ಪಡುಬಿದ್ರಿ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನ

ಇಲ್ಲಿ ದೇವಿಯು ಕಾನನದ ಮಧ್ಯೆ ಸ್ವಯಂ ಉದ್ಭವಳಾಗಿ ತನಗೆ ಅಲಯವೂ ಬೇಡ ನಿತ್ಯಪೂಜೆಯೂ ಬೇಡ ಮಕ್ಕಳ ಭಕ್ತಿ ವಿಶ್ವಾಸಗಳೇ ಸಾಕು, ಭಕ್ತಿ ವಿಶ್ವಾಸಗಳಿಂದ ಪೂಜಿಸುವ ಭಕ್ತರ ಕಷ್ಟ ಪರಿಹಾರ ಮಾಡುವುದಕ್ಕೆ ಇರುವ ವನದುರ್ಗ ಸ್ವರೂಪಳಾದ ಶ್ರೀ ಖಡ್ಗೇಶ್ವರಿಯು ನಾಗಬ್ರಹ್ಮಾದಿಗಳೊಂದಿಗೆ ಯಾವ ಕಾಲದಲ್ಲಿ ನೆಲೆಯಾದಳು ಎಂಬುದನ್ನು ನಿಷ್ಕರ್ಷಿಸಿ ಹೇಳುವಂತಿಲ್ಲವಾದರೂ ಬಹು ಪುರಾತನವಾಗಿರುವುದು ಎಂಬುದೇ ಹಿರಿಯರ ಅಭಿಮತ.

ಬ್ರಹ್ಮಸ್ಥಾನ

ಬ್ರಹ್ಮಸ್ಥಾನ ವೆಂದೊಡನೆ ತಟ್ಟನೆ ನಮ್ಮ ಮುಂದೆ ನಿಲ್ಲುವುದು ಬ್ರಹ್ಮ, ನಾಗ, ರಕ್ತೇಶ್ವರಿ, ನಂದಿಗೋಣ, ಕ್ಷೇತ್ರಪಾಲ ಎಂಬ ಪಂಚದೈವಗಳನ್ನೊಳಗೊಂಡ ಪೂಜಾಸ್ಥಳ ಇಂತಹ ಸ್ಥಾನಗಳು ಕುಟುಂಬಕ್ಕೊಂದರಂತೆ ಅಥವಾ ಉರಿಗೊಂದರಂತೆ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿದೆ. ಆದರೆ ಯಾವುದೇ ಬದಲಾವಣೆಗೆ ಒಳಗಾಗದೆ ಆಧುನಿಕ ಪ್ರಭಾವ ವನ್ನೂ ಸ್ವೀಕರಿಸದೆ ಸರಳ ಸಹಜವಾಗಿ ಪ್ರಕೃತಿಯ ಮಡಿಲಿನಲ್ಲಿ ಪ್ರಕೃತಿ ಸಹಜವಾದ ಶಕ್ತಿ ವಿಶೇಷಗಳ ಉಪಾಸನಾ ಕೇಂದ್ರವಾಗಿ ಪಡುಬಿದ್ರಿಯ ಖಡ್ಗೇಶ್ವರಿ ಬ್ರಹ್ಮಸ್ಥಾನ ಗಮನಾರ್ಹವಾಗಿದೆ. ಇಲ್ಲಿಯ ಯಾವುದೇ ಸೇವೆಗಳಿರಬಹುದು,ಪೂಜಾವಿಧಾನವಿರಬಹುದು ಇವೆಲ್ಲವೂ ವಿಭಿನ್ನ.ಇಲ್ಲಿ ನಡೆಯುವ ಯಾವ ಸೇವೆಗಳೂ ಬೇರೆ ಯಾವುದೇ ಕ್ಷೇತ್ರಗಳಲ್ಲಿಯೂ ನಡೆಯುವುದಿಲ್ಲ.ಈ ಕ್ಷೇತ್ರದ ಅತ್ಯುನ್ನತ ಸೇವೆಯೆಂದರೆ ಢಕ್ಕೆಬಲಿ ಸೇವೆ.ಈ ಸೇವೆ ಬೇರೆ ಕಡೆ ನಡೆದರೂ ಇಲ್ಲಿಯ ಢಕ್ಕೆಬಲಿ ಸೇವೆಯಲ್ಲಿ ವಿಭಿನ್ನತೆ ಇದೆ.

ಕಟ್ಟಡಗಳು

ಮುಖ್ಯವಾಗಿ ಈ ಕ್ಷೇತ್ರದಲ್ಲಿ ಇತರ ದೇವಾಲಯಗಳಂತೆ ಭವ್ಯವಾದ ಗರ್ಭಗುಡಿಯಾಗಲಿ ಗೋಪುರ ವಾಗಲಿ ಇಲ್ಲ ಇಲ್ಲಿರುವ ಮರ ಬಂಡೆಗಳೆ ಇಲ್ಲಿನ ಮುಖ್ಯ ಆಕರ್ಷಣೆ.

ಮರಳು ಪ್ರಸಾದ

ಬ್ರಹ್ಮಸ್ಥಾನದಲ್ಲಿ ಯಾರಿಗೂ ಕುಳಿತು ಕೊಳ್ಳಲು ಎಂದು ಯಾವುದೇ ಆಸನವಿರುವುದಿಲ್ಲ. ಬಂದವರೆಲ್ಲಾ ಮರಳಿನ ಮೇಲೆಯೇ ಕುಳಿತುಕೊಳ್ಳಬೇಕು. ವಿಶೇಷವೆಂದರೆ ಇತರ ದೇವಳಗಳಂತೆ ಇಲ್ಲಿ ಪ್ರಸಾದವು ಇರುವುದಿಲ್ಲ. ನೆಲದಲ್ಲಿರುವ ಮರಳೇ ಇಲ್ಲಿನ ಪ್ರಮುಖ ಪ್ರಸಾದ. ಅದನ್ನು ಭಕ್ತರೇ ತೆಗೆದುಕೊಳ್ಳುವುದು.

ದೊಂದಿಯ ಬೆಳಕು

ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನ ಇಂದಿಗೂ ದಟ್ಟ ವನದೊಳಗಿದ್ದು ಇಲ್ಲಿ ಯಾವುದೇ ವಿದ್ಯುದ್ಧೀಪಗಳನ್ನು ಬಳಸುವಂತಿಲ್ಲ. ಮುಖ್ಯವಾಗಿ ದೊಂದಿ ಬೆಳಕಿನಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳು ಜರುಗುತ್ತದೆ( ಇತ್ತೀಚೆಗೆ ಗ್ಯಾಸ್ ಲೈಟ್ ಗಳನ್ನು ಉಪಯೋಗಿಸಲಾಗುತ್ತದೆ).

ಪ್ರಕೃತಿ ಜನ್ಯ ಅಲಂಕಾರ

ಬ್ರಹ್ಮಸ್ಥಾನದಲ್ಲಿ  ಅಲಂಕಾರಕ್ಕೆ ಕೃತಕ ಹೂಗಳನ್ನು ಬಳಸುವಂತಿಲ್ಲ. ತಾಜಾ ಹೂವು, ಹಣ್ಣುಹಂಪಲು, ತಾಳೆ, ಬಾಳೆ, ಅಡಿಕೆ, ಬಿದಿರು ಮತ್ತು ಅಡಿಕೆ ಮರಗಳನ್ನು ಅಲಂಕಾರಕ್ಕೆ ಬಳಸಲಾಗುತ್ತದೆ.

ಮೊಬೈಲ್, ಕ್ಯಾಮರಾ ಬಳಕೆ ಸಂಪೂರ್ಣ ನಿಷೇಧ

ಬ್ರಹ್ಮಸ್ಥಾನದಲ್ಲಿ ಇಂದಿಗೂ ಪ್ರಾಚೀನ ಪದ್ಧತಿಯನ್ನು ಉಳಿಸಿಕೊಂಡು ಬರಲಾಗಿದೆ. ಧ್ವನಿವರ್ಧಕ, ವಿದ್ಯುತ್ ಸಂಪರ್ಕ, ಬ್ಯಾಂಡ್, ಪೋಟೋ, ಮೊಬೈಲ್ ಬಳಕೆ ಸಂಪೂರ್ಣವಾಗಿ ನಿಷಿದ್ಧವಾಗಿದೆ.

ಮೂಲಪ್ರಸಾದ

ಕರ್ಕಾಟಕ ಮಾಸದ ೧೬ ನೇ ದಿನ ಸಮುದ್ರದಾಳದಿಂದ ತಂದ ಶುದ್ಧ ಮರಳನ್ನು ದೇವರ ಗುಂಡದೊಳಗೆ ಹಾಕಲಾಗುತ್ತಿದ್ದು ಇದನ್ನೇ ಮೂಲಪ್ರಸಾದವಾಗಿ ನೀಡುವುದು ಪದ್ಧತಿ.

ಕಾಣಿಕೆ ಡಬ್ಬಿ ರಹಿತ ಕ್ಷೇತ್ರ

ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಯಾವುದೇ ಕಾಣಿಕೆ ಡಬ್ಬಿಗಳಿರುವುದಿಲ್ಲ ಅಥವಾ ದಾನ ದಕ್ಷಿಣೆಗಳ ಕ್ರಮ ಇರುವುದಿಲ್ಲ. ಹಣದ ರೂಪದ ಕಾಣಿಕೆಯನ್ನು ಇಲ್ಲಿ ಅರ್ಪಿಸಲು ಅವಕಾಶ ಇರುವುದಿಲ್ಲ.ದೇವರಿಗೆ ಇಲ್ಲಿ ಮುಖ್ಯವಾಗಿ ಹಿಂಗಾರ ಮತ್ತು ಸೀಯಾಳವನ್ನು ಕಾಣಿಕೆಯಾಗಿ ಸಮರ್ಪಿಸಲಾಗುತ್ತದೆ.

ಢಕ್ಕೆಬಲಿ ಸೇವೆ

   ಪ್ರತಿ ೨ ವರ್ಷಗಳಿಗೊಮ್ಮೆ (ಪರ್ಯಾಯವಿಲ್ಲದ ವರ್ಷ) ಇಲ್ಲಿ ನಡೆಯುವ ಢಕ್ಕೆಬಲಿ ಸೇವೆಯು ಇಲ್ಲಿಯ ವಿಶೇಷ ಸೇವೆಯಾಗಿದೆ. ಮಂಡಲ ರಚನೆ ಎಂಬ ವಿಧಿಯೊಂದಿಗೆ ಈ ಆರಾಧನೆ ಆರಂಭವಾಗುತ್ತದೆ. ಆರಾಧನೆ ಇದ್ದಷ್ಟು ಕಾಲ ಗ್ರಾಮದ ಮಿತಿಯೊಳಗೆ ಯಾವುದೇ ಶುಭ ಸಮಾರಂಭ, ಗ್ರಾಮದ ಇತರ ದೈವ ದೇವಸ್ಥಾನಗಳಲ್ಲಿ ಧಾರ್ಮಿಕ ಉತ್ಸವ ನಡೆಸುವಂತಿಲ್ಲ ಎಂಬ ನಿಯಮವೂ ಚಾಲ್ತಿಯಲ್ಲಿದೆ.ಢಕ್ಕೆಬಲಿ ಸೇವೆಯು ಮಕರ ಮಾಸದಿಂದ ಆರಂಭವಾಗಿ  ಕುಂಭ ಮಾಸದ ಅಂತ್ಯದವರೆಗೆ ನಿಗದಿತ ದಿನಗಳಲ್ಲಿ ನಡೆಯುತ್ತದೆ.

        ಢಕ್ಕೆಬಲಿ ದಿನ ಬೆಳಿಗ್ಗೆ ಪುಣ್ಯಾಹ, ಪಂಚಾಮೃತ ಪುರಸ್ಸರ ಅಭಿಷೇಕ, ಸ್ಥಳಶುದ್ಧಿ, ಮಧ್ಯಾಹ್ನ ಬ್ರಾಹ್ಮಣಾರಾಧನೆ, ಬಳಿಕ ಸಾಯಂಕಾಲ ವಿಜೃಂಭಣೆಯಿಂದ ಸಕಲ ಬಿರುದಾವಳಿ ಸಹಿತ ಹೊರೆಕಾಣಿಕೆ ಮೆರವಣಿಗೆ ಸನ್ನಿಧಿಗೆ ಸಾಗಿ ಬರುತ್ತದೆ. ದೇವತಾ ಪ್ರಾರ್ಥನೆಯಾಗಿ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರ ಸಮಕ್ಷಮ ಹೊರೆಕಾಣಿಕೆಯನ್ನು ಶ್ರೀ ವನದುರ್ಗೆಗೆ ಒಪ್ಪಿಸಲಾಗುವುದು. ಬಳಿಕ ಊರ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರು ಇಡೀ ಬನವನ್ನು ಹೂವು, ಹಿಂಗಾರ, ಹಣ್ಣುಹಂಪಲಿನಿಂದ ಹೂವಿನ ಅರಮನೆಯಂತೆ ಸಿಂಗರಿಸುತ್ತಾರೆ.

      ರಾತ್ರಿ ಸುಮಾರು ೧೦ ಗಂಟೆ ವೇಳೆಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು ಪುಣ್ಯಾಹವಾಚನ, ಶುದ್ಧೀಕರಣ, ಶ್ರೀ ಖಡ್ಗೇಶ್ವರಿ, ನಾಗದೇವರ ಸನ್ನಿಧಿ ಅಲಂಕಾರ (ಅರ್ಚಕರಿಂದ) ನಡೆಯುತ್ತದೆ. ನಂತರ ಸನ್ನಿದಾನದ ಪಾತ್ರಿಗಳು ಊರವರ ಪರವಾಗಿ ಗುರಿಕಾರರಲ್ಲಿ ಕೇಳಿ ಸ್ಥಾನಕ್ಕೆ ತೆರಳುತ್ತಾರೆ. ನಂತರ ನಾಗ ದೇವರಿಗೆ ಪೂಜೆ ನಡೆಯುತ್ತದೆ. ನಂತರ ಮಿಂದು ಸನ್ನಿಧಿಗೆ ಬರುವ ಪಾತ್ರಿಗಳಿಗೆ ಊರವರಲ್ಲಿ ಕೇಳಿ "ದಳ್ಯ" (ಬಿಳಿ ವಸ್ತ್ರ) ಕೊಡುತ್ತಾರೆ. ದಳ್ಯ ಉಟ್ಟ ಪಾತ್ರಿಗಳು ಆಚಮನಾದಿಗಳನ್ನು ಮಾಡಿ ದೇವರ ನಡೆಗೆ ಬರುತ್ತಾರೆ ಆ ಸಮಯದಲ್ಲಿ ವೈದ್ಯರೆಂದು ಕರೆಯಲ್ಪಡುವ ಢಕ್ಕೆಯವರ ಆಗಮನವಾಗುತ್ತದೆ. ಆ ಬಳಿಕ ದೇವರಿಗೆ ಮಹಾಪೂಜೆ ನಡೆದು ತಂಬಿಲ ಸೇವೆ ಜರಗುತ್ತದೆ. ನಂತರ ವೈದ್ಯರು ತೆಂಗಿನ ಗರಿಗಳಿಂದ ಮಂಡಲದ ಚಪ್ಪರದ ಶೃಂಗಾರ ಮಾಡುತ್ತಾರೆ. ಪಂಚವರ್ಣದ ಹುಡಿಗಳಿಂದ ಮಂಡಲವನ್ನು ರಚಿಸುತ್ತಾರೆ. ಇದಾದ ಬಳಿಕ ಸುಮಾರು ೧.೩೦ ಗಂಟೆ ವೇಳೆಗೆ ಮಂಡಲ ಸೇವೆ ಪ್ರಾರಂಭವಾಗುತ್ತದೆ.  ಅರ್ಧನಾರಿ ವೇಷ ತೊಟ್ಟು ಬರುವ ವೈದ್ಯರು ಪಾತ್ರಿಗಳಿಗೆ ಅವೇಶ ಬರಿಸಿ ಮಂಡಲದತ್ತ ಕರೆತರುತ್ತಾರೆ. ನಂತರ ವೈದ್ಯರಿಂದ ಹಾಡು ನೃತ್ಯ ಸಹಿತ ಮಂಡಲ ಸುತ್ತ ಪ್ರದಕ್ಷಿಣೆ ಬರುತ್ತಾರೆ. ಆನಂತರ ಪ್ರತ್ಯೇಕವಾಗಿ ಪಾತ್ರಿಗಳಿಂದ ವಾದ್ಯಘೋಷಗಳ ನಡುವೆ ಹಿಂಗಾರ ಸ್ನಾನವಾಗುತ್ತದೆ ನಂತರ ಮುಂಜಾವದ ವೇಳೆ ಪ್ರಸಾದ ವಿತರಣೆಯಾಗಿ ಆವೇಶ ಬಿಡುಗಡೆಯಾಗುತ್ತದೆ. ಈ ರೀತಿಯಾಗಿ ಢಕ್ಕೆಬಲಿ ಸೇವೆಯು ಶ್ರಿ ದೇವರಿಗೆ ಸಲ್ಲಿಸಲಾಗುತ್ತದೆ