ದೇರಮ್ಮ ಶೆಟ್ಟಿ ಬಸದಿ, ಮೂಡಬಿದಿರೆ

ದೇರಮ್ಮ ಶೆಟ್ಟಿ ಬಸದಿಯು ಕರಾವಳಿ ಭಾಗದಲ್ಲಿರುವ ಜೈನ ಬಸದಿಗಳಲ್ಲೊಂದು.

ಮಂಗಳೂರು ತಾಲೂಕಿನ ಪ್ರಾಂತ್ಯ ಗ್ರಾಮದ ಇನ್ನೊಂದು ಪ್ರಸಿದ್ದ ಬಸದಿ ಅಂದರೆ ದೇರಮ್ಮ ಶೆಟ್ಟಿ ಬಸದಿ. ಇಲ್ಲಿ ಪೂಜಿಸಲ್ಪಡುವ ಮೂಲನಾಯಕ ಸ್ವಾಮಿ ಜೈನ ಪರಂಪರೆಯಲ್ಲಿ ರತ್ನತ್ರಯರೆಂದು ಪ್ರಸಿದ್ದರಾದ ಶ್ರೀ ಅರಮಲ್ಲಿನಾಥ ಮತ್ತು ಮುನಿಸುವೃತ ತೀರ್ಥಂಕರರು. ಈ ಬಸದಿಗೆ ಹತ್ತಿರವಿರುವ ಇನ್ನೊಂದು ಬಸದಿಯ ಹೆಸರು ಲೆಪ್ಪದ ಬಸದಿ.[]

ಇತಿಹಾಸ

ಬದಲಾಯಿಸಿ

೧೫ನೇ ಶತಮಾನದಲ್ಲಿ ದೇರಮ್ಮ ಶೆಟ್ಟಿ ಎಂಬ ಶ್ರಾವಕನಿಂದ ಈ ಬಸದಿಯು ನಿರ್ಮಾಣವಾಗಿದೆ. ಬಸದಿಯು ಆಯತಕರವಾಗಿದ್ದು ೩ ಮುಖ್ಯದಾರಗಳಿಂದ ಕೂಡಿದೆ. ಇಲ್ಲಿಯ ದ್ವಾರಪಾಲಕ ಮೂರ್ತಿಗಳು ಸುಮಾರು ೧೫ ಅಥವಾ ೧೬ನೇ ಶತಮಾನದವುಗಳು. ವಿವಿಧ ಸ್ತಂಭಗಳಲ್ಲಿ ಕೆತ್ತಿರುವ ವಿವಿಧ ಪುರಾಣ, ರಾಮಾಯಣ, ಮಹಾಭಾರತಕ್ಕೆ ಸಂಬಂಧಪಟ್ಟ ಪೌರಾಣಿಕ ಕೆತ್ತನೆಗಳನ್ನು ಕಾಣಬಹುದು. ಇವೆಲ್ಲವುಗಳ ಅಧ್ಯಯನದಿಂದ ಈ ಜಿನಾಲಯವು ಸುಮಾರು ೧೫ನೇ ಶತಮಾನದಲ್ಲಿ ನಿರ್ಮಾಣವಾಗಿರಬೇಕೆಂದು ಹೇಳಬಹುದು. []

ಹಿನ್ನೆಲೆ

ಬದಲಾಯಿಸಿ

ದೇರಮ್ಮ ಶೆಟ್ಟಿ ಒಬ್ಬ ಅಡುಗೆಯವನಾಗಿದ್ದು, ಬಸದಿಯ ನಿರ್ಮಾಣ ಸಮಯದಲ್ಲಿ ಹಣ ಸಂಗ್ರಹಿಸುವಾಗ ಬಡವನಾದ ದೇರಮ್ಮನಲ್ಲಿ ಏನಿದೆ, ಅವನಲ್ಲಿದ್ದರೆ ರುಬ್ಬಿದ ಅಕ್ಕಿ ಇರಬಹುದಷ್ಟೆ ಎಂದು ಜನರು ಅಪಹಾಸ್ಯ ಮಾಡಿದ್ದರಂತೆ. ಇದರಿಂದ ಅವಮಾನಗೊಂಡ ದೇರಮ್ಮಶೆಟ್ಟಿ ತಾನು ಕೂಡ ಜಿನಾಲಯ ನಿರ್ಮಿಸುತ್ತೇನೆ, ಅಂದುಕೊಂಡು ಕಾಲಕ್ರಮೇಣ ಪರಿಕ್ರಮಿಸಿ ಸಂಗ್ರಹಿಸಿದ ಸ್ವಂತ ಹಣದಿಂದ ಇದೇ ಜಿನಾಲಯವನ್ನು ಸುಂದರವಾಗಿ ಕಟ್ಟಿಸಿದ.

ಬಸದಿಯು ಮೂಡಬಿದಿರೆ ಶ್ರೀ ಮಠಕ್ಕೆ ಸೇರಿದೆ. ಈ ಬಸದಿಯು ಶಿಲಾಮಯವಾಗಿದೆ. ಬಸದಿಯ ಮಾಡನ್ನು ಹಂಚಿನಿಂದ ನಿರ್ಮಿಸಲಾಗಿದೆ. ಈಗ ಈ ಬಸದಿಯನ್ನು ಮೂಡಬಿದಿರೆ ಮಠದ ಸ್ವಸ್ತಿಶ್ರೀ ಭಟ್ಟಾರಕ ಜಾರುಕೀರ್ತಿ ಪಂಡಿತಾರ್ಯವರ್ಯ ಸ್ವಾಮಿಜಿಯವರು ನಡೆಸುತ್ತಿದ್ದಾರೆ. ಇಲ್ಲಿಯ ರತ್ನಾತ್ರಯ ಮೂರ್ತಿಗಳ ಪೈಕಿ ಒಂದು ಕರಿಶಿಲೆಯದ್ದು, ಎರಡು ಅಮೃತಶಿಲೆಯದ್ದಾಗಿವೆ. ಆದರೆ ಎಲ್ಲವುಗಳ ಪ್ರಭಾವಳಿಗಳು ಆಕರ್ಷಕ ಲೋಹದವುಗಳಾಗಿವೆ. ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಮೂರ್ತಿ ಇದೆ. ಬಸದಿಯ ಎದುರು ಯಾವುದೇ ಮಾನಸ್ತಂಭ ಇರುವುದಿಲ್ಲ. ಯಾವುದೇ ಕಾರ್ಯಾಲಯ ಇಲ್ಲ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ದ್ವಾರಪಾಲಕರ ಚಿತ್ರಗಳು ಮತ್ತು ದ್ವಾರಪಾಲಕರ ಮೂರ್ತಿಗಳಿದ್ದಾವೆ . ಇತರ ಬೇರೆ ಯಾವುದೇ ಚಿತ್ರಗಳು ಇಲ್ಲ. ಪ್ರಾರ್ಥನಾ ಮಂಟಪದಲ್ಲಿ ಶಿಲ್ಪಗಳಿಂದ ಕೂಡಿದ ೪ ಕಂಬಗಳಿವೆ. ತೀರ್ಥಂಕರ ಸ್ವಾಮಿಯ ಬಳಿಗೆ ಹೋಗುವಾಗ ಸಿಗುವ ಮಂಟಪವನ್ನು ತೀರ್ಥಮಂಟಪ ಎಂದು ಕರೆಯುತ್ತಾರೆ. ಗಂಧಕುಟಿಯು ಈ ತೀರ್ಥಂಕರ ಗಣಧರ ಪಾದಕ್ಕೆ ಇದೆ. ಈ ಮೂರ್ತಿಗೆ ಯಾವಾಗಲೂ ಪೂಜೆ ಮಾಡಲಾಗುತ್ತದೆ. ಈ ಬಸದಿಯಲ್ಲಿ ಪೂಜೆಗೊಳ್ಳುವ ಯಕ್ಷ-ಯಕ್ಷಿ ಯಾರೆಂದರೆ ಕುಬೇರ ಯಕ್ಷಿ ಮತ್ತು ಅಪರಾಜಿತ ಯಕ್ಷಿ. ಬಸದಿಯಲ್ಲಿರುವ ಪದ್ಮಾವತಿ ದೇವಿಯ ಮೂರ್ತಿಗೆ ಬಳೆಗಳನ್ನು ಹಾಕಿ ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪ ಇದೆ.

ಕಲಾಕೃತಿ

ಬದಲಾಯಿಸಿ

ಬಸದಿಯಲ್ಲಿ ಜಿನಬಿಂಬಗಳ ಪೀಠಗಳ ಮೇಲೆ ಅಸ್ಪಷ್ಟ ಬರವಣಿಗೆ ಇದೆ. ಮೂಲನಾಯಕ(ಸ್ವಾಮಿಯ) ಮೂರ್ತಿ ಎಡ ಮತ್ತು ಬಲದಲ್ಲಿರುವ ಮೂರ್ತಿ ಬಿಳಿ ಶಿಲೆಯದ್ದಾಗಿದೆ. ಮಧ್ಯದಲ್ಲಿರುವುದು ಕಪ್ಪು ಶಿಲೆಯದ್ದಾಗಿದೆ. ಮೂರ್ತಿಗಳು ಪದ್ಮಾಸನ ಭಂಗಿಯಲ್ಲಿದೆ. ಸುತ್ತಲೂ ತೋರಣದ ಪ್ರಭಾವಳಿ ಇದೆ. ಅಷ್ಟದಿಕ್ಪಾಲಕರ ಕಲ್ಲುಗಳು ಇದ್ದು, ಪೂಜೆ ನಡೆಯುತ್ತದೆ. ಬಸದಿಯ ಸುತ್ತಲೂ ಪ್ರಕಾರಗೋಡೆ ಮುರಕಲ್ಲಿನಿಂದ ನಿರ್ಮಿಸಲಾಗಿದೆ.

ಧಾರ್ಮಿಕ ಕಾರ್ಯಗಳು

ಬದಲಾಯಿಸಿ

ಇಲ್ಲಿ ದಿನವೂ ಮೂಲಸ್ವಾಮಿಗೆ ಕ್ಷೀರಾಭಿಷೇಕ ಮತ್ತು ಜಲಾಭಿಷೇಕ ಮಾಡಲಾಗುತ್ತದೆ. ಇತರ ಪೂಜೆ ಆರಾಧನೆಗಳೊಂದಿಗೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಎಲ್ಲಾ ಬಿಂಬಗಳಿಗೆ ವಜ್ರಲೇಪನ ಮಾಡಲಾಗಿಲ್ಲ. ಬಸದಿಯಲ್ಲಿ ದಿನದಲ್ಲಿ ಬೆಳಗ್ಗೆ ಮಾತ್ರ ಪೂಜೆ ನಡೆಸಲಾಗುತ್ತದೆ. ಡಿಸೆಂಬರ್ ಸಮಯದಲ್ಲಿ ವಾರ್ಷಿಕೋತ್ಸವ ನಡೆಯುತ್ತದೆ. ಬಸದಿಯಲ್ಲಿ ವಿಶೇಷವಾಗಿ ಮಂಗಳ ಪೂಜೆ, ದೀಪಾವಳಿ ಮತ್ತು ಯುಗಾದಿ ಹಬ್ಬ ಜೀವದಯಾಷ್ಟಮಿ ಪೂಜೆಯನ್ನು ಮಾಡಲಾಗುತ್ತದೆ. ಬಸದಿಯ ಅಂಗಳದಲ್ಲಿ ಬಲಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ.ತ್ರಿಶೂಲ, ನಾಗರಕಲ್ಲು ಇದೆ. ಇವೆಲ್ಲವೂ ಕಲ್ಲಿನ ಮೇಲೆ ಮತ್ತು ನೆಲದ ಮೇಲೆ ಚರಸ್ಥಿತಿಯಲ್ಲಿದೆ.

ಉಲ್ಲೇಖಗಳು

ಬದಲಾಯಿಸಿ
  1. https://www.jainheritagecentres.com/jainism-in-india/karnataka/moodabidri/
  2. ಶೆಣೈ, ವೈ. ಉಮಾನಾಥ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ. ಉಜಿರೆ: ಮಂಜುಶ್ರೀ ಪ್ರಿಂಟರ್ಸ್.