ಪದವೀಧರನೆಂದರೆ (ಸ್ನಾತಕ) ವಿಶ್ವವಿದ್ಯಾಲಯ, ಕಾಲೇಜು ಅಥವಾ ಇನ್ನಿತರ ವಿದ್ಯಾಪೀಠಗಳು ನಿಷ್ಕರ್ಷಿಸಿರುವ ವ್ಯಾಸಂಗ ಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿ ಅವು ನೀಡುವ ಪದವಿಯನ್ನು ಪಡೆದವನು (ಗ್ರ್ಯಾಜುಯೇಟ್).[] ಸಾಮಾನ್ಯವಾಗಿ ವಿಶ್ವವಿದ್ಯಾಲಯ, ಕಾಲೇಜು ಮತ್ತು ಇನ್ನಿತರ ಉನ್ನತ ಶಿಕ್ಷಣದ ಸಂಸ್ಥೆಗಳು ನೀಡುವ ಪಾಂಡಿತ್ಯ ಪದವಿಯನ್ನು ಪಡೆದವರಿಗೆ ಪದವೀಧರ ಎಂಬ ಪದವನ್ನು ಬಳಸಲಾಗುತ್ತಿದ್ದರೂ ಅಮೆರಿಕದ ಸಂಯುಕ್ತ ಸಂಸ್ಥಾನಗಳಂಥ ಕೆಲವು ದೇಶಗಳ ಸೆಕೆಂಡರಿ ಶಾಲೆಗಳ ಶಿಕ್ಷಣವನ್ನು ಯಶಸ್ವಿಯಾಗಿ ಮುಗಿಸಿದವರಿಗೂ ಇದೇ ಪದವನ್ನು (ಸೆಕೆಂಡರಿ ಸ್ಕೂಲ್ ಗ್ರಾಜುಯೇಟ್, ಹೈಸ್ಕೂಲ್ ಗ್ರಾಜುಯೇಟ್) ಬಳಸಲಾಗುತ್ತಿದೆ. ವಿಶ್ವವಿದ್ಯಾಲಯಾದಿ ಉನ್ನತ ಶಿಕ್ಷಣ ಸಂಸ್ಥೆಗಳ ಪದವೀಧರರನ್ನು ಉನ್ನತ ಸಾರ್ವಜನಿಕ ಸ್ಥಾನಗಳಿಗೆ ಆಯ್ಕೆ ಮಾಡುವ ಪದ್ಧತಿ ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಪ್ರಚಾರದಲ್ಲಿದೆ. ಈಚೆಗೆ ಭಾರತದಂಥ ಕೆಲವು ದೇಶಗಳಲ್ಲಿ ಸಾರ್ವಜನಿಕ ಸ್ಥಾನಗಳಿಗೆ ಪದವೀಧರರನ್ನೆ ಕಡ್ಡಾಯವಾಗಿ ಆಯ್ಕೆ ಮಾಡುವುದು ಅನಗತ್ಯವೆಂದು ಕೆಲವು ನಾಯಕರು ಪ್ರತಿಪಾದಿಸುತ್ತಿರುವರು.

ಕೆಲವು ರಾಷ್ಟ್ರಗಳಲ್ಲಿ ಪದವೀಧರರಿಗೆ ವಿಶೇಷ ಸ್ಥಾನಮಾನಗಳುಂಟು. ವಿಶ್ವವಿದ್ಯಾಲಯದ ಹಾಗೂ ಶಾಸನಸಭೆಗಳ ಸದಸ್ಯರನ್ನು ಆಯ್ಕೆ ಮಾಡುವ ವಿಶೇಷ ಹಕ್ಕನ್ನು ಅವರಿಗೆ ನೀಡಲಾಗಿರುತ್ತದೆ. ಸಾಮಾನ್ಯವಾಗಿ ಪದವೀಧರರು ತಮ್ಮ ಹೆಸರಿನ ಮುಂದೆ ತಾವು ಪಡೆದಿರುವ ಪದವಿಯ ಸಂಕ್ಷಿಪ್ತ ರೂಪವನ್ನು ಹಾಕಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ. ಪದವಿ ನೀಡುವ ವಿಶ್ವವಿದ್ಯಾಲಯ ಅಥವಾ ಇನ್ನಿತರ ಸಂಸ್ಥೆಗಳು ಪದವೀಧರರಿಗೆ ಅವರವರ ಪದವಿಯನ್ನು ಘಟಿಕೋತ್ಸವದಲ್ಲಿ ಅಧಿಕೃತವಾಗಿ ನೀಡುತ್ತವೆ. ಪದವೀಧರರ ಸಂಖ್ಯೆ ಅಗಾಧವಾಗಿ ಹೆಚ್ಚುತ್ತಿರುವುದರಿಂದ ಅದನ್ನು ವಿಶೇಷ ಸಮಾರಂಭದಲ್ಲಿ ವಿತರಣೆ ಮಾಡುವ ಬದಲು ಅಂಚೆಯ ಮೂಲಕ ನೀಡುವ ಸಂಪ್ರದಾಯವೂ ಈಚೆಗೆ ಆಚರಣೆಗೆ ಬರುತ್ತಿದೆ. ತಾನು ಪಡೆದ ಪದವಿಯ ವಿವರಗಳೆಲ್ಲ ಸಂಸ್ಥೆ ತನಗೆ ನೀಡುವ ಪ್ರಮಾಣಪತ್ರದಲ್ಲಿ (ಡಿಪ್ಲೊಮ) ಇರುತ್ತವೆ.

ಉಲ್ಲೇಖಗಳು

ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪದವೀಧರ&oldid=920276" ಇಂದ ಪಡೆಯಲ್ಪಟ್ಟಿದೆ