ಥಾಮಸ್ ಟ್ರಾಹರ್ನ್
ಥಾಮಸ್ ಟ್ರಾಹರ್ನ್ (1638-1674} ಇಂಗ್ಲಿಷ್ ಅನುಭಾವಿ ಕವಿ.
ಬದುಕು, ಸಾಧನೆ
ಬದಲಾಯಿಸಿಹರ್ಫರ್ಡಿನ ಚಮ್ಮಾರ ಕುಟುಂಬವೊಂದರಲ್ಲಿ ಜನಿಸಿದ ಈತ ಆಕ್ಸ್‍ಫರ್ಡಿನ ಬ್ರ್ಯಾಸೆನೋಸ್ ಕಾಲೇಜಿನಲ್ಲಿ ಓದಿ 1661ರಲ್ಲಿ ಎಂ. ಎ. ಪಧವೀಧರನಾದ. ಅನಂತರ ಧಾರ್ಮಿಕ ಹಾಗೂ ದೈವಶಾಸ್ತ್ರಗಳ ಅಧ್ಯಯನಮಾಡಿ ಬಿ.ಡಿ. ಪದವಿಯನ್ನು ಪಡೆದ. ಆಧ್ಯಾತ್ಮಿಕ ಒಲವಿದ್ದುದರಿಂದ ಬ್ರಹ್ಮಚರ್ಯವನ್ನು ಅಂಗೀಕರಿಸಿ ಪಾದ್ರಿಯಾದ. 1657ರಿಂದಲೇ ಕ್ರೆಡನ್‍ಹಿಲ್ ಕ್ರೈಸ್ತಮಂದಿರದಲ್ಲಿ ಸೇವೆಗೆ ತೊಡಗಿದ. 1669ರಲ್ಲಿ ಟೆಡಿಂಗ್ಟನ್ನಿನಲ್ಲಿದ್ದ ಸರ್ಕಾರಿ ಶಾಸನಾದಿ ಮುಖ್ಯ ಪತ್ರಗಳ ಭಂಡಾರಿ ಸರ್ ಆಲ್ರ್ಯಾಂಡೊ ಬ್ರಿಜ್‍ಮನ್ನನ ಖಾಸಗಿ ಮಂದಿರದಲ್ಲಿ ಪಾದ್ರಿಯಾಗಿ ಸೇರಿ ಜೀವನ ಪೂರ್ತಿ ಅಲ್ಲಿಯೇ ಇದ್ದು ಕೆಲಸಮಾಡಿದ.
ಅಮಿತ ಶ್ರದ್ಧಾಭಕ್ತಿಗಳಿಂದ ಪೂಜೆ, ಪ್ರಾರ್ಥನೆ ಮತ್ತು ಸೇವಾಕಾರ್ಯಗಳಲ್ಲಿ ನಿರತನಾಗಿದ್ದು ಈತ ಕ್ರಮೇಣ ಸಾಧಕನ ಹಂತಕ್ಕೇರಿದನಲ್ಲದೆ ತನ್ನ ಚಿಂತನೆ, ಅನುಭಾವಗಳನ್ನು ಸಹಜಸ್ಫೂರ್ತಿಯಿಂದುಕ್ಕಿದ ತನ್ನ ಭಾವಗೀತೆಗಳಲ್ಲಿ ವ್ಯಕ್ತಮಾಡಿದ್ದಾನೆ. ಕೆಲವು ಭಕ್ತಿಗೀತಗಳನ್ನು ತನ್ನ ಹೆಸರು ಹಾಕಿಕೊಳ್ಳದೆಯೆ ಈತ ಪ್ರಕಟಿಸಿದ್ದಾನೆ. ಹೀಗಾಗಿ ಈತನ ಸಾಹಿತ್ಯ ಕೃತಿಗಳು ಈತನವೇ ಎಂದು ಬೆಳಕು ಕಂಡುದು ಈತ ಸತ್ತು ಎಷ್ಟೋ ವರ್ಷಗಳ ಅನಂತರ. ಅಲ್ಲಿಯ ವರೆಗೂ ಈತನ ಕವನಗಳನ್ನು ಹೆನ್ರಿವಾನ್ ಬರೆದವುಗಳಿರಬಹುದೆಂದೇ ಜನ ತಿಳಿದಿದ್ದರು. ಹೆನ್ರಿವಾನನ ಕಾವ್ಯಶೈಲಿಯ ಪ್ರಭಾವವೇನೋ ಈತನ ಮೇಲೆ ಗಾಢವಾಗಿ ಬಿದ್ದಿತ್ತು. ಆದರೆ ಈತ ಆಗ ರೂಪುಗೊಂಡ ಮೆಟಾಫಿಜಿಕಲ್ ಕಾವ್ಯಪಂಥಕ್ಕೆ ಸೇರಿದವನಲ್ಲ. ಸ್ವಂತ ಚಿಂತನ ಮತ್ತು ಸ್ವಾನುಭವಗಳಿಂದ ತನ್ನದೇ ಅದೊಂದು ತತ್ತ್ವ ಸಿದ್ಧಾಂತವನ್ನು ರೂಪಿಸಿಕೊಂಡಿದ್ದ.
1699ರಲ್ಲಿ ಎ ಸೀರಿಯಸ್ ಅಂಡ್ ಪ್ಯಾತಟಿಕಲ್ ಕಾಂಟೆಂಪ್ಲೇಷನ್ ಆಫ್ ದಿ ಮರ್ಸೀಸ್ ಆಫ್ ಗಾಡ್ ಎಂಬ ಒಂದು ಪುಸ್ತಕವನ್ನು ಈತ ಅನಾಮಿಕವಾಗಿ ಪ್ರಕಟಿಸಿದ. ಭಗವತ್ಕಾರುಣ್ಯವನ್ನು ಕೊಂಡಾಡುತ್ತ ಪ್ರಣಾಮಗಳನ್ನರ್ಪಿಸುವುದೇ ಈ ಕೃತಿಯ ವಿಷಯ. ಕಾವ್ಯದ ಲಯ, ಮಾಧುರ್ಯಗಳಿರುವ ಈ ಬರೆಹದ ಗದ್ಯ ಮನೋಹರವಾದುದು. 1717ರಲ್ಲಿ ಮೆಡಿಟೇಷನ್ಸ್ ಅಂಡ್ ಡಿವೋಷನ್ಸ್ ಎಂಬ ಇನ್ನೊಂದು ಪುಸ್ತಕ ಸಹ ಅನಾಮಿಕವಾಗಿ ಪ್ರಕಟವಾಯಿತು. ಅನಂತರ 1818ರಲ್ಲಿ ಬ್ರಿಟಿಷ್ ಮ್ಯೂಸಿಯಂನಲ್ಲಿ ದೊರೆತ ಪೊಯೆಮ್ಸ್ ಆಫ್ ಫೆಲಿಸಿಟಿ ಎಂಬ ಹಸ್ತಪ್ರತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಟ್ರ್ರ್ಯಾಮ್ ಡು ಬೆಲ್ ಎಂಬ ವಿದ್ವಾಂಸ ಇದನ್ನು ಪರಿಷ್ಕಾರವಾಗಿ ಸಂಪಾದಿಸಿ 1903ರಲ್ಲಿ ಪ್ರಕಟಿಸಿದ. ಅದರ ಪ್ರಸ್ತಾವನೆಯಲ್ಲಿ ಸೋಜಿಗದ ಸಂಗತಿಯೊಂದನ್ನೂ ಹೊರಗೆಡಹಿದ. ಈ ಕವನಗಳು ಅದುವರೆಗೆ ತಿಳಿದ ಹಾಗೆ ಹೆನ್ರಿವಾನನ ಕೃತಿಗಳಲ್ಲ. ಟ್ರಾಹನ್ ಇವುಗಳ ನಿಜವಾದ ಕರ್ತೃ ಎಂದು ಸಾಧಾರಣವಾಗಿ ತೋರಿಸಿಕೊಟ್ಟ. ಟ್ರಾಹನ್ 17ನೆಯ ಶತಕದ ಶ್ರೇಷ್ಠ ಕವಿಗಳಲ್ಲಿ ಒಬ್ಬ ಎಂದು ಪರಿಗಣಿತನಾದುದಲ್ಲದೆ ಅನುಭಾವ ಸಾಹಿತ್ಯದಲ್ಲಿ ವಡ್ರ್ಸ್‍ವರ್ತ್ ಮತ್ತು ಬ್ಲೇಕ್ ಕವಿಗಳ ಪಂಕ್ತಿಯಲ್ಲಿ ನಿಲ್ಲುವಂಥವನೆಂಬುದು ವಿದಿತವಾಯಿತು. ಇದಾದ ಅನಂತರ ಈತನ ಇತರ ಕೃತಿಗಳನ್ನೂ ಸಾಹಿತ್ಯ ಸಂಶೋಧಕರು ಪತ್ತೆಮಾಡಿ ಗುರುತಿಸಿದರು.
ಈತನ ಸೆಂಚುರೀಸ್ ಆಫ್ ಮೆಡಿಟೇಷನ್ಸ್ ಒಂದು ಉತ್ಕøಷ್ಟ ಕೃತಿ. ಸಣ್ಣ ಪುಟ್ಟ ತಾಂತ್ರಿಕ ದೋಷಗಳಿದ್ದರೂ ಇದರ ಮನಮೋಹಕವಾದ ಗದ್ಯಶೈಲಿ ಮಾತ್ರ ಅನ್ಯಾದೃಶವಾದುದು. ಈತನ ಕಾವ್ಯ ಸಹ ಇಷ್ಟು ಸೊಗಸಾಗಿಲ್ಲ. ಇದು ಗದ್ಯದಲ್ಲಿ ಬರೆದ ಚಿಂತನಾತ್ಮಕ ಶತಕಗಳ ಸಂಗ್ರಹ. ಮೂರನೆಯ ಶತಕದಲ್ಲಿ ಕವಿಯ ಜೀವನದ ಹಲವು ವಿಚಾರಗಳು ತಿಳಿಯುತ್ತವೆ. ನಾಲ್ಕನೆಯ ಶತಕದಲ್ಲಿ ಈತನದೇ ಆದ ಆನಂದ ಸಿದ್ಧಾಂತದ ವಿವರಗಳಿವೆ. ಜೀವನದ ಗುರಿ ನಿತ್ಯಾನಂದವೇ ಹೊರತು ಕ್ಷಣಿಕವಾದ ಪ್ರಾಪಂಚಿಕ ಸುಖವನ್ನು ಪಡೆಯುವುದಲ್ಲ. ಬಹುಸುಂದರವಾದ ಈ ಲೋಕ ದೇವರ ಮಕ್ಕಳಾದ ಎಲ್ಲ ಮಾನವರಿಗೂ ಸೇರಿದ ಸ್ವರ್ಗ. ಆದರೆ ಈ ಲೋಕದ ಸುಖವೇ ಸರ್ವಸ್ವವಲ್ಲ. ಇಹದ ಶ್ರೇಯಸ್ಸು ಪರದ ಶ್ರೇಯಸ್ಸು ಎರಡರ ಸಾಮರಸ್ಯವನ್ನೂ ಮಾನವ ಸಾಧಿಸಬೇಕು. ಆತ್ಮವೂ ಪರಮಾತ್ಮನ ಅಂಶವೇ. ಅದರಂತೆಯೆ ಅನಾದಿ, ಅನಂತ. ಇದು ಈತನ ಆನಂದತತ್ತ್ವ ಸಾರ. ಎಲ್ಲೆಲ್ಲಿಯೂ ಭಗವಂತನ ಚೈತನ್ಯವೇ ಬೆಳಗುತ್ತಿರುವ ಅನುಭವ ತನಗಾದುದನ್ನು ಹಲವು ವಚನಗಳಲ್ಲಿ ಈತ ವ್ಯಕ್ತಮಾಡಿದ್ದಾನೆ.