ದಾವಣೀ ಬೈಲು
ತೀರ್ಥಹಳ್ಳಿಯ ಆರಗದಿಂದ ಕೋಣಂದೂರಿಗೆ ಹೋಗುವ ದಾರಿಯಲ್ಲಿ, ಗುಡ್ದೆಕೊಪ್ಪಗಿಂತ ಮುಂಚೆ ಮರಗಳಲೆ ಬಸ್ ನಿಲ್ದಾಣದಲ್ಲಿ ಎಡಕ್ಕೆ ತಿರುಗಿ ಸುಮಾರು ಎರಡೂವರೆ ಕಿಲೋಮೀಟರ್ ಕಾಡಿನೊಳಗೆ ಹೋದರೆ ನಮಗೆ '"ದಾವಣೀಬೈಲು"' ಎಂಬ ಪ್ರದೇಶ ಸಿಗುತ್ತದೆ. ಇಲ್ಲಿ ೧೨ನೇ ಶತಮಾನದ ಹೊಯ್ಸಳರ ವಾಸ್ತುಶಿಲ್ಪದ ಸೊಗಸಾದ ಗ್ರ್ಯಾನೈಟ್ ಕಲ್ಲಿನ ಕಪಿಲೇಶ್ವರ ದೇವಸ್ಥಾನ ಮತ್ತು ಅದಕ್ಕೆ ಸಂಬಂಧಪಟ್ಟ ಬೃಹತ್ ಚೌಕಾಕಾರದ ಪುಷ್ಕರಣಿ ಇದೆ.
ಸ್ಥಳ ಇತಿಹಾಸ
ಬದಲಾಯಿಸಿಕನ್ನಡದಲ್ಲಿ ದಾವಣಿ ಎಂದರೆ ಜಾನುವಾರುಗಳಿಗೆ ಕಟ್ಟುವ ಹಗ್ಗ ಮತ್ತು ಬೈಲು ಅಂದರೆ ವಿಶಾಲವಾದ ಮೈದಾನ ಪ್ರದೇಶ. ಹಿಂದಿನ ಕಾಲದಲ್ಲಿ ಪಶ್ಚಿಮ ಘಟ್ಟದ ಮೇಲಿನ ಪ್ರದೇಶ ಮತ್ತು ಕರಾವಳಿಗೆ ಕೊಂಡಿಯಾಗಿದ್ದು, ಘಟ್ಟದ ಮೇಲಿನ ದಾರಿ. ಅಂದಿನ ಕಾಲದಲ್ಲಿ ಪಶ್ಚಿಮ ಘಟ್ಟದ ಮಲೆನಾಡಿನ ಮೂಲಕವೇ ಎಲ್ಲಾ ಸರಂಜಾಮುಗಳು ಕರಾವಳಿಯ ಕಡಲತೀರದಿಂದ ದೇಶದ ಹೊರಗೆ ಅಥವಾ ಒಳಗೆ ಬರುತ್ತಿದ್ದವು. ಆ ಕಾಲದಲ್ಲಿ ಸರಂಜಾಮುಗಳನ್ನು ಸಾಗಿಸಲು ಬಳಸುತ್ತಿದ್ದ ಸಾರಿಗೆ ವ್ಯವಸ್ಥೆ ಅಂದರೆ ಕುದುರೆ, ಆನೆ, ಎತ್ತು, ಎಮ್ಮೆ, ಒಂಟೆ, ಕತ್ತೆ ಮತ್ತು ಇವುಗಳ ಗಾಡಿ ಹಾಗೂ ಸಾರೋಟಿಗಳು. ಅಂದಿನ ಕಾಲದಲ್ಲಿ ಹುಲಿಕಲ್ (ಬಾಳೆಬರೆ) ಮತ್ತು ಕೊಲ್ಲೂರು ಘಾಟಿ, ಗಾಡಿಗಳನ್ನು ಹೊಯ್ಯಲು ಸೂಕ್ತವಾದರೆ, ಆಗುಂಬೆ ಘಾಟಿಯಲ್ಲಿ ಜಾನುವಾರುಗಳ ಬೆನ್ನಿಗೆ ಕಟ್ಟಿದ ಚೀಲಗಳಲ್ಲಿ ಸಾಮಾನುಗಳನ್ನು ಹಾಕಿ ಕೊಂಡು ವ್ಯಾಪಾರಿಗಳು ಘಟ್ಟದ ಮೇಲಿಂದ ಕೆಳಗೆ ಮತ್ತು ಕೆಳಗಿಂದ ಮೇಲಕ್ಕೆ ತಮ್ಮ ವ್ಯವಹಾರವನ್ನು ಸಮರ್ಪಕವಾಗಿ ನಡೆಸಿಕೊಂಡು ಹೋಗುತ್ತಿದ್ದರು. ಕರಾವಳಿಯಿಂದ ಪಶ್ಚಿಮ ಘಟ್ಟದ ಮೇಲೆ ಬರಲು ಜಾನುವಾರುಗಳಿಗೆ ಹೆಚ್ಚು ಶ್ರಮವಹಿಸ ಬೇಕಾಗಿದ್ದು, ಅವುಗಳು ಘಟ್ಟದ ಮೇಲೆ ಬಂದ ಮೇಲೆ ಒಂದು ವಿಶಾಲವಾದ ಬಯಲಿನಲ್ಲಿ ಅವುಗಳನ್ನು ತಂಗಿಸುವ ಪರಂಪರೆ ಮಲೆನಾಡಿನಲ್ಲಿ ಮೊದಲಿನಿಂದಲೂ ಇತ್ತು. ಉದಾಹರಣೆಗೆ ಇಂದಿನ ಹರಿಹರ ಮತ್ತು ದಾವಣಗೆರೆಯ ಮಧ್ಯ ಇರುವ ಬಯಲಿನಲ್ಲಿ ಸಾವಿರಾರು ಜಾನುವಾರುಗಳನ್ನು ಕಟ್ಟುತ್ತಿದ್ದು ಆ ಪ್ರದೇಶಕ್ಕೆ ದಾವಣೀಬೈಲು ಎಂದು ಕರೆಯಲ್ಪಡುತ್ತಿದ್ದು ಇಂದು ಆ ಊರು ದಾವಣಗೆರೆಯಾಗಿದೆ. ಅದೆ ರೀತಿ ಕಪಿಲಾ ಮುನಿಗಳು ಪ್ರೀತಿಸುತ್ತಿದ್ದ ಕಪಿಲಾ ಹಸುಗಳ ಸಂಕೇತವಾಗಿರುವ ಕಪಿಲೇಶ್ವರ ದೇವಸ್ಥಾನವನ್ನು ಜಾನುವಾರುಗಳನ್ನು ಕಟ್ಟುವ ಬಯಲಿನಲ್ಲಿ ಸ್ಥಾಪಿಸಿದ್ದು ಅಂದಿನ ರಾಜರ ದಿವ್ಯ ದೃಷ್ಟಿಯ ಸಂಕೇತವಾಗಿದೆ.
ಪ್ರಸಿದ್ಧ ವ್ಯಾಪಾರ ಕೇಂದ್ರ
ಬದಲಾಯಿಸಿ12ನೇ ಶತಮಾನದಲ್ಲಿ ಆರಗ ಹದಿನೆಂಟು ಕಂಪನ ಒಂದು ಬೃಹತ್ ಕೇಂದ್ರ ಬಿಂದು ಆಗಿದ್ದು ಅಂದಿನ ಕಾಲದಲ್ಲಿ ದೊಡ್ಡ ವ್ಯಾಪಾರ ಮತ್ತು ವ್ಯವಹಾರಕ್ಕೆ ಪ್ರಸಿದ್ಧಿಯನ್ನು ಪಡೆದಿತ್ತು. ಘಟ್ಟ ಪ್ರದೇಶ ಹಾಗೂ ಕರಾವಳಿಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳಿಗೆ ಹತ್ತಿರ ಇದ್ದ ಆರಗ ಎಂಬ ವಿಶಾಲವಾದ ಊರಿನ ಹೊರಭಾಗದಲ್ಲಿ ಇದ್ದ ದೊಡ್ಡ ಬಯಲೇ ಇಂದಿನ "ದಾವಣೀಬೈಲು". ಇಲ್ಲಿ ಬರುವ ಬೇರೆ ಬೇರೆ ಜಾನುವಾರುಗಳ ಬಾಯಾರಿಕೆ ನೀಗಿಸಲು ಬೃಹತ್ ಪುಷ್ಕರಣಿಯನ್ನು ರಚಿಸಿದರೆ ಇನ್ನೊಂದು ಕಡೆ ವ್ಯಾಪಾರ, ವ್ಯವಹಾರ, ಹಣಕಾಸು ಸಭೆಗಳಿಗೆ ಸಾಕ್ಷಿಯಾಗಿದ್ದು "ಶ್ರೀ ಕಪಿಲೇಶ್ವರ ದೇವಸ್ಥಾನ". ಹೊಯ್ಸಳ ಮತ್ತು ವಿಜಯನಗರದ ಸಾಮ್ರಾಜ್ಯದಲ್ಲಿ ಆರಗ ಮತ್ತು ದಾವಣೀಬೈಲು ಪ್ರಮುಖ ಪಾತ್ರ ವಹಿಸುತ್ತದೆ. 1500ರ ನಂತರದಲ್ಲಿ ಶ್ರೀ ಸದಾಶಿವ ನಾಯಕರು ವಿಜಯನಗರದ ರಾಜರ ಅಪ್ಪಣೆ ಪಡೆದು ಶಕ್ತಿ ಕೇಂದ್ರವಾಗಿದ್ದ ಆರಗ ಬದಲಿಗೆ ಇಕ್ಕೇರಿಯಿಂದ ಆಳ್ವಿಕೆಯನ್ನು ಮಾಡುತ್ತಾನೆ. 1565ರ ತಾಳಿಕೋಟೆ ಯುದ್ದದ ನಂತರ ಕೆಳದಿಯ ನಾಯಕರು ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡಲು ಶುರು ಮಾಡಿದ ಮೇಲೆ, ಆರಗ ಮತ್ತು ದಾವಣೀಬೈಲು ತನ್ನ ಅಸ್ಥಿತ್ವವನ್ನು ಕಳೆದು ಕೊಳ್ಳತ್ತದೆ.
ಕಪಿಲೇಶ್ವರ ದೇವಸ್ಥಾನದ ವಿನ್ಯಾಸ ಮತ್ತು ಶಿಲ್ಪಶಾಸ್ತ್ರ
ಬದಲಾಯಿಸಿಈ ದೇವಸ್ಥಾನ ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಿದ್ದು, ಇದರ ವಾಸ್ತುಶಿಲ್ಪ ೧೨ನೇ ಶತಮಾನದ ಹೊಯ್ಸಳ ಶೈಲಿಯಲ್ಲಿ ಇದೆ. ದೇವಸ್ಥಾನದ ಪೀಠದಲ್ಲಿ ಉಪಪೀಠ, ಜಗತಿ, ಕುಮುದ, ಕಂಠ, ಕಪೋತದ ಅಂಶಗಳು ಒಳಗೊಂಡಿದೆ. ದೇವಸ್ಥಾನ ಮೂರು ಪ್ರಮುಖ ಭಾಗದಲ್ಲಿ ಅಂದರೆ ಗರ್ಭಗೃಹ, ನವರಂಗ ಮತ್ತು ಮುಖ್ಯಮಂಟಪಯಂದು ವಿಂಗಡಿಸಲಾಗಿದೆ. ವಿಶಾಲವಾದ ಮುಖ್ಯ ಮಂಟಪಕ್ಕೆ ಪೂರ್ವ, ಉತ್ತರ ಮತ್ತು ದಕ್ಷಿಣ ದಿಕ್ಕಿನಿಂದ ಮೆಟ್ಟಿಲು ಮೂಲಕ ಒಳಗೆ ಬರಲು ಅವಕಾಶ ಇರುತ್ತದೆ. ಮುಖ್ಯ ಮಂಟಪದ ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ಕಲ್ಲಿನ ಆಸನಗಳನ್ನು ಮಾಡಲಾಗಿದ್ದು, ಮಂಟಪದ ಹೊರ ಗೋಡೆಯ ಪ್ಯಾರಾಪೆಟ್ ಗೋಡೆಯನ್ನು ಬೆನ್ನಸರೆಯಾಗಿ ಬಳಸಲಾಗಿದೆ. ಮಂಟಪದಲ್ಲಿ ಆರು ಸಾಲು ಇದ್ದು, ಒಂದು ಸಾಲಿನಲ್ಲಿ 5 ರಂತೆ, ಒಟ್ಟು 30 ಕಂಬಗಳಿವೆ. ಕಲ್ಲಿನ ಆಸನದ ಮೇಲೆ 10 ಅರ್ಧ ಕಂಬಗಳಿದ್ದು ಉಳಿದ 20 ಕಂಬಗಳು ಪೂರ್ಣ ಪ್ರಮಾಣದ್ದಾಗಿದೆ. ಈ ಕಂಬಗಳು ಬೇರೆ ಬೇರೆ ಆಕಾರದಲ್ಲಿ ಇದ್ದು, ಇದನ್ನು ಚಕ್ರಯಂತ್ರದ ಮೂಲಕ ಹೊಳಪಾಗಿಸಲಾಗಿದೆ. ಮುಖ್ಯ ಮಂಟಪದಿಂದ ನವರಂಗಕ್ಕೆ ಹೋಗುವ ಬಾಗಿಲ ಅಕ್ಕಪಕ್ಕದಲ್ಲಿ ಜಲರಂಧ್ರವನ್ನು ಕಲ್ಪಿಸಲಾಗಿದೆ. ನವರಂಗದಲ್ಲಿ ಒಟ್ಟು 4 ಕಂಬಗಳಿದ್ದು, 9 ಭಾಗಗಳಿವೆ. ನವರಂಗದ ನಂತರ ಇರುವುದೇ ಗರ್ಭಗೃಹ, ಇಲ್ಲಿ ಕಪಿಲೇಶ್ವರನ ಲಿಂಗವನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ದೇವಸ್ಥಾನದ ಮುಖ್ಯ ಮಂಟಪದ ಸುತ್ತಲೂ ತೆರೆದಿದ್ದು, ಗಾಳಿ ಮತ್ತು ಬೆಳಕಿಗೆ ಮುಕ್ತ ಅವಕಾಶ ಇರುತ್ತದೆ. ದೇವಸ್ಥಾನದ ಮೇಲ್ಚಾವಣಿಯಲ್ಲಿ ಮಳೆ ನೀರು ಸರಾಗವಾಗಿ ಕೆಳಕ್ಕೆ ಹರಿಯಲು ಹೊರ ಇಳಿಜಾರಿನ ವ್ಯವಸ್ಥೆಯನ್ನು ಮಾಡಲಾಗಿದೆ.
ದೇವಸ್ಥಾನದ ಗರ್ಭಗೃಹದ ಮೇಲ್ಬಾಗದಲ್ಲಿ ವಿಮಾನ ಶಿಖರ ಇರುವುದಿಲ್ಲ, ಬಹುಶಃ ಇದು ಬಿದ್ದಿರಬಹುದು. ಮುಖ್ಯ ಮಂಟಪದ ಹೊರಗಡೆಯ ಬಿತ್ತಿಯ ಮೇಲೆ ಬಗೆ ಬಗೆಯ ಉತ್ತರ ಮತ್ತು ದಕ್ಷಿಣ ಭಾರತದ ಹಲವು ಗೋಪುರದ ವಿನ್ಯಾಸವನ್ನು ಕೆತ್ತಲಾಗಿದೆ. ಒಂದು ಬಿತ್ತಿ ಪಟ್ಟಿಯಲ್ಲಿ, ನಾಯಿ ಮತ್ತು ಹುಲಿಯನ್ನು ಪಳಗಿಸಿ ಅದರ ಕೊರಳಿಗೆ ಪಟ್ಟಿಯನ್ನು ಧರಿಸಿಲಾಗಿದೆ. ಇದೆ ಪಟ್ಟಿಯಲ್ಲಿ ಒಬ್ಬ ಯೋಗಿ ಒಂದು ಚಂಡಿನ ಮೇಲೆ ಹಲಗೆಯನ್ನು ಇಟ್ಟಿ ಅದರ ಮೇಲೆ ಕಾಲನ್ನು ಮಡಿಸಿ, ಕಾಲು ಮತ್ತು ಸೊಂಟಕ್ಕೆ ಪಟ್ಟಿಯನ್ನು ಕಟ್ಟಿಕೊಂಡು ಯೋಗಮುದ್ರೆಯಲ್ಲಿ ಇರುವುದು ಆಕರ್ಷಕವಾಗಿದೆ. ಕರ್ನಾಟಕ ರಾಜ್ಯ ಪ್ರಾಚ್ಯವಸ್ತು ಇಲಾಖೆಯವರು ಈ ಹಿಂದೆ ಈ ದೇವಸ್ಥಾನದ ಸಂರಕ್ಷಣೆ ಕಾರ್ಯದಲ್ಲಿ ತೊಡಗಿದ್ದಾಗ, ದೇವಸ್ಥಾನದ ತಳಪಾಯದಲ್ಲಿ ಭಗ್ನಗೊಂಡ ನಂದಿಯ ವಿಗ್ರಹ ಸಿಕ್ಕಿದ್ದು, ಇದರ ಕಾಲ ಅವಧಿ ಕಲ್ಯಾಣ ಚಾಳುಕ್ಯರ ಕಾಲದ್ದಿರಬಹುದು ಎಂದು ಶ್ರೀ ಡಾ|| ಜಗದೀಶ್ ಅಗಸಿಭಾಗಿಲು ಅವರು ಅಭಿಪ್ರಾಯ ಪಡುತ್ತಾರೆ. ಇವರ ಪ್ರಕಾರ ಈ ದೇವಸ್ಥಾನ ಬಹುಶಃ ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಕಟ್ಟಿದ್ದು ನಂತರ ಹೊಯ್ಸಳರ ಕಾಲದಲ್ಲಿ ಇದನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವಸ್ಥಾನದ ಪೂರ್ವಭಾಗದಲ್ಲಿ ಪುಷ್ಕರಣಿಗೆ ಹೋಗಲು ಮೆಟ್ಟಿಲುಗಳನ್ನು ಕಲ್ಪಿಸಲಾಗಿದ್ದು ಇಂದು ಅದು ಛಿದ್ರ ಛಿದ್ರವಾಗಿ ಬಿದ್ದಿದೆ. ಪುಷ್ಕರಣಿಯ ಸುತ್ತಲೂ ಜಂಬು ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಾಣ ಮಾಡಲಾಗಿದೆ.[೧]
ಇಂದಿಗೂ ತೀರ್ಥಹಳ್ಳಿ ತಾಲ್ಲೂಕಿನ ಅಗ್ರಹಾರ ಹೋಬಳಿಯ ಮರಗಳಲೆ ಗ್ರಾಮದ ಸರ್ವ ಸಂಖ್ಯೆ 6ರಲ್ಲಿ ಇರುವ ದಾವಣೀಬೈಲಿನಲ್ಲಿ, 110 ಎಕರೆ ಮೈನರ್ ಫಾರೆಸ್ಟ್ ಇದ್ದರೆ 18 ಎಕರೆ ಇಂದಿಗೂ ದನಕ್ಕೆ ಮುಫತ್ತು ಆಗಿ ಇಡಲಾಗಿದೆ. ಸರಿಸುಮಾರು ಐನೂರು ವರ್ಷಗಳ ವರೆಗೆ ವ್ಯಾಪಾರ ಮತ್ತು ವ್ಯವಹಾರಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟಿದ ದಾವಣೀಬೈಲು ಮತ್ತು ಶ್ರೀ ಕಪಿಲೇಶ್ವರ ದೇವರು, ಇಂದು ಅಜ್ಞಾತವಾಗಿ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನಿಂತಿದೆ.
ಉಲ್ಲೇಖಗಳು
ಬದಲಾಯಿಸಿ