ದುಗ್ಗಳೆ ದೇವರ ದಾಸಿಮಯ್ಯನ ಧರ್ಮಪತ್ನಿ. ಸದಾ ಶಿವಭಕ್ತಿಯಲ್ಲಿ ನಿರತಳಾದ ಶರಣೆ. ಈ ದಂಪತಿಗಳ ಕಾಯಕನಿಷ್ಠೆ, ವಸ್ತ್ರದಾನದ ವೈಶಿಷ್ಟ್ಯಗಳನ್ನು ಬಸವಣ್ಣ, ಕೋಲಶಾಂತಯ್ಯ, ಸತ್ಯಕ್ಕ ಮೊದಲಾದ ಶರಣ ಶರಣೆಯರು ಕೊಂಡಾಡಿದ್ದಾರೆ. ದುಗ್ಗಳೆ ಅನೇಕ ಪವಾಡಗಳನ್ನು ಮಾಡಿದ್ದಾಳೆ. ದೇವರ ದಾಸಿಮಯ್ಯ ದುಗ್ಗಳೆಯನ್ನು ಮದುವೆಗೆ ನೋಡಲು ಹೋದಾಗ ಆತ ಅವಳಿಗೆ ಮರಳಿನಲ್ಲಿ ಪಾಯಸ ಮಾಡಲು ಹೇಳಿ ಪರೀಕ್ಷಿಸಿದನಂತೆ. ಕಬ್ಬಿಣದ ಕಡಲೆಯನ್ನು ಬೇಯಿಸಿ ಅಡುಗೆ ಮಾಡಿದಳಂತೆ. ದುಗ್ಗಳೆ ರೂಪ, ಹಣದಿಂದ ಶ್ರೀಮಂತೆಯಾಗದೆ, ತನ್ನ ಆಂತರಿಕ ಗುಣ-ನಡವಳಿಕೆ, ಹೊಂದಾಣಿಕೆಯ ಸ್ವಭಾವದಿಂದ ತನ್ನ ಆಂತರ್ಯ ಸಿರಿ ಹೆಚ್ಚಿಸಿ ಕೊಂಡವಳು. ನೇಯ್ಗೆ ಕಾಯಕದಲ್ಲಿ ಪತಿಗೆ ಸಹಕರಿಸಿ, ವಸ್ತ್ರದಿಂದ ಮಾರಿ ಬಂದ ಹಣದಿಂದ ದಾಸೋಹತತ್ವ ಅಳವಡಿಸಿಕೊಂಡು ಗಂಡನಿಂದ ಸೈ ಎನ್ನಿಸಿ ಕೊಂಡವಳು. ದೇವರ ದಾಸಿಮಯ್ಯ ತನ್ನ ಮಡದಿಯ ಗುಣ-ಶೀಲಗಳನ್ನು ಅತ್ಯಂತ ಪ್ರೀತಿ, ಅಭಿಮಾನದಿಂದ ನೆನೆಯುತ್ತಾ,' ದುಗ್ಗಳೆಯ ತಂದು ಬದುಕಿದೆ ರಾಮನಾಥ' ಎಂದಿರುವನು. ಈಕೆಯ ಎರಡು ವಚನಗಳು ಲಭ್ಯವಿವೆ. ಈಕೆಯ ವಚನಗಳ ಅಂಕಿತ " ದಾಸಯ್ಯ ಪ್ರಿಯ ರಾಮನಾಥ".

ದುಗ್ಗಳೆ
ಜನನ೧೧೬೦
ಅಂಕಿತನಾಮದಾಸಯ್ಯ ಪ್ರಿಯ ರಾಮನಾಥ
ಸಂಗಾತಿ(ಗಳು)ದೇವರ ದಾಸಿಮಯ್ಯ/ಜೇಡರ ದಾಸಿಮಯ್ಯ


ಬಸವಣ್ಣ ಭಕ್ತ, ಪ್ರಭುದೇವ ಜಂಗಮ
ಸಿದ್ದರಾಮಯ್ಯ ಯೋಗಿ, ಚೆನ್ನಬಸವಣ್ಣ ಭೋಗಿ
ಅಜಗಣ್ಣ ಐಕ್ಯನಾದವನು ಇಂತಹವರ
ಕರುಣ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ತನಗೇಕೆ ದಾಸಯ್ಯ ಪ್ರಿಯ ರಾಮನಾಥ

"https://kn.wikipedia.org/w/index.php?title=ದುಗ್ಗಳೆ&oldid=672754" ಇಂದ ಪಡೆಯಲ್ಪಟ್ಟಿದೆ