ದದ್ದು
ದದ್ದು -
ರೋಗಗ್ರಸ್ತ ಚರ್ಮದಲ್ಲಿ ಕಂಡುಬರುವ ವಿಶೇಷ ರೀತಿಯ ರಚನಾ ಬದಲಾವಣೆ (ರ್ಯಾಷ್). ಒಂದೊಂದು ಚರ್ಮರೋಗದಲ್ಲಿಯೂ ಅದರಕಾರಣಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯ ದದ್ದುಗಳು ಕಾಣಬರುತ್ತವೆ. ಇವುಗಳ ವಿಂಗಡಣೆ ಇವು ದೇಹದ ಮೇಲೆ ಹರಡಿರುವ ರೀತಿ ಮತ್ತು ಇವುಗಳಲ್ಲಿ ಅಗುವ ಮಾರ್ಪಾಡುಗಳ ಅಧ್ಯಯನ ರೋಗವನ್ನು ನಿಖರವಾಗಿ ಗುರ್ತಿಸುವುದಕ್ಕೆ ಸಹಾಯವಾಗುತ್ತದೆ. ವಿವಿಧ ದದ್ದುಗಳನ್ನೂ ಅವುಗಳ ಲಕ್ಷಣಗಳನ್ನೂ ಈ ಕೆಳಗೆ ವಿವರಿಸಿದೆ.[೧]
- ಮಚ್ಚೆ (ಮ್ಯಾಕ್ಯೂಲ್) : ರೋಗಗ್ರಸ್ಥ ಸ್ಥಳದಲ್ಲಿ ಚರ್ಮದ ಬಣ್ಣದ ಬದಲಾವಣೆ ಮಚ್ಚೆ. ಇದರಲ್ಲಿ ಚರ್ಮ ಉಬ್ಬಿರುವುದಿಲ್ಲ.
- ಮಿಟ್ಟೆ ದದ್ದು (ಪ್ಯಾಪ್ಯೂಲ್) : ಕೈಗೆ ಸಿಗುವ ಚರ್ಮದ ಊತ. ಇದರ ಮೇಲ್ಮೈ ಮೊನೆಯಾಗಿರಬಹುದು ಇಲ್ಲವೇ ಗುಂಡಾಗಿರಬಹುದು. ಇದರ ಅಡ್ಡಳತೆ 1 ರಿಂದ 5 ಮಿಮೀ.
- ಗಂಟು (ನಾಡ್ಯೂಲ್) : 5 ಮಿಮೀ. ಗೂ ಹೆಚ್ಚಿನ ಅಡ್ಡಳತೆಯ ಮಿಟ್ಟೆದದ್ದು.
- ನೀರ್ಗುಳ್ಳೆ (ವೈಸೈಕಲ್) : ಮೇಲು ಚರ್ಮದಲ್ಲಿ ದ್ರವ ಸೇರಿ ಅಗುವ ಸಣ್ಣ ಬೊಬ್ಬೆ. ಅಡ್ಡಳತೆ 1 ರಿಂದ 5 ಮಿಮೀ.
- ಬೊಬ್ಬೆ (ಪಸ್ಟ್ಯೂಲ್) : 5 ಮಿಮೀ. ಗೂ ದೊಡ್ಡದಾದ ಅಡ್ಡಳತೆಯಿರುವ ನೀರ್ಗುಳ್ಳೆ ಇದರಲ್ಲಿ ರಕ್ತವಸಿಕೆ ಕೀವು ರಕ್ತ ತುಂಬಿರಬಹುದು.
- ತುರಚಿ ದದ್ದು (ವೀಲ್) : ಒಳಚರ್ಮದಲ್ಲಿ ಲೋಮನಾಳಗಳಿಂದ ಹೊರಬಂದ ರಕ್ತವಸಿಕೆಯಿಂದಾದ ಚರ್ಮದ ಉಬ್ಬರ.
- ಹಗುರು (ಡ್ಯಾಂಡ್ರಫ್, ಸ್ಕೇಲ್) : ಮೇಲುಚರ್ಮದ ಜೀವಕಣಗಳು ಕ್ರಮಗತವಾಗಿ ಶುಷ್ಕಗೊಂಡು ಅಗೋಚರವಾಗಿ ಸುಲಿದುಹೋಗದೆ ಒಂದಕ್ಕೊಂದು ಅಂಟಿಕೊಂಡು ಗಮನಕ್ಕೆ ಬರುವಂತೆಯೇ ಹೊಟ್ಟು ಹೊಟ್ಟಾಗಿ ಇಲ್ಲವೇ ಪೊರೆಯಾಗಿ ಉದುರುವುದೇ ಹಗುರ.
- ತಟ್ಟೆದದ್ದು (ಪ್ಲಾಕ್, ಫ್ಲೇಕ್ಸ್) : ಒಣಗಿ ತಟ್ಟೆಯಂತೆ ಚಪ್ಪಟೆಯಾದ ಹದಗೆಟ್ಟ ಚರ್ಮ, ಅಥವಾ ಲೋಳಿಪೊರೆಯ ತುಣುಕು.
- ಸೀಳು ಗೆರೆ, ಕುಳಿ : ವಕ್ರವಾದ ಗೆರೆಯ ಮೇಲುಚರ್ಮದ ಉಬ್ಬರ ಉಬ್ಬುಗಳ ನಡುವೆ ಸೀಳುಗೆರೆಗಳೇ ಪ್ರಮುಖ. ಕಕ್ಕಿ ಅದಾಗ ಮಾತ್ರ ಇವು ಕಾಣುತ್ತವೆ.
- ಕರಿದಲೆ (ಬ್ಲ್ಯಾಕ್ ಹೆಡ್) : ಪದರಗಟ್ಟಿದ ಚರ್ಮದ ಹೊರಕಣಗಳೂ ಮೈಜಿಡ್ಡೂ ಸೇರಿ ರೋಮಬುಡದಲ್ಲಿರುವ ಮೈಜಿಡ್ಡಿನ ಗ್ರಂಥಿಯ ಕಂಡಿಗೆ ಹೊಕ್ಕು ಅದನ್ನು ಸಣ್ಣ ಬಿರಟೆಯಂತೆ ಮುಚ್ಚಿಕೊಳ್ಳುತ್ತವೆ. ಬಿರಟೆಯ ಬಣ್ಣ ಸಾಮಾನ್ಯವಾಗಿ ಕಪ್ಪು ಅಗಿರುವುದರಿಂದ ಈ ಹೆಸರಿದೆ. ಮೊಡವೆ (ವೆ) ಪರ್ಯಾಯನಾಮ.
- ಬಿರುಕು (ಫಿಷರ್) : ಮೇಲುಚರ್ಮದ ಒಳಗೆ ಅಳವಾಗಿ ಇರುವ ಸೀಳು ನಿಜ ಚರ್ಮವನ್ನೂ ಅವರಿಸಿರುವಿಕೆ. ಸಾಮಾನ್ಯವಾಗಿ ಕಾಲಿನ ಹಿಮ್ಮಡಿಯಲ್ಲಿ ಕಾಣಬರುತ್ತದೆ.
- ಗಾಯ (ಅಲ್ಸರ್) : ಮೇಲುಚರ್ಮದ ಜೊತೆ ಕೆಳಗಿನ ನಿಜಚರ್ಮವೂ ಸೇರಿದಂತೆ ನಾಶವಾಗುವುದರಿಂದ ಅಗುವ ಅಂಗಾಯ.
- ಕಲೆಗಟ್ಟು (ಸ್ಕಾರ್) : ನಾಶವಾದ ನಿಜಚರ್ಮ ಕೂಡಿಸುವ ಊತಕದ ಎಳೆಗಳಿಂದ ಒಂದುಗೂಡಿಸಿರುವ ಮಾಯ್ದ (ಮಾಗಿದ) ಗಾಯದ ಅವಶೇಷ.
- ಹೆಪ್ಪುಚಕ್ಕೆ (ಸ್ಕ್ಯಾಬ್ ಕ್ರಸ್ಟ್) : ಚರ್ಮದಿಂದ ಸ್ರವಿಸಿದ ರಸಿಕೆ ಹೆಪ್ಪುಗಟ್ಟಿರುವುದು.
ಇವನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: