ಗದಗ ಜಿಲ್ಲೆಯ ನಾಗಾವಿ ಲಂಬಾಣಿ ತಾಂಡಾ ಕರ್ನಾಟಕದ ಲಂಬಾಣಿ ತಾಂಡಾಗಳಲ್ಲಿ ಪ್ರಮುಖವಾದುದು. ತಮ್ಮ ಆಚಾರ, ವಿಚಾರ, ಸಂಸ್ಕøತಿ ಸಂಪ್ರದಾಯಗಳಿಂದ ಪ್ರಸಿದ್ಧರಾಗಿರುವ ಲಂಬಾಣಿಗಳು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನೆಲೆನಿಂತಿದ್ದಾರೆ.

ಹಿನ್ನೆಲೆ

ಬದಲಾಯಿಸಿ
 
ಲಂಬಾಣಿ ವೇಷಭೂಷಣ

ಲಂಬಾಣಿಗಳು ಮೂಲತಃ ರಾಜಸ್ತಾನದವರು. ರಾಜಸ್ತಾನದಲ್ಲಿದ್ದುಕೊಂಡೇ ಇತರ ರಾಜ್ಯಗಳೊಡನೆ ವ್ಯಾಪಾರ ಸಂಬಂಧ ವೃದ್ಧಿಸಿಕೊಂಡರು. ಬ್ರಿಟಿಷರ ಕಾಲದಲ್ಲಿ ಕಾರಣಾಂತರಗಳಿಂದ ಬೇರೆ ಬೇರೆ ಭಾಗಗಳಿಗೆ ಗುಳೆ ಹೋದರು. ಹಾಗೆ ವಲಸೆ ಬಂದವರಲ್ಲಿ ನಾಗಾವಿ ತಾಂಡಾದ ಲಂಬಾಣಿಗಳು ಪ್ರಮುಖರು. ನಾಗಾವಿ ಗ್ರಾಮ ಪವನ ವಿದ್ಯುತ್ ಘಟಕ ಹಾಗೂ ಕೃಷಿ ಪ್ರಧಾನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಗ್ರಾಮದ ಸುತ್ತಲೂ ಲಂಬಾಣಿಗಳು ವಾಸವಾಗಿದ್ದರು. 1850ರಲ್ಲಿ ಸಮಾಜದ ಪ್ರಮುಖರ ನೇತೃತ್ವದಲ್ಲಿ ಲಂಬಾಣಿ ಜನರೆಲ್ಲ ಒಂದಾಗಿ ನಾಗಾವಿ ಗ್ರಾಮದಲ್ಲಿತಾಂಡಾ ಕಟ್ಟಿಕೊಂಡರು. ಮೊದಲು ಗುಡಿಸಲು, ಚಿಕ್ಕ ಹಟ್ಟಿಗಳಲ್ಲಿ ಇವರು ವಾಸವಾಗಿದ್ದರು. 1950 ರಲ್ಲಿ ಒಂದು ಗುಡಿಸಲಿನಲಲಿ ನಡೆದ ಆಕಸ್ಮಿಕ ಅಗ್ನಿ ಅವಘಡ ಇಡೀ ತಾಂಡಾವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಪಾರಾದವರು ಚೇರಿಸಿಕೊಂಡು ಮತ್ತೆ ಅದೇ ಸ್ಥಳದಲ್ಲಿ ತಮ್ಮ ತಾಂಡಾ ರೂಪಿಸಿದರು. ಅಂದು ಅವರು ರೂಪುಗೊಳಿಸಿದ ನೀಲನಕ್ಷೆ ಇಂದು ವಿಸ್ತøತಗೊಂಡಿದೆ. ಗುಡಿಸಲುಗಳು, ಹಟ್ಟಿಗಳು ಮರೆಯಾಗಿ ಇದೀಗ ಆರ್‍ಸಿಸಿ ಮನೆಗಳು ತಲೆಯೆತ್ತಿವೆ. ಜನರ ಕೃಷಿ, ವ್ಯಾಪಾರ, ವ್ಯವಹಾರಗಳೂ ಕೂಡ ವಿಸ್ತಾರಗೊಂಡಿವೆ.

ಮುಖ್ಯ ಕಸುಬು

ಬದಲಾಯಿಸಿ

ಆಧುನಿಕತೆಗೆ ತಕ್ಕಂತೆ ನಾಗಾವಿ ತಾಂಡಾದ ಜನರ ಜೀವನ ಶೈಲಿ ಬದಲಾದರೂ ಆದಾಯ ಗಳಿಕೆಯ ವಿಧಾನ ಮಾತ್ರ ಪುರಾತನವಾದದ್ದು. ಕೃಷಿ ಇವರ ಮುಯ ಕಸುಬು. ನಾಗಾವಿಯ ಹೊರಪ್ರದೇಶಗಳು, ಗುಡ್ಡಗಳೇ ಇವರ ಸಾಗುವಳಿ ಭೂಮಿಗಳು. ಮೊದಲು ಕೃಷಿ ಕಾರ್ಮಿಕತನ, ವಸ್ತು ವಿನಿಮಯ ಸಾಗುವಳಿ ಪದ್ಧತಿಗಳು ರೂಢಿಯಲ್ಲಿದ್ದವು. ಜೋಳ, ಸಜ್ಜೆ, ಹೆಸರು, ನವಣೆ, ಶೇಂಗಾ ಇವರ ಮುಖ್ಯ ಬೆಳೆಗಳು.ಇತ್ತೀಚಿನ ತಲೆಮಾರಿನವರು ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ಉದ್ಯೋಗಗಳನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ತಾಂಡಾದ ಬಹುತೇಕ ಯುವಕರು ಗೋವಾದಲ್ಲಿ ಸ್ವಂತ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ.

ಧಾರ್ಮಿಕ ಆಚರಣೆಗಳು

ಬದಲಾಯಿಸಿ

ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನೇ ಆಚರಿಸುತ್ತಿದ್ದು, ಇವುಗಳ ಜೊತೆಗೆ ಕೆಲವು ವಿಶಿಷ್ಟ ಆಚರಣೆಗಳನ್ನೂ ಹೊಂದಿದ್ದಾರೆ. ನವರಾತ್ರಿಯ ಸಮಯದಲ್ಲಿ 5 ಬುಟ್ಟಿಗಳಲ್ಲಿ ಗೋಧಿ ಸಸಿ ನೆಟ್ಟು ಖಂಡೇ ಪೂಜೆಯ ದಿನ ಅದನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ನರ್ತಿಸುತ್ತಾರೆ. ಹೋಳಿ ಹುಣ್ಣಿಮೆಯ ಸಮಯದಲ್ಲಿ `ಲೇಂಗೀ ಗೀತೆ'ಗೆ ನೃತ್ಯ ಮಾಡಲಾಗುತ್ತದೆ. ಮಕ್ಕಳಿಲ್ಲದ ದಂಪತಿಯ ಮನೆ ಮುಂದೆ ಈ ನೃತ್ಯ ಮಾಡಿ ಓಕುಳಿ ಆಡಲಾಗುತ್ತದೆ. ಈ ಆಚರಣೆಯಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಅವರಲ್ಲಿದೆ. ಮಣ್ಣೆತ್ತಿನ ಅಮವಾಸ್ಯೆಯ ನಂತರ ಬರುವ ಮದಲ ಮಂಗಳವಾರದಂದು ಸಪ್ತಮಾತೃಕೆಯರ ಆಚರಣೆ ಮಾಡಲಾಗುತ್ತದೆ. ತಮ್ಮ ತಾಂಡಾವನ್ನು ಎಲ್ಲಾ ರೋಗರುಜಿನಗಳಿಂದ ಕಾಪಾಡುವಂತೆ ಪ್ರಾರ್ಥಿಸಿ ಸಪ್ತಮಾತೃಕೆಯರನ್ನು ಪೂಜಿಸಲಾಗುತ್ತದೆ. `ಕೋಳಿಹಬ್ಬ' ನಾಗಾವಿ ತಾಂಡಾದ ಪ್ರಸಿದ್ಧ ಹಬ್ಬ. ತಾಂಡಾದ ಹೊರಗೆ ಕೋಳಿಗಳನ್ನು ಬಲಿಕೊಟ್ಟು ದೇವರನ್ನು ತೃಪ್ತಿಪಡಿಸಲಾಗತ್ತದೆ. ಈ ಎಲ್ಲಾ ಹಬ್ಬಗಳನ್ನು ತಾಂಡಾದ ಜನರೆಲ್ಲ ಸೇರಿ ಒಟ್ಟಿಗೆ ಆಚರಿಸುತ್ತಾರೆ.

ಲಂಬಾಣಿ ಕುಣಿತ ಹಾಗೂ ವೇಷಭೂಷಣ

ಬದಲಾಯಿಸಿ
 
ಲಂಬಾಣಿ ಕುಣಿತ

ಇವರನ್ನು ಕರ್ನಾಟಕದಲ್ಲಿ `ಲಂಬಾಣಿ'ಗಳೆಂದು, ಮಹಾರಾಷ್ಟ್ರದಲ್ಲಿ `ಬಂಜಾರ'ರೆಂದು, ಆಂಧ್ರಪ್ರದೇಶದಲ್ಲಿ `ಲಂಬಡ್'ಗಳೆಂದು ಕರೆಯುತ್ತಾರೆ. ಅವರ ಮಾತೃಭಾಷೆ ಲಂಬಾಣಿ. ಅದು ಮರಾಠಿ, ಹಿಂದಿ ಹಾಗೂ ಪಟೇಗಾರ ಭಾಷೆಗಳ ಗುಂಪಿನಲ್ಲಿಯೇ ಬರುತ್ತದೆ. ರಾಜ್ಯ ಯಾವುದೇ ಇರಲಿ ಆದರೆ ಅವರ ಆಚರಣೆಗಳೆಲ್ಲ ಒಂದೇ ಎಂಬುದು ಮುಖ್ಯ ಅಂಶ. ಲಂಬಾಣಿ ಕುಣಿತಕ್ಕೆ "ತೀಜೆರ್ ನಾಸ್" ಎಂಬ ಹೆಸರಿದೆ. ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯವದು. ಸುಮಾರು 400ರಿಂದ 500 ಲಂಬಾಣಿ ಗೀತೆಗಳಿದ್ದು ಅದಕ್ಕೆ ಈ ಲಂಬಾಣಿ ನೃತ್ಯವನ್ನು ಮಾಡಲಾಗುತ್ತದೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಈ ನೃತ್ಯ ಕಟ್ಟುನಿಟ್ಟಿನ ಸಂಪ್ರದಾಯವೇ ಹೌದು. ನಗಾರಿ, ಕಂಚಿನ ಗಂಗಾಳ, ಹಲಗೆ, ತಾಳದಂತಹ ವಾದ್ಯಗಳನ್ನು ನೃತ್ಯದ ಸಮಯದಲ್ಲಿ ಬಳಸಲಾಗುತ್ತದೆ. ಲಂಬಾಣಿಗಳ ವೇಷಭೂಷಣವೂ ಕೂಡ ಅಷ್ಟೇ ವೈವಿಧ್ಯಮಯವಾದುದು. ಗಂಡಸರು ಕಡ್ಡಾಯವಾಗಿ ರುಮಾಲು ಧರಿಸಬೇಕು. ಇನ್ನು ಹೆಂಗಸರು ಪೇಠಿಯಾ(ಲಹಂಗಾ), ಸಾಠಿಯಾ(ದುಪ್ಪಟ್ಟಾ), ಕಾನ್ಸಳಿ(ಕುಪ್ಪಸ) ಧರಿಸುತ್ತಾರೆ. ಈ ಬಟ್ಟೆಗಳ ಮೇಲೆ ಕನ್ನಡಿ, ನಾಣ್ಯ, ಮುತ್ತು, ಮಣಿಗಳನ್ನು ಸೇರಿಸಿ ಕಸೂತಿ ಕೆಲಸ ಮಾಡಿರುತ್ತಾರೆ. ವಿವಾಹಿತ ಮಹಿಳೆಯರು ರಟ್ಟೆಗೆ ಬಳೆ, ಕೂದಲಿಗೆ ಘುಗ್ಗರಿ ಹಾಕಿರುತ್ತಾರೆ. ಇವನ್ನು ಮುತ್ತೈದೆತನದ ಕುರಹುಗಳೆಂದೇ ಪರಿಗಣಿಸಲಾಗುತ್ತದೆ. ಇನ್ನುಳಿದಂತೆ ಭುರಿಯಾ, ಸೂಡಿ, ಬಲಿಯಾ, ಬಳೆಗಳು, ಕೊರಳಿಗೆ ಬೆಳ್ಳಿಯ ಹಾಸಲಿ, ತರಹೇವಾರಿ ಮಣಿಸರಗಳು, ಕಾಲಿಗೆ ಕಡಗ, ಕಸ್ಯೆ, ಅಂಗೂತ್ಯಾ, ಚಟಿಗೆ, ವಿಸುವಾಗಳನ್ನು ತೊಡುತ್ತಾರೆ. ಲಂಬಾಣಿ ಮಹಿಳೆಯರು ತಮ್ಮ ಉಡುಗೆಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಒಂದು ಜೊತೆ ಬಟ್ಟೆ ತಯಾರಿಸಲು ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ವಿದೇಶಿಗರಿಗೆ ಈ ಬಟ್ಟೆಗಳ ಮೇಲೆ ವಿಶೇಷ ವ್ಯಾಮೋಹ. ತಮ್ಮ ಪ್ರವಾಸದ ಸಮಯದಲ್ಲಿ ಲಂಬಾಣಿಗಳೆಲ್ಲಾದರೂ ಸಿಕ್ಕರೆ ಈ ಬಟ್ಟೆಗಳನ್ನು ಖರೀದಿಸುವ ವಿದೇಶಿಗರೂ ಇದ್ದಾರೆ.

ವಿದೇಶಿ ನಂಟು

ಬದಲಾಯಿಸಿ

ನಾಗಾವಿ ಲಂಬಾಣಿಗರಿಗೆ ವಿದೇಶದ ಜೊತೆ ನಂಟಿದೆ. ವೀದೇಶಿ ಸಂಸ್ಕತಿ ಅವರಲ್ಲಿ ಮಿಳಿತವಾಗಿದೆ. ಈ ತಾಂಡಾದ ಹೆಚ್ಚಿನ ಜನರು ದುಡಿಯಲು ಗೋವಾಕ್ಕೆ ಹೋಗುತ್ತಾರೆ. ಕಟ್ಟಡ ಕಾಮಗಾರಿ, ಬೋಟ್ ಕೆಲಸಗಳು, ಬಾರ್‍ಗಳಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಸ್ವೆಟರ್, ಬಟ್ಟೆ, ಟ್ಯಾಟೂ ವ್ಯಾಪಾರಗಳನ್ನೂ ನಡೆಸುತ್ತಾರೆ. ಹೀಗೆ ಕೆಲಸಕ್ಕೆ ಹೋಗುವ ನಾಗಾವಿ ಹುಡುಗರು ಗೋವಾದಿಂದ ಬರುವಾಗ ಪೂರ್ತಿಯಾಗಿ ಬದಲಾಗಿರುತ್ತಾರೆ. ವಿದೇಶಗರೊಂದಿಗೆ ನಡೆಸುವ ವಹಿವಾಟು ತಾಂಡಾದ ಹುಡುಗರನ್ನು ವಿದೇಶಿ ಸಂಸ್ಕøತಿಯನ್ನು ಅನುಕರಿಸುವಂತೆ ಮಾಡಿದೆ. ಅಕ್ಷರ ಕೂಡ ಕಲಿಯದ ಎಷ್ಟೋ ಜನರು ಗೊವಾಕ್ಕೆ ಹೋಗಿ ಇಂಗ್ಲೀಷ್ ಸೇರಿ ನಾಲ್ಕೈದು ವಿದೇಶಿ ಭಾಷೆಗಳನ್ನು ಕಲಿತಿದ್ದಾರೆ. ತಾಂಡಾಗಳಲ್ಲಿ ಹಿಪ್ಪಿ ಸಂಸ್ಕøತಿಯ ಟ್ರೆಂಡ್‍ಸೆಟ್ಟರ್‍ಗಳಾಗಿ ರೂಪುಗೊಂಡಿದ್ದಾರೆ. ಅವರ ವಿದೇಶಿ ಭಾಷೆಗಳು, ತರಹೆವಾರಿ ಬಟ್ಟೆಗಳು, ವಿಭಿನ್ನ ಹೇರ್‍ಸ್ಟೈಲ್, ಕಿವಿ ಹುಬ್ಬುಗಳಲ್ಲಿ ಮಿಂಚುವ ಸ್ಟಡ್‍ಗಳು, ಮೈಮೇಲಿನ ಟ್ಯಾಟೂಗಳು ಅವರನ್ನು ತಾಂಡಾ ಸಂಸ್ಕøತಿಯಿಂದ ಕೊಂಚ ಭಿನ್ನವಾಗಿ ನಿಲ್ಲುವಂತೆ ಮಾಡಿವೆ. ನಾಗಾವಿ ತಾಂಡಾ ಹುಡುಗರು ವಿದೇಶಿ ಹುಡುಗಿಯರನ್ನು ಮದುವೆಯಾಗಿದ್ದಾರೆ. ತಮ್ಮ ಮಕ್ಕಳಿಗೆ ಇವರು ಶಿಕ್ಷಣವನ್ನು ಕೊಡಿಸುವುದು ಗೋವಾದಲ್ಲಿಯೇ. ಗೋವಾ ಸಂಸ್ಕೃತಿಯನ್ನು ಮೈಮೇಲೆ ಎಳೆದುಕೊಂಡಿರುವ ಇವರು ತಾಂಡಾಕ್ಕೆ ಬಂದಾಗ ಮಾತ್ರ ತಮ್ಮದೇ ಪದ್ಧತಿಗಳನ್ನು ಅನುಸರಿಸುತ್ತಾರೆ. ಹೀಗೆ ಈ ತಾಂಡಾದಲ್ಲಿ ಸ್ವದೇಶೀ ಹಾಗೂ ವಿದೇಶೀ ಸಂಸ್ಕೃತಿಗಳು ಒಟ್ಟಾಗಿವೆ.[]

ಬಾಹ್ಯ ಸಂಪರ್ಕ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. http://www.kannadaprabha.com/supplements/by2coffee/%E0%B2%AA%E0%B2%B6%E0%B3%8D%E0%B2%9A%E0%B2%BF%E0%B2%AE-%E0%B2%97%E0%B2%BE%E0%B2%B3%E0%B2%BF/57034.html