ತಿದ್ದುಪಡಿ ಎಂದರೆ ಒಂದು ದಸ್ತಾವೇಜಿನ (ಡಾಕ್ಯುಮೆಂಟ್), ಅಥವಾ ಲಿಖಿತ ಅಥವಾ ಮೌಖಿಕ ನಿರೂಪಣೆಯ (ಸ್ಟೇಟ್‍ಮೆಂಟ್) ಬದಲಾವಣೆ (ಅಮೆಂಡ್‍ಮೆಂಟ್). ಬದಲಿಕೆ, ಹೊಸ ಅಂಶದ ಸೇರ್ಪಡೆ, ಇದ್ದುದರ ವಿಸರ್ಜನೆ, ಬೇರೆ ಶಬ್ದಗಳಲ್ಲಿ ಹೇಳುವುದು, ವ್ಯತ್ಯಾಸಪಡಿಸುವುದು, ತಪ್ಪುಗಳನ್ನು ಸರಿಪಡಿಸುವುದು, ಸುಧಾರಣೆ ಮಾಡುವುದು ಮೊದಲಾದವೆಲ್ಲ ತಿದ್ದುಪಡಿಯ ಅಡಿಯಲ್ಲಿ ಬರುತ್ತದೆ. ತಿದ್ದುಪಡಿ ಎಂಬ ಶಬ್ದಕ್ಕೆ ನಿಘಂಟಿನಲ್ಲಿ ತಪ್ಪನ್ನು ಸರಿಪಡಿಸುವುದು, ಸುಧಾರಿಸುವುದು ಎಂಬ ಅರ್ಥಗಳಿವೆ. ಆದರೆ ವ್ಯವಹಾರದಲ್ಲಿ ತಿದ್ದುಪಡಿಯ ಉಪಯೋಗ ಈ ಉದ್ದೇಶಗಳಿಗಷ್ಟೇ ಸೀಮಿತವಾಗಿಲ್ಲ. ತಿದ್ದುಪಡಿ ಯಾವಾಗಲೂ ತಪ್ಪನ್ನು ಸರಿಪಡಿಸುವುದು, ಸುಧಾರಣೆ ಇವುಗಳಲ್ಲಿ ಪರಿಣಮಿಸಲೇಬೇಕೆಂಬ ನಿರ್ಬಂಧವಿಲ್ಲ. ತಿದ್ದುಪಡಿಯ ವ್ಯಾಪ್ತಿ ವಿಶಾಲವಾದ್ದು. ಈ ಶಬ್ದದ ಉಪಯೋಗ ಹಲವು ವ್ಯವಹಾರಗಳಲ್ಲಿ ಆಗುತ್ತದೆ.

  • ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬರುವ ವ್ಯಾವಹಾರಿಕ ವ್ಯಾಜ್ಯಗಳಲ್ಲಿ ವಾದಿ ಪ್ರತಿವಾದಿಗಳು ಅನುಕ್ರಮವಾಗಿ ತಮ್ಮ ವಾದ ಪ್ರತಿವಾದಗಳಲ್ಲಿರುವ ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ, ಅವುಗಳಲ್ಲಿಯ ನ್ಯೂನತೆಗಳನ್ನು ನಿವಾರಿಸುವುದಕ್ಕಾಗಿ ನ್ಯಾಯಾಧೀಶರ ಅನುಮತಿ ಪಡೆದುಕೊಂಡು ಮಾಡುವ ಬದಲಾವಣೆಗಳು ತಿದ್ದುಪಡಿಗಳು. ಈ ತಿದ್ದುಪಡಿಗಳು ನ್ಯಾಯಸಮ್ಮತವಾದ ತೀರ್ಮಾನಕ್ಕೆ ಅವಶ್ಯವೆಂದು ತೋರಿದಲ್ಲಿ ಮತ್ತು ಅವು ಮೂಲದ ಸ್ವರೂಪವನ್ನೇ ಬದಲಾಯಿಸಿ ಅದನ್ನು ಹೊಸತು ಮಾಡುವಂಥದಾಗಿಲ್ಲದಿದ್ದಲ್ಲಿ ಅವಕ್ಕೆ ಅನುಮತಿ ನೀಡಲು ನ್ಯಾಯಾಧೀಶರು ಸಾಮಾನ್ಯವಾಗಿ ನಿರಾಕರಿಸುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಅವರು ಅನುಮತಿ ನೀಡುವುದಕ್ಕೆ ಖರ್ಚು ಕೊಡಿಸುವುದಲ್ಲದೆ ಕೆಲವು ಷರತ್ತುಗಳನ್ನೂ ಹಾಕಬಹುದು. ಕ್ರಿಮಿನೆಲ್ ಮೊಕದ್ದಮೆಗಳಲ್ಲಿ ಆಪಾದನೆಯ ಪತ್ರಗಳಲ್ಲಿ ಮಾಡಲಾಗುವ ಬದಲಾವಣೆಗೂ ತಿದ್ದುಪಡಿಗಳು, ನ್ಯಾಯಲಯಗಳ ತೀರ್ಪು, ಡಿಕ್ರಿ ಮತ್ತು ಆದೇಶಗಳಲ್ಲಿ ಹಾಗೂ ಅಪೀಲು ಅರ್ಜಿಗಳಲ್ಲಿ ತಿದ್ದುಪಡಿಗಳಾಬಹುದು.
  • ನ್ಯಾಸಪತ್ರಗಳು, ಖಾಸಗಿ ಸಂಸ್ಥೆಗಳ ಕರಾರು ಪತ್ರಗಳು, ಖಾಸಗಿ ವ್ಯವಹಾರಗಳನ್ನು ನಮೂದಿಸಿರುವ ಕಾಗದ ಪತ್ರಗಳು ಅಥವಾ ದಾಖಲೆಗಳು ಮತ್ತು ಸಾರ್ವಜನಿಕ ಇಲ್ಲವೇ ಖಾಸಗಿ ಸಂಸ್ಥೆಗಳ ಸಭೆಗಳಲ್ಲಿ ಸದಸ್ಯರು ಮಾಡಲು ಸೂಚನೆಗಳಿಗೂ ತಿದ್ದುಪಡಿಗಳಾಬಹುದು.
  • ಶಾಸನ ಸಭೆಗಳಲ್ಲಿ ಮಂಡಿಸಲಾಗಿರುವ ವಿಧೇಯಕಗಳಿಗೆ ಅಥವಾ ಮಸೂದೆಗಳಿಗೆ ಸದಸ್ಯರು ತಿದ್ದುಪಡಿಗಳನ್ನು ಸೂಚಿಸಬಹುದು. ಈ ಬಗೆಯ ತಿದ್ದುಪಡಿಗೆ ಸಂಬಂಧಿಸುವ ನಿಯಮಗಳು ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ತಿದ್ದುಪಡಿಗಳು ಮಸೂದೆಯ ಮುಖ್ಯ ವಿಷಯಕ್ಕೆ ಸಂಬಂಧಿಸಿರಬೇಕೆಂದು ಅನೇಕ ಶಾಸನಸಭೆಗಳ ನಿಯಮಗಳು ಸಾರುತ್ತವೆ. ಆದರೆ ಇದರಿಂದ ಜಟಿಲವಾದ ಅರ್ಥವಿವರಣೆಯ ಸಮಸ್ಯೆಗಳು ಉದ್ಭವಿಸಬಹುದು. ಸಾಮಾನ್ಯವಾಗಿ ತಿದ್ದುಪಡಿಗಳು ಮಸೂದೆಯ ಮೂಲತತ್ತ್ವವನ್ನು ಉರುಳಿಸುವುದಿಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ತಿದ್ದುಪಡಿ ಪ್ರತಿಮಸೂದೆಯಾಗಿದ್ದು, ಒಂದು ವೇಳೆ ಅದು ಅಂಗೀಕೃತವಾದಲ್ಲಿ ಮೂಲ ಮಸೂದೆಯನ್ನೇ ತೊಡೆದುಹಾಕಬಹುದು. ಒಂದು ವಿಧೇಯಕಕ್ಕೆ ತಗಲಿಕೊಂಡಿರುವ ನಿಬಂಧನೆಯಾದ ಉಪವಿಧಿಯೂ ಒಂದು ಬಗೆಯ ತಿದ್ದುಪಡಿ. ಮೂಲವಿಧೇಯಕವನ್ನು ಅನಾಕರ್ಷಕವಾಗಿ ಮಾಡಿ ಅದನ್ನು ಪರಾಜಯಗೊಳಿಸುವುದು ಕೆಲವೊಮ್ಮೆ ಈ ಉಪವಿಧಿಯ ಉದ್ಧೇಶವಾಗಿರುತ್ತದೆ. ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಬದಲಾವಣೆಗಳೂ ತಿದ್ದುಪಡಿಗಳೆನಿಸಿಕೊಳ್ಳುತ್ತವೆ. ಈ ಬಗೆಯ ತಿದ್ದುಪಡಿಗಳನ್ನು ಮಾಡುವುದು ಸುಲಭವಾಗಿರುವುದಿಲ್ಲ. ಅವಕ್ಕಾಗಿ ಬೇರೆ ಬೇರೆ ರಾಷ್ಟ್ರಗಳ ಶಾಸನಸಭೆಗಳು ಬೇರೆ ಬೇರೆ ವಿಧಾನಗಳನ್ನು ನಿಯಮಿಸುತ್ತವೆ. ಕಾನೂನುಗಳ ತಿದ್ದುಪಡಿಗಳು ಅವುಗಳಲ್ಲಿಯ ಒಂದು ಅಥವಾ ಹೆಚ್ಚು ನಿಬಂಧನೆಗಳನ್ನು ತೆಗೆದುಹಾಕಿ ಅದರ ಅಥವಾ ಅವುಗಳ ಸ್ಥಾನದಲ್ಲಿ ಬೇರೆ ನಿಬಂಧನೆ ಅಥವಾ ನಿಬಂಧನೆಗಳನ್ನು ಜಾರಿಯಲ್ಲಿ ತರಬಹುದು. ವಿಧಾನಾತ್ಮಕ ಕಾನೂನುಗಳೇ ತಿದ್ದುಪಡಿಗಳ ರೂಪದಲ್ಲಿ ಬರುವುದೂ ಉಂಟು. ಉದಾಹರಣೆಗಾಗಿ ಇಂಗ್ಲೆಂಡಿನ ಲಾರ್ಡ್ಸ್ ಸಭೆಯ ಅಧಿಕಾರಗಳನ್ನು ಕಡಿಮೆ ಮಾಡುವ 1949ರ ನಿಬಂಧನೆಯನ್ನು 1911ರ ಪಾರ್ಲಿಮೆಂಟಿನ ಕಾನೂನನ್ನು ತಿದ್ದುಪಡಿ ಮಾಡುವ ಕಾನೂನು ಎಂದು ಕರೆಯಲಾಗಿತ್ತು. ರಾಷ್ಟ್ರಗಳ ಸಂವಿಧಾಗಳ ತಿದ್ದುಪಡಿಗಳ ವಿಧಾನಗಳು ಎಲ್ಲಕ್ಕೂ ಹೆಚ್ಚು ಜಟಿಲವಾದಂಥವು. ಔಪಚಾರಿಕ ತಿದ್ದುಪಡಿಗಳ ಮೂಲಕ ಅಮೆರಿಕದ ಸಂವಿಧಾನವನ್ನು ಬದಲಾಯಿಸುವುದು ಇತರ ಸಂವಿಧಾನಗಳ ಬದಲಾವಣೆಗಳಿಗಿಂತ ಹೆಚ್ಚು ಕಠಿಣ. ಆ ಸಂವಿಧಾನದ ತಿದ್ದುಪಡಿಯ ವಿಧಾನ ಬಹಳ ಜಟಿಲವಾದ್ದು ; ಅತ್ಯಂತ ವಿಸ್ತೃತವಾದ ಕಾರ್ಯಕ್ರಮ ಅದಕ್ಕೆ ಅಗತ್ಯ.[][] ಇಂಗ್ಲೆಂಡಿನದು ಲಿಖಿತ ಸಂವಿಧಾನವಲ್ಲ. ಅದರ ತಿದ್ದುಪಡಿಗೆ ಯಾವ ವಿಶೇಷ ವಿಧಾನವನ್ನೂ ಗೊತ್ತುಪಡಿಸಿಲ್ಲ. ಭಾರತದ ಸಂವಿಧಾನದ ತಿದ್ದುಪಡಿ ಅಮೆರಿಕದ ಸಂವಿಧಾನದ ತಿದ್ದುಪಡಿಯಷ್ಟು ಕಠಿಣವಲ್ಲದಿದ್ದರೂ ಇಂಗ್ಲೆಂಡಿನ ಸಂವಿಧಾನದಲ್ಲಿಯಷ್ಟು ಸುಲಭವೂ ಅಲ್ಲ. ಈ ಸಂವಿಧಾನ ಅತಿ ನಮ್ಯವೂ ಅಲ್ಲ, ಅತಿ ಗಟುಸಾದ್ದೂ ಅಲ್ಲ.

ಉಲ್ಲೇಖಗಳು

ಬದಲಾಯಿಸಿ
  1. "U.S. Constitutional Amendments - FindLaw". Findlaw. Retrieved 10 April 2018.
  2. "ಆರ್ಕೈವ್ ನಕಲು". Archived from the original on 2019-12-21. Retrieved 2019-12-24.
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: