ಪಟಿಯಾಲಾ ಆಕರ್ಷಣೆಗಳು


ಬಾರಾದರಿ ಉದ್ಯಾನಗಳು ಬದಲಾಯಿಸಿ

ಹಳೆ ಪಟಿಯಾಲಾಉತ್ತರ ಭಾಗದಲ್ಲಿ ಬಾರಾದರಿ ಉದ್ಯಾನವು ನೆಲೆಸಿದೆ. ಹೆಸರು ಸೂಚಿಸುವಂತೆ ಈ ಉದ್ಯಾನವು 12 (ಹಿಂದಿಯಲ್ಲಿ ಬಾರಾ ಎಂದರೆ 12) ಪ್ರವೇಶ ದ್ವಾರಗಳನ್ನು ಒಳಗೊಂಡಿದೆ. ಈ ಉದ್ಯಾನವನವನ್ನು ರಾಜೀಂದರ್ ಸಿಂಗನೆಂಬ ರಾಜನು ವಾಸಿಸುತ್ತಿದ್ದ ಬಾರಾದರಿ ಅರಮನೆಯ ಬಳಿಯಲ್ಲಿ ನಿರ್ಮಿಸಲಾಗಿದೆ. ಆತ ಇಲ್ಲಿ ಅಪರೂಪದ ಹೂವು ಹಾಗು ಸಸ್ಯಗಳನ್ನು ನೆಟ್ಟಿದ್ದ. ಪ್ರಸ್ತುತ ಈ ಅರಮನೆಯಲ್ಲಿ ಐತಿಹಾಸಿಕ ಮಹತ್ವವುಳ್ಳ ದಾಖಲೆಗಳ ಸಂಗ್ರಹವನ್ನು ಕಾಣಬಹುದು. ಈ ಉದ್ಯಾನದಲ್ಲಿ ರಾಜೀಂದರ್ ಸಿಂಗನ ಪುತ್ಥಳಿಯಿದ್ದು ವಯಸ್ಸಿನ ಭೇದವಿಲ್ಲದೆ ಹಿರಿಯ ಕಿರಿಯರೆಲ್ಲರು ಭೇಟಿ ನೀಡುತ್ತಿರುತ್ತಾರೆ.[೧]

ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್ ಬದಲಾಯಿಸಿ

ಈ ಕಿಲ್ಲಾವನ್ನು ಸಿಖ್ ಅರಮನೆಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದು ನಗರದ ಒಂದು ಪ್ರಮುಖ ಆಕರ್ಷಣೆ. ಈ ಕಾಂಪ್ಲೆಕ್ಸ್ ಸುತ್ತಲೂ ಪಟಿಯಾಲಾ ನಗರವು ಭವ್ಯವಾಗಿ ಬೆಳೆದಿರುವುದನ್ನು ಗಮನಿಸಬಹುದು. ಈ ಸಂಕೀರ್ಣವನ್ನು ಮಹಾರಾಜ ಅಲಾ ಸಿಂಗ್‍ರಿಂದ 1764 ರಲ್ಲಿ ನಿರ್ಮಿಸಲಾಗಿದ್ದು, ಹಳೆಯ ಮೋತಿ ಬಾಗ್ ಅರಮನೆ ನಿರ್ಮಾಣವಾಗುವವರೆಗೂ ಪಟಿಯಾಲಾ ರಾಜವಂಶಸ್ಥರು ಇಲ್ಲಿಯೆ ವಾಸ ಮಾಡಿದ್ದರು. ಮೊದಲಿಗೆ ಈ ಸಂಕೀರ್ಣವನ್ನು ಒಂದು ಮಣ್ಣಿನ ಕೋಟೆಯನ್ನಾಗಿ ಹತ್ತು ಎಕರೆ ವಿಸ್ತೃತ ಪ್ರದೇಶದಲ್ಲಿ ನಿರ್ಮಿಸಲಾಗಿತ್ತು ನಂತರ ಇದನ್ನು ನೈಜವಾದ ಕೋಟೆಯನ್ನಾಗಿ ಮರುನಿರ್ಮಾಣ ಮಾಡಲಾಯಿತು.

 
ಕಿಲ್ಲಾ ಮುಬಾರಕ್ ಕಾಂಪ್ಲೆಕ್ಸ್

ಈ ಸಂಕೀರ್ಣವನ್ನು ಒಳಭಾಗ ಹಾಗು ಹೊರಭಾಗವೆಂದು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು. ಒಳಭಾಗವನ್ನು ಕಿಲ್ಲಾ ಅಂದ್ರೂನ್ ಎಂದು ಕರೆದರೆ ಹೊರಭಾಗವನ್ನು ದರ್ಬಾರ್ ಹಾಲ್ ಎಂದು ಕರೆಯಲಾಗುತ್ತದೆ. ಇಲ್ಲಿರುವ ದರ್ಶನಿ ದ್ವಾರ, ಶಿವ ದೇವಾಲಯ, ಸಾಂಪ್ರದಾಯಿಕ ಆಭರಣಗಳು ಮತ್ತು ಬಟ್ಟೆಗಳನ್ನು ಮಾರುವ ಮಳಿಗೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಈ ಸಂಕೀರ್ಣದ ವಾಸ್ತುಶೈಲಿಯು ಮುಘಲ್ ಅಂತ್ಯದ ಹಾಗು ರಾಜಸ್ಥಾನಿ ಶೈಲಿಯ ಉತ್ತಮ ಮಿಶ್ರಣವಾಗಿದೆ.[೨]

ಶೀಶ್ ಮಹಲ್ ಬದಲಾಯಿಸಿ

ಮೋತಿ ಮಹಲ್ ಹಿಂಬದಿಯಲ್ಲಿರುವ ಶೀಶ್ ಮಹಲ್ ಅನ್ನು ಮಹಾರಾಜಾ ನರೇಂದ್ರ ಸಿಂಗನು 1847 ರಲ್ಲಿ ನಿರ್ಮಿಸಿದನು. ಇದು ಅಂದಿನ ಪಟಿಯಾಲಾ ರಾಜರ ಮುಖ್ಯ ವಾಸಸ್ಥಾನವಾಗಿತ್ತು. ಈ ಒಂದು ಸ್ಮಾರಕವನ್ನು ಕನ್ನಡಿಗಳ ಅರಮನೆ ಅಥವಾ 'ಪ್ಯಾಲೇಸ್ ಆಫ್ ಮಿರರ್‍ಸ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ನಿರ್ಮಾಣದಲ್ಲಿ ಬಣ್ಣದ ಗಾಜುಗಳು ಹಾಗು ಕನ್ನಡಿಗಳು ಬಹುವಾಗಿ ಬಳಸಲ್ಪಟ್ಟಿವೆ. ಆದ್ದರಿಂದಲೆ ಇದನ್ನು ಶೀಶ್(ಹಿಂದಿಯಲ್ಲಿ ಶೀಶಾ ಎಂದರೆ ಕನ್ನಡಿ ಅಥವಾ ಗಾಜು ಎಂದಾಗುತ್ತದೆ) ಮಹಲ್ ಎನ್ನುತ್ತಾರೆ. ಈ ಅರಮನೆಯ ಮುಂದಿರುವ ಸುಂದರವಾದ ಕೆರೆ ಮತ್ತು ಅದಕ್ಕೆ ಕಟ್ಟಲಾಗಿರುವ ಸೇತುವೆ ಈ ಪರಿಸರದ ಒಟ್ಟಾರೆ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಸೇತುವೆಯನ್ನು ಲಕ್ಷ್ಮಣ್ ಝೂಲಾ ಎಂದು ಕರೆಯುತ್ತಾರೆ. ಈ ಅರಮನೆಯಲ್ಲಿ ಒಂದು ಸಂಗ್ರಹಾಲಯವಿದ್ದು, ಜಗತ್ತಿನ ಹಲವು ಭಾಗಗಳ ಪದಕಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಈ ಅರಮನೆಯ ಸೂಕ್ಷ್ಮವಾದ ಕೆತ್ತನೆಯ ಕೆಲಸ, ಸುಂದರವಾಗಿ ವಿನ್ಯಾಸಗೊಂಡ ಗೋಡೆಗಳು ಅಂದಿನ ರಾಜಸ್ಥಾನ ಹಾಗು ಕಾಂಗ್ರಾ ಭಾಗದ ಕುಶಲಕರ್ಮಿಗಳ ನೈಪುಣ್ಯತೆಯನ್ನು ತೋರುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಶೀಶ್ ಮಹಲ್ಲಿನಲ್ಲಿ ಸಾಂಪ್ರದಾಯಿಕ ಉತ್ಸವಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. http://the-baradari-palace.neemranahotels.com/history-and-philosophy
  2. "ಆರ್ಕೈವ್ ನಕಲು". Archived from the original on 2016-10-08. Retrieved 2016-07-09.