ದಾಸರಾಟ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
'ದಾಸ' ರೆನ್ನುವ ಜನಾಂಗ ಆಡುವ ಬಯಲಾಟದ ಒಂದು ಪ್ರಕಾರ .ದಾಸರು ಹಳ್ಳಿಯಿಂದ ಹಳ್ಳಿಗೆ ಸಂಚರಿಸುತ್ತಾ ,ಜಾತ್ರೆ ಉತ್ಸವಗಳ ಕಾಲದಲ್ಲಿ ,ಸರಿಯಾದ ಆಶ್ರಯ ಸಿಗುವಲ್ಲೆಲ್ಲ ತಮ್ಮ ಕಲೆಯನ್ನು ಪ್ರರ್ದಶಿಸುತ್ತಾರೆ .ಇವರ ಆಟಗಳು ಸಾಮಾನ್ಯವಾಗಿ ಧಾರ್ಮಿಕ ವಸ್ತುಗಳನ್ನುಳ್ಳವು. ಇವರು ತಿರುಪತಿ ತಿಮ್ಮಪ್ಪನ ಅಥವಾ ಸಮೀಪದ ಯಾವುದಾದರು ಹಳ್ಳಿಯ ಹನುಮಪ್ಪನ ಭಕ್ತರಾಗಿರುತ್ತಾರೆ .ಈ ಮೇಳದ ಮುಖ್ಯಸ್ಥ -ನಟ್ಟುವಾನ . ಪ್ರರ್ದಶನದ ಪೂರ್ಣ ಅಧಿಕಾರ ,ಜವಾಬ್ದಾರಿ ಇವನದೇ ..ಸ್ತ್ರೀ ಪುರುಷರಿಬ್ಬರೂ ಭಾಗವಹಿಸುವುದು ದಾಸರಾಟದ ವೈಶಿಷ್ಟ್ಯ . ಪ್ರತಿಯೊಂದು ದಾಸರಾಟದ ಮೇಳವೂ ಹಾಡುವುದರಲ್ಲಿ ,ಕುಣಿಯುವುದರಲ್ಲಿ ನುರಿತ ಒಬ್ಬ ಸುಂದರ ನಾಯಕಿ (ದಾಸಿ)ಯನ್ನು ಹೊಂದಿರುತ್ತದೆ.ಒಂದು ತಂಡದ ಜನಪ್ರಿಯತೆ ಈ ದಾಸಿಯನ್ನೇ ಅವಲಂಬಿಸಿರುತ್ತದೆ.
ಹಳ್ಳಿಯ ಯಾವುದೇ ಕೂಟ ,ಚೌಕ ,ರಸ್ತೆ ಅಥವಾ ಮಂಟಪಗಳು ಇವರ ರಂಗಸ್ಥಳವಾಗಬಹುದು .ನೆಲದ ಮೇಲೆ ಹತ್ತು ಚದರಡಿಯ ಜಮಖಾನ ಹಾಸಿರುತ್ತಾರೆ.ಇದೇ ರಂಗ ಮಧ್ಯದಲ್ಲಿ ಒಂದು ಕಂಬಳಿಯನ್ನು ನೇತು ಹಾಕಲಾಗಿದ್ದು ಅದರ ಹಿಂಭಾಗವೇ ನೇಪಥ್ಯ ,ಮುಂಭಾಗವೇ ರಂಗಭೂಮಿಯಾಗಿರುತ್ತದೆ.ಇದರ ಪ್ರೇಕ್ಷಕರನ್ನು 'ಪರಸಿ' ಎಂದು ಕರೆಯಲಾಗುತ್ತದೆ .ತಿರುಪತಿ ತಿಮ್ಮಪ್ಪನ ಸಂಕೇತವಾಗಿ ನೇಪಥ್ಯದಲ್ಲಿ ದೀಪವೊಂದು ಉರಿಯುತ್ತಿರುತ್ತದೆ .ಇದರ ಮುಂದೆ ಧೂಪ,ಹಣ್ಣು,,ತೆಂಗಿನ ಕಾಯಿ ,ಗೆಜ್ಜೆ ಮತ್ತು ತಾಳಗಳಿರುತ್ತವೆ .ಎಲ್ಲರೂ ವೇಷಭೂಷಣಗಳನ್ನು ಧರಿಸಿಯಾದ ಮೇಲೆ ನಟ್ಟುವಾನ ಮತ್ತು ದಾಸಿ ದೀಪದೆದುರು ಕೈಮುಗಿದು ನಿಲ್ಲುತ್ತಾರೆ .ಉಳಿದ ನಟರು ,ವಾದ್ಯ ವೃಂದದವರು ಅವರನ್ನನುಸರಿಸುತ್ತಾರೆ,ನಟ್ಟುವಾನ ದೀಪಕ್ಕೆ ಪೂಜೆ ಸಲ್ಲಿಸಿ ,ತೆಂಗಿನಕಾಯಿ ಒಡೆದು ಅದರ ಹೋಳುಗಳನ್ನು ರಂಗದ ಎರಡೂ ಬದಿಗೆ ಎಸೆಯುತ್ತಾನೆ.ದೀಪಕ್ಕೆ ನಮಸ್ಕರಿಸಿ ದೀಪವನ್ನು ಕೈಗೆತ್ತಿಕೊಳ್ಳುತ್ತಾನೆ. ದಾಸಿ ಗೆಜ್ಜೆ ಕಟ್ಟಿಕೊಳ್ಳುತ್ತಾಳೆ.ಎಲ್ಲರೂ ನಟ್ಟುವಾನನಿಗೆ ನಮಸ್ಕರಿಸುತ್ತಾರೆ .ನಟ್ಟುವಾನನ ಎಡಭಾಗದಲ್ಲಿ ಹಾರ್ರೋನಿಯಮ್ನವನೂ ಬಲಭಾಗದಲ್ಲಿ ಮೃದಂಗದವನೂ ಕುಳಿತುಕೊಳ್ಳುತ್ತಾರೆ.ಕಂಬಳಿಯ ಹಿಂದೆ ಮೂರುಜನ ತಾಳ ಹಿಡಿದು ನಿಂತಿರುತ್ತಾರೆ .
ರಾತ್ರಿ ಸುಮಾರು ಹತ್ತು ಘಂಟೆಯ ವೇಳೆಗೆ ತಿರುಪತಿ ತಿಮ್ಮಪ್ಪ,,ಶಿವ,ಗಣೇಶ ಮುಂತಾದ ದೇವತೆಗಳ ಸುತ್ತಿ ಹಾಡುಗಳಿಂದ ಪ್ರರ್ದಶನ ಪ್ರಾರಂಭವಾಗುತ್ತದೆ .ರಾಧೆ ಪ್ರವೇಶಿಸಿ ಗೆಜ್ಜೆಯ ಧ್ವನಿ ಮಾಡುತ್ತ 'ರಾಧೆ ಬರುವಳು ನೋಡಿರೋ 'ಎಂದು ಹಾಡುತ್ತಾ ಕುಣಿಯುತ್ತಾಳೆ.ನಟ್ಟುವಾನ ರಂಗದ ಮೇಲಿನ ಪ್ರತಿಯೊಂದು ಪಾತ್ರದೊಂದಿಗೆ ಹಾಡುತ್ತಾನೆ .ಕಂಬಳಿಯ ಹಿಂದೆ ನಿಂತ ಹಿಮ್ಮೇಳದವರ ಪೈಕಿ ಒಬ್ಬನು ಚೀರುದನಿಯಲ್ಲಿ ಹಾಡುತ್ತಿರುತ್ತಾನೆ. ಹಿಮ್ಮೇಳದವರು ಹಾಡುವಾಗ ರಾಧೆ ಅಥವಾ ದಾಸಿ ತಾಳಲಯಗಳಿಗೆ ಸರಿಯಾಗಿ ಹಾವಭಾವದಿಂದ ನರ್ತಿಸುತ್ತಿರುತ್ತಾಳೆ .ಹಾಡು ಮುಗಿದೊಡನೆ ಆಕೆ ಮೂಲೆಯಲ್ಲಿ ಒಯ್ಯಾರದಿಂದ ನಿಲ್ಲುತ್ತಾಳೆ .ಮೇಳಗಾರನೊಂದಿಗೆ ತನ್ನ ಪರಿಚಯದ ಹಾಡು ಹೇಳಿ ,ಅದರ ಸಾರಾಂಶವನ್ನು ವಿವರವಾಗಿ ಸಂಭಾಷಣೆಯ ರೂಪದಲ್ಲಿ ಹೇಳುತ್ತಾಳೆ .ಕೃಷ್ಣ ಪ್ರವೇಶಿಸಿದ ಮೇಲೆ ಅವನಿಗೂ ರಾಧೆಗೂ ವಾದ ವಿವಾದಗಳುಂಟಾಗಿ ಜಗಳವಾಡುತ್ತರೆ .ಕೊನೆಗೆ ಇಬ್ಬರೂ ರಾಜಿಯಾಗಿ ನರ್ತಿಸುತ್ತಾ ಹೋಗುತ್ತಾರೆ.
ಇದಾದ ಮೇಲೆ ಕೃಷ್ಣನ ಅವತಾರದ ಒಂದೆರಡು ಕಥೆಗಳನ್ನು ಆಡುತ್ತಾರೆ .ಮುಂದೆ ಪ್ರಾರಂಭವಾಗುವ ಪ್ರೇಮಕಥೆಯಲ್ಲಿ ,ರಾಧೆ ಅಥವಾ ದಾಸಿಯಾಗಿದ್ದವಳು 'ಚಿಮಣಾ' ಎಂಬ ಹೆಸರಿನಿಂದ ಸಂಪ್ರದಾಯದ ನಾಯಕಿಯ ವೇಷದಲ್ಲಿ ನಟ್ಟು ವಾನ,ವಾದ್ಯಗಾರರ ಅದ್ದೂರುಯ ಸ್ವಾಗತದೊಂದಿಗೆ ರಂಗಕ್ಕೆ ಬರುತ್ತಾಳೆ .ದಾಸರಾಟದ ನಾಯಕನ ಹೆಸರು 'ಗೊಡ್ಡಿ ಭೀಮಣ್ಣ '.ಅವನು ಬಂದು ಇವಳ ಬಗೆಗೆ ಪ್ರೇಮ ವ್ಯಕ್ತಪಡಿಸುತ್ತಾನೆ .ಅವಳು ನಿರಾಕರಿಸುತ್ತಾಳೆ .ಈಗ ಗಂಡು-ಹೆಣ್ಣಿನ ಹೆಚ್ಚುಗಾರಿಕೆಯ ಬಗೆಗೆ ಅವರಲ್ಲಿ ವಾದ-ವಿವಾದಗಳೇಳುತ್ತವೆ .ತಮ್ಮ ನಿಲುವಿನ ಸಮರ್ಥನೆಗೆ ಕವಿಗಳ,ಸಂತರ,ದಾಸರ ಪದಗಳನ್ನೂ,ವಚನಗಳನ್ನೂ ಬಳಸಿಕೊಳ್ಳುತ್ತಾರೆ.ಇವರ ನಡುವೆ ಆಗಾಗ್ಗೆ ವೇಷ ಬದಲಿಸುತ್ತಾ ಪ್ರೇಕ್ಷಕರನ್ನು ನಗಿಸುವ ವಿದೂಷಕನೊಬ್ಬ ಇರುತ್ತಾನೆ .ಅವನನ್ನು 'ಜವಾರಿ' ಎಂದು ಕರೆಯಲಾಗುತ್ತದೆ .ಅವನು ನಾಯಕ ನಾಯಕಿಯರ ವಾದಕ್ಕೆ ಹಾಸ್ಯಾಸ್ಪದ ತಿರುವು ಅಥವಾ ಅಶ್ಲೀಲ ಅರ್ಥ ಕಲ್ಪಿಸುತ್ತಿರುತ್ತಾನೆ..ಪ್ರೇಕ್ಷಕರು ಚಿಮಣಾಳನ್ನು ಕಥೆಗೆ ಸಂಬಂಧವಿಲ್ಲದ ತಮ್ಮ ಮೆಚ್ಚುಗೆಯ ಯಾವುದಾದರು ಹಾಡನ್ನು ಹೇಳಲು ಒತ್ತಾಯಿಸಬಹುದು.ಕೃಷ್ಣನ ಯಾವುದಾದರೊಂದು ಅವತಾರವನ್ನು ಅಭಿನಯಿಸುವಂತೆ ನಟ್ಟು ವಾನನಿಗೆ ಹೇಳಬಹುದು.ಅವತಾರದ ಕಥೆಗಳು ಒಂದರಿಂದೊಂದು ಭಿನ್ನವಾಗಿದ್ದು ಒಂದೆರಡು ಗಂಟೆಗಳ ಅವಧಿಯಲ್ಲಿ ಮುಗಿಯುತ್ತವೆ .ಒಂದೊಂದು ಲಾವಣಿಯ ರೂಪದಲ್ಲಿದ್ದು ಮಧ್ಯೆ ಒಂದೆರಡು ನಾಟಕೀಯ ಸನ್ನಿವೇಶಗಳನ್ನು ಹೊಂದಿರುತ್ತವೆ ..ಪ್ರತಿಯೊಂದು ಅವತಾರದ ಕಥೆಗೂ ನಾಂದಿ ಮತ್ತು ಮಂಗಳಗಳಿರುತ್ತವೆ .
ದಾಸರಾಟಕ್ಕೆ ಒಂದು ನಿರ್ದಿಷ್ಟ ರೂಪವಿಲ್ಲ ,ವಸ್ತುವಿಲ್ಲ .ಮಹಾರಾಷ್ಟ್ರದಲ್ಲಿರುವ ಇಂಥದೇ ಪ್ರಕಾರವನ್ನು 'ತಮಾಶಾ' ಎಂದು ಕರೆಯುತ್ತಾರೆ.ದಾಸರಾಟದ ಈ ದೇಶೀ ರಂಗಭೂಮಿ ಆರಾಧನೆಯಿಂದಲೇ ಹುಟ್ಟಿಕೊಂಡದ್ದು .ಗ್ರಾಮದೇವತೆಯ ಆಸಾದಿಯಂತೆ ಇಲ್ಲಿ ನಟ್ಟು ವಾನನಿದ್ದಾನೆ .ಇವನನ್ನು 'ಮೇಟಿತಾಳ' ಮತ್ತು 'ಕಥೆಗಾರ' ಎನ್ನುವ ಹೆಸರುಗಳಿಂದ ಕರೆಯುತ್ತ್ತಾರೆ .ಪೂರ್ವಜರಿಂದ ಬಂದ ತಾಳಗಳನ್ನು ನಟ್ಟು ವಾನನಲ್ಲದೆ ಬೇರೆ ಯಾರೂ ಮುಟ್ಟುವುದಿಲ್ಲ .ಅವನ ಪ್ರಕಾರ ಆಟವನ್ನು ಜೀವಂತವಾಗಿ ಉಳಿಸಿಕೊಂಡು ಹೋಗುವುದೇ ದೇವರ ಸೇವೆ .ಇವನು ರಂಗಸ್ಥಳದ ಮೇಲ್ವಿಚಾರಕನಾದುದರಿಂದ ಮೇಳಗಾರನೆಂತಲೂ ಕರೆಯುತ್ತಾರೆ. ಹಿಮ್ಮೇಳದಲ್ಲಿ ಮೂರು ಜನರಿದ್ದು ಅವರು ಒಳಟ್ಟದಲ್ಲಿ ಪ್ರೇಕ್ಷಕರಿಗೆ ಕಾಣದಂತೆ ನಿಂತಿರುತ್ತಾರೆ.ಮುಮ್ಮೇಳದವರ ಹಾಡನ್ನು ಇವರು ಪುನ್ಃ ಹಾಡುತ್ತಾರೆ .ಆಗ ಪಾತ್ರಧಾರಿಗಳು ಕುಣಿಯುತ್ತಾರೆ .
ದಾಸರಲ್ಲಿ ಎಡಗೈದಾಸರು ,ಬಲಗೈದಾಸರು ಎಂದಿದ್ದು ಎಡಗೈದಾಸರು ತಮ್ಮ ಹೆಣ್ಣುಮಕ್ಕಳನ್ನು ದೇವಾಲಯಕ್ಕೆ ಅರ್ಪಿಸುವುದುಂಟು.ಇದನ್ನು 'ದಾಸ' ಬಿಡುವುದೆಂದು ಕರೆಯುತ್ತಾರೆ .ಇವಳು ಉಪಜೀವನಕ್ಕಾಗಿ ವೇಶ್ಯಾವೃತ್ತಿಯನ್ನವಲಂಬಿಸುವುದುಂಟು.ದಾಸರಾಟದಲ್ಲಿ ಬರುವ ಶಿವ-ಶಕ್ತಿ ಮತ್ತು ಕೃಷ್ಣ-ರಾಧೆಯರ ಹೆಸರಿನಲ್ಲಿ ನಡೆಯುವ ಹೆಚ್ಚುಗಾರಿಕೆಯ ವಾದವನ್ನು ಕಲ್ಗಿ ಮತ್ತು ತುರಾ ಎಂದು ವಿಭಾಗಿಸಲಾಗಿದೆ.ತುರಾ ಪಂಥದವರು ಕೃಷ್ಣ ಅಥವಾ ಶಿವನೇ ಹೆಚ್ಚೆಂದು ನಂಬಿ ತಮ್ಮ ಪೂಜೆಯಲ್ಲಿ ಪ್ರಾಶಸ್ತ್ಯ ಕೊಡುತ್ತಾರೆ .ಕಲ್ಗಿ ಪಂಥದವರು ಶಕ್ತಿ ಅಥವಾ ರಾಧೆಯೇ ಹೆಚ್ಚೆಂದು ಹೆಣ್ಣು ದೇವತೆಗಳಿಗೆ ಪ್ರಾಶಸ್ತ್ಯ ಕೊಡುತ್ತಾರೆ.ಆದರೆ ದಾಸರಾಟದ ಪ್ರಧಾನ ವಸ್ತು ವಿಷ್ಣುವಿನ ದಶಾವತಾರಗಳೇ ಹೊರತು ಶಕ್ತಿಯ ಉಪಾಸನೆಯಲ್ಲ. ವೈಷ್ಣವ ದಾಸರಲ್ಲದೆ ಶೈವದಾಸರು ಹಿಂದೆ ಇದ್ದಂತೆ ತಿಳಿದುಬರುತ್ತದೆ .ದಾಸರಾಟದಲ್ಲಿ ಅವತಾರಗಳ ಕಥೆ ಬಿಟ್ಟರೆ ಉಳಿದ ಪ್ರದರ್ಶನವೆಲ್ಲ ಚಿಂದಿಯಾಗಿದ್ದು ತೇಪೆಹಚ್ಚಿದ ವಸ್ತುವಿನಿಂದ ಕೂಡಿರುತ್ತದೆ.ಪರಸ್ಪರ ಸಂಬಂಧವಿಲ್ಲದ ಅನೇಕ ಅಂಶಗಳನ್ನು ದಾಸರಾಟ ಒಳಗೊಂಡಿದೆ .ಆದ್ದರಿಂದಲೇ 'ದಾಸರಾಟ ಆಟವಲ್ಲ ದೋಸೆ ಊಟ ಊಟವಲ್ಲ 'ಎಂಬ ಗಾದೆಯಿದೆ .