ಧೂಪದ ಮರ
ಧೂಪದ ಮರವು ಡಿಪ್ಟರೋಕಾರ್ಪೇಸೀ ಕುಟುಂಬಕ್ಕೆ ಸೇರಿದ ಒಂದು ವನ್ಯವೃಕ್ಷ. ರಾಳದಮರ ಪರ್ಯಾಯನಾಮ. ವ್ಯಾಟೀರಿಯ ಇಂಡಿಕ ಇದರ ವೈಜ್ಞಾನಿಕ ಹೆಸರು. ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಬೆಳೆಯುತ್ತದೆ. ಕೇರಳದಲ್ಲೂ 4,000 ಗಳಿಗಿಂತ ಉನ್ನತ ಪ್ರದೇಶಗಳಲ್ಲಿ ಕಂಡುಬರುತ್ತದೆ.
ಇದು 20' - 30' ಎತ್ತರಕ್ಕೆ ಬೆಳೆಯುವುದು. ತೊಗಟೆ ಒರಟಾದುದೂ ಬಿಳಿಮಿಶ್ರಿತ ಬೂದುಬಣ್ಣದ್ದೂ ಆಗಿದೆ. ತೊಗಟೆಯ ದಪ್ಪ 3/8". ತೊಗಟೆ ಪದರ ಪದರವಾಗಿ ಸುಲಿದು ಬೀಳುತ್ತದೆ. ಕಾಂಡದ ಚೇಗುಭಾಗ ಬೂದು ಬಣ್ಣದ್ದು ಇದರ ಅಂಚು ಕೆಂಪಗಿದೆ. ಧೂಪದ ಮರ ಹೂ ಬಿಡುವ ಕಾಲ ಜನವರಿ - ಮಾರ್ಚ್.
ಈ ವೃಕ್ಷದ ಉಪಯೋಗಗಳು ಹಲವಾರು. ಇದರ ಚೌಬೀನೆಯನ್ನು ಚೆನ್ನಾಗಿ ಪಾಲಿಷ್ ಮಾಡಿ ಅನೇಕ ಗೃಹೋಪಯೋಗಿವಸ್ತುಗಳನ್ನು ತಯಾರಿಸಲು ಬಳಸುವುದುಂಟು. ಅನೇಕ ಪೀಠೋಪಕರಣಗಳನ್ನು ಸಹ ಇದರಿಂದ ತಯಾರಿಸಬಹುದು. ಕಾಂಡದಿಂದ ಒಂದು ಬಗೆಯ ಅಂಟು ಹೊರಬರುತ್ತದೆ. ಇದಕ್ಕೆ ರಾಳ ಅಥವಾ ಧೂಪ (ಡ್ಯಾಮರ್) ಎಂದು ಹೆಸರು. ಇದರಲ್ಲಿ ಮೂರು ಬಗೆಗಳುಂಟು. ಒತ್ತಾದ ರಾಳ (ಕಾಂಪ್ಯಾಕ್ಟ್ ಡ್ಯಾಮರ್), ಕೋಶಮಯ ರಾಳ (ಸೆಲ್ಯುಲರ್ ಡ್ಯಾಮರ್) ಮತ್ತು ಕಪ್ಪುರಾಳ (ಬ್ಲ್ಯಾಕ್ ಡ್ಯಾಮರ್). ವೃಕ್ಷದ ವಯಸ್ಸು ಹಾಗೂ ರಾಳ ಸಂಗ್ರಹದ ವಿಧಾನವನ್ನನುಸರಿಸಿ ಈ ಮೂರು ಬಗೆಗಳು ಲಭಿಸುವುವು. ಕಾಂಡವನ್ನು ಕೊರೆದು ಸಹ ಅಂಟನ್ನು ಪಡೆಯಬಹುದು. ಇದು ಟರ್ಪಂಟೈನ್‍ನಲ್ಲಿ ಸಂಪೂರ್ಣವಾಗಿ ಹಾಗೂ ಆಲ್ಕೊಹಾಲಿನಲ್ಲಿ ಸ್ವಲ್ಪ ಮಟ್ಟಿಗೆ ಕರಗುತ್ತದೆ. ಮರಮುಟ್ಟುಗಳಿಗೆ ಹೊಳಪು ಕೊಡಲು ಇದನ್ನು ತೆಂಗಿನೆಣ್ಣೆಯೊಡನೆ ಬೆರೆಸಿ ಮೇಣದ ಬತ್ತಿಗಳನ್ನು ತಯಾರಿಸಬಹುದು. ಗಟ್ಟಿಗೊಳಿಸಿದ ಅಂಟಿನಿಂದ ಕೃತಕ ಮಣಿಗಳನ್ನು ತಯಾರಿಸಲಾಗುತ್ತದೆ. ಅಂಟಿಗೆ ಅನೇಕ ಔಷಧೀಯ ಗುಣಗಳೂ ಇವೆ. ಇದನ್ನು ಎಣ್ಣೆಯ ಜೊತೆಗೆ ಕಾಸಿ ಹಚ್ಚಿದರೆ ವಾತದ ಬಾವು ಗುಣವಾಗುತ್ತದೆ. ರಾಳದ ಮರದ ಬೀಜದಲ್ಲಿ ಒಂದು ಬಗೆಯ ಗಟ್ಟಿಯಾದ ಕೊಬ್ಬು ಉಂಟು. ಇದಕ್ಕೆ ಸಸ್ಯಮೂಲ ಬೆಣ್ಣೆ (ವೆಜಿಟೇಬಲ್ ಬಟರ್) ಎಂದು ಹೆಸರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ದೀಪ ಉರಿಸುವುದಕ್ಕೂ ಆಹಾರ ಪದಾರ್ಥಗಳಿಗೆ ಸುವಾಸನೆ ಕೊಡುವುದಕ್ಕೂ ಬೆಣ್ಣೆ, ತುಪ್ಪ ಮುಂತಾದವುಗಳಿಗೆ ಬೆರಕೆ ಮಾಡುವುದಕ್ಕೂ ಉಪಯೋಗಿಸುವುದುಂಟು. ಕಾಯಿಯಲ್ಲಿರುವ ಎಣ್ಣೆಗೂ ಸಹ ಅನೇಕ ಔಷಧೀಯ ಗುಣಗಳುಂಟು. ಕಾಯಿಯನ್ನು ಜಜ್ಜಿ ಬಿಸಿನೀರಿನಲ್ಲಿಟ್ಟು ಕುಡಿದರೆ ವಾಂತಿ ನಿಲ್ಲುವುದು. ಅಲ್ಲದೆ ಈ ಎಣ್ಣೆಯನ್ನು ವಾತರೋಗದಲ್ಲಿ ಮೈಗೆ ಹಚ್ಚುವುದುಂಟು. ಕೊಬ್ಬಿನಿಂದ ಮೋಂಬತ್ತಿಗಳನ್ನು ಸಹ ಮಾಡಬಹುದು. ಶ್ರೀಲಂಕಾದಲ್ಲಿ ಮರದ ತೊಗಟೆಯನ್ನು ಹೆಂಡದ ತಯಾರಿಕೆಯಲ್ಲಿ ಬುರುಗು ಬರಿಸಲು ಉಪಯೋಗಿಸುತ್ತಾರೆ. ಮರದ ಎಲೆಗಳನ್ನು ಪತ್ರಾವಳಿಗಳಂತೆ ಸಹ ಬಳಸಬಹುದು.
ಜನಪದ ವೈದ್ಯ
ಬದಲಾಯಿಸಿಸುಟ್ಟ ಗಾಯ ಮತ್ತು ಸಂಧಿವಾತದ ಚಿಕಿತ್ಸೆಗೆ ಈ ಮರವನ್ನು ತುಳು ಜನಪದ ವೈದ್ಯ ಪ್ರಧಾನವಾಗಿ ಪರಿಗಣಿಸುತ್ತದೆ. ಮರಕ್ಕೆ ಗಾಯ ಮಾಡಿದರೆ ಅಂಟು ಶ್ರವಿಸುತ್ತದೆ. ಈ ಅಂಟು ರಾಳ ಉಪಯೋಗಿಸಿ ಕಾಯಿಸಿದ ಎಣ್ಣೆ ಸುಟ್ಟ ಗಾಯಗಳಿಗೆ ಅತ್ಯುತ್ತಮ. ಬಿದ್ದ ಬಲಿತ ಕಾಯಿಗಳನ್ನು ಸಿಪ್ಪೆ ತೆಗೆದು ಒಡೆದು ಸುಚಿಗೊಳಿಸಬೇಕು. ಕಾಯಿಯ ಒಳಗಿರುವ ಸೊಂಡಿಲಿನಂತ ಆಕೃತಿಯನ್ನೂ ಸುತ್ತಾ ಇರುವ ಲೋಳೆಯಂತ ಪದಾರ್ಥವನ್ನೂ ತೆಗೆದು ಸ್ವಚ್ಛಗೊಳಿಸಿಕೊಳ್ಳಬೇಕು. ನಂತರ ಕಾಯಿಯನ್ನು ಹೋಳುಗಳನ್ನಾಗಿ ಮಾಡಿ ಮುಳುಗುವಷ್ಟು ನೀರು ತುಂಬಿ ಬೇಯಿಸಬೇಕು ಅರ್ಧ ಗಂಟೆಯಲ್ಲಿ ಹೋಳು ಬೆಯ್ಯುತ್ತದೆ ತದನಂತರ ಈ ಹೊಳನ್ನು ಒರಳೆ ಅಥವಾ ರುಬ್ಬುವ ಕಲ್ಲಿಗೆ ಹಾಕಿ ಮರದ ಒನಕೆಯಿಂದ ಕುಟ್ಟಬೇಕು. ಆಮೇಲೆ ಇದನ್ನು ತಳ ದಪ್ಪವಿರುವ ಪಾತ್ರೆಗೆ ಹಾಕಿ ಸುಮಾರು 3 ಗಂಟೆಗಳಷ್ಟು ಕಾಲ ಕುದಿಸಬೇಕು. ಕುದಿಸುವಾಗ ಉಕ್ಕಲು ಬಿಡಬಾರದು.ಸೌಟನ್ನು ಉಪಯೋಗಿಸಿ ತಿರುವುತ್ತ ಕುದಿಸಬೇಕು.ಕುದಿಯುವಾಗಲೇ ಮೇಲ್ಭಾಗದಲ್ಲಿ ಎಣ್ಣೆಯ ಅಂಶ ತೇಲುತ್ತದೆ. ಇದನ್ನು ಜಾಗ್ರತೆಯಲ್ಲಿ ತೆಗೆದು ಇನ್ನೊಂದು ದಪ್ಪತಳದ ಪಾತ್ರೆಯಲ್ಲಿ ಶೇಖರಿಸಿ. ನಂತರ ನೀರಿನ ಪಸೆ ಆರುವ ತನಕ ಕುದಿಸಬೇಕು.ಇದೇ ನವಿರು ಪರಿಮಳದ ಸಸ್ಯ ಮೂಲ ಶುದ್ಧ ವನಸ್ಪತಿ. ಇದನ್ನು ಒಗ್ಗರಣೆಗೆ, ದೋಸೆಗೆ ಹಾಗೂ ಖಾದ್ಯ ಕರಿಯಲು ಉಪಯೋಗಿಸಬಹುದು. ರುಚಿಕರ ಮತ್ತು ಆರೋಗ್ಯಕರ. ಕಾಯಿಯ ಎಣ್ಣೆ ತಣ್ಣಗಾದಮೇಲೆ ಬೆಣ್ಣೆಯಂತೆ ಗಟ್ಟಿಯಾಗುತ್ತದೆ ಇದಕ್ಕೆ ತೆಂಗಿನ ಎಣ್ಣೆ ಸೇರಿಸಿ ಆಯಿಂಟ್ಮೆಂಟಿನಂತೆ ಸಂಧಿವಾತ ಮತ್ತು ಬಾವಿನಿಂದ ಕೂಡಿದ ನೋವಿಗೆ ಹಚ್ಚಬಹುದು ಉತ್ತಮ ಫಲಿತಾಂಶ. ಅಂಟನ್ನೂ ಉಪಯೋಗಿಸಿ ಎಣ್ಣೆ ತೆಗೆಯಬಹುದು ಇದಕ್ಕೆ ಬೆಣ್ಣೆ ಸೇರಿಸಿ ಲೇಪಿಸುವುದು ಸಂಧಿವಾತದ ನೋವಿಗೆ ಶಮನಕಾರಿ. ರಾಳವನ್ನು ತೆಂಗಿನ ಎಣ್ಣೆಯಲ್ಲಿ ಕಾಯಿಸಿ ಹಚ್ಚುವುದು ಸಹ ಸಂಧಿವಾತ ಮತ್ತು ನೋವಿನ ಬಾವುಗಳಿಗೆ ಅತ್ಯುತ್ತಮ. ತೊಗಟೆಯ ಕಷಾಯ ಬೆನ್ನು ನೋವಿಗೆ ಔಷಧಿ. (ಆದರೆ ಇದು ಲೈಂಗಿಕಾಸಕ್ತಿಯನ್ನು ಕುಂದಿಸುತ್ತದೆ (anti aphrodisiac ) ಎಂಬ ಅರಿವಿದೆ. ರಾಳ ತೆಂಗಿನ ಎಣ್ಣೆಯೊಂದಿಗೆ ಇಸುಬು (eczema) ವಾಸಿಯಾಗಲು ಪರಿಣಾಮಕಾರಿ. ರಾಳವನ್ನು ಕಲ್ಲುಪ್ಪು (rock salt) ಮತ್ತು ಸಾಸಿವೆಯೊಂದಿಗೆ ನೀರು ಹಾಕಿ ಅರೆದು ವೃಷಣಗಳ ತುರಿಕೆಗೆ ಹಚ್ಚುತ್ತಾರೆ. ರಾಳ,ಕಲ್ಲುಪ್ಪು (rock salt ), ಜೇನು ಮತ್ತು ತುಪ್ಪ ಮಿಶ್ರಣ ಮಾಡಿ ಕಾಲುಗಳ ಉರಿತಕ್ಕೆ ಹಚ್ಚುತ್ತಾರೆ. ರಾಳವನ್ನು ಸಮಪ್ರಮಾಣದ ತೆಂಗಿನ ಎಣ್ಣೆ ಸೇರಿಸಿ ಬಿಸಿ ಮಾಡಿ ಹಚ್ಚಿದರೆ ಸುಟ್ಟ ಗಾಯದ ಕಲೆಗಳು ಮಾಯವಾಗುತ್ತದೆ.