ನಡಿಕೇರಿಯಂಡ ಚಿಣ್ಣಪ್ಪ

ನಡಿಕೇರಿಯಂಡ ಚಿಣ್ಣಪ್ಪನವರು (ಜನನ: ೧೮೭೫ ಮತ್ತು ಮರಣ ೧೨ ಸೆಪ್ಟೆಂಬರ್ ೧೯೩೧) ಕನ್ನಡ ಜಾನಪದ ಸಂಗ್ರಹಗಳ ಕೃತಿಗಳಲ್ಲೇ ಆಚಾರ್ಯ ಕೃತಿಯೆಂದು ಪರಿಗಣಿಸಲಾಗಿರುವ ‘ಪಟ್ಟೋಲೆ ಪಳಮೆ’ ಯ ಸಂಗ್ರಾಹಕರು. ಇವರು ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳ ಸಮಕಾಲೀನರು.

ನಡಿಕೇರಿಯಂಡ ಚಿಣ್ಣಪ್ಪನವರು
Born೧೮೭೫
ಬೇಂಗೂರು ಗ್ರಾಮ, ಮಡಿಕೇರಿ ತಾಲ್ಲೂಕು, ಕೊಡಗು ಜಿಲ್ಲೆ
Died೧೨ನೇ ಸೆಪ್ಟಂಬರ್ ೧೯೩೧
ಕೊಡಗು
Nationalityಭಾರತೀಯ
Educationಎಫ್ ಎ
Alma materಸೆಂಟ್ರಲ್ ಹೈಸ್ಕೂಲ್, ಮಡಿಕೇರಿ, ಕೊಡಗು ಜಿಲ್ಲೆ
ಸರ್ಕಾರಿ ಕಾಲೆಜ್, ಮಂಗಳೂರು.
Occupationಪೊಲೀಸ್ ಅಧಿಕಾರಿ.
Known forಪಟ್ಟೋಲೆ ಪಳಮೆ - ಕೊಡವ ಸಂಸ್ಕೃತಿಯ ಸಂಗ್ರಹ
Parent(s)ನಡಿಕೇರಿಯಂಡ ಪೊನ್ನವ್ವ (ತಾಯಿ)
ನಡಿಕೇರಿಯಂಡ ಅಯ್ಯಣ್ಣ (ತಂದೆ)

ಜನನ ಮತ್ತು ವಿದ್ಯಾಭ್ಯಾಸ

ಬದಲಾಯಿಸಿ

ಮಡಿಕೇರಿಯಿಂದ ತಲಕಾವೇರಿಗೆ ಹೋಗುವ ಮಾರ್ಗದಲ್ಲಿರುವ ಬೇಂಗುನಾಡು ಚಿಣ್ಣಪ್ಪನವರ ತಾಯಿ ಪೊನ್ನವ್ವನವರ ತವರು. ಅವರ ತಾಯಿಯ ಮನೆತನದ ಹೆಸರು ಪಟ್ಟಮಾಡ. ಅಲ್ಲಿ ಜನಿಸಿದ ಚಿಣ್ಣಪ್ಪನವರು ನಾಪೊಕ್ಲು ನಾಡು ಕರಡ ಗ್ರಾಮದ ನಡಿಕೇರಿಯಂಡ ಮನೆತನದವರು. ಅವರ ತಂದೆ ಅಯ್ಯಣ್ಣನವರು. ಮಡಿಕೇರಿಯ ಸೆಂಟ್ರಲ್ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಶನಲ್ಲಿ ಉತ್ತೀರ್ಣರಾದ ಬಳಿಕ ಉನ್ನತ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಸರ್ಕಾರೀ ಕಾಲೆಜಿನಲ್ಲಿ ಎಫ್ ಎ ತೇರ್ಗಡೆಯಾದರು. ಹಣದ ಅಭಾವದ ಕಾರಣ ಕಲಿಕೆಯನ್ನು ಮುಂದುವರೆಸಲಾಗದೆ ಊರಿಗೆ ಮರಳಿದರು.

ವೃತ್ತಿ ಜೀವನ

ಬದಲಾಯಿಸಿ

ಅವರ ವೃತ್ತಿ ಜೀವನವು ಮಡಿಕೇರಿಯ ಪ್ರೌಢಶಾಲೆಯಲ್ಲಿ ಅಧ್ಯಾಪನದಿಂದ ಆರಂಭವಾದರೂ, ಶೀಘ್ರದಲ್ಲೇ (ಅಂದರೆ ೧೯೦೦ರಲ್ಲಿ) ರೆವಿನ್ಯೂ ಇನ್ಸ್‌ಪೆಕ್ಟರ್ ಆದರು. ಮಡಿಕೇರಿಯಲ್ಲಿ ಆಗ ಇದ್ದ ಕೊಡಗು ರೆಜಿಮೆಂಟಿನಲ್ಲಿ ಜಮೇದಾರರಾಗಿ ೧೯೦೨ರಲ್ಲಿ ಸೇರಿದರು. ಆದರೆ ೧೯೦೪ರಲ್ಲಿ ಈ ರೆಜಿಮೆಂಟನ್ನು ತೆಗೆದುಹಾಕಿದಾಗ ಸೈನ್ಯದಲ್ಲಿ ಸುಭೇದಾರರಾಗಿ ನಿವೃತ್ತರಾದರು. ಅದೇ ವರ್ಷ ವೆಲ್ಲೂರು ಪೊಲಿಸ್ ಸ್ಕೂಲಿನಲ್ಲಿ ತರಬೇತಾಗಿ ಸಬ್ ಇನ್ಸ್‌ಪೆಕ್ಟರ್ ಆಗಿ ಪೊಲಿಸ್ ಇಲಾಖೆಯನ್ನು ಸೇರಿದರು. ಆಮೇಲೆ ಪ್ರಾಸಿಕ್ಯೂಟಿಂಗ್ ಸಬ್ ಇನ್ಸ್‌ಪೆಕ್ಟರಾಗಿಯೂ ಕೊಡಗಿನಲ್ಲಿ ದುಡಿದರು.

ಸಾಹಿತ್ಯ ರಚನೆ

ಬದಲಾಯಿಸಿ

ಈ ಸಮಯದಲ್ಲಿ ಚಿಣ್ಣಪ್ಪನವರು ಕೊಡಗಿನಾದ್ಯಂತ ಸಂಚರಿಸಿ ಕೊಡವರ ಜನಪದ ಸಾಹಿತ್ಯವನ್ನು ಕುರಿತು ಹಲವು ಹಿರಿಯರಿಂದ, ಹಾಡುಗಾರರಿಂದ ಮಾಹಿತಿಗಳನ್ನು ಸಂಗ್ರಹಿಸಿ ಪಟ್ಟೋಲೆ ಪಳಮೆಯನ್ನು ಬರೆದರು. ಅಂದಿನ ಕಮಿಶನರ್ ಸಿ ಎಸ್ ಸೂಟರ್ ಅವರ ಸಹಾಯದಿಂದ ಸರ್ಕಾರದ ವತಿಯಿಂದ ತಮ್ಮ ಗ್ರಂಥವನ್ನು ಪ್ರಕಟಿಸಿದರು.

ಬಳಿಕ ೧೯೨೯ರಲ್ಲಿ ಭಗವದ್ಗೀತೆಯನ್ನು ಕೊಡವ ಜಾನಪದ ಗೀತೆಯ ರೂಪದಲ್ಲಿ ‘ಭಗವಂತಂಡ ಪಾಟ್ಟ್’ ಎಂಬ ಶೀರ್ಷಿಕೆಯಲ್ಲಿ ರಚಿಸಿ ಪ್ರಕಟಿಸಿದರು.

"ನನ್ನ ವಿನೋದಕ್ಕಾಗಿ ಕೊಡಗು ಪದಗಳನ್ನು ಒದಗಿಸುತ್ತಾ ಇದ್ದು ಕೆಲವು ಮಟ್ಟಿಗೆ ಹಾಡುಗಳು ದೊರೆತ ನಂತರ ಕೊಡವರ ಪದ್ಧತಿಗಳನ್ನು ಬರೆಯತೊಡಗಿದೆ" ಎಂದು ಪಟ್ಟೋಲೆ ಪಳಮೆ ಗ್ರಂಥದ ರಚನೆಯ ಹಿನ್ನೆಲೆಯನ್ನು ಕುರಿತು ಸರಳವಾಗಿ ಚಿಣ್ಣಪ್ಪನವರು ಹೇಳಿಕೊಂಡಿದ್ದಾರೆ. ಸುಮಾರು ಎರಡು ಸಾವಿರ ವರ್ಷಗಳಷ್ಟು ಪುರಾತನವಾದ ಒಂದು ವಿಶಿಷ್ಟ ಜನಾಂಗದ ಜಾನಪದದ ವಿವಿಧ ಪ್ರಕಾರಗಳನ್ನು ತಾವೊಬ್ಬರೇ ಜಾನಪದ ವಿದ್ವಾಂಸನಾಗಿ ಸಂಗ್ರಹಿಸುತ್ತಿರುವರೆಂಬುದರ ಕಲ್ಪನೆಯೇ ಇಲ್ಲದೆ, ಕನ್ನಡ ಜಾನಪದ ಸಾಹಿತ್ಯ ಸಂಗ್ರಹವೆಂಬ ಸೌಧದ ಮೊತ್ತಮೊದಲ ಅಡಿಗಲ್ಲನ್ನು ಹಾಕಿದ ಶ್ರೀಯುತರ ಸಾಹಿತ್ಯ ಸೇವೆ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು.

ಸಮಾಜ ಸೇವೆ

ಬದಲಾಯಿಸಿ

ಇವರಿಗೆ ಸಹಕಾರ ಸಂಘಗಳ ಕೆಲಸದಲ್ಲಿ ವಿಶೇಷ ಆಸಕ್ತಿಯಿದ್ದು, ಕೊಡಗಿನಲ್ಲಿ ಸಾರ್ವಜನಿಕ ಸಹಕಾರ ಸಂಘ, ಪೊಲಿಸ್ ಉದ್ಯೋಗಸ್ಥರ ಸಹಕಾರೀ ಸಂಘ ಮತ್ತು ಕೊಡಗು ಸೆಂಟ್ರಲ್ ಬೇಂಕಿನ ಸ್ಥಾಪನಾಚಾರ್ಯರಲ್ಲಿ ಒಬ್ಬರಾದರು.

ಕ್ರೀಡಾಭಿರುಚಿ

ಬದಲಾಯಿಸಿ

ಚಿಣ್ಣಪ್ಪನರಿಗೆ ಆಟೋಟಗಳಲ್ಲಿ ಅತೀವ ಅಭಿರುಚಿಯಿದ್ದಿತಲ್ಲದೆ, ಕ್ರಿಕೆಟ್ ಆಟದಲ್ಲಿ ಶ್ರೇಷ್ಠ ಮಟ್ಟದ ಬೌಲರ್ ಆಗಿದ್ದರು.

ಪಟ್ಟೋಲೆ ಪಳಮೆ - ನಡಿಕೇರಿಯಂಡ ಚಿಣ್ಣಪ್ಪ - ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿ ವಿ - ೧೯೭೫