ನಮಿ ತೀರ್ಥಂಕರನಾದ ಮೇಲೆ ಐದು ಲಕ್ಷ ವರ್ಷಗಳ ತರುವಾಯ ನೇಮಿಜಿನನ ಜನ್ಮಾವತರಣವಾಯಿತು.

ಬಾಲ್ಯ ಮತ್ತು ಜೀವನಸಂಪಾದಿಸಿ

ಸಹಸ್ರ ವರ್ಷ ಆಯಸ್ಸುಳ್ಳ ಈತನು ಶಾಮವರ್ಣನಾಗಿದ್ದು ಹತ್ತು ಧನುಸ್ಸುಗಳ ಎತ್ತರಕ್ಕೆ ಬೆಳೆದನು. ಆತನು ಬಾಲ್ಯವನ್ನು ಕಳೆದು ಯೌವನವಂತನಾದಾಗ ರಾಜಮತಿಯೊಡನೆ ವಿವಾಹ ನಡೆಯುತ್ತಿರಲು, ಶ್ರೀ ಕೃಷ್ಣನು ತನ್ನ ರಾಜ್ಯವನ್ನು ನೇಮಿಯು ಆಕ್ರಮಿಸುವನೆಂಬ ಭಯದಿಂದ ಆತನಿಗೆ ವೈರಾಗ್ಯ ಉದಿಸುವಂತೆ ಉಪಾಯ ಹೂಡಿದನು. ಹಲವು ಮೃಗಗಳನ್ನು ಕಿರಾತರಿಂದ ಹಿಡಿದು ತರಿಸಿ, ಅವುಗಳನ್ನು ವಿವಾಹ ಕಾಲದಲ್ಲಿ ವಧೆಗೋಸ್ಕರ ಬಳಸುವುದಾಗಿ ಸುದ್ದಿ ಹುಟ್ಟಿಸಿದನು. ಇದರಿಂದ ವಿರಾಗಗೊಂಡ ನೇಮಿಯು ದೇವಕುರು ಎಂಬ ಪಲ್ಲಕಿಯನ್ನೇರಿ ಸಹಸ್ರಾಮ್ರವನಕ್ಕೆ ಹೋಗಿ ಶ್ರಾವಣ ಶುಕ್ಲ ಷಷ್ಠಿಯ ದಿನ ಚಿತ್ರಾ ನಕ್ಷತ್ರದಲ್ಲಿ ದೀಕ್ಷೆಯನ್ನು ವಹಿಸಿದನು.[೧]

ಇತಿಹಾಸಸಂಪಾದಿಸಿ

ಅಪರವಿದೇಹದ ಸೀತೋಪದಾನದಿಯ ಉತ್ತರ ತೀರದಲ್ಲಿ ಸಿಂಹಪುರವನ್ನು ರಾಜಧಾನಿಯಾಗಿ ಹೊಂದಿರುವ ಸುಗಂಧಿಲವೆಂಬ ರಾಜ್ಯದ ಅರ್ಹದ್ದಾಸ ರಾಜ ಮತ್ತು ಜಿನದತ್ತೆಯೆಂಬ ರಾಣಿಗೆ ಅರ್ಹತ್ ಪರಮೇಷ್ಠಿಯ ಪೂಜಾ ಫಲದಿಂದ ಅವರಿಗೆ ಒಬ್ಬ ಮಗ ಹುಟ್ಟಿದ, ಆತನ ಜನನವಾದ ಮೇಲೆ ರಾಜನಿಗೆ ಎಲ್ಲೆಲ್ಲಿಯೂ ವಿಜಯವೇ.ಆದ್ದರಿಂದ ಆ ಮಗನಿಗೆ ಅಪರಾಜಿತನೆಂದು ಹೆಸರಾಯಿತು. ತಂದೆಯ ತರುವಾಯ ಈ ಮಗನು ಧರ್ಮದಿಂದ ರಾಜ್ಯ ಪರಿಪಾಲನೆ ಮಾಡುತ್ತಿದ್ದ. ಒಮ್ಮೆ ವಿಮಲವಾಹನ ಜಿನನು ಗಂಧಮಾದನ ಪರ್ವತದಲ್ಲಿ ಉಳಿದುಕೊಂಡಿರಲು, ಅವರನ್ನು ಕಾಣದ ಹೊರತು ತಾನು ಊಟ ಮಾಡುವುದಿಲ್ಲವೆಂದು ಅಪರಾಜಿತನು ಪ್ರತಿಜ್ಞೆ ಮಾಡಿದನು. ಎಂಟು ದಿನಗಳು ಕಳೆದ ಮೇಲೆ ಇಂದ್ರನ ಸಹಾಯದಿಂದ ಸರ್ವಾಹ್ಣ ಕೂಷ್ಮಾಂಡಿನಿಯರು ಜಿನದರ್ಶನ ಮಾಡಿಸಿದ ಮೇಲೆ ಊಟ ಮಾಡಿದನು. ಮತ್ತೊಮ್ಮೆ ವಸಂತ ಕಾಲದಲ್ಲಿ ಚಾರಣ ಮುನಿಗಳನ್ನು ಸಂದರ್ಶಿಸಿ, ಅವರಿಂದ ತನ್ನ ಪೂರ್ವಜನ್ಮ ವೃತ್ತಾಂತವನ್ನು ಅರಿತುಕೊಂಡನು. ವೈರಾಗ್ಯ ಹೊಂದಿದ ಅಪರಾಜಿತನು ಅವನ ಮಗನಿಗೆ ರಾಜ್ಯವನ್ನು ಒಪ್ಪಿಸಿ, ಪ್ರಾಯೋಪಗಮನವೆಂಬ ಸನ್ಯಾಸವನ್ನು ಕೈಗೊಂಡನು, ಆಯುಷ್ಯಾವಸಾನದಲ್ಲಿ ಆತನು ಸ್ವರ್ಗದಲ್ಲಿ ಅಚ್ಯುತೇಂದ್ರ ಮಹರ್ಧಿಕದೇವನಾದನು. ಕರ್ಮ ಸವೆದ ಮೇಲೆ ಅಲ್ಲಿಂದ ಚ್ಯುತನಾಗಿ ಮುಂದಿನ ಜನ್ಮದಲ್ಲಿ ಹಸ್ತಿನಾಪುರದ ಶ್ರೀ ಚಂದ್ರರಾಜನ ಪತ್ನಿ ಶ್ರೀಮತಿಯ ಗರ್ಭದಲ್ಲಿ ಸುಪ್ರತಿಷ್ಠನೆಂಬ ಪುತ್ರನಾಗಿ ಜನಿಸಿದನು. ಯೌವನ ಪ್ರಾಪ್ತವಾದ ಮೇಲೆ ಸುನಂದೆಯೆಂಬ ಸುಂದರಿಯನ್ನು ವಿವಾಹವಾದ. ಸುಪ್ರತಿಷ್ಠನು ಬಹುಕಾಲ ಭೋಗಗಳನ್ನು ಅನುಭವಿಸುತ್ತಿದ್ದು, ಒಂದು ದಿನ ಉಲ್ಕಾಪಾತದ ದರ್ಶನದಿಂದ ವೈರಾಗ್ಯ ಪರನಾದನು. ಸನ್ಯಾಸಿಯಾಗಿ ನಿರಾಹಾರದಿಂದ ಮಡಿದ ಆತನು ಜಯಂತ ವಿಮಾನದಲ್ಲಿ ಅಹಮಿಂದ್ರನಾಗಿ ಜನಿಸಿ ಬಹುಕಾಲ ದಿವ್ಯಸುಖಗಳನ್ನು ಅನುಭವಿಸುತ್ತಿದ್ದನು. ಪುಣ್ಯಕರ್ಮವೆಲ್ಲ ತೀರಿದ ಮೇಲೆ ಆತನು ಅಲ್ಲಿಂದ ಚ್ಯುತನಾಗಿ ದ್ವಾರಾವತಿಯಲ್ಲಿದ್ದ ಹರಿವಂಶ ಶಿಖಾಮಣಿಯಾದ ಸಮುದ್ರ ವಿಜಯರಾಜನ ಪತ್ನಿ ಶಿವ ದೇವಿಯ ಗರ್ಭವನ್ನು ಕಾರ್ತಿಕ ಶುಕ್ಲ ಷಷ್ಠಿಯ ದಿನ ಉತ್ತರಾಷಾಢಾ ನಕ್ಷತ್ರದಲ್ಲಿ ಪ್ರವೇಶಿಸಿ ಶ್ರಾವಣ ಶುಕ್ಲ ಷಷ್ಠಿಯ ದಿನ ಬ್ರಹಯೋಗದಲ್ಲಿ ಜನಿಸಿದನು. ದೇವೇಂದ್ರನಿಂದ ಅಭಿಷೇಕ ಕಲ್ಯಾಣವಾಗಿ ಈ ಜಿನಶಿಶುವಿಗೆ ನೇಮಿಯೆಂಬ ನಾಮಕರಣವಾಯಿತು.

ದೀಕ್ಷೆಸಂಪಾದಿಸಿ

ಮನಃಪರ್ಯಯಜ್ಞಾನವಾದ ಮೇಲೆ ದ್ವಾರಾವತಿಯ ವರದತ್ತ ರಾಜನಿಂದ ಆಹಾರದಾನವನ್ನು ಪಡೆದು ಐವತ್ತಾರು ದಿನ ಛದ್ಮಾವಸ್ಥೆಯಲ್ಲಿದ್ದನು. ಅನಂತರ ರೈವತಕವೆಂಬ ಪರ್ವತದಲ್ಲಿ ದೊಡ್ಡ ಬಿದಿರಿನ ಕೆಳಗೆ ಆರು ಉಪವಾಸಗಳನ್ನು ಮಾಡಿ ಆಶ್ವೀಜ ಶುಕ್ಲ ಪಾಡ್ಯದ ಬೆಳಿಗ್ಗೆ ಚಿತ್ರಾ ನಕ್ಷತ್ರದಲ್ಲಿ ಕೇವಲ ಜ್ಞಾನವನ್ನು ಪಡೆದನು. ಸಮವಸರಣದಲ್ಲಿ ವರದತ್ತನೇ ಮೊದಲಾದ ಹನ್ನೊಂದು ಗಣಧರರೊಡನೆ ಧರ್ಮೋಪದೇಶ ಮಾಡುತ್ತಾ ಲೋಕವನ್ನೆಲ್ಲ ವಿಹರಿಸಿದನು. ದ್ವಾರಕಿಯಲ್ಲಿ ಕೆಲಕಾಲ ನಿಂತು ಅಲ್ಲಿನವರಿಗೆಲ್ಲ ಧರ್ಮಬೋಧೆ ಮಾಡಿದನು.

ಲಾಂಛನಸಂಪಾದಿಸಿ

ಲಾಂಛನ ಶಂಖ ; ಯಕ್ಷ - ಯಕ್ಷಿಯರು ಸರ್ವಾಹ್ಣ - ಕೂಷ್ಮಾಂಡಿನೀ.

ಉಲ್ಲೇಖಸಂಪಾದಿಸಿ

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಮಂಜೂಶ್ರೀ ಪ್ರಿಂಟರ್ಸ್. p. ೪೪೦-೪೪೧೧.
"https://kn.wikipedia.org/w/index.php?title=ನೇಮಿನಾಥ&oldid=1025088" ಇಂದ ಪಡೆಯಲ್ಪಟ್ಟಿದೆ