ಕನ್ನಡದದ್ದೇ ಆದ ವೈಶಿಷ್ಟ್ಯಪೂರ್ಣ ಸಂಗೀತ ಪಪರೆಯಾದ ಸುಗಮ ಸಂಗೀತದ ಪ್ರಮುಖ ಪ್ರವರ್ತಕರಲ್ಲಿ ಪದ್ಮಚರಣ್ (ಏಪ್ರಿಲ್ ೨೧, ೧೯೨೦ - ಜುಲೈ ೨೨ ೨೦೦೨) ಒಬ್ಬರು. ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಚೇರಿಗಳ ಮೂಲಕ ಸಂಗೀತ ಮತ್ತು ಸುಗಮ ಸಂಗೀತಕ್ಕೆ ವಿಶಾಲ ವ್ಯಾಪ್ತಿಯನ್ನು ತಂದುಕೊಟ್ಟವರಲ್ಲಿ ಪದ್ಮಚರಣ್ ಪ್ರಮುಖರು. ಪದ್ಮಚರಣ್ ಅವರ ಮೂಲ ಹೆಸರು ಎ. ವಿ. ಕೃಷ್ಣಮಾಚಾರ್ಯ. ಆಕಾಶವಾಣಿಯಲ್ಲಿ ಪ್ರಸಿದ್ಧ ಸಂಗೀತನಿರ್ದೇಶಕರಾಗಿದ್ದ ಅವರು ತಮಗೆ 'ಪದ್ಮಚರಣ್' ಎಂಬ ಕಾವ್ಯನಾಮವನ್ನಿರಿಸಿಕೊಂಡು ಆ ಹೆಸರಿನಿಂದಲೇ ನಾಡಿನಲ್ಲಿ ಪ್ರಖ್ಯಾತರಾದರು.

ಪದ್ಮಚರಣ್
ಜನನ
ಎ. ವಿ. ಕೃಷ್ಣಮಾಚಾರ್ಯ

ಏಪ್ರಿಲ್ ೨೧, ೧೯೨೦
ಮರಣಜುಲೈ ೨೨, ೨೦೦೨
ಉದ್ಯೋಗಸಂಗೀತ ನಿರ್ದೇಶಕರು

ಜೀವನಸಂಪಾದಿಸಿ

ಎ.ವಿ. ಕೃಷ್ಣಮಾಚಾರ್ಯರ ಸಂಪೂರ್ಣ ಹೆಸರು ಆಸೂರಿ ವೆಂಕಟಕೃಷ್ಣಮಾಚಾರ್ ಎಂದು. ಇವರ ತಂದೆ ಆಸೂರಿ ವೀರಾಘವಾಚಾರ್ಯಲು. ತಾಯಿ ಜಾನಕಮ್ಮನವರು. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲ್ಲೂಕಿನ ಬಡಿಕಾಯಲಪಲ್ಲೆ ಗ್ರಾಮದ “ಗುತ್ತಿ” ಎಂಬ ಊರಿನಲ್ಲಿ ಸಾವಿರದ ಒಂಬೈನೂರ ಇಪ್ಪತ್ತರ ಇಸವಿ ಏಪ್ರಿಲ್‌ ಇಪ್ಪತ್ತೊಂದರಂದು (೨೧.೪.೧೯೨೦) ಕೃಷ್ಣಮಾಚಾರ್ಯರು ಹುಟ್ಟಿದ್ದು. ಇವರ ತಾಯಿಗೆ ಸೊಗಸಾದ ಮಧುರ ಕಂಠದ ಜೊತೆಗೆ ಸಂಗೀತದಲ್ಲಿ ಸಾಕಷ್ಟು ಒಲವು, ಆಸಕ್ತಿ, ಅಭಿರುಚಿ ಇತ್ತು. ಅವರ ತಂಗಿಯರಾದ ರಂಗನಾಯಕಿ, ಕಾಂತಿ ಹೀಗೆ ಮನೆಯಲ್ಲಿ ಎಲ್ಲರೂ ಸೊಗಸಾಗಿ ಹಾಡುತ್ತಿದ್ದರು. ಆದರೆ ಅವರಲ್ಲಿ ಯಾರೂ ಸಂಗೀತವನ್ನು ಬಾಳಬುತ್ತಿಯಾಗಿ ತೆಗೆದುಕೊಳ್ಳಲಿಲ್ಲ. ಕೃಷ್ಣಮಾಚಾರ್ಯರೊಬ್ಬರಿಗೆ ಮಾತ್ರ ಸಂಗೀತ ಜೀವನದ ನಂಟಾಯಿತು. ಬಾಳ ಉಸಿರಾಯಿತು. ಇವರ ತಮ್ಮ ಭಾಷ್ಯಂ ಆಗ ಬೊಂಬಾಯಿಯಲ್ಲಿ “ಡಾಕ್ಯುಮೆಂಟರಿ ಫಿಲಮ್ಸ್‌”ನಲ್ಲಿ ಕೆಲಸಮಾಡುತ್ತಿದ್ದರು.

ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಅಪಾರ ಒಲವಿದ್ದುದರಿಂದ ತಾಯಿ ಜಾನಕಮ್ಮ ಹಾಡುತ್ತಿದ್ದ ಹಾಡುಗಳನ್ನೆಲ್ಲಾ ಕೇಳಿ ಕೇಳಿ ಮನನ ಮಾಡಿಕೊಳ್ಳುತ್ತಿದ್ದರು. ಅವರ ಎದೆಯಾಳದಲ್ಲಿ ಆ ಹಾಡುಗಳೆಲ್ಲ ಅಚ್ಚೊತ್ತಿದ್ದಿತ್ತು. ನಾಲ್ಕುವರ್ಷದ ಹುಡುಗನಾಗಿದ್ದಾಗಿಂದಲೂ ಹಾಡುವ ಅಭ್ಯಾಸ, ಪರಿಪಾಟ ಬೆಳೆದಿತ್ತು. ದಾಸರಪದಗಳು, ಜಾನಪದ ಗೀತೆಗಳು, ಸಂಪ್ರದಾಯದ ಹಾಡುಗಳು ಎಲ್ಲವೂ ತಾಯಿಯ ಕಲಕಂಠದಿಂದ ಹೊಮ್ಮಿ ಹುಡುಗನ ಕಿವಿದೆರೆಗಳನ್ನು ತುಂಬಿ ಎದೆಯಾಳಕ್ಕೆ ಇಳಿಯುತ್ತಿತ್ತು. ತಂದೆ ತೆಲುಗರಾದರೆ ತಾಯಿ ಕನ್ನಡಿಗರು. ಹಾಗಾಗಿ ಎರಡೂ ಭಾಷೆಯ ಹಾಡುಗಳ ಪರಿಚಯ ಎಳೆತನದಿಂದಲೇ ಆಗುತ್ತಿತ್ತು. ಇದರ ಜೊತೆ ಜೊತೆಗೆ ಬಾಲಗಂಧರ್ವರು ಹಾಡುತ್ತಿದ್ದ ಮರಾಠಿ ರಂಗಗೀತೆಗಳು ಮತ್ತು ಆಂಧ್ರ ರಂಗಭೂಮಿಯ ಪ್ರಖ್ಯಾತ ಗಾಯಕರುಗಳಾದ ಕಪಿಲವಾಯಿ ರಾಮನಾಥಶಾಸ್ತ್ರಿ, ಸ್ಥಾನಂ ನರಸಿಂಹಾರಾವು, ಜೊನ್ನವಿತ್ತುಲ ಶೇಷಗಿರಿರಾವು , ತುಂಗಲ ಚಲಪತಿರಾವು, ಜೊನ್ನವಿತ್ತುಲ ಶೇಷಗಿರಿರಾವು, ತುಂಗಲ ಚಲಪತಿರಾವು, ಪಿ.ಎಸ್‌.ಆರ್. ಆಂಜನೇಯಲು, ಈಲಪಾಟಿ ರಘುರಾಮಯ್ಯ, ವೇಮೂರಿ ಗಗ್ಗಯ್ಯ ಮುಂತಾದವರ‍ ಹಾಡುಗಳೂ, ಗಾನಶೈಲಿಯೂ ಹುಡುಗನ ಮೇಲೆ ಗಾಢ ಪ್ರಭಾವ ಬೀರಿತು. ಇದಲ್ಲದೆ ಮಹಾರಾಷ್ಟ್ರ ಕನ್ನಡಿಗರಾದ ಮಳುಗುಂಡ ರಾಮಾಶಾಸ್ತ್ರಿಗಳ ಸಿಂಹವಾಣಿಯಿಂದ ಮೊಳಗುತ್ತಿದ್ದ ಹರಿಕಥೆಗಳ ಪ್ರಭಾವಕಾರಿ ಪರಿಣಾಮವೂ ಆಯ್ತು . ಮರಾಠಿ ಹಾಡುಗಳ ಮಟ್ಟು ಹುಡುಗನಿಗೆ ಬಹಳ ಪ್ರಿಯವಾಯಿತು.

ಸಂಗೀತ ಕಲಿಕೆಸಂಪಾದಿಸಿ

ಕೃಷ್ಣಮಾಚಾರ್ಯರು ಸಂಗೀತ ಕಲಿಯಲು ಪ್ರಾರಂಭಿಸಿದ್ದು ಅವರ ಎಂಟನೇ ವರ್ಷದಲ್ಲಿ. ಅವರು ಅವರ ತಂಗಿ ಸರೋಜ ಶ್ರೀ ಪಕ್ಕಾ ಹನುಮಂತಾಚಾರ್ಯರಲ್ಲಿ ಸಂಗೀತಾಭ್ಯಾಸ ಆರಂಭ ಮಾಡಿದ್ದು ಬಾಲಪಾಠವೆಲ್ಲ ಆಂಧ್ರದ ಪೆನುಗೊಂಡೆಯಲ್ಲೇ ಆಯ್ತು. ಈ ಮಧ್ಯೆ ಪಿ.ಎಸ್‌. ವೆಂಕಟರಾವ್‌ ಎನ್ನುವವರ ಬಳಿ ಜಲವರ್ಣ ಚಿತ್ರಕಲೆಯನ್ನೂ ಕಲಿಯಲು ಹೊರಟು, ಅದು ಕೈಗೆಟುಕದೆ ಬಿಟ್ಟಿದಾಯ್ತು. ಪೆನುಗೊಂಡೆಯಿಂದ ತಂದೆಗೆ ವರ್ಗವಾಗಿ ಕುಟುಂಬ ಬಳ್ಳಾರಿಗೆ ಬಂದು ಸೇರಿತು. ಅಲ್ಲಿ ಆಮಿದಾಳ ವೆಂಕಟಸ್ವಾಮಿ, ವೆಂಕಪ್ಪ, ಬಿ. ವೆಂಕಟಪ್ಪ ಇವರುಗಳಿಂದ ಬಾಯಿ ಹಾಡುಗಾರಿಕೆಯ ಜೊತೆಗೆ ಪಿಟೀಲು ವಾದನದ ಕಲಿಕೆಯೂ ಪ್ರಾರಂಭವಾಯ್ತು. ಅಂದರೆ ೧೮ ವರ್ಷದವರೆಗೆ ನಾಲ್ಕು ಗುರಗಳಿಂದ ಸಂಗೀತ ಪಾಠದ ಶಿಕ್ಷಣವಾಯ್ತು. ಆ ನಂತರ ಅವರ ಮನೆತನ ಮೈಸೂರಿಗೆ ಬಂದು ಸೇರಿತು. ಅಲ್ಲಿ ಹನ್ನೆರಡು ವರ್ಷಗಳ ಕಾಲ ರಾಳ್ಳಪಲ್ಲಿ ಅನಂತಕೃಷ್ಣಶರ್ಮರಿಂದ ಸಂಗೀತದ ಶಿಕ್ಷಣ ದೊರೆಯಿತು . ಶರ್ಮರು ಅತ್ಯಂತ ಪಾಂಡಿತ್ಯ ಉಳ್ಳವರಾಗಿದ್ದರು. ಅವರಿಂದ ಸಂಗೀತ, ಸಾಹಿತ್ಯ, ಲಕ್ಷ್ಯ ಲಕ್ಷಣಗಳನ್ನು, ಶಿಷ್ಟ ಸಂಪ್ರದಾಯವನ್ನು ಆಳವಾಗಿ ಅಭ್ಯಾಸಮಾಡುವ ಅವಕಾಶವಾಯ್ತು. ಸಂಗೀತ ಜ್ಞಾನದಾಹದ ಪರಿಣಾಮವಾಗಿ ಭಾತ್‌ಖಂಡೆಯವರ ಪುಸ್ತಕಗಳಿಂದ ಹಿಂದುಸ್ತಾನಿ ಸಂಗೀತ ಪದ್ಧತಿಯ ಪರಿಚಯವೂ ಆಯ್ತು. ಈ ನಿಟ್ಟಿನಲ್ಲಿ ಶರ್ಮರೂ ಕೆಲವು ಹಿಂದೂಸ್ತಾನಿ ಗತ್ತುಗಳನ್ನು ಕಲಿಸಿದರು. ಅಲ್ಲಿಂದ ಮುಂದೆ ಮೈಸೂರು ಅರಮನೆ ಸಿಂಫೋನಿ ವಾದ್ಯಮೇಳದಲ್ಲಿದ್ದ ದಿವ್ಯನಾಥನ್‌ ಎಂಬುವವರಿಂದ ಪಾಶ್ಚಿಮಾತ್ಯ ಸಂಗೀತವನ್ನೂ ಶಾಸ್ತ್ರೀಯವಾಗಿ ಕಲಿತು ಅಭ್ಯಾಸ ಮಾಡಿದರು. ಹೀಗಾಗಿ, ದಕ್ಷಿಣಾದಿ, ಉತ್ತರಾದಿ ಹಾಗೂ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದ ಪಾಠವಾಗಿದೆ. ಅಂದರೆ ಇವರಿಗೆ ಸಂಗೀತದ ಬಗ್ಗೆ ಎಷ್ಟು ಗಾಢವಾದ ಆಸಕ್ತಿ ಇದೆ ಎನ್ನುವುದು ಅವರ ಕಲಿಕೆಯ ಶ್ರದ್ಧೆ, ಸಾಧನೆಗಳಿಂದ ವ್ಯಕ್ತವಾಗುತ್ತದೆ.

ಸಂಗೀತಕಲೆಯ ಮೂಲದ್ರವ್ಯ ನಾದ ಮತ್ತು ಲಯ ಎಂದಷ್ಟೇ ನಂಬಿದ ಇವರಿಗೆ ಇದು ದಕ್ಷಿಣಾದಿ, ಅದು ಉತ್ತರಾದಿ, ಅದು ಪಾಶ್ಚಿಮಾತ್ಯ ಎಂಬ ಭೇದಭಾವ ಒಡಮೂಡಲಿಲ್ಲ. ಅಂತಲೇ ಇವರ ಸಂಗೀತಕ್ಷೇತ್ರ ವಿಸ್ತಾರವಾಯಿತು. ಯಾವುದೇ ರೀತಿ ಮಡಿವಂತಿಕೆಯ ಗುಲಾಮರಾಗಲಿಲ್ಲ. ನಾದಲಯಗಳ ವಿಲಾಸವೇ ಸಂಗೀತ ಕಲೆ, ಇದೊಂದು ಅಮೂರ್ತ ಕಲೆ ಎಂದು ನಂಬಿದವರಿಗೆ ಶೈಲಿಗಳ ಮಡಿವಂತಿಕೆ ಬಾಧಿಸಲಿಲ್ಲ. ಇಲ್ಲಿ ರಸೆಲ್ಲರ ಮಾತು ನೆನಪಾಗುತ್ತದೆ . “First comes silence and then music” ಅನ್ನುವ ಮಾತು ಎಷ್ಟು ಅರ್ಥಪೂರ್ಣ! ಸಂಗೀತ ನಾದಲಯಗಳ ಸಮ್ಮಿಳನ ಮಾತ್ರ. ಇವು ಕಲಾತ್ಮಕವಾಗುವುದು ಸಾಧನೆಯ ತಪಸ್ಸಿನಿಂದ ಮಾತ್ರ ಎನ್ನುವುದು ಅಕ್ಷರಶಃ ಸತ್ಯ. ಈ ನಿಟ್ಟಿನಲ್ಲಿಯೇ ಸಂಗೀತೋಪಾಸನೆ ಮಾಡಿ ದೇವಿ ಸರಸ್ವತಿಯನ್ನು ಸಾಕ್ಷಾತ್ಕರಿಸಿಕೊಂಡ ಮಹಾನ್‌ ಕಲಾವಿದರು ಶ್ರೀ ಎ.ವಿ. ಕೃಷ್ಣಮಾಚಾರ್ಯರು.

ಸಂಗೀತ ಕಚೇರಿಗಳಲ್ಲಿಸಂಪಾದಿಸಿ

ಇವರ ಸಾಧನೆಯ ಮಾರ್ಗ ಎಷ್ಟು ಗಟ್ಟಿ ಇತ್ತೆಂದರೆ ದಕ್ಷಿಣಾದಿ ಸಂಗೀತವೇ ಇರಲಿ, ಉತ್ತರಾದಿ ಸಂಗೀತವೇ ಇರಲಿ, ಅತ್ಯಂತ ಹೆಸರಾಂತ ವಿದ್ವಾಂಸರಿಗೆಲ್ಲಾ ಪಿಟೀಲು ಪಕ್ಕವಾದ್ಯ ನುಡಿಸಿ ಸೈ ಎನಿಸಿಕೊಂಡವರು. ದಕ್ಷಿಣಾದಿ ಸಂಗೀತದಲ್ಲಿ ಹೆಸರಿಸಬಹುದಾದ ಪ್ರಮುಖರೆಂಧರೆ ಕೆ. ವಾಸುದೇವಾಚಾರ್ಯರು, ಮುತ್ತಯ್ಯ ಭಾಗವತರು, ಟೈಗರ್ ವರದಾಚಾರ್ಯರು, ಟಿ.ಆರ್. ಮಹಾಲಿಂಗಂ, ಮಧುರೈಮಣಿ, ಜಿ.ಎನ್‌.ಬಿ. ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆ, ಚೆಂಬೈ ವೈದ್ಯನಾಥ ಭಾಗವತರ್, ಎಂ.ಬಾಲಮುರಳೀಕೃಷ್ಣ, ಎಮ್‌.ಎಲ್‌. ವಸಂತಕುಮಾರಿ, ಆರ್.ಕೆ.ಶ್ರೀಕಂಠನ್‌ ಮುಂತಾದವರು. ಉತ್ತರಾದಿ ಸಂಗೀತದಲ್ಲಿ ಭೀಮಸೇನ ಜೋಶಿ, ಡಿ.ಬಿ. ಹರೀಂದ್ರ, ದೇವಗಿರಿ ಶಂಕರಜೋಶಿ, ಜಂತ್ಲೀ, ಜವಳೀ, ಲಕ್ಷ್ಮೀಭಾವೆ ಮೊದಲಾದವರಿಗೆ ಸಾಥಿ ನೀಡಿದ್ದಾರೆ. ಹೇಳುತ್ತ ಹೋಧರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಪಕ್ಕವಾದ್ಯಗಾರರಾಗಿಯಲ್ಲದೆ ನೂರಾರು ಸೋಲೋ ಪಿಟೀಲು ಕಾರ್ಯಕ್ರಮವನ್ನೂ ನೀಡಿರುವ ಹೆಗ್ಗಳಿಕೆ ಇವರದು. ಸಂಗೀತದಲ್ಲಿ ವಿದ್ವತ್‌ ಪರೀಕ್ಷೆಯನ್ನೂ ಪಾಸು ಮಾಡಿದರು. ಪಿಟೀಲಿನಲ್ಲಿ ಪರಿಣತಮತಿಗಳಾದ ಇವರು ಇಂಟರ್ ಮೀಡಿಯೆಟ್‌ವರೆಗೆ ವಿದ್ಯಾಭ್ಯಾಸ ಮಾಡಿದ ಪ್ರಗತಿಪರ ಚಿಂತಕರು ಹಾಗೂ ವಿದ್ವಾಂಸರು.

ಆಕಾಶವಾಣಿ ಕಲಾವಿದರಾಗಿಸಂಪಾದಿಸಿ

ಇವರು ಸುಮಾರು ೧೯೪೨ನೇ ಇಸವಿಯಿಂದಲೇ ಮದ್ರಾಸ್‌ ರೇಡಿಯೋ ಕೇಂದ್ರದಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಪಿಟೀಲು ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರು. ಆ ನಂತರ ೧೯೪೫ರಿಂದ ಮೈಸೂರು ಆಕಾಶವಾಣಿಯಲ್ಲಿ ಪಿಟೀಲು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ೧೯೪೯ರ ಆಗಸ್ಟ್‌ನಲ್ಲಿ ಮೈಸೂರು ರೇಡಿಯೋ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಸೇರಿಕೊಂಡರು.

ಕೃಷ್ಣಮಾಚಾರ್ಯರು ಮೈಸೂರು ರೇಡಿಯೋ ಕೇಂದ್ರವನ್ನು ಸೇರಿದ ಬಳಿಕ ಸಂಗೀತದ ಬೇರೆ ಬೇರೆ ಸ್ವರೂಪದ ಹಾಗೂ ಪ್ರಕಾರಗಳಲ್ಲಿ ನಿರಂತರ ಹೊಸತನವನ್ನು ಹುಡುಕಲು ಅವಕಾಶವಾಯ್ತು. ೧೯೪೭ರಿಂದಲೂ ಕೃಷ್ಣಮಾಚಾರ್ಯರು ಭಾವಗೀತೆಗಳಿಗೆ ಮಟ್ಟುಕೂಡಿಸುತ್ತಿದ್ದರು. ನಿಲಯದ ಕಲಾವಿದರನ್ನೇ ಹಾಡಿಸಿ. ಮೊಟ್ಟಮೊದಲಿಗೆ ೧೯೪೯ರಲ್ಲೇ ಕುವೆಂಪುರವರ “ಪ್ರೇಮ ಕಾಶ್ಮೀರ”ವನ್ನು ಒಂದು ಸುಂದರ ರೂಪಕವಾಗಿ ಹಾಡಿಸಿದ್ದರು. ಅದೇ ವರ್ಷ ಭಾವಗೀತೆಗಳಿಗಾಗಿ ರಾಗ ಸಂಯೋಜಿಸುವ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೃಷ್ಣಮಾಚಾರ್ಯರು ಕಾವ್ಯನಾಮವೊಂದನ್ನು ಸೃಷ್ಟಿಸಿಕೊಂಡರು. ಭಾವಗೀತ ಲೋಕದಲ್ಲಿ ಅಪ್ರತಿಮ ಸಿದ್ಧಿಪಡೆದ ಕೃಷ್ಣಮಾಚಾರ್ಯರು ‘ಆಕಾಶವಾಣಿ’ಯ ಹೆಸರಾಂತ ಸಂಗೀತ ಸಂಯೋಜಕ ‘ಪದ್ಮಚರಣ’ರಾದರು.

ಸುಗಮಸಂಗೀತದ ಹರಿಕಾರರುಸಂಪಾದಿಸಿ

ಪದ್ಮಚರಣರು ಕರ್ನಾಟಕದ ಸುಗಮ ಸಂಗೀತ ಕ್ಷೇತ್ರದ ಹರಿಕಾರರೆಂದರೆ ತಪ್ಪಾಗಲಾರದು. ಸುಗಮ ಸಂಗೀತ ಇನ್ನೂ ತೀರ ಶೈಶವಾವಸ್ಥೆಯಲ್ಲಿದ್ದ ಕಾಲವದು. ಮೊಳಕೆ ಹೆಮ್ಮರವಾಗಿ ಫಲ ನೀಡುವಂತೆ ಮಾಡಿದ ಕೀರ್ತಿ ಪ್ರಾಯಶಃ ’ಇವರಿಗೇ ಸಲ್ಲಬೇಕು. ಹಾಗಾಗಿ ಸುಗಮ ಸಂಗೀತದ ಬೆಳವಣಿಗೆಯ ಅಧ್ವರ್ಯು ಹಾಗೂ ಮೂಲ ಪುರುಷರೆಂದರೆ ತಪ್ಪಾಗುವುದಿಲ್ಲ. ಅದು ಉತ್ಪೇಕ್ಷೆಯೂ ಅಲ್ಲ. ಈ ಕ್ಷೇತ್ರದಲ್ಲಿ ಮತ್ತೊಂದು ಹಿರಿಯ ಹೆಸರು ಪಿ. ಕಾಳಿಂಗರಾಯರು ಎಂಬುದು ನಿಜವಾದರೂ ಅಲ್ಲಿ ಅವರು ಕೇವಲ ಹಾಡಿದರು. ಜನಮನ ರಂಜಿಸಿದರು. ಆದರೆ ಪರಂಪರೆ ಬೆಳೆಸುವ ಕಡೆ ಅವರು ಅಷ್ಟಾಗಿ ಗಮನ ಕೊಡಲಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅವರಿಗೆ ಶಿಷ್ಯರಿದ್ದರೂ ಗಟ್ಟಿಯಾಗಿ ಯಾರೂ ನಿಲ್ಲಲಿಲ್ಲ. ಕಾಳಿಂಗರಾಯರು ಸುಗಮ ಸಂಗೀತಗಾರರಾಗಿ ಮೆರೆದರೆ ಪದ್ಮಚರಣರು ಸುಗಮ ಸಂಗೀತ ಬೋಧಕರಾಗಿಯೂ ಹೆಚ್ಚು ಕೆಲಸ ಮಾಡಿದರು. ಪದ್ಮಚರಣರು ಹಾಡಲಿಲ್ಲ. ಆದರೆ ಹಾಡಿಸಿದರು. ಪದ್ಮಚರಣರಿಗೆ ಶಿಷ್ಯಪರಂಪರೆ ಇದೆ. ಪ್ರಶಿಷ್ಯರೂ ಸಾಕಷ್ಟು ಇದ್ದಾರೆ. ಅಂತಲೇ ಇವರಿಂದಾಗಿ ಸುಗಮ ಸಂಗೀತದ ದಿಗಂತ ವಿಶಾಲವಾಗಿದೆ. ಪದ್ಮಚರಣರೂ ಆಕಾಶವಾಣಿಯಲ್ಲಿಯೇ ಪಿಟೀಲು ವಿದ್ವಾಂಸರಾಗಿದ್ದುದರಿಂದಲೂ ಆಕಾಶವಾಣಿಯ ಎಲ್ಲ ಸೃಜನಶೀಲ ಸಂಗೀತ, ಈ ದಿಶೆಯಲ್ಲಿ ಅವರು ಬೆಳೆಯಲು ಅವಕಾಶವಾಯಿತು. ಹೊಸದಾಗಿ ಹುಟ್ಟುವ ಯಾವುದೇ ಒಂದು ಕಲಾ ಮಾಧ್ಯಮದ ಆವಿಷ್ಕಾರಕ್ಕೆ ಅದರ ಬೆಳವಣಿಗೆಗೆ, ಅದರ ವಿಕಾಸಕ್ಕೆ ನಾಂದಿ ಹಾಡುವುದು ತುಂಬಾ ಕಷ್ಟದ ಕೆಲಸ. ಇಲ್ಲಿ ಮೈಯ್ಯೆಲ್ಲ ಕಣ್ಣಾಗಿರಬೇಕಾಗುತ್ತದೆ. ಆ ಕಾರ್ಯವನ್ನು ಬಹಳ ಸ್ತುತ್ಯವಾಗಿ ಮಾಡಿ ಸುಗಮ ಸಂಗೀತಕ್ಕೊಂದು ನೆಲೆ ಹಾಗೂ ಬೆಲೆಯನ್ನ ತಂದು ಕೊಟ್ಟವರು ಪದ್ಮ ಚರಣರು.

ಹಿರಿದಾದ ಸಾಹಿತ್ಯಪ್ರಜ್ಞೆಸಂಪಾದಿಸಿ

ಪದ್ಮ ಚರಣರು ರಾಗಸಂಯೋಜನೆಗೆ ಆರಿಸಿಕೊಳ್ಳುವ ಕವನಗಳನ್ನು ನೋಡುವಾಗ ಅವರ ಸಾಹಿತ್ಯಪ್ರಜ್ಞೆ ಎಂಥ ಹಿರಿದು ಎನಿಸದಿರದು. ಸುಗಮ ಸಂಗೀತದಲ್ಲಿ ಹಾಡುವ ಕಾವ್ಯ ನವೋದಯ ಕಾವ್ಯ. ಇದು ಪದ್ಮ ಚರಣರದು. ಸಾಹಿತ್ಯಕ್ಕೆ ತಕ್ಕ ರಾಗ ಸಂಯೋಜಿಸುವ ಅವರ ರಸಾಭಿಜ್ಞತೆ, ಭಾವಾಭಿಜ್ಞತೆ, ಕಲಾಭಿಜ್ಞತೆಗೆ ಯಾರೂ ತಲೆದೂಗಬೇಕು. ಅಂದರೆ ಪದ್ಮಚರಣರು ಕವನವೇ ತಾವಾಗಿ ರಾಗದಲ್ಲಿ ಮೂಡಿ ಬರುವಂಥ ಅದ್ವೈತ ಸ್ಥಿತಿ, ತಾದಾತ್ಮ್ಯತೆಯ ಮಜಲನ್ನು ಮುಟ್ಟಿಬಿಡುತ್ತಿದ್ದರು. ಅವರಿಗೆ ಕವನಕ್ಕೆ ರಾಗ ಸಂಯೋಜಿಸುವುದರಲ್ಲಿ ಎಷ್ಟು ಕಲಾತ್ಮಕತೆ ಇತ್ತೋ ಅಷ್ಟೇ ಕಲಾತ್ಮಕತೆ ಆ ಕವನಕ್ಕೆ ಹಿನ್ನೆಲೆ ವಾದ್ಯ ಸಂಗೀತ ಸಂಯೋಜಿಸುವುದರಲ್ಲೂ ಇತ್ತು. ಎರಡೂ ಒಂದಕ್ಕೊಂದು ಪೂರಕವಾಗಿಯೇ ಮೂಡಿಬರುತ್ತಿತ್ತು. ಅದು ಪ್ರಾಯಶಃ ಹುಟ್ಟು ಕಲಾವಿದರ ಲಕ್ಷಣವಿರಬೇಕು. ಅದು ಒಂದು ಮಲ್ಲಿಗೆ ಅರಳಿದಂತೆ, ಕೋಗಿಲೆ ಉಲಿದಂತೆ, ಕಡಲು ಮೊರೆದಂತೆ, ಚಂದಿರ ನಕ್ಕಂತೆ, ಮಗುವಿನ ಮುಗ್ಧತೆಯಂತೆ ಸಹಜ ಸುಂದರ!

ಪದ್ಮಚರಣರಿಗೆ ಹಲವು ಭಾಷೆಗಳ ಪರಿಚಯವಿತ್ತು. ಕನ್ನಡ,ಆಂಗ್ಲ, ಸಂಸ್ಕೃತ, ಹಿಂದಿ, ತೆಲುಗು ಭಾಷೆಗಳನ್ನು ಅತ್ಯಂತ ಚೆನ್ನಾಗಿ ಬಲ್ಲವರಾಗಿದ್ದರು. ಉನ್ನತಮಟ್ಟದ ಸಾಹಿತ್ಯಪ್ರಜ್ಞೆ ಇದ್ದುದರಿಂದ, ಆಯಾಯಾ ಭಾಷಾ ಸ್ವರೂಪಗಳ ತಿಳಿವಳಿಕೆ, ಸ್ಪಷ್ಟ ಉಚ್ಚಾರಣೆ, ಹಾಡಿನ ಭಾವಕ್ಕೆ ತಕ್ಕಂತೆ ಕಂಠವನ್ನು ಹೊಂದಿಸಿಕೊಳ್ಳುವ ಜಾಣ್ಮೆ, ಕವನದ ಭಾವಾರ್ಥಕ್ಕೆ ತಕ್ಕಂತೆ ಪ್ರಜ್ಞಾಪೂರ್ವಕವಾಗಿ ಒತ್ತುಕೊಟ್ಟು ಹಾಡುವಂಥ ಬುದ್ಧಿವಂತಿಕೆ. ಇವೆಲ್ಲ ಭಾವಗೀತಾಗಾಯನದ ವೈಶಿಷ್ಟ್ಯವೆನ್ನುವುದು ಪದ್ಮಚರಣರ ರಾಗ ಸಂಯೋಜನೆಯ ಕವನಗಳನ್ನು ಕಲಿತು ಹಾಡಿದವರಿಗೆಲ್ಲ ಅರ್ಥವಾಗಿರಬೇಕು. ಅವರು ಕಲಿಸುವ ಕ್ರಮದಲ್ಲೇ ಈ ಎಲ್ಲ ವಿಶಿಷ್ಟ ಗುಣಗಳ ಅರಿವಾಗುತ್ತದೆ. ಆದರೆ ಅದರ ಅಭಿವ್ಯಕ್ತಿಯ ಯಶಸ್ಸು ಅವನ್ನು ಕಲಿತು ಹಾಡುವವರ ಕಂಠಶ್ರೀ, ಪ್ರತಿಭೆ ಹಾಗೂ ಇತಿಮಿತಿಗೆ ಒಳಪಟ್ಟಿರುತ್ತದೆ.

ಸಾಹಿತ್ಯಪ್ರಜ್ಞೆ ಭಾಷಾ ಸ್ವರೂಪಗಳ ತಿಳಿವಳಿಕೆಯ ಕುರಿತು ವಿಶ್ಲೇಷಿಸುವಾಗ ಪದ್ಮಚರಣರು ಕನ್ನಡವಲ್ಲದೆ ಹಿಂದಿ ಭಾಷೆಯ ಗೀತೆ ಹಾಗೂ ಭಜನೆಗಳಿಗೂ ಅದರರ್ಥಗಳನ್ನು ಗ್ರಹಿಸಿ ಸಂಗೀತ ಸಂಯೋಜಿಸಿದ್ದಾರೆನ್ನುವ ವಿಷಯ ಪ್ರಾಯಶಃ ಬಹಳ ಮಂದಿಗೆ ತಿಳಿದಿರಲಾರದು. ಹಿಂದಿಯಲ್ಲಿ ಖ್ಯಾತಕವಿಗಳಾದ ಜಯಶಂಕರ್ ಪ್ರಸಾದ್‌, ಮೈಥಿಲೀಶರಣ್‌ಗುಪ್ತ, ಮಹಾದೇವಿ ವರ್ಮ, ನಿರಾಲ, ನರೇಂದ್ರಶರ್ಮ ಬಚ್ಚನ್‌, ಸಿಯಾರಾಮ ಶರಣ್‌ಗುಪ್ತಾ ಮುಂತಾದ ಅನೇಕರ ಕವನಗಳಿಗೆ ಅರ್ಥಪೂರ್ಣವಾದ ರಾಗ ಸಂಯೋಜನೆ ಮಾಡಿದ್ದಾರೆ. ಮೀರಾ, ಕಬೀರ, ತುಲಸೀದಾಸ್‌, ರಯದಾಸ್‌, ನಾನಕ್‌, ಖಾಲಸ್‌ ಮುಂಥಾದ ಸಂತರ ಗೀತೆಗಳಿಗೂ ತಕ್ಕ ರಾಗ ಸಂಯೋಜನೆ ಮಾಡಿದ್ದಾರೆ. ನೂರಾರು ಇಂಥ ಗೀತೆ ಹಾಗೂ ಭಜನೆಗಳನ್ನು ಅವರ ಶಿಷ್ಯರಿಗೆ ಕಲಿಸಿ ರೇಡಿಯೋದಲ್ಲಿ ಹಾಡಿಸಿದ್ದಾರೆ. ಒಂದೊಂದು ಭಾಷೆಯ ಭಾಷಾ ಮರ್ಯಾದೆಯನ್ನು ಸಂಪೂರ್ಣವಾಗಿ ಗ್ರಹಿಸಿಕೊಂಡು ಅದಕ್ಕೊಪ್ಪುವ ರಾಗ ಸಂಯೋಜನೆ ಮಾಡಬೇಕಾದರೆ ಅವರ ಪ್ರತಿಭೆ ಹಿರಿದು. ಜಯದೇವನ ಅಷ್ಟಪದಿಗಳಿಗೂ ಸುಂದರವಾದ ರಾಗ ಕವಚಗಳನ್ನು ತೊಡಿಸಿ ಅವರ ಶಿಷ್ಯರಿಂದ ಸಂಗೀತ ಸಭೆಗಳಲ್ಲಿ ಹಾಡಿಸಿದ್ದಾರೆ.

ರೇಡಿಯೋ ನಾಟಕಗಳಿಗೆ ಹಿನ್ನೆಲೆ ಸಂಗೀತಸಂಪಾದಿಸಿ

ಹಾಡುಗಳಿಗೆ ಸಂಗೀತ ಸಂಯೋಜಿಸುವುದಕ್ಕೂ ಸಂಗೀತ ರೂಪಕ ಹಾಗೂ ರೇಡಿಯೋ ನಾಟಕಗಳಿಗೆ ಸಂಗೀತ ನೀಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಾಟಕಗಳ ಹಿನ್ನಲೆಯನ್ನು ಅರ್ಥಮಾಡಿಕೊಂಡು, ನಾಟಕದ ಪಾತ್ರಗಳ ಭಾವಾರ್ಥಗಳಿಗೆ ಪುಷ್ಟಿ ಕೊಡುವಂಥ ಸಂಗೀತಬೇಕಲ್ಲ! ಅದನ್ನ ಪಿಟೀಲಿನ ಧ್ವನಿಯ ಹಿಮ್ಮೇಳದಿಂದ ಯಶಸ್ವಿಯಾಗಿ ಜೋಡಿಸುತ್ತಿದ್ದರು. ನಾಟಕದ ಮಧ್ಯೆ ಮಧ್ಯೆ ಬರುವ ‘ಬ್ರಿಡ್ಜ್‌ ಮ್ಯೂಸಿಕ್‌’ ನಾಟಕಕ್ಕೆ ಪೂರಕವಾಗಿರುತ್ತಿತ್ತು. ೧೯೫೫ರ ವರೆಗೆ ರೇಡಿಯೋ ಕೇಂದ್ರ ಮೈಸೂರಿನಲ್ಲಿ ಮಾತ್ರ ಇತ್ತು. ಆಗಂತೂ ನಾಟಕ ಮೊದಲುಗೊಂಡು ಎಲ್ಲ ಕಾರ್ಯಕ್ರಮಗಳೂ ನೇರಪ್ರಸಾರ. ಹಾಗಾಗಿ ನಾಟಕದ ಹಿನ್ನೆಲೆ ಸಂಗೀತ ಕೂಡ ಹಾಗೆ ಇರಬೇಕಾಗಿತ್ತು. ನಾಟಕದ ಪಾತ್ರಗಳ ಧ್ವನಿಯನ್ನನುಸರಿಸಿಕೊಂಡು ಹಿನ್ನಲೆಯಲ್ಲಿ ಪಿಟೀಲು ಸಹಕಾರ ನೀಡುವ ಕಾರ್ಯವನ್ನು ಪದ್ಮಚರಣರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು . ಇನ್ನು ರೂಪಕಗಳ ಬಗ್ಗೆ ಹೇಳುವಂತೆಯೇ ಇಲ್ಲ. ಅದೇ ಒಂದು ವಿಭಿನ್ನ ಪ್ರಕಾರ, ಅವು ಬಿಡಿ ಬಿಡಿ ಹಾಡುಗಳಲ್ಲ. ಹಾಡುಗಳನ್ನು ಸೇರಿಸಿ ಹೆಣೆದು ತಯಾರಾದ ರೂಪಕಗಳು. ಭಾವವೈವಿಧ್ಯತೆ ಇದೆ ಅಲ್ಲಿ. ಸಾಹಿತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸಂಗೀತದ ಕವಚವನ್ನು ತೊಡಿಸಬೇಕಾದ ಪರಿಕ್ರಮವಿದೆ ಇಲ್ಲಿ. ಅದನ್ನು ಎಷ್ಟು ಸೊಗಸಾಗಿ ಇವರು ನಡೆಸಿಕೊಂಡು ಬಂದರೆಂದರೆ, ಇವರ ಕಲ್ಪನಾ ಮೂಸೆಯಲ್ಲಿ ಮೂಡಿ ಬಂದ ಆಕಾಶವಾಣಿಯ ಸಂಗೀತ ರೂಪಕಗಳಂತೂ ಇನ್ನೂ ಇಂದಿಗೂ ಜನಮನದ ಹೃದಯಗಳಲ್ಲಿ ಅನುರಣಿಸುತ್ತಿವೆ. ‘ತಾರಾಮಂಡಲ’, ‘ನದಿಯ ಮಕ್ಕಳು’, ‘ಅಕ್ಕಮಹಾದೇವಿ’, ‘ಗೆಲುವಿನ ಗುಡಿ’, ‘ಮೋಹನ ಮಂತ್ರ’, ‘ಮಲೆನಾಡು’ ಇತ್ಯಾದಿ ಹೇಳುತ್ತ ಹೋದರೆ ಪಟ್ಟಿ ಬೆಳೆಯುತ್ತದೆ. ‘ಆತ್ಮಾರ್ಪಣ’ ಎನ್ನುವುದೊಂದು ‘ಅಪೇರಾ’, ‘ತಾನಸೇನ್‌’ ಒಂದು ಗೀತ ನಾಟಕ. ಎಲ್ಲಕ್ಕೂ ಇವರದೇ ಯಶಸ್ವೀ ಸಂಗೀತ.

೧೯೫೫ನೇ ನವೆಂಬರ್ ೨ನೇ ತಾರೀಖು ಮೈಸೂರಿನಲ್ಲಿದ್ದ ರೇಡಿಯೋ ಕೇಂದ್ರ ಬೆಂಗಳೂರಿಗೆ ವರ್ಗಾವಣೆಯಾಯಿತು. ತದನಂತರ ಬಹಳಷ್ಟು ಕಾರ್ಯಕ್ರಮಗಳು ಧ್ವನಿ ಮುದ್ರಿತ ಕಾರ್ಯಕ್ರಮಗಳಾದವು. ಅಲ್ಲಿ ‘ನದೀಯಾತ್ರೆ’ ಎಂಬ ಕಾರಂತರ ನಾದಮೇಳವನ್ನು ನಿರ್ದೇಶಿಸಿದರು. ಗಾಳಿ, ಬಿರುಗಾಳಿ, ತುಂತುರುಮಳೆ, ಬಿರುಮಳೆ, ಹರಿವನೀರು, ನದೀಪ್ರವಾಹ, ಕಡಲು, ಸಾಗರಸಂಗಮ, ಇದು ವಾದ್ಯಮೇಳದ ಕತೆ. ವಾದ್ಯವೃಂದವೇ ಬೇರೆ, ವಾದ್ಯಮೇಳವೇ ಬೇರೆ ಎಂಬ ತಿಳಿವಳಿಕೆ ಅವರಿಗಿತ್ತು.

ಪದ್ಮಚರಣರ ಸುಗಮ ಸಂಗೀತದ ಧಾಟಿಗಳನ್ನು ಕೇಳುವಾಗ ಸ್ಪಷ್ಟವಾಗಿ ಒಂದು ಅಂಶ ವ್ಯಕ್ತವಾಗುತ್ತದೆ. ಶಾಸ್ತ್ರೀಯ ಸಂಗೀತದ ಬುನಾದಿಯ ಮೇಲೆ ರಾಗ ಸಂಯೋಜನೆ ಇರುತ್ತದೆ. ಇವರು ಮಾಧುರ್ಯ ಹಾಗೂ ಭಾವ ಪ್ರಾಧಾನ್ಯಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಇವರು ಎಂಥ ಉನ್ನತಮಟ್ಟದ ಸಂಯೋಜಕರು ಎನ್ನುವುದಕ್ಕೆ ಒಂದು ಸಂಧರ್ಭವನ್ನು ಇಲ್ಲಿ ಹೇಳಬಹುದು. ಭಾರತದ ರೇಡಿಯೋ ನಿಲಯಗಳ ಕೇಂದ್ರ ನಿಲಯ ದೆಹಲಿ ಆಕಾಶವಾಣಿ ನಿಲಯ. ಅದು ಆಗೊಮ್ಮೆ ಈಗೊಮ್ಮೆ ಬೇರೆ ಬೇರೆ ಆಕಾಶವಾಣಿ ನಿಲಯಗಳಿಂದ ಧ್ವನಿ ಮುದ್ರಿತ ಹಾಡುಗಳನ್ನು ತರಿಸಿಕೊಂಡು ಉನ್ನತಮಟ್ಟದ ಹಾಡುಗಳಾದರೆ ಅವುಗಳನ್ನು ಆಕಾಶವಾಣಿಯ ಧ್ವನಿತಟ್ಟೆಗಳನ್ನಾಗಿ ಮಾಡಿ (Transcription records) ಭಾರತದ ಎಲ್ಲ ಆಕಾಶವಾಣಿ ನಿಲಯಗಳಿಗೂ ಕಳುಹಿಸುವ ಏರ್ಪಾಡಿತ್ತು. ಹಾಗೆ ಬೆಂಗಳೂರು ನಿಲಯಕ್ಕೂ ಕರೆ ಬಂದಿತ್ತು. ಆಗ ಬೆಂಗಳೂರು ಆಕಾಶವಾಣಿಯಲ್ಲಿ ಶ್ರೀ ಎಂ.ಡಿ. ಪಾರ್ಥಸಾರಥಿಯವರು ಮ್ಯೂಸಿಕ್‌ ಪ್ರೊಡ್ಯೂಸರ್ ಆಗಿದ್ದರು. ಅವರ ಸಂಗೀತ ನಿರ್ದೇಶನದಲ್ಲಿ ಒಂದಿಬ್ಬರು ಕಲಾವಿದರ ಹಾಡುಗಳನ್ನು ಧ್ವನಿಮುದ್ರಿಸಿ ದೆಹಲಿಗೆ ಕಳುಹಿಸಿದರು. ಅದು ಆಯ್ಕೆಯಾಗಲಿಲ್ಲ. ನಂತರ ಪಿ. ಕಾಳಿಂಗರಾಯರು ಸಂಯೋಜಿಸಿ ಅವರೇ ಹಾಡಿದ, ಹಾಡುಗಳನ್ನು ಕಳುಹಿಸಿದರು. ಅದೂ ಆಯ್ಕೆಯಾಗಲಿಲ್ಲ. ಮೂರನೆಯ ಬಾರಿ ಪದ್ಮಚರಣರ ನಿರ್ದೇಶನದಲ್ಲಿ ಆರು ಹಾಡುಗಳನ್ನು ತಯಾರಿಸಿ ಲೀಲಾವತಿಯವರಿಂದ ಹಾಡಿಸಿ ಕಳುಹಿಸಿದರು. ಆಶ್ಚರ್ಯವೆಂದರೆ ಒಂದು, ಎರಡಲ್ಲ ಆರೂ ಹಾಡುಗಳೂ ಆಯ್ಕೆಯಾಗಿ transcription discs ಆದವು. ಆ ಧ್ವನಿ ತಟ್ಟೆ ಭಾರತದ ಎಲ್ಲ ಆಕಾಶವಾಣಿ ಕೇಂದ್ರಗಳನ್ನೂ ತಲುಪಿದವು. ‘ಒಲವೆಂಬ ಹೊತ್ತಿಗೆಯ’, ‘ಅವತರಿಸು ಬಾ ನಾರಾಯಣ’, ‘ನನ್ನನು ನಿನ್ನಯ ಕೊಳಲನು ಮಾಡು’, ‘ದೋಣಿ ಸಾಗಲಿ ಮುಂದೆ ಹೋಗಲಿ’, ‘ನಿನ್ನ ಬಾಂದಳದಂತೆ ನನ್ನ ಮನವಿರಲಿ’, ‘ನಾನೇ ವೀಣೆ ನೀನೆ ತಂತಿ’ ಇವೇ ಆ ಹಾಡುಗಳು ಅವು ಪದ್ಮಚರಣರ ಪ್ರತಿಭೆಗೆ ಸಾಕ್ಷಿಯಾಗಿ ನಿಂತಿವೆ.

ದೂರದರ್ಶನ, ಚಲನಚಿತ್ರ ಮುಂತಾದ ಲೋಕದಲ್ಲಿಸಂಪಾದಿಸಿ

ಇವುಗಳು ಆಕಾಶವಾಣಿಗೆ ಸಂಬಂಧಪಟ್ಟ ಸಂಗೀತದ ಮಜಲುಗಳಾದರೆ ದೂರದರ್ಶನ, ಯಕ್ಷಗಾನರಂಗ, ಚಲನಚಿತ್ರ ರಂಗನಾಟಕಗಳು, ಸಾಕ್ಷಿಚಿತ್ರಗಳು, ಕ್ಯಾಸೆಟ್‌ಗಳು ಹೀಗೇ ಅನೇಕ ಸಂಗೀತದ ಮಜಲುಗಳನ್ನೇರಿ ಕೀರ್ತಿಶಿಖರವನ್ನೇರಿದ ಅಭಿಜಾತ ಕಲಾವಿದರು ಪದ್ಮಚರಣ್.

ಬೆಂಗಳೂರಿಗೆ ಸುಮಾರು ೧೯೮೬ರಲ್ಲಿ ದೂರದರ್ಶನ ಬಂತು. ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ನಿರ್ದೇಶಿಸಿ ಜನಮನವನ್ನು ಮುಟ್ಟಿದ್ದಾರೆ. ಅದರಲ್ಲಿ ಮುಖ್ಯವಾಗಿ `Nector in stone’ ಎಂಬ ಸಾಕ್ಷ್ಯಚಿತ್ರ ಮಾಲಿಕೆಯಲ್ಲಿ ಬೇಲೂರು-ಹಳೇಬೀಡು-ಸೋಮನಾಥಪುರ ಈ ಮೂರು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ‘ಬೇಲೂರು’ ಸಾಕ್ಷ್ಯಚಿತ್ರಕ್ಕೆ ‘ರಾಷ್ಟ್ರಪ್ರಶಸ್ತಿ’, ‘ಸೋಮನಾಥಪುರ’ ಎಂಬ ಸಾಕ್ಷ್ಯಚಿತ್ರಕ್ಕೆ ‘ಅಂತರರಾಷ್ಟವರ ಪ್ರಶಸ್ತಿ’ ದೊರೆತದ್ದು ಹೆಮ್ಮೆಯ ಸಂಗತಿ. ಇವುಗಳ ಜೊತೆಗೆ ಬೆಳ್ಳಿತೆರೆಗೆ ಅನೇಕ ಸಾಕ್ಷ್ಯಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ. ಅದರಲ್ಲಿ ಕೆಲವನ್ನು ಹೆಸರಿಸಬಹುದಾದರೆ ‘Cauvery water comes to Bangalore’, `Tungabhadra’, ‘ಕರ್ನಾಟಕ ಬಂದರುಗಳು’, ‘ಕರ್ನಾಟಕ ಹೆದ್ದಾರಿಗಳು’, ಇತ್ಯಾದಿ. ಇದರ ಜೊತೆಗೆ ‘ನಾಗಾನಂದ’, ‘ನವಲ್ಗುಂದದ ಕಂಬಳಿಗಳು’, ‘ಎಂದರೋಮಹಾನುಭಾವುಲು’, `Excavation of dwaraka’ ಕಾರ್ಯಕ್ರಮಗಳ ಸಂಗೀತ ನಿರ್ದೇಶನದ ಜೊತೆಗೆ ಕನ್ನಡ, ತೆಲುಗು, ತಮಿಳು, ಮಲೆಯಾಳಿ ಭಾವಗೀತೆಗಳನ್ನು ಸುಂದರವಾಗಿ ಸ್ವರಸಂಯೋಜಿಸಿ ಹಾಡಿಸಿದ್ದಾರೆ.

ಚಲನಚಿತ್ರ ಸಂಗೀತಕ್ಕೂ ಕೈ ಹಾಕಿದ್ದಾರೆ. ‘ಪಾಪ-ಪುಣ್ಯ’ ಹಾಗೂ ‘ಮಲೆಯ ಮಕ್ಕಳು’ ಅವರು ಸಂಗೀತ ನೀಡಿದ ಚಿತ್ರಗಳು. ‘ಪಾಪ-ಪುಣ್ಯ’ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತ, ಲಘುಸಂಗೀತ ಹಾಗೂ ಜಾನಪದ ಸಂಗೀತದ ಸಮ್ಮಿಶ್ರವಿದೆ. ಇಂದಿಗೂ ಆ ಚಿತ್ರದ ಗೀಗೀಪದ ಎಲ್ಲರ ಮನಸ್ಸಿನಲ್ಲೂ ಹಸಿರಾಗುಳಿದಿದೆ.

ಕ್ಯಾಸೆಟ್‌ ಯುಗ ಬಂತು. ಪದ್ಮಚರಣರು ಅನೇಕ ಕ್ಯಾಸೆಟ್‌ಗಳಿಗೆ ಸಂಗೀತ ನೀಡಿದ್ದಾರೆ. ಆದಿಶಂಕರಾಚಾರ್ಯರ ಸೌಂದರ್ಯಲಹರಿ, ಕನ್ನಡ, ತುಳು, ಕೊಡವ ಭಾಷೆಯ ಭಕ್ತಿಗೀತೆಗಳು, ದಾಸರ ಪದಗಳು ಭಾವಗೀತೆಗಳು, ಕ್ಷತ್ರಿಯ ಭಾಷೆಯ ಹಾಡುಗಳು ಎಲ್ಲಕ್ಕೂ ಸಮರ್ಥ ಸಂಗೀತ ನೀಡಿ ಹೆಸರು ಮಾಡಿದ್ದಾರೆ.

ರಂಗಭೂಮಿಯ ನಾಟಕಗಳಿಗೂ ಸಂಗೀತ ನೀಡುವುದರ ಮೂಲಕ ರಂಗನಾಟಕಗಳ ಬಗೆಗೆ ಅಧ್ಯಯನವನ್ನೂ ಮಾಡಿದ್ದಾರೆ. ರವೀಂದ್ರನಾಥ ಟಾಗೂರರ ‘ಚಿರಕುಮಾರಸಭಾ’ ಅಂತಹದೊಂದು ಸಾಮಾಜಿಕ ರಂಗನಾಟಕ. ಇದಲ್ಲದೆ ಸಂಧ್ಯಾಕಲಾವಿದರು ಪ್ರದರ್ಶಿಸಿದ ‘ಪೌಲಸ್ತ’ ನಾಟಕದ ಸಂಗೀತ, ಮೂರು ಬೆಕ್ಟ್‌, ನಾಟಕಗಳ ಸಂಗೀತ ನಿರ್ದೇಶನ ಇವರದೆ.

ಮೂವರು ಆದರ್ಶ ವ್ಯಕ್ತಿಗಳುಸಂಪಾದಿಸಿ

ಪದ್ಮಚರಣರ ಬದುಕಿನಲ್ಲಿ ಮೂವರು ಆದರ್ಶ ವ್ಯಕ್ತಿಗಳೆಂದರೆ ಅವರ ತಂದೆ, ಅವರ ಗುರುಗಳಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಹಾಗೂ ಶಿವರಾಮಕಾರಂತರು. ಬದುಕಿನಲ್ಲಿ ಶಿವರಾಮಕಾರಂತರ ಪ್ರವೇಶವಾದ ಮೇಲೆ ಪದ್ಮಚರಣರ ಬದುಕಿನ ಚಿಂತನೆ ಬಹಳ ವಿಸ್ತಾರವಾಯಿತೆಂದು ಅವರೇ ಹೇಳಿದ್ದಾರೆ. ೧೯೪೦ರ ವೇಳೆಗೇ ಕಾರಂತರ ಕಿಸಾಗೋತಮಿ ಗೀತನಾಟಕಕ್ಕೆ ಪಿಟೀಲಿನ ಸಹಕಾರ ಒದಗಿಸಿದಂದಿನಿಂದ ಕಾರಂತರಿಗೆ ಅತಿ ಹತ್ತಿರದ ವ್ಯಕ್ತಿಯಾದರು.

ಯಕ್ಷರಂಗದಲ್ಲಿಸಂಪಾದಿಸಿ

ಶಿವರಾಮ ಕಾರಂತರ ಯಕ್ಷರಂಗದ ಒಬ್ಬ ಅವಿಭಾಜ್ಯ ಅಂಗವಾಗಿ ಶಿವರಾಮಕಾರಂತರ ಎಲ್ಲ ಯಕ್ಷಗಾನದ ಪ್ರಸಂಗಗಳಿಗೂ ಪದ್ಮಚರಣರು ಹಿಂಬದಿಯ ಸಂಗೀತ ನೀಡಿ ಯಕ್ಷಗಾನಕ್ಕೆ ಒಂದು ಹೊಸ ರೂಪರೇಷೆಯನ್ನು ತಂದಿದ್ದಾರೆ. ಯಕ್ಷಗಾನ ಹಾಡುಗಾರಿಕೆಗೆ ಸ್ವರವಾದ್ಯ ಒದಗಿಸುವುದರಲ್ಲಿ ಹಾಗೂ ಒಂದು ಶಿಸ್ತಾಗಿ ಭಾಗವತಿಕೆಗೆ ಪಿಟೀಲು ನುಡಿತವನ್ನು ಹೊಂದಿಸಿ ನಾದದ ಆವರಣವನ್ನು ರೂಪಿಸುವಲ್ಲಿ ಕೃಷ್ಣಮಾಚಾರ್ಯರ ಅಂದರೆ ಪದ್ಮಚರಣರ ಕೊಡುಗೆ ಬಹಳ ದೊಡ್ಡದು. ಈ ಪ್ರಕಾರ ಹೆಚ್ಚು. ಈ ಪ್ರಕಾರ ಕಡಿಮೆ ಎಂಬ ಯಾವ ಭೇಧ ಭಾವವೂ ಇಲ್ಲದೆ ಕರ್ನಾಟಕ ಸಂಗೀತದ ದಿಗ್ಗಜರಾಗಿದ್ದೂ ಭಾವಗೀತೆ, ನಾಟಕ, ಯಕ್ಷಗಾನ, ಚಿತ್ರ ಸಂಗೀತ ಎಲ್ಲವನ್ನೂ ಪ್ರೀತಿಯಿಂದಲೇ ಮಾಡಿ ಲೋಕದ ಮನ್ನಣೆ ಗಳಿಸಿದ್ದಾರೆ. ಶಿವರಾಮಕಾರಂತರು ಯಕ್ಷಗಾನ ನೃತ್ಯರೂಪಕಗಳಿಗೆ ಸಹಕಾರ. ಅದರಿಂದಾಗಿ ಖ್ಯಾತಿಯ ಬಗೆಗೂ ಅವರ ಕಲಾದೃಷ್ಟಿ ಜಾಗೃತವಾಯಿತು. ಯಕ್ಷರಂಗದ ತಂಡದೊಂದಿಗೆ ಪದ್ಮಚರಣರು ಕೊಲ್ಲಿದೇಶಗಳು, ಅಮೆರಿಕಾ, ರಷ್ಯ, ಗ್ರೆಟ್ ಬ್ರಿಟನ್ ಎಲ್ಲ ಕಡೆ ತಿರುಗಾಡಿದ್ದಾರೆ. ಅವರ ಹಿನ್ನೆಲೆಯ ಪಿಟೀಲು ವಾದನ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ ಒಮ್ಮೆ ಅಬುದಾಬಿಯಲ್ಲಿ ಅವರು ತಮ್ಮ ಗಾನಮೋಹನ ಭಂಗಿಯಲ್ಲಿ ಬ್ಯಾಲೆಗಳಿಗೆ ಪಿಟೀಲಿನ ನೆರವಿತ್ತಾಗ ಅಲ್ಲಿಯ ಒಬ್ಬಶ್ರೋತೃ ಅತ್ಯಂತ ಪ್ರಭಾವಿತನಾಗಿ, ಅವರ ಬಳಿ ಬಂದು ೫೦೦ ದಿನಾರ? ಹಣವನ್ನು ಅವರಿಗಿತ್ತು ಹೋದನಂತೆ.

ವಾಗ್ಗೇಯಕಾರಸಂಪಾದಿಸಿ

ಸಂಗೀತದ ಜೊತೆಗೆ ಅವರು ಬೇರೆ ಬೇರೆ ಭಾಷೆಯ ಸಾಹಿತ್ಯವನ್ನೂ ಓದಿಕೊಂಡವರು. ವೇದ, ಉಪನಿಷತ್ತು, ಶಾಸ್ತ್ರ, ಸಾಹಿತ್ಯ, ಜ್ಯೋತಿಷ್ಯ, ತತ್ವ, ದರ್ಶನ ಎಲ್ಲ ವಿಷಯಗಳ ಬಗೆಗೂ ಓದಿದ್ದರಲ್ಲದೆ, ಆಳವಾದ ಅಧ್ಯಯನದಿಂದ ಅವುಗಳ ಬಗ್ಗೆ ಸದಾ ಚಿಂತನ ಮಂಥನ ಮಾಡುತ್ತಿದ್ದರು. ಬದುಕಿಡೀ ಹೊಸ ಹೊಸ ವಿಷಯಗಳನ್ನು ತಿಳಿಯುವಲ್ಲೂ ಸದಾ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಿದ್ದರು. ಅವರ ವ್ಯಕ್ತಿತ್ವದಲ್ಲಿ ಸಂಗೀತದ ಜೊತೆಗೆ ಮತ್ತೊಂದು ಆಯಾಮವೂ ಇದೆ. ಅದೇ ಕಾವ್ಯರಚನಾಶಕ್ತಿ. ಸ್ವತಃ ರಚನಾಕಾರರಾಗಿ ಕವನಗಳು, ಭಕ್ತಿ ಗೀತೆಗಳು, ಕೃತಿ, ವರ್ಣ, ತಿಲ್ಲಾನ ಎಲ್ಲ ರೀತಿಯ ರಚನೆಗಳನ್ನು ಮಾಡಿ ಅವುಗಳಿಗೆ ಸಂಗೀತವನ್ನೂ ಒದಗಿಸುವುದರ ಮೂಲಕ ವಾಗ್ಗೇಯಕಾರರಾಗಿದ್ದಾರೆ. ಹಿರಿಯ ಸಂಗೀತಗಾರರೂ ಮೆಚ್ಚಿ ಇವರ ರಚನೆಗಳನ್ನು ಹಾಡಿದ್ದಾರೆ. ಎಂ.ಎಸ್‌. ಗೋಪಾಲಕೃಷ್ಣನ್‌ರಂಥ ಹೆಸರಾಂತ ಪಿಟೀಲು ವಿದ್ವಾಂಸರು ಅವರ ಒಂದು ಕ್ಯಾಸೆಟ್ಟಿನಲ್ಲಿ ಪದ್ಮಚರಣರ ರಚನೆ ‘ಮನವೇ ಮಂತ್ರಾಲಯ’ವನ್ನು ನುಡಿಸಿದ್ದಾರೆ ಎಂದ ಬಳಿಕ ಇವರ ರಚನಾಶಕ್ತಿ ಎಷ್ಟು ಮಹತ್ವವಾದದ್ದಿರಬೇಕು. ಇವರು ಕನ್ನಡ, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಕೃತಿ ರಚನೆಯನ್ನು ಮಾಡಿದ್ದಾರೆ. ಆದರೆ ಯಾವುವೂ ಈವರೆಗೂ ಪ್ರಕಟವಾಗದಿರುವುದು ದುರದೃಷ್ಟಕರ.

ಪ್ರಶಸ್ತಿ ಗೌರವಗಳುಸಂಪಾದಿಸಿ

ಇಷ್ಟೆಲ್ಲಾ ಯೋಗ್ಯತೆ ಇದ್ದೂ ಬಿರುದು ಬಾವಲಿ, ಪುರಸ್ಕಾರ, ಸನ್ಮಾನ ಪಾರಿತೋಷಕಗಳ ಚಿಂತೆ ಅವರಿಗಿಲ್ಲ. ಅದರ ಬೇಟೆಗೆ ಹೋಗುವ ಪ್ರವೃತ್ತಿಯವರೂ ಅಲ್ಲ. ೧೯೮೬-೮೭ರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಕರ್ನಾಟಕ ಕಲಾತಿಲಕ ಎಂಬ ಬಿರುದನ್ನಿತ್ತು ಗೌರವಿಸಿತು. ೧೯೯೫ರಲ್ಲಿ ಗಾಯನ ಸಮಾಜ ಇವರನ್ನು ಸಂಗೀತ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿ ಸಂಗೀತ ಕಲಾರತ್ನ ಎಂದು ಕರೆದು ಗೌರವಿಸಿತು. ೧೯೯೪ರಲ್ಲಿ ಕಲಾಭಿಮಾನಿಗಳು ಇವರಿಗೆ ‘ಪದ್ಮಪಲ್ಲವ’ ಎಂಬ ಅಭಿನಂದನ ಗ್ರಂಥವನ್ನು ಅರ್ಪಿಸಿ ಗೌರವ ಸೂಚಿಸಿದರು. ಅವರು ಚಲನಚಿತ್ರ ಆಯ್ಕೆಯ ಸಮಿತಿಯ ಸದಸ್ಯರಾಗಿದ್ದರು.

ಕೊನೆಯ ದಿನಗಳುಸಂಪಾದಿಸಿ

ಇಂಥ ಸಂಗೀತಗಾರನ ಕೊನೆಯ ದಿನಗಳು ಅಷ್ಟು ನೆಮ್ಮದಿಯ ದಿನಗಳಾಗಿರಲಿಲ್ಲ . ಅವರಿಗೆ ಮರೆವೆಂಬ ಮಂಪರು ಮುಚ್ಚಿಕೊಂಡಿತ್ತು. ೧೯೫೫ನೇ ಇಸವಿಯಿಂದ ಎನ್‌.ಎಮ್‌.ಎಚ್‌. ಹೋಟೆಲಿನಲ್ಲಿ ಒಂಟಿಯಾಗೇ ಬಾಳಿದವರು, ಜಿಡ್ಡು ಕೃಷ್ಣಮೂರ್ತಿಯಂಥ ಚಿಂತಕರ ಪ್ರಭಾವದಿಂದ ಜೀವನವನ್ನು ರೂಪಿಸಿಕೊಂಡವರು. ಸಂಗೀತ, ಸಾಹಿತ್ಯ ಲೋಕದಲ್ಲೇ ನಿರಂತರ ಮುಳುಗಿದವರು. ಕೊನೆಗಾಲದಲ್ಲಿ ಎಲ್ಲವನ್ನೂ ಮರೆಸುವಂಥ ಆಲ್‌ ಜೈಮರ್ಸ್ ಎಂಬುದಕ್ಕೆ ಬಲಿಯಾಗಿ ಮಗುವಿನಂತೆ ಏನೂ ಅರಿಯದ ಸ್ಥಿತಿಗೆ ಅವರಿಗೆ ಬಂದೊದಗಿತ್ತು. ಬೆಂಗಳೂರಿನ ಆಶಾಜ್ಯೋತಿ ಎಂಬ ವೃದ್ಧಾಶ್ರಮದಲ್ಲಿ ಕೊನೆಯ ದಿನಗಳಲ್ಲಿದ್ದರು. ಅವರು ತಮ್ಮ ೮೨ನೇ ವರ್ಷದಲ್ಲಿ ಅಂದರೆ ೨೦೦೨ನೇ ಇಸವಿ ಜುಲೈ ಇಪ್ಪತ್ತೆರಡರಂದು ಈ ಲೋಕದಿಂದ ಮರೆಯಾದರು.. ಆದರೆ ಅವರು ಬಿಟ್ಟು ಹೋದ ಸಂಗೀತ ಚಿರಂತನ. ಅದೇ ಕಲೆಯ ಗುರಿ ಕೂಡ.

ಮಾಹಿತಿ ಕೃಪೆಸಂಪಾದಿಸಿ

ಲೇಖಕರು: ಎಚ್‌.ಆರ್. ಲೀಲಾವತಿ, ಪುಸ್ತಕ: ಕಲಾ ಚೇತನ (ಸಂಪಾದಿತ), ಪ್ರಕಾಶಕರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.