ಪಂಚಭೇದ
ಪಂಚಭೇದ ಎಂಬುದು ಮಧ್ವಾಚಾರ್ಯ ಸಂಸ್ಥಾಪಿಸಿದ ದರ್ಶನವಾದ ದ್ವೈತಮತದ ಅಡಿಗಟ್ಟಾಗಿದ್ದು ತತ್ತ್ವಮೀಮಾಂಸೆಯಲ್ಲಿನ ವರ್ಗಗಳ ನಡುವಿನ ವ್ಯತ್ಯಾಸಗಳ ವ್ಯವಸ್ಥೆಯನ್ನು ಸಂಕೇತಿಸುತ್ತದೆ. ಸಂಸ್ಕೃತ ವ್ಯುತ್ಪತ್ತಿಯ ಈ ಶಬ್ದವು ಐದು ವ್ಯತ್ಯಾಸಗಳು ಎಂಬುದನ್ನು ಅಕ್ಷರಶಃ ಸೂಚಿಸುತ್ತದೆ.
ಪಂಚಭೇದ ಸಿದ್ಧಾಂತದ ಪ್ರಕಾರ ಅಸ್ತಿತ್ವದ ಮೂರು ಮೂಲಭೂತ ವರ್ಗಗಳಿವೆ. ಇವುಗಳೇನೆಂದರೆ ಪರಮಾತ್ಮವು, ಜೀವಾತ್ಮಗಳು, ಮತ್ತು ವಸ್ತುಗಳು. ತಮ್ಮ ದಾರ್ಶನಿಕ ಪರಿಭಾಷೆಯಲ್ಲಿ ಮಧ್ವಾಚಾರ್ಯರು ಭೌತಿಕ ವಸ್ತುಗಳ ವರ್ಗವನ್ನು ಜಡವೆಂದು ಹೆಸರಿಸಿದರು. ಈ ಮೂರು ವರ್ಗಗಳ ನಡುವೆ ನಿತ್ಯ ಮತ್ತು ಅಳಿಸಲಾಗದ ವಿಭಜನೆಯಿದೆಯೆಂದು ಮಧ್ವಾಚಾರ್ಯರು ಪ್ರತಿಪಾದಿಸಿದರು. ಇದಲ್ಲದೆ ಒಂದು ಜೀವಾತ್ಮವು ಮತ್ತೊಂದರಿಂದ ಪ್ರತ್ಯೇಕವಾಗಿದೆಯೆಂದು ಮತ್ತು ಒಂದು ವಸ್ತು ಮತ್ತೊಂದರಿಂದ ಪ್ರತ್ಯೇಕವಾಗಿದೆಯೆಂದು ವಾದಿಸಿದರು. ಹಾಗಾಗಿ ಪಂಚಭೇದ ಸಿದ್ಧಾಂತವು ಒಳಗೊಳ್ಳುವ ಐದು ವ್ಯತ್ಯಾಸಗಳೇನೆಂದರೆ:
- ಪರಮಾತ್ಮಜೀವ ಭೇದ
- ಪರಮಾತ್ಮಜಡ ಭೇದ
- ಜೀವಜಡ ಭೇದ
- ಜೀವಜೀವ ಭೇದ
- ಜಡಜಡ ಭೇದ
ಶಂಕರಾಚಾರ್ಯ ಪುಷ್ಟೀಕರಿಸಿದ ಅದ್ವೈತಮತಕ್ಕೆ ವಿರುದ್ಧವಾಗಿ ಇಂತಹ ವ್ಯತ್ಯಾಸಗಳು ಇಂದ್ರಿಯಗಳಿಗೆ ಪ್ರತ್ಯಕ್ಷವಾಗಿವೆಯಲ್ಲದೆ ನಿತ್ಯ ಮತ್ತು ಸಂಪೂರ್ಣವಾಗಿ ವಾಸ್ತವಿಕವಾಗಿವೆ. ಹಾಗಾಗಿ, ದ್ವೈತಮತದ ಪ್ರಕಾರ, ಪಂಚಭೇದವಿರುವುದರಿಂದ ಅದ್ವೈತಮತ ಭೋದಿಸುವಂತೆ ಬ್ರಹ್ಮದಲ್ಲಿ ಜೀವಾತ್ಮ ಲೀನವಾಗುವುದು ಅಸಂಭವ.