ತುಳು ಭಾಗವತೋ
ತುಳುವಿನಲ್ಲಿ ಪ್ರಾಚೀನ ಗ್ರಂಥಗಳೇ ಇಲ್ಲವೆಂದು ಗ್ರಹಿಸಿದ್ದ ಕಾಲವೊಂದಿತ್ತು. ಡಾ. ವೆಂಕಟರಾಜ ಪುಣಿಂಚತಾಯರು ಆ ಮಾತುಗಳನ್ನು ಸುಳ್ಳು ಮಾಡಿದರು. ಮನೆ ಮನೆಯ ಅಟ್ಟಗಳಲ್ಲಿದ್ದ ಪೆಟ್ಟಿಗೆಗಳಲ್ಲಿ ಕಟ್ಟು ಕಟ್ಟಿಟ್ಟಿದ್ದ ತಾಳೆಗರಿಗಳ ಗ್ರಂಥಗಳನ್ನು ಹುಡುಕಿ ತೆಗೆದರು. ತುಳು ಲಿಪಿಯಲ್ಲಿ ಬರೆದಿದ್ದ ಆ ಗ್ರಂಥಗಳನ್ನು ಓದಿದರು. ತುಳು ಭಾಷೆಯಲ್ಲಿ, ತುಳು ಲಿಪಿಯಲ್ಲಿದ್ದ ಗ್ರಂಥಗಳನ್ನು ಕನ್ನಡ ಲಿಪಿಗೆ ಲಿಪ್ಯಂತರ ಮಾಡಿದರು. ಅದರಲ್ಲಿ ಪ್ರಾರಂಭದ ಕಾವ್ಯವೇ ವಿಷ್ಣುತುಂಗನ ಭಾಗವತೊ. ಅದರ ನಂತರ ಸಿಕ್ಕಿದ ಕಾವ್ಯ ಅರುಣಾಬ್ಜ ಕವಿಯ ಭಾರತೊ. ಭಾರತ ಕಾವ್ಯವನ್ನು ಬರೆದ ಕವಿ ಅರುಣಾಬ್ಜ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆದಿದ್ದಾನೆ ಎಂದು ವಿದ್ವಾಂಸರಾದ ಡಾ. ಕೆ ಕಮಲಾಕ್ಷರವರು ತಮ್ಮ ಭಾರತ ಕಾವ್ಯ ಪಾಸಾಡಿಯಲ್ಲಿ ಹೇಳಿದ್ದಾರೆ. ಅವರ ಪ್ರಕಾರ - ಭಾರತ ಕಾವ್ಯೊ, ಭಾರತೊ, ಸಂಪನ್ನ ಭಾರತೊ, ಭಾರತ ಕಥೆ, ಲೀಲೆಕಾವ್ಯೊ, ಪರಮಭಾರತೊ - ಹೀಗೆ ಹೆಸರುಗಳನ್ನು ಹೇಳಿದ್ದಾನೆಂದು ಉಲ್ಲೇಖಿಸಿದ್ದಾರೆ. ಭಾರತ ಕಾವ್ಯ ಪಾಸಾಡಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಪ್ರಕಟಗೊಳಿಸಿದೆ.