭೆ ಅಥವಾ ನಿಗಮಗಳಲ್ಲಿ ಎರೆಹುಳದ ಗೊಬ್ಬರ ಟನ್‌ಗಟ್ಟಲೆ ತಯಾರಾಗುವುದರಿಂದ ಇದನ್ನು ರೈತರಿಗೆ ಮಾರಾಟ ಮಾಡುತ್ತಾರೆ.

ಎರೆಹುಳುಗೊಬ್ಬರದಲ್ಲಿ ೧೬% ಸಾರಜನಕ, ೨% ರಂಜಕ ಮತ್ತು ೦.೦೬೭% ಪೊಟ್ಯಾಸಿಯಂ ಅಂಶಗಳಿದ್ದು ಅತ್ಯಂತ ಉಪಯುಕ್ತವಾದುದಾಗಿರುವುದು. ಇದನ್ನು ಬೆಳೆಗಳಿಗೆ ಹಾಕುವುದರಿಂದ

  1. ಮಣ್ಣಿನ ಫಲವತ್ತತೆ ಹೆಚ್ಚುವುದು.
  2. ನೀರನ್ನು ಮಣ್ಣು ಹಿಡಿದಿಟ್ಟುಕೊಳ್ಳುವ ಪ್ರಮಾಣ ಹೆಚ್ಚುವುದು.
  3. ಮಣ್ಣಿನಲ್ಲಿ ಗಾಳಿಯ ಸಂಚಲನಕ್ಕೆ ಹೆಚ್ಚಿನ ಅವಕಾಶ ಉಂಟಾಗುವುದು.
  4. ಬೆಳೆಗಳ ಗುಣಮಟ್ಟ ಉತ್ತಮವಾಗಿ ಹೆಚ್ಚಿನ ಬೆಲೆ ದೊರಕುವುದು.
  5. ರಸಾಯನಿಕ ಗೊಬ್ಬರ ಬಳಕೆ ಅನಗತ್ಯ ಅಥವಾ ಕಡಿಮೆಯಾಗುವುದರಿಂದ ರೈತರಿಗೆ ಹಣ ಉಳಿತಾಯವಾಗುವುದು.
  6. ಕಸದ ಪ್ರಮಾಣವನ್ನು ಅನುಸರಿಸಿ ವಿವಿಧ ಅಳತೆಯ ತೊಟ್ಟಿಗಳನ್ನು ಬಳಸಬೇಕಾಗುವುದು.

ಗಟ್ಟಿ ಕಸ ನಿರ್ವಹಣೆಗೆ ಕಾನೂನು ಸಹಾಯವಿದೆಯೇ ?

ಬದಲಾಯಿಸಿ

ಭಾರತದಲ್ಲಿ ಗಟ್ಟಿ ಕಸ ನಿರ್ವಹಣೆ ಹಾಗೂ ನಿಯಂತ್ರಣಕ್ಕೆ ಅಗತ್ಯವಾದ ಕಾನೂನುಗಳನ್ನು ರಚಿಸಲಾಗಿದೆ. ಸಾರ್ವಜನಿಕ ಆರೋಗ್ಯ ಹದಗೆಡಿಸುವ, ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಗಟ್ಟಿ ಕಸದ ವಿಲೇವಾರಿಗೆ ಸಂಬಂಧಿಸಿ ನಿಯಮಗಳು, ಕಾನೂನುಗಳು ಸಾಕಷ್ಟಿವೆ. ಉದಾಹರಣೆಗೆ :

  1. ಟಾರ್ಟ್ ಕಾನೂನು (ಲಾ ಆಫ್ ಟಾರ್ಟ್ಸ್)
  2. ಇಂಡಿಯನ್ ಪೀನಲ್ ಕೋಡ್, ೧೮೬೦
  3. ಕೋಡ್ ಆಫ್ ಸಿವಿಲ್ ಪ್ರೊಸೀಜರ್, ೧೯೦೮
  4. ಭಾರತದ ಸಂವಿಧಾನ, ೧೯೫೦
  5. ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್, ೧೯೭೩
  6. ಜಲ (ಮಾಲಿನ್ಯ ನಿವಾರಣೆ ಹಾಗೂ ನಿಯಂತ್ರಣ) ಕಾಯಿದೆ, ೧೯೭೪
  7. ವಾಯು (ಮಾಲಿನ್ಯ ನಿವಾರಣೆ ಹಾಗು ನಿಯಂತ್ರಣ) ಕಾಯಿದೆ, ೧೯೮೧
  8. ಪರಿಸರ ರಕ್ಷಣಾ ಕಾಯಿದೆ, ೧೯೮೬
  9. ಅಪಾಯಕಾರಿ ಕಸದ (ಕೈಬಳಕೆ ಹಾಗೂ ನಿರ್ವಹಣೆ) ನಿಯಮಗಳು, ೧೯೮೯
  10. ಕಡಲತೀರ ನಿಯಂತ್ರಣ ಪ್ರದೇಶ ಗೊತ್ತುವಳಿ, ೧೯೯೧
  11. ಜೈವಿಕ ಔಷಧೀಯ ಕಸದ (ಕೈಬಳಕೆ ಹಾಗೂ ನಿರ್ವಹಣೆ) ನಿಯಮಗಳು, ೧೯೯೮
  12. ಪುನರ್ಬಳಕೆ ಪ್ಲಾಸ್ಟಿಕ್ (ಉತ್ಪಾದನೆ ಹಾಗೂ ಬಳಕೆ) ನಿಯಮಗಳು, ೧೯೯೯
  13. ನಗರ ಕಸ (ಕೈಬಳಕೆ ಹಾಗೂ ನಿರ್ವಹಣೆ) ನಿಯಮಗಳು, ೨೦೦೦

ನಮ್ಮ ದೇಶದ ಸಂವಿಧಾನದ ೨೧ನೇ ಪರಿಚ್ಛೇದದ ಪ್ರಕಾರ ಪ್ರತಿಯೊಬ್ಬ ನಾಗರೀಕನು ನಿರ್ಮಲವಾದ ಹಾಗೂ ಆರೋಗ್ಯಕರ ಪರಿಸರದಲ್ಲಿ ಜೀವಿಸುವ ಮೂಲಭೂತ ಹಕ್ಕನ್ನು ಹೊಂದಿದ್ದಾನೆ. ಅಲ್ಲದೆ ಭಾರತದಲ್ಲಿರುವ ವಿವಿಧ ಕಾನೂನುಗಳಾದ ಲಾ ಆಫ್ ಟಾರ್ಟ್ಸ್, ಇಂಡಿಯನ್ ಪೀನಲ್ ಕೋಡ್, ಸಿವಿಲ್ ಪ್ರೊಸೀಜರ್ ಕೋಡ್ ಹಾಗೂ ಕ್ರಿಮಿನಲ್ ಪ್ರೊಸಿಜರ್ ಕೋಡ್‌ಗಳ ಅನ್ವಯ ಭಾರತೀಯ ಪ್ರಜೆಗೆ ಉತ್ತಮ ಪರಿಸರ ಹೊಂದುವ ಹಕ್ಕಿದೆ. ಭಾರತದ ಸಂವಿಧಾನದ ಪರಿಚ್ಛೇದ ೫೧-ಎ(ಜಿ)ಯ ಪ್ರಕಾರ ಪರಿಸರವನ್ನು ರಕ್ಷಿಸುವುದು ಹಾಗೂ ಉತ್ತಮ ಪಡಿಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಮೂಲಭೂತ ಕರ್ತವ್ಯ. ಸಂವಿಧಾನದ ಪರಿಚ್ಛೇದ ೪೮ ಎ ಪ್ರಕಾರ ಪರಿಸರವನ್ನು ರಕ್ಷಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಅಲ್ಲದೆ ಆರೋಗ್ಯಕರ ಪರಿಸರದಲ್ಲಿ ಜೀವಿಸುವುದು ಮಾನವನ ಮೂಲಭೂತ ಹಕ್ಕು. ಮಾನವ ಹಕ್ಕುಗಳ ವಿಶ್ವ ನಿರ್ಣಯ ೧೯೪೮ರ ಮೂರನೇ ಪರಿಚ್ಛೇದದಂತೆ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ೨೫ನೇ ವಿಧಿಯ ಅನುಸಾರ ಉತ್ತಮ ಆರೋಗ್ಯದ ಜೀವನಮಟ್ಟ ಹೊಂದುವ ಹಾಗೂ ತಾನು ಮತ್ತು ತನ್ನ ಕುಟುಂಬದವರು ಕ್ಷೇಮವಾಗಿ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಿದ್ದಾನೆ.

ಪರಿಸರ ರಕ್ಷಣಾ ಕಾಯ್ದೆ, ೧೯೮೬ರ ವಿಭಾಗ ೩, ೬ ಮತ್ತು ೨೫ರ ಅನ್ವಯದಂತೆ ಕೇಂದ್ರ ಸರ್ಕಾರದ ಅರಣ್ಯ ಹಾಗೂ ಪರಿಸರ ಸಚಿವಾಲಯವು ‘ನಗರದ ಕಸ ನಿರ್ವಹಣೆ ಹಾಗೂ ಕೈಬಳಕೆ ನಿಯಮಗಳು ೨೦೦೦’ ಎಂಬ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಕಾನೂನುಗಳ ಪ್ರಕಾರ ನಗರದ ಗಟ್ಟಿ ಕಸದ ಸಂಗ್ರಹಣೆ, ವಿಂಗಡಣೆ, ದಾಸ್ತಾನು, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿಯು ಪ್ರತಿ ನಗರಸಭೆ ಆಡಳಿತದ ಜವಾಬ್ದಾರಿಯಾಗಿದೆ.

ನಗರದ ಗಟ್ಟಿಕಸ ನಿರ್ವಹಣೆ ಕಾನೂನುಗಳು ೨೦೦೦ರ ಪ್ರಕಾರ ದೇಶದ ಎಲ್ಲ ನಗರ ಆಡಳಿತಗಳು ನಗರದ ಕಸದ ಕಾಂಪೋಸ್ಟಿಂಗ್ ಮಾಡುವುದು ನ್ಯಾಯಯುತ ಅಗತ್ಯವಾಗಿದೆ. ಈ ಕಾನೂನುಗಳ ಪ್ರಕಾರ, “ಜೈವಿಕ ವಿಘಟನೆಯಾಗಬಲ್ಲ ಕಸವನ್ನು ಕಾಂಪೋಸ್ಟಿಗೆ, ಎರೆಹುಳು ಕೃಷಿಗೆ, ಅವಾಯು ಅರಗುವಿಕೆಗೆ ಅಥವಾ ಮತ್ತಾವುದೇ ಸೂಕ್ತ ಜೈವಿಕ ಕ್ರಿಯೆಗಳಿಗೆ ಒಳಪಡಿಸಿ ಕಸವನ್ನು ಸ್ಥಿರೀಕರಿಸಬೇಕು. ಕಸದ ಸಂಸ್ಕರಣೆಗೆ ಹಾಗೂ ವಿಲೇವಾರಿಗೆ ಸೂಕ್ತ ಕ್ರಮವನ್ನು ೨೦೦೩ರ ಡಿಸೆಂಬರ್ ೩೧ರೊಳಗೆ ಕೈಗೊಳ್ಳಬೇಕು” ಎಂದು ಅಂತಿಮ ಗಡುವನ್ನು ನಿಗದಿಪಡಿಸಲಾಗಿದೆ.

ಪ್ರತಿ ನಗರದ ಆಡಳಿತವು ತನ್ನ ಗಡಿ ಪ್ರದೇಶದೊಳಗೆ ಈ ಕಾನೂನುಗಳನ್ನು ಜಾರಿಗೊಳಿಸಬೇಕು. ಗಟ್ಟಿ ಕಸದ ಸಂಗ್ರಹಣೆ, ದಾಸ್ತಾನು, ವಿಂಗಡಣೆ, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿಗೆ ಅಗತ್ಯವಾದ ಅನುಕೂಲಗಳನ್ನು ಒದಗಿಸಿಕೊಳ್ಳುವುದು ನಗರ ಆಡಳಿತದ ಜವಾಬ್ದಾರಿಯಾಗಿದೆ.

ಪರಿಸರ ರಕ್ಷಣಾ ಕಾಯ್ದೆ ೧೯೮೬ರ ಅಧಿನಿಯಮ ೬, ೮ ಮತ್ತು ೨೫ರ ಅನ್ವಯದಂತೆ ಕೇಂದ್ರ ಸರ್ಕಾರವು ಹಲವು ಕಾನೂನು, ಗೊತ್ತುವಳಿ ಹಾಗೂ ಆದೇಶಗಳನ್ನು ಹೊರಡಿಸಿದೆ. ಜೈವಿಕ-ಔಷಧೀಯ ಕಸ (ನಿರ್ವಹಣೆ ಹಾಗೂ ಕೈಬಳಕೆ) ನಿಯಮಗಳು ೧೯೯೮ ಸಹ ಕೇಂದ್ರ ಸರ್ಕಾರ ಹೊರಡಿಸಿರುವ ಕಾನೂನಾಗಿದೆ.

ಪುನರುತ್ಪಾದಿಸಿದ ಪ್ಲಾಸ್ಟಿಕ್ (ಉತ್ಪಾದನೆ ಹಾಗೂ ಬಳಕೆ) ನಿಯಮಗಳು, ೧೯೯೯

ಬದಲಾಯಿಸಿ
  • ಪುನರುತ್ಪಾದಿಸಿದ ಪ್ಲಾಸ್ಟಿಕಿನಿಂದ ತಯಾರಿಸಿದ ಪ್ಲಾಸ್ಟಿಕ್ ಕೈಚೀಲ, ಪಾತ್ರೆಗಳನ್ನು ದಾಸ್ತಾನು ಮಾಡಲು, ಸಾಗಿಸಲು, ಚಿಕಿತ್ಸೆಗೆ ಬಳಸಲು ಅಥವಾ ಆಹಾರದ ವಸ್ತುಗಳನ್ನು ಕಟ್ಟಿಡಲು ಬಳಸುವುದನ್ನು ನಿಷೇಧಿಸಲಾಗಿದೆ.
  • ಪುನರುತ್ಪಾದಿಸಿದ ಪ್ಲಾಸ್ಟಿಕ್‌ನಿಂದ ತಯಾರಿಸಿದ ಕೈಚೀಲಗಳ ದಪ್ಪವು ೨೦ ಮೈಕ್ರಾನುಗಳಿಗಿಂತ ಕಡಿಮೆಯಿರಬಾರದು.
  • ಕೈಚೀಲಗಳು ಸಹಜವಾದ ರೂಪ ಅಥವಾ ಬಿಳಿಯ ಬಣ್ಣದಲ್ಲಿರಬೇಕೆಂದು ಪ್ಲಾಸ್ಟಿಕ್ ಕೈಚೀಲದ ಉತ್ಪಾದಕರಿಗೆ ನಿರ್ದೇಶನ ನೀಡುತ್ತದೆ.
  • ಭಾರತೀಯ ಗುಣಮಟ್ಟದ ಸಂಸ್ಥೆಯು ನಿರ್ಧರಿಸಿರುವ ಮಾರ್ಗಸೂಚಿಗೆ ಅನುಸಾರವಾಗಿ ಮಾತ್ರ ಪ್ಲಾಸ್ಟಿಕ್ ಪುನರುತ್ಪಾದನೆ ಮಾಡಬೇಕು. ಪುನರುತ್ಪಾದಿಸಿದ ಪ್ಲಾಸ್ಟಿಕ್ ಕೈಚೀಲಗಳ ಮೇಲೆ ‘ಪುನರುತ್ಪಾದಿಸಿದ' ಎಂದು ನಮೂದಿಸಬೇಕು.

ಪ್ಲಾಸ್ಟಿಕ್ ಉತ್ಪಾದಿಸುವವರ ಸಂಘವು ತನ್ನ ಸದಸ್ಯರಲ್ಲಿ ಚರ್ಚಿಸಿ ಸ್ವಯಂ ನಿಯಂತ್ರಣಾ ಶಿಸ್ತನ್ನು ಪಾಲಿಸಲು ಪ್ರೋತ್ಸಾಹಿಸಬೇಕೆಂದು ಈ ಕಾಯ್ದೆಯ ಗೊತ್ತುವಳಿ ತಿಳಿಯಪಡಿಸುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯು ಮೇಲಿನ ಕಾನೂನುಗಳನ್ನು ಅನ್ವಯಿಸುವ ಹಾಗೂ ನಿಯಂತ್ರಿಸುವ ಅಧಿಕಾರ ಹೊಂದಿದೆ.

ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಗಟ್ಟಿ ಕಸ ನಿರ್ವಹಣೆ ಕಾನೂನುಗಳ ಜಾರಿಯಾಗುವುದನ್ನು ನೋಡಿಕೊಳ್ಳುವ ಪೂರ್ಣ ಜವಾಬ್ದಾರಿ ಹೊಂದಿರುತ್ತಾರೆ.

ಜಿಲ್ಲಾಧಿಕಾರಿ ಅಥವಾ ಜಿಲ್ಲಾ ದಂಡಾಧಿಕಾರಿಯು ತನ್ನ ಆಡಳಿತದ ಗಡಿಯೊಳಗಿನ ಪಟ್ಟಣ, ನಗರಗಳಲ್ಲಿ ಗಟ್ಟಿ ಕಸ ನಿರ್ವಹಣೆಯ ಕಾನೂನುಗಳ ಜಾರಿಯನ್ನು ನೋಡಿಕೊಳ್ಳಬೇಕು. ಈಗಾಗಲೇ ನಮ್ಮ ರಾಜ್ಯದ ಅನೇಕ ನಗರಗಳಲ್ಲಿ ಗಟ್ಟಿ ಕಸ ನಿರ್ವಹಣೆ ವಿವಿಧ ಹಂತಗಳಲ್ಲಿ ಜಾರಿಯಾಗುತ್ತಿದೆ.

ಉಲ್ಲೇಖ

ಬದಲಾಯಿಸಿ

??