ತಿರುಪ್ಪಾಣಾಳ್ವಾರ್

ಇವರು ಹುಟ್ಟಿನಿಂದ ಪಂಚಮರೋ ಅಥವಾ ಬಯಲಲ್ಲಿ ಬಿಸುಟಿದ್ದ ಈ ಕೂಸನ್ನು ಪಂಚಮ ದಂಪತಿಗಳು ಸಾಕಿಸಲಹಿದ್ದರಿಂದ ಇವರು ಆ ಕುಲದವರೆನಿಸಿದರೋ ಇದು ರಹಸ್ಯವಾಗಿಯೇ ಉಳಿದಿದೆ. ಇವರ ಮನಸ್ಸಿನ ತಿಳಿಮೆ ಮತ್ತು ನಿಲವು ಸಾಮಾನ್ಯರಿಗೆ ಎಟಕುವಂಥದಲ್ಲ. ತಮ್ಮ ಕುಲದವರೊಡನೆ ಇವರು ಹೊಂದಿಕೊಂಡು ಬಾಳಿದಂತೆ ತೋರುವುದಿಲ್ಲ. ರಂಗನಾಥನ ಗುಡಿಯೆಂದರೆ ಸಾಕ್ಷಾತ್ ವೈಕುಂಠವೆಂದೇ ಇವರ ಭಾವನೆ. ಈ ಆಳ್ವಾರರು ತಮ್ಮೂರಾದ ಉರಿಯೂರ್ ಎಂಬುದನ್ನು ತೊರೆದು ಕಾವೇರಿಯ ಆಚೆ ದಡದಲ್ಲಿ ಶ್ರೀರಂಗನ ಗುಡಿಗೆದುರಾಗಿ ಒಂದು ಗುಡಿಸಲನ್ನು ಹಾಕಿಕೊಂಡು, ಕೈಯಲ್ಲಿ ವೀಣೆಯನ್ನು ಹಿಡಿದು ಭಗವನ್ನಾಮವನ್ನು ಸಂಕೀರ್ತಿಸುತ್ತಾ ಇರುತ್ತಿದ್ದರು. ಹೀಗಿರುವಲ್ಲಿ ಲೋಕಸಾರಂಗ ಮುನಿ ಎಂಬ ಶ್ರೀರಂಗನಾಥನ ಅಂತರಂಗ ಭಕ್ತರಿಗೆ ರಂಗನಾಥ ಸ್ವಪ್ನದಲ್ಲಿ ಕಾಣಿಸಿಕೊಂಡು ಈ ಆಳ್ವಾರರನ್ನು ನಿನ್ನ ಹೆಗಲಮೇಲೇರಿಸಿಕೊಂಡು ನನ್ನಲ್ಲಿಗೆ ಕರೆದು ತಾರೆಂದು ಆಣತಿಗೊಡಲು, ಆತ ಸ್ವಾಮಿಯ ಆಜ್ಞೆಯಂತೆ ನಡೆಸಿದರು. ಆಳ್ವಾರರು ಅನಿರೀಕ್ಷಿತವಾಗಿ ತಮಗೆ ಲಭಿಸಿದ ಈ ಮಹೋತ್ಕರ್ಷವನ್ನು ಹೆಚ್ಚು ಕಾಲ ಬಾಳಲ್ಲಿ ತಾಳದೆ ಹೋದರು. ರಂಗನಾಥನ ಸನ್ನಿಧಿಯಲ್ಲಿ ಆ ಮೂರ್ತಿಯ ಅಂಗಾಂಗಗಳನ್ನು ನೋಡಿನೋಡಿ ನಲಿದು ಹಾಡಿದುದೆಷ್ಟೋ ಅಷ್ಟುಕಾಲ ಜೀವ ಇವರಿಗಂಟಿಕೊಂಡಿತ್ತು. ಕೊನೆಗಲ್ಲೇ ಲೀನವಾಯಿತು. ಇವರಿಂದ ನಮಗೆ ದೊರೆತಿರುವುದು ಅಮಲನಾದಿ ಪಿರಾನ್ ಎಂಬ 10 ಪಾಶುರಗಳ ಪದ್ಯವೊಂದು ಮಾತ್ರ. ಇದು ನಿತ್ಯಾನುಸಂಧಾನಕ್ಕೆ ಸೇರಿದೆ. ಈ ಪದ್ಯಗಳಲ್ಲೂ ಈ ಆಳ್ವಾರರಲ್ಲೂ ಭಗವದ್ರಾಮಾನುಜರಿಗೆ ತುಂಬಪ್ರೀತಿ. ಅವರ ಸಚ್ಛಿಷ್ಯರಾದ ವೇದಾಂತ ದೇಶಿಕರು ಈ ಪದ್ಯಗಳಿಗೆ ಮುನಿವಾಹನ ಭೋಗಂ ಎಂಬ ವ್ಯಾಖ್ಯಾನ ಬರೆದಿದ್ದಾರೆ. ಮಾಸ್ತಿ ವೆಂಕಟೇಶಯ್ಯಂಗಾರ್ಯರು ಈ 10 ಪದ್ಯಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಅವುಗಳಲ್ಲೊಂದು ಹೀಗಿದೆ: “ನೀಲದ ಒಡಲು, ಆಹಾ, ತುಂಬಿಕೊಂಡವೇ ನನ್ನ ಹೃದಯ ನೀರುಂಡ ಮೇಘದ ಬಣ್ಣದವನು, ಗೋವಳನಾಗಿ ಬೆಣ್ಣೆಯುಂಡ ಬಾಯವನು, ನನ್ನೊಳಗನ್ನು ಕವರಿದವನು, ಬ್ರಹ್ಮಾಂಡದ ಅಧಿಪತಿ ಅಣಿಯ ರಂಗನು, ನನ್ನ ಅಮಲನ್ನು. ಇವನನ್ನು ಕಂಡ ಕಂಗಳು ಮತ್ತೊಂದನ್ನು ಕಾಣವು.” ಇವರನ್ನು ಭಗವಂತನ ಶ್ರೀವತ್ಸಾಂಶವೆಂದು ಸಂಪ್ರದಾಯ ಪರಿಭಾವಿಸಿ ವೃಶ್ಚಿಕ ಮಾಸದ ರೋಹಿಣೀ ನಕ್ಷತ್ರದ ದಿವಸದಲ್ಲಿ ಇವರ ಜನ್ಮದಿನೋತ್ಸವವನ್ನು ಆಚರಿಸುತ್ತದೆ.