ತಿಂಥಿಣಿ ಮೌನೇಶ್ವರ

ಮೌನೇಶ್ವರರ ಅವತಾರ ಮತ್ತು ಜೀವನ

ಅಂದಿನ ಗುಲಬರ್ಗಾ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ(ದೇವರ ಗೋನಾಲ) ಎಂಬ ಗ್ರಾಮದ ಪಂಚಾಳ ಅಥವಾ ವಿಶ್ವಕರ್ಮ ಕುಲದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ  (ಇವರಿಗೆ ಹಾವಪ್ಪ ಮತ್ತು ಹಾವಕ್ಕ ಎಂದು ಕರೆಯಲಾಗುತ್ತಿತ್ತು) ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೀಲೆ ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಗಂಡನಿಗೆ ಸಂಶಯ ಬಂದು ಅವಳನ್ನು ಹಿಂಬಾಲಿಸಿದಾಗ ಅವನಿಗೆ ದೃಗ್ಗೋಚರವೇ ಎದುರಾಯಿತು. ಏನೆಂದರೆ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು 'ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ' ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ "ಮಗಳೇ ಶೇಷಮ್ಮ ನೀನು ನನ್ನ ಪನ್ನಂಗಾಭರಣವಾದ್ದರಿಂದ ಆ ಬ್ರಹ್ಮನು ನಿನ್ನ ದೈವದಲ್ಲಿ ಸೃಷ್ಟಿ ಬೆಳೆಸುವ ಸಂತಾನ ಭಾಗ್ಯ ಫಲವನ್ನಿಡುವ ಸಾಹಸ ಮಾಡಲಿಲ್ಲ. ಆದಕಾರಣ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ" ಎಂದು ಹೇಳಿ ಪರಮಾತ್ಮನು ಅಂತರ್ಗತನಾಗುತ್ತಾನೆ. ಇದನ್ನೆಲ್ಲ ಪ್ರತ್ಯಕ್ಷವಾಗಿ ದೇಗುಲದ ಒಂದು ಕಂಬದ ಮರೆಯಲ್ಲಿ ನಿಂತು  ನೋಡುತ್ತಿದ್ದ ಶೇಷಮ್ಮಳ ಗಂಡ ಶೇಷಪ್ಪನ ಸಂಶಯವೆಲ್ಲವೂ ದೂರವಾಗಿ ಭಕ್ತಿಯ ಮಹಾಪೂರವು ಅವನ ಮನದಲ್ಲಿ ನೆಲೆಯಾಗುತ್ತದೆ.

ನಂತರ ಪರಶಿವನೇ ಅಯೋನಿಜನಾಗಿ ಮೌನೇಶ್ವರರ ಅವತಾರದಿ ಚೆಲುವಿನ, ಚೆಂದದ, ಮುದ್ದಾದ ಮಗುವಿನ ರೂಪದಲ್ಲಿ ವರಪ್ರಸಾದವಾಗಿ ಧರೆಗಿಳಿದು ಬರುತ್ತಾನೆ.

ಹೀಗೆ ಜಗದ್ಗುರು ಶ್ರೀ ಮೌನೇಶ್ವರರು ಬರೀ ಮಹಿಮಾಪುರುಷರಲ್ಲದೆ ಕಾಲಜ್ಞಾನಿಗಳು, ವಚನಕಾರರು, ಸಮನ್ವತಾವಾದಿಗಳು, ಮಹಾನ್ ಮಾನವತಾವಾದಿಗಳೂ ಆಗಿದ್ದಾರೆ. ಹೀಗೆ 16ನೇ ಶತಮಾನದಲ್ಲಿ ಬರುವ ಶರಣರ, ವಚನಕಾರರ, ಸಂತರ ಸಾಲಿನಲ್ಲಿ ಮೌನೇಶ್ವರರು ಪ್ರಮುಖ ವಚನಕಾರರಾಗಿ ಕಂಡುಬರುತ್ತಾರೆ. ಮೌನೇಶ್ವರರು ಒಟ್ಟು 796ಕ್ಕೂ ಅಧಿಕ ವಚನಗಳನ್ನು ಬರೆದಿದ್ದಾರೆ. ಮೌನೇಶ್ವರರು ಸಾಕ್ಷಾತ್ ಶಿವನಾವತಾರಿಗಳಾದ್ದರಿಂದ ತಮ್ಮ ಎಲ್ಲ ವಚನಗಳಲ್ಲಿ ಶಿವನ ವಾಹನ ನಂದಿಯನ್ನು ಬಸವಣ್ಣನೆಂಬ ಅಂಕಿತನಾಮದೊಂದಿಗೆ ಬರೆದಿರುವುದನ್ನು ಕಾಣಬಹುದು.

ಮೌನೇಶ್ವರರ ಸಂಪೂರ್ಣ ವಚನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೌನೇಶ್ವರರು ಹಿಂದೂ ಮುಸಲ್ಮಾನ ಧರ್ಮದ ಭಾವೈಕ್ಯತಾ ಸೂಚಕವಾಗಿ ಹೀಗೆ ಹೇಳಿದ್ದಾರೆ:

"ಹಿಂದೂ ತುರುಕರಿಗೆ ಚಂದ್ರಮನೊಬ್ಬನೆ

ನಿಂದಿಸಿದವನೇ ಅಧಮನು" ಎಂದು ತಮ್ಮ ವಚನವೊಂದರಲ್ಲಿ ಹೇಳಿದ್ದಾರೆ.

ಹಿಂದೂ-ಮುಸ್ಲಿಂ ಸಾಮರಸ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ತಿಂಥಿಣಿಯ ಮೌನೇಶ್ವರರು ತಮ್ಮ ಮಹಿಮೆಯಿಂದಲೇ ಎಲ್ಲರನ್ನೂ ಆಕರ್ಷಿಸಿದ್ದರು. ಇವರು ಲಕ್ಷ್ಮೇಶ್ವರ, ಉಳವಿ, ಕಲ್ಯಾಣ, ವಿಜಯಪುರ, ಶಾಹಪುರ, ಸುರಪುರ, ದೇವದುರ್ಗ, ಲಿಂಗನಬಂಡಿ, ವರವಿ, ಛಬ್ಬಿ, ರಾಚೋಟಿ, ಶಿರಸಂಗಿ, ತಿರುಪತಿ, ಕಾಶಿ, ಮುಂತಾದೆಡೆ ತಿರುಗಾಡಿ, ಮಹಿಮೆಗಳನ್ನು ಮೆರೆದವರೆಂಬುದು ಇತಿಹಾಸ. ವರವಿ ಮತ್ತು ತಿಂಥಿಣಿ ಸ್ಥಳಗಳಲ್ಲಿ ಇವರ ಹೆಸರಿನ ದೇವಾಲಯಗಳಿವೆ. ಬಿಜಾಪುರದ ಸುತ್ತಮುತ್ತ ಅನೇಕ ಗುಡಿಗಳಿವೆ. ಇವು ಹಿಂದೂ-ಮುಸ್ಲಿಂ ಬೆರೆತ ಶೈಲಿಗಳಲ್ಲಿವೆ. ಮೌನೇಶ್ವರರು ವಿಶ್ವಕರ್ಮ ಸಮಾಜದಿಂದ ಬಂದವರು. ದಕ್ಷಿಣ ಭಾರತದಲ್ಲಿ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಜೀವನದುದ್ದಕ್ಕೂ ಸಾರಿದವರು ಮೌನೇಶ್ವರರೇ. ಅವರ ಒಂದು ಪದ್ಯ ಹೀಗಿದೆ-

‘|| ಓಂ ಏಕಲಾಖ್ ಐಂಸಿ ಹಜಾರ್ ಪಾಂಚೋ ಪೀರ್ ಪೈಗಂಬರ್ ಮೌನಾಧೀನ್

ಜಿತಾಪೀರ್ ಪೈಗಂಬರ್ ಮಾಧೀದೀ ಕಾಶೀಶೀಪತಿ ಗಂಗಾಧರ ಹರ ಹರ ಮಹಾದೇವ||'

ಮಹಮ್ಮದ್ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರರು ಇದರಲ್ಲಿ ಸಾರಿದ್ದಾರೆ. ಈ ಮಾತಿನ ಅಖಂಡಾರ್ಥ ಮೌನೇಶ್ವರರ ಪದ್ಯದಲ್ಲಿದೆ. ಓಂ ಮತ್ತು ಅಲ್ಲಾ ಒಂದೇ ಎಂಬ ಅದ್ವಯಭಾವದ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮಹಾಮಾನವತಾವಾದಿ, ಸಾಮಾಜಿಕ ಸಂತ ತಿಂಥಿಣಿ ಮೋನಪ್ಪಯ್ಯ!

ಜನನ ಬದಲಾಯಿಸಿ

ತಿಂಥಿಣಿ ಮೌನೇಶ್ವರ ಎಂಬ ಹೆಸರಿನಲ್ಲಿ ಪ್ರಸಿದ್ಧಿಪಡೆದ ಇವರು ‘ಬಸವಣ್ಣ’ ಎಂಬ ಅಂಕಿತದಲ್ಲಿ ಹಲವಾರು ವಚನಗಳನ್ನು ಬರೆದಿದ್ದಾರೆ, ಹಂಪೆಯ ಎಮ್ಮೆ ಬಸವಣ್ಣನನ್ನು (ಕ್ರಿ.ಶ. 1510-1570) ವಚನದಲ್ಲಿ ನೆನೆದಿದ್ದಾರೆ. ವಿಜಯಪುರ ಜಿಲ್ಲೆಯ ಗೋಲಗೇರಿ ಎಂಬಲ್ಲಿದ್ದ 16ನೇ ಶತಮಾನದ ಕುರುಬಗೊಲ್ಲಾಳ ನನ್ನು ಮತ್ತೊಂದು ವಚನದಲ್ಲಿ ಸ್ಮರಿಸಿದ್ದಾರೆ. ಇವರೊಂದು ವಚನದಲ್ಲಿ, ಬಿಜಾಪುರದ ಮೊದಲನೆಯ ಆದಿಲ್​ಶಾಹನಿಗೆ (ಕ್ರಿ.ಶ. 1557-1580) ಪಟ್ಟಕಟ್ಟಿದ ಪ್ರಸಂಗವನ್ನು ಉಲ್ಲೇಖಿಸಿದ್ದಾರೆ. ಕ್ರಿ.ಶ. 1612ರಲ್ಲಿ ಬಿಜಾಪುರದ ಸುಲ್ತಾನರ ಸುಬೇದಾರ್ ಆಗಿದ್ದ ಅಂಕುಶ ಖಾನನು ಬಾವಿಯೊಂದನ್ನು ಕಟ್ಟಿಸಲು ಯತ್ನಿಸುತ್ತಾನಷ್ಟೆ. ಆದರೆ ಅಲ್ಲಿ ಜಲ ಬರುವುದಿಲ್ಲ. ಆಗ ಮೌನೇಶ್ವರರು ಬಾವಿಗಿಳಿದು ಜಲ ತಂದುದರ ವಿವರಣೆ ಅವರ ವಚನವೊಂದರಲ್ಲಿ ಬರುತ್ತದೆ. ಇವೆಲ್ಲದರ ಆಧಾರದ ಮೇಲೆ ಇವರು 16ನೇ ಶತಮಾನದ ಮಧ್ಯಭಾಗದಿಂದ 17ನೇ ಶತಮಾನದ ಉತ್ತರಾರ್ಧದವರೆಗೆ ಇದ್ದರೆಂಬುದು ರುಜುವಾತು ಆಗುತ್ತದೆ!

ಜೀವನ ಬದಲಾಯಿಸಿ

ಮೌನೇಶ್ವರರ ತಂದೆ-ತಾಯಿ ಶೇಷಪ್ಪ (ಹಾವಪ್ಪ), ಶೇಷಕ್ಕ (ಹಾವಕ್ಕ) ಎಂಬ ಉಲ್ಲೇಖ ಐತಿಹ್ಯವಾಗಿ ದೊರಕುತ್ತದೆ. ಜಾನಪದದಲ್ಲೂ ಮೌನೇಶ್ವರರ ಬಾಲ್ಯದ ವಿವರಗಳು ಕ್ವಚಿತ್ತಾಗಿ ಬಂದಿವೆ. ಸುರಪುರ ತಾಲೂಕಿನ ಗೋನಾಳದಲ್ಲಿ ಹಾವಕ್ಕ-ಹಾವಪ್ಪ ಎಂಬ ವಿಶ್ವಕರ್ಮ ದಂಪತಿಯಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಲಿಲ್ಲ. ಹಾವಕ್ಕ ಆ ಊರಿನ ಆದಿಲಿಂಗೇಶ್ವರ ದೈವಕ್ಕೆ ನಿತ್ಯವೂ ನಡೆದುಕೊಳ್ಳುತ್ತಿದ್ದಳು. ಪ್ರತಿನಿತ್ಯ ಬೆಳಗ್ಗೆ ಗುಡಿಗೆ ಹೋಗಿ ಪೂಜೆ ಮಾಡಿಕೊಂಡು ಬರುತ್ತಿದ್ದಳು. ಗಂಡನಲ್ಲಿ ಇದು ಅನುಮಾನ ಹುಟ್ಟಿಸಿ, ಒಂದು ದಿನ ಆಕೆಯನ್ನು ಹಿಂಬಾಲಿಸಿ ಗುಡಿಯ ಕಂಬದ ಮರೆಯಲ್ಲಿ ನಿಂತ. ಆ ದಿನ ಶೇಷಕ್ಕ ಸಂತಾನಕ್ಕಾಗಿ ದೇವರಲ್ಲಿ ಬೇಡುವುದೂ ಶಿವನು ಪ್ರತ್ಯಕ್ಷನಾಗಿ ‘ನಾನೇ ನಿನ್ನ ಮಗನಾಗಿ ಬರುತ್ತೇನೆ’ ಎಂಬ ಮಾತೂ ಪ್ರತ್ಯಕ್ಷವಾಗಿ ಕಂಡನು. ಗಂಡನ ಅನುಮಾನವೂ ದೂರವಾಯಿತು. ಮರುದಿನ ಬೆಳಕು ಹರಿಯುವ ಹೊತ್ತಿಗೆ ಶೇಷಕ್ಕನ ಮಗ್ಗುಲಿನಲ್ಲಿ ಮಗು ಮಲಗಿತ್ತು. ಇದು ಜಾನಪದ ಕಥೆ. ಆದರೆ, ಮೌನೇಶ್ವರರು- ‘ಇಂದ್ರಿ ಸೂತಕದಿಂದ ಅಂದೆ ನಾನು ಜನಿಸಿದೆನು /ಇಂದು ನಾನು ಕೊಳೆಯಲೆ ಪ್ರಭುದೇವ ನಾ/ ಬಂದಂಥ ಭವಕೆ ಮಿತಿಯಿಲ್ಲ ಪ್ರಭುದೇವರ ನಾ/ ಹಿಂದಿಗಿಂತ ಕಡಿಮೆಯಯ್ಯ ಬಸವಣ್ಣ’/ -ಎಂದು ವಚನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜಾನಪದ-ಪುರಾಣ ಮುಂತಾದುವು ಅಯೋನಿಜರೆಂದರೆ, ಮೌನೇಶ್ವರರ ವಚನವು ‘ಯೋನಿಜ’ರೆಂದು ಸಾರುತ್ತದೆ. ಎಲ್ಲ ಶರಣರು ಹೊಲೆಯೊಳಗಿಂದಲೇ ಜನ್ಮಿಸಿದರೆಂದು ಹೇಳುವ ಮೌನೇಶ್ವರರು ‘ಕುಲವನೆಲ್ಲಿ ಅರಸುವುದು?’ ಎಂಬ ಪ್ರಶ್ನೆಯನ್ನು ನಮಗೆ ಹಾಕುತ್ತಾರೆ ಶರಣರೇ ನಿಜವಾದ ತಾಯ್ತಂದೆಗಳೆಂಬುದು ಇಲ್ಲಿ ಪ್ರಸಿದ್ಧಾರ್ಥ.

ಸಾಹಿತ್ಯ ಸಂಪದ ಬದಲಾಯಿಸಿ

ಮೌನೇಶ್ವರರು ವಚನವೊಂದರಲ್ಲಿ ತನ್ನ ಗುರುಮನೆ ಗೋಗಿನ ಎಂದೂ, ಗುಂಡಿ ಬಸವಯ್ಯ ತಮ್ಮ ಗುರುವೆಂದೂ ಹೇಳಿಕೊಂಡಿದ್ದಾರೆ. ಇಲ್ಲಿಯ ಸೂಚಿತಾರ್ಥಗಳನ್ನು ಗ್ರಹಿಸಿದರೆ ಮೌನೇಶ್ವರರು ಕೆಲವು ಗುರುಗಳ ಬಳಿ ಸಾಧನೆ ಮಾಡಿರಬೇಕು. ಗುರುವಿನ ಮಾರ್ಗದರ್ಶನ ಇಲ್ಲದೆ, ಯಾವೊಬ್ಬ ಶಿಷ್ಯನೂ ಸಾಧಕನಾಗಲಾರನಷ್ಟೆ. ಆದರೆ, ಅಲ್ಲಮಪ್ರಭುದೇವ ಮಾತ್ರ ಇದಕ್ಕೆ ಅಪವಾದ. ಮೌನೇಶ್ವರರು ಅನೇಕ ವಚನಗಳಲ್ಲಿ ಅಲ್ಲಮಪ್ರಭುವಿನ ಹೆಸರನ್ನು ಪದೇಪದೆ ಬಳಸುತ್ತಾರೆ. ಅಲ್ಲಮನು ಯಾವ ಮಾಯೆಗೂ ಸಿಗದೆ, ಎಲ್ಲರೊಳಗಿನ ಮಾಯೆಯನ್ನು ಕಿತ್ತೆಸೆದವನು. ಮೌನೇಶ್ವರರು ಇಂಥ ಅಲ್ಲಮನ ದಾರಿಯಲ್ಲಿ ನಡೆದಿದ್ದಾರೆ. ಒಂದಂತೂ ನಿಜ. ಮೌನೇಶ್ವರರು ಕಠೋರ ತಪಸ್ಸಾಧನೆ ಮಾಡಿ ಅಪೂರ್ವ ಸಿದ್ಧಿಗಳನ್ನು ಪಡೆದಿರಬೇಕು. ಅವುಗಳ ಮೂಲಕ ಪವಾಡಗಳನ್ನೂ ಮಾಡಿರಬೇಕು. ಈಗಲೂ ಜನರ ಬಾಯಲ್ಲಿ ಅವರ ಪವಾಡ, ಮಹಿಮೆಗಳು ರೂಢಿಯಲ್ಲಿವೆ. ಆ ಕಾಲದ ಜನರನ್ನೋ ಸುಲ್ತಾನರನ್ನೋ ಸುಬೇದಾರರನ್ನೋ ಪ್ರಭಾವ ಗೊಳಿಸಬೇಕಾದರೆ ಇಂಥ ಪವಾಡಗಳನ್ನು ಮಾಡಿಯೇ ಸೆಳೆಯಬೇಕಿತ್ತು. ಜನಹಿತಕಾರ್ಯಕ್ಕೆ ಇದೊಂದು ಪೂರ್ವ ಮೀಮಾಂಸೆಯೇ. ಮೌನೇಶ್ವರರಿಗೆ ಅಲೌಕಿಕ ಸಿದ್ಧಿಗಳಿದ್ದಂತೆ ಅಸಾಮಾನ್ಯ ಅನುಭಾವೀ ಜೀವನವೂ ಇತ್ತು. ಅವೆರಡು ಇವರಲ್ಲಿ ಹಾಳತವಾಗಿ ಸೇರಿದ್ದಕ್ಕೆ ಅವರ ಬರಹಗಳೇ ಸಾಕ್ಷಿ.

ಉಪನಯನ ಬದಲಾಯಿಸಿ

ಬಾಲ್ಯಾವಸ್ತೆಯಲ್ಲಿ ಜಗದ್ಗುರು ಮೌನೇಶ್ವರರಿಗೆ 8 ವರ್ಷ ತುಂಬಿದಾಗ ವಿಶ್ವಕರ್ಮ ಧರ್ಮದ ವೈದಿಕ ಪರಂಪರೆಯ ಅನುಸಾರ ಗಾಯತ್ರಿ ಮಂತ್ರೋಪದೇಶದೊಂದಿಗೆ ಉಪನಯನವಾಯಿತು. ಗಾಯತ್ರಿ ಮಂತ್ರೋಪದೇಶವಾಗಿ ಅದರ ರಹಸ್ಯಾರ್ಥಗಳು ದೃಗ್ಗೋಚರವಾದುವು. ನಂತರ ಮೌನೇಶ್ವರರು ಸುರಪುರದ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ 4 ವರ್ಷ, ಸಂಸ್ಕೃತ, ಉರ್ದು, ಕನ್ನಡ ಕಲಿತು ಹಲವಾರು ಶಾಸ್ತ್ರಗಳ ಪರಿಚಯ ಮಾಡಿಕೊಂಡರು. ಜತೆಗೆ ಸದಾನಂದ ಗುರುಗಳ ಸಂಪೂರ್ಣ ಅನುಗ್ರಹವೂ ಮೌನೇಶ್ವರರ ಮೇಲಿತ್ತು. ಈ ನಡುವೆ ಕಾಶೀಯಾತ್ರೆ ಮುಗಿಸಿಬಂದರು. ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ಹೋಗಿ ವೀರಭದ್ರದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳನ್ನು ಮಾಡಿದರೆಂದು ಪುರಾಣಗಳು ನಿರೂಪಿಸುತ್ತವೆ. ತಂದೆ-ತಾಯಿ ವೃದ್ಧರಾಗಿ ತೀರಿಕೊಂಡ ಮೇಲೆ ಮೌನೇಶ್ವರರು ದೇಶಸಂಚಾರ ಮಾಡುತ್ತ, ಎಲ್ಲ ಸಮುದಾಯದವರ ಕಷ್ಟ-ಕಾರ್ಪಣ್ಯ ನೀಗಿಸುತ್ತ ಸಮಾಜದ ಕೀಲಕಸ್ಥಾನದಲ್ಲಿ ಉಳಿದುಬಿಟ್ಟರು.

ಸಾಹಿತ್ಯ ಬದಲಾಯಿಸಿ

ಮೌನೇಶ್ವರರು ಶತಕಗಳನ್ನೂ ಕಾಲಜ್ಞಾನವನ್ನೂ ಬರೆದಿದ್ದಾರೆ. ದಂಡಕ, ಸುವ್ವಿಹಾಡು, ಜೋಗುಳಪದ, ಆರತಿಪದ, ಮೊಹರಂಗೀತೆ, ಕೋಲುಪದ, ಭಜನೆಹಾಡುಗಳನ್ನ್ನೂ ರಚಿಸಿದ್ದಾರೆ. ಇವರ ಪದಗಳಲ್ಲಿ ಉರ್ದು, ಪರ್ಷಿಯನ್ ಪದಗಳು ವಿಪುಲವಾಗಿವೆ. ಕನ್ನಡ, ಉರ್ದು ಕೂಡುನುಡಿಗಳಂತೂ ಬಹಳಷ್ಟಿವೆ-

ಮೌನದೀನ ಪೀರ | ಸದ್ಗುರು ಜಿತಾ ಪೈಗಂಬರ ||ಪ||

ಹಿಂದೂ ಮುಸಲ್ಮೆ ಮನದ ಪ್ರಕಾರ/ ಬಲ್ಲಂಥ ಜ್ಞಾನಿಗೆ ನೀನೊಬ್ಬ ದೇವರ

ಆಕಾರ ನಿರಾಕಾರ ಎರಡಕ್ಕೆ ನೀನೆ ಗಂಭೀರ/ ಶೇಕ್ ಸಯ್ಯದ ಮೊಗಲ ಪಠಾಣ

ನಾಲ್ಕು ಅವತಾರ ತಾಳಿ ಮಾಡಿದಿ ಉದ್ಧಾರ ||2||

ಈ ಪದ್ಯವು ಮೌನೇಶ್ವರರ ರಚನೆಯ ಬಗೆಯನ್ನು ತಿಳಿಸುತ್ತದೆ. ಅವರು ಹಿಂದೂ-ಮುಸ್ಲಿಂ ಬಂಧುತ್ವವನ್ನು ಒಂದೆಡೆ ಸೇರಿಸಿದವರಷ್ಟೆ. ಹೀಗೆ ಭಾವೈಕ್ಯತೆ ಮತ್ತು ಮತೈಕ್ಯತೆಗಳ ಸಂಕೇತವಾಗಿ ಇವರು ಕಾಣಿಸಿಕೊಂಡರೆಂಬುದು ವಿಶೇಷ. ಮೌನೇಶ್ವರರು 17ನೇ ಶತಮಾನದ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸಾಹಿತ್ಯದಲ್ಲಿ ಬಳಸಿಕೊಂಡರು. ಇವರ ಪದ್ಯಗಳಲ್ಲಿ ಉರ್ದುಭಾಷೆ, ಅಭಿವ್ಯಕ್ತಿಗೆ ಅನುಗುಣವಾಗಿ ಕಾಣಿಸಿಕೊಂಡಿದೆ. ಆಡುಮಾತಿನ ಪಲುಕು ಉದ್ದಕ್ಕೂ ಕಾಣಿಸುತ್ತದೆ. ಭಾಷೆಯ ದೃಷ್ಟಿಯಿಂದ ನೋಡಿದರೆ, ಎಷ್ಟೋ ಅಪಪ್ರಯೋಗಗಳು ಇವೆ. ಆದರೆ, ಮೌನೇಶ್ವರರು ಜನಸಾಮಾನ್ಯರಂತೆ ವಚನಗಳನ್ನು ಕಟ್ಟಿದ್ದಾರೆ. ಹಳ್ಳಿಗರು ಬಳಸುತ್ತಿದ್ದ ಹಾಡಿನ ಮಟ್ಟುಗಳ ಜಾಡುಹಿಡಿದು ಅನುಭವಗಳನ್ನು ಸಾರಿದ್ದಾರೆ. ಮೌನೇಶ್ವರರ ವಚನಗಳು ಬಹುತೇಕವಾಗಿ ಕನ್ನಡದ ಅಂಶಗಣಕ್ಕೆ ಹೆಚ್ಚು ಹೊಂದುತ್ತವೆ. ಇವು ಬರಹರೂಪದ ವಚನಗಳಲ್ಲ; ಅವರು ಹಾಡುತ್ತ, ಹೇಳುತ್ತ ಹೋದಂತೆ ಶಿಷ್ಯರು ಸಂಗ್ರಹಿಸಿ ಬರೆದಿಟ್ಟದ್ದೆಂದು ತೋರುತ್ತದೆ!

ಮೌನೇಶ್ವರರು ತಮ್ಮ ಬಗೆಗೆ ಹೆಚ್ಚಿಗೇನೂ ಹೇಳಿಕೊಂಡಿಲ್ಲ. ತಾನು ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನ ಅವತಾರವೆಂದು ಮಾತ್ರ ವಚನಗಳಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಜನ್ಮ ಯಾವುದೋ ಮುಖ್ಯ ಉದ್ದೇಶಕ್ಕಾಗಿ ಆಗಿದೆಯೆಂದು ಅವರು ತಿಳಿದುಕೊಂಡಿದ್ದರು. ಆ ನಂಬುಗೆ ಅವರಲ್ಲಿ ಪ್ರಬಲವಾಗಿದ್ದುದು ಕಂಡುಬರುತ್ತದೆ. ಅವರ ಮಾತಿದು.

ಅಕ್ಕ ನಾಗಲಿಯ ಮಗ ಚಿಕ್ಕ ಚನ್ನಬಸವಣ್ಣ/ ಅಕ್ಕಸಾಲೆಯರ ಒಡಲೊಳಗೆ ಜನಿಸಿ ನಿಂತು/ ರೆಕ್ಕ ಲೆಕ್ಕಕ್ಕೆ ಝುಡತಿಯ ಕೇಳಬೇಕೆಂದು/ ತಕ್ಕಡಿಯ ತ್ರಾಸು ಪಿಡಿದುಕೊಂಡು ನಿಂತಾತನ ಕೂಡ -ಈ ವಚನದಲ್ಲಿ ತಾನು ‘ಅಕ್ಕಸಾಲಿಗ’ ಎಂಬುದನ್ನು ಖಚಿತಪಡಿಸಿದ್ದಾರೆ. ‘ವಿಶ್ವಕರ್ಮ’ ಎಂದು ಪ್ರಸಿದ್ಧಿ ಪಡೆದ ಇವರು ಸಮಾಜದ ಕೀಲಕ ಸ್ಥಾನದಲ್ಲಿದ್ದವರೇ. ಮರದ ಕೆಲಸ ಮಾಡುವವರು ‘ಬಡಗಿ’ಯಾದರೆ ಕಬ್ಬಿಣದ ಕೆಲಸ ಮಾಡುವವರು ‘ಕಮ್ಮಾರ’ರು; ಕಂಚಿನ ಕೆಲಸ ಮಾಡುವವರು ‘ಕಂಚುಗಾರ’ರಾದರೆ, ಶಿಲೆಯ ಕೆಲಸ ಮಾಡುವವರು ‘ಶಿಲ್ಪಿಗರು’. ಇಷ್ಟು ಜನರನ್ನು ವಿಶ್ವಕರ್ಮರೆಂದೇ ಗ್ರಾಮ ಸಮುದಾಯ ಕರೆಯುತ್ತಿತ್ತು. ಸಮುದಾಯದಲ್ಲಿ ಇವರ ಸ್ಥಾನ ಮೇಲ್ಮಟ್ಟದ್ದಾಗಿತ್ತೆಂಬುದನ್ನು ಸಮಸ್ತರೂ ಗುರುತಿಸಿದ್ದಾರೆ. ಇವರ ವೃತ್ತಿಯು ಕೌಶಲಪ್ರಧಾನವಾದುದು. ಪಟ್ಟಣ, ಖೇಡ, ಖರ್ವಡ, ದ್ರೋಣಾಮುಖ ಎಂಬ ವಿವಿಧ ಬಗೆಯ ನಗರ ನಿರ್ವಣದಲ್ಲಿ ಇವರದು ಎತ್ತಿದ ಕೈ. ಅದಕ್ಕನುಗುಣವಾಗಿ ಬಡಿಗೇರ, ಕಮ್ಮಾರರು ಬಳಸುವ ಉಪಕರಣಗಳನ್ನು ವಚನದಲ್ಲಿ ಅಧ್ಯಾತ್ಮದ ಸಂಕೇತವಾಗಿಯೂ ಬಳಸಿ ಕೊಂಡಿದ್ದಾರೆ. ಗ್ರಾಮಜೀವನದ ಕಾಯಕವರ್ಗಕ್ಕೆ ಅನುಗುಣವಾದ ಅಡಿಗಲ್ಲು, ತ್ರಾಸು, ಮೂಸೆ, ಸುತ್ತಿಗೆಯಂಥ ಪರಿಕರಗಳನ್ನು ವಚನಗಳಲ್ಲಿ ಬಳಸಿದ್ದಾರೆ. ‘ಬಡಿಗ, ಕಮ್ಮಾರರು ಪೊಡವಿಗಕರ್ತರು’ ಎಂಬ ಮಾತು ಇದಕ್ಕೆ ಸಾಕ್ಷಿ. ಗುರು ಮೌನೇಶ್ವರ

ಬಾಳ್ವೆಯೇ ಬೆಳಕು ಬದಲಾಯಿಸಿ

ನಮ್ಮ ಬಾಳು ಹೇಗಿರಬೇಕೆಂಬುದನ್ನು ಹಲವಾರು ವಚನಗಳಲ್ಲಿ ಮೌನೇಶ್ವರರು ಹೇಳುತ್ತಾರೆ. ಅವರ ವಚನಗಳು ಶರಣರ ಮಾರ್ಗವನ್ನು ಮುಂದುವರಿಸುತ್ತವೆ. ಅವರು ಹೆಜ್ಜೆಹೆಜ್ಜೆಗೂ ಹಿಂದಿನ ಶರಣರ ನುಡಿಗಡಣವನ್ನು ಮುಂದಿರಿಸಿಕೊಂಡು ಮಾತಾಡುತ್ತಾರೆ. ಅರಿವಿಲ್ಲದೆ ಬಾಳುವೆ ಮಾಡುವುದು ವ್ಯರ್ಥ. ಅಂಥವರಿಗೆ ಎಲ್ಲಿಯ ಗುರು, ಎಲ್ಲಿಯ ದೈವ? ಎಂದು ಒಂದೆಡೆ ಪ್ರಶ್ನಿಸುತ್ತಾರೆ. ಮೌನೇಶ್ವರರಿಗೆ ಹಳ್ಳಿಯ ಸರಳಜೀವನ ತುಂಬಾ ಇಷ್ಟ. ಪಟ್ಟಣದವರು ಬೂಟಾಟಿಕೆ ಸ್ವಭಾವದವರೆಂದೂ, ಅವರ ಜತೆ ಸೇರಬೇಡಿರೆಂದೂ ಒಂದು ವಚನದಲ್ಲಿ ಹೇಳುತ್ತಾರೆ. ತಾಯಿಯಾದರೊ ಮೊಲೆಕೊಟ್ಟು ಸಲಹುತ್ತಾಳೆ. ಅಂಥ ತಾಯಿಯನ್ನು ಹಳಿಯುವವರು ‘ಕತ್ತೆ’ ಎನ್ನುತ್ತಾರೆ. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದೂ, ಜಂಗಮರಿಗೆ ಗುರುಗಳಿಗೆ ದಾನ-ಧರ್ಮ ಮಾಡುವುದಕ್ಕಿಂತ ತಾಯಿ-ತಂದೆಗಳ ಸೇವೆ ಮಾಡುವುದೇ ಶ್ರೇಷ್ಠವೆಂದೂ ಹೇಳುತ್ತಾರೆ. ಅವರು ಸಾಮಾಜಿಕ ವಿಚಾರಗಳಿಗೆ ಹೆಚ್ಚು ಸ್ಪಂದಿಸಿದ್ದರೆಂಬುದು ಇದರಿಂದ ತಿಳಿಯುತ್ತದೆ!

ಸಂಪ್ರದಾಯ ಬದಲಾಯಿಸಿ

ವೀರಶೈವ ಸಂಪ್ರದಾಯದ ಶಿವನ ಅವತಾರ ಎನಿಸಿಕೊಂಡ ಅಲ್ಲಮಪ್ರಭು ಇವರ ಆರಾಧ್ಯದೈವ. ಶಿವ ಮತ್ತು ಅಲ್ಲಮನನ್ನು ಅಭಿನ್ನವಾಗಿಯೇ ಮೌನೇಶ್ವರರು ಪರಿಗಣಿಸುತ್ತಾರೆ. ಈ ಜಗತ್ತೆಲ್ಲವೂ ಶಿವಮಯವೇ, ಅವನಿಲ್ಲದೆ ಲೋಕದಾಟವೇ ನಡೆಯದು. ‘ಅಂಕುಶವಿಲ್ಲದೆ ಆನೆಯು ನಡೆಯುವುದೆ?| ಶಂಕರನಿಲ್ಲದೆ ಸಂಸಾರ ನಡೆಯದು ಲೋಕದಿ| ಮಂಕುಗಳಿಗ್ಯಾಕೆ ತಿಳಿಯದು ಬಸವಣ್ಣ’ ಎಂದು ಒಂದೆಡೆ ಕೇಳಿದ್ದಾರೆ. ಮೌನೇಶ್ವರರು ಒಂದೆಡೆ ಸಾಕಾರರೂಪವನ್ನು ಬಣ್ಣಿಸಿ ನಂತರ ನಿರಾಕಾರರೂಪವಾದ ಪರಬ್ರಹ್ಮವು ಬಾನು-ಭೂಮಿಗಳನ್ನು ಏಕವಾಗಿಸಿ ವ್ಯಾಪಿಸಿರುವ ಸಾಕ್ಷಿರೂಪವೆಂದು ಹೇಳಿದ್ದಾರೆ. ಸಾಧನೆಯ ಮಾರ್ಗದಲ್ಲಿ ಹೋಗುವ ಸಾಧಕನು ಮೊದಲು ಸಾಕಾರಪೂಜೆಯನ್ನು ಪ್ರಾರಂಭಿಸಿ ನಂತರ ನಿರಾಕಾರ ಪೂಜೆಯ ಕಡೆ ತೆರಳುವ ಬಗೆಯನ್ನು ಹೇಳುತ್ತಾರೆ. ಸಾಧಕನ ಸಾಧನೆಗೆ ಸಾಕಾರ ತೊಡಕಾಗದು. ಅದು ಅಂತಿಮವಾಗಿ ಶಿವೈಕ್ಯತೆಗೆ ನೆರವಾಗುತ್ತದೆಂಬ ಅಭಿಪ್ರಾಯ ಅವರದು. ಈ ಜಗತ್ತು ಶಿವ-ಶಕ್ತಿಯರ ಪರಿಣಾಮ. ವೀರಶೈವ ಸಿದ್ಧಾಂತವು ‘ಶಕ್ತಿವಿಶಿಷ್ಟಾದ್ವೈತಸಿದ್ಧಾಂತ’ವೆಂದು ಕರೆಯಲ್ಪಡುವುದು ಸರಿಯಷ್ಟೆ. ಮೌನೇಶ್ವರರು ಇದನ್ನು ಒಪ್ಪುತ್ತಾರೆ. ಹೀಗಾಗಿ, ವಿಶ್ವಕರ್ಮ ಸಂಪ್ರದಾಯದ ದೈವ ಕಾಳಮ್ಮನನ್ನೂ ಉಪನಿಷತ್ ಪ್ರಣೀತ ಪರಬ್ರಹ್ಮ ವನ್ನೂ ಒಂದೇ ರೂಪದಲ್ಲಿ ಬಣ್ಣಿಸುತ್ತಾರೆ. ಅವರು ‘ಕಾಯವೆ ಕಾಳಮ್ಮ ಜೀವವೇ ಪರಬ್ರಹ್ಮ’ ಎಂದು ಹೇಳುವ ಮಾತಿನಲ್ಲಿ ಇದು ಚೆನ್ನಾಗಿ ವ್ಯಕ್ತವಾಗಿದೆ.ಮೌನೇಶ್ವರರು ಎಷ್ಟುವರ್ಷ ಜೀವಿಸಿದರೆಂಬುದು ತಿಳಿದಿಲ್ಲ. ಆದರೆ, ಉತ್ತರ ಕರ್ನಾಟಕ ಸೇರಿದಂತೆ ಈಗಿನ ಕಲ್ಯಾಣ ಕರ್ನಾಟಕದ ಬಹುಭಾಗಗಳಲ್ಲಿ ಅವರು ತಿರುಗಾಡಿದ್ದಾರೆ. ಅವರು ಜನಜೀವನದ ಹೊರಗಡೆ ಸಾಧನೆ ಮಾಡುವುದರೊಂದಿಗೆ ಸಮಾಜದ ನಡುವೆ ನಿಂತು ತತ್ತ್ವಸಾಧಕರಾದವರು. ಅವರ ಬಹುತೇಕ ವಚನಗಳು ಮತೈಕ್ಯತೆಗೆ ಹಚ್ಚಿದ ದೀಪಗಳಾಗಿವೆ.

ಜಾಗೃತಸ್ಥಾನ ಬದಲಾಯಿಸಿ

ಮೌನೇಶ್ವರರ 4 ಜಾಗೃತಸ್ಥಾನಗಳಾದ ವರವಿ, ಲಿಂಗನಬಂಡಿ, ಗೋನಾಳ ಮತ್ತು ತಿಂಥಿಣಿಗಳ ಪೈಕಿ ತಿಂಥಿಣಿ ಪ್ರಮುಖವಾದುದು. ಇದು ಯಾದಗಿರಿ ಜಿಲ್ಲೆ ಸುರಪುರ ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿರುವ, ಕೃಷ್ಣಾನದಿ ತೀರದಲ್ಲಿರುವ ಪಾವನಕ್ಷೇತ್ರ. ಉತ್ತರ ಕರ್ನಾಟಕದ ಅತಿದೊಡ್ಡ ಯಾತ್ರಾಸ್ಥಳಗಳಲ್ಲಿ ಇದೂ ಒಂದು. ಮೌನೇಶ್ವರರು ಜೀವಿತದ ಕೊನೆಯಲ್ಲಿ ಗುಹಾಪ್ರವೇಶ ಮಾಡಿದರೆಂಬ ಐತಿಹ್ಯ ಉಂಟು. ಅಲ್ಲಮ ಕದಳಿಯಲ್ಲಿ ಐಕ್ಯನಾದನೆಂದೂ ಅಭಿನವಗುಪ್ತಪಾದರು ಸಹಸ್ರಾರು ಶಿಷ್ಯರೊಡನೆ ಗುಹಾಪ್ರವೇಶ ಮಾಡಿ ಕಣ್ಮರೆಯಾದರೆಂದೂ ಹೇಳುವುದುಂಟಷ್ಟೆ. ಇದು ಅವರ ಅತಿಮಾನುಷ ನಿಲುವನ್ನು ವ್ಯಕ್ತಪಡಿಸುತ್ತದೆ. ಈಗಿರುವ ಗವಿಯನ್ನೇ ಗರ್ಭಗೃಹವೆನ್ನಬಹುದು. ಅದು ನೆಲದ ಮಟ್ಟದಿಂದ ಒಳಕ್ಕೆ ಆಳದಲ್ಲಿದ್ದು, ಮೌನೇಶ್ವರರು ಬಳಸುತ್ತಿದ್ದ ಹೂಜಿ, ಚಪ್ಪಗೊಡಲಿ, ಪರಶುಬಟ್ಟಲು ಮುಂತಾದ ವಸ್ತುಗಳನ್ನು ಪೂಜೆಗಾಗಿ ಅದರಲ್ಲಿ ಇಟ್ಟಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕುರುಹಾಗಿ ಅಲ್ಲಿಯೇ ಮೌನೇಶ್ವರರೇ ಮೌನದೀನರೆಂದು ಮುಸಲ್ಮಾನರಿಂದ ಪೂಜಿತರಾಗುತ್ತಿದ್ದಾರೆ.

ಸುತ್ತಮುತ್ತಲಿನ ದೇವಾಲಯಗಳು ಬದಲಾಯಿಸಿ

ತಿಂಥಿಣಿಯ ಮೌನೇಶ ದೇವಾಲಯದ ಸುತ್ತಮುತ್ತ ಕೈಲಾಸಕಟ್ಟೆ, ಪಿಡ್ಡವ್ವನಗುಡಿ, ಗಂಗಪ್ಪಯ್ಯನ ಗುಡಿ, ಸೊಲಬಣ್ಣನ ಗುಡಿ, ಶಿವನಗುಡಿ, ಕೋಣನಗುಡಿ, ಕಮ್ಮಾರಿಕೆಯ ತಾಣ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿವೆ. ಇವುಗಳಲ್ಲಿ ಪಿಡ್ಡವ್ವ, ಗಂಗಪ್ಪಯ್ಯ, ಸೊಲಬಣ್ಣ ಮುಂತಾದವರು ಮೌನೇಶ್ವರರ ನಿಜಜೀವನದಲ್ಲಿ ಬಂದವರೇ. ಅವರೆಲ್ಲರೂ ಮೌನೇಶ್ವರರ ಮೂಲಕ ಸಿದ್ಧಸ್ಥಾನಕ್ಕೆ ಏರಿದವರೆಂಬುದಕ್ಕೆ ಸಾಕ್ಷಿಗಳಿವೆ. ಪ್ರತಿವರ್ಷದ ಮಾಘಮಾಸದಲ್ಲಿ ತಿಂಥಿಣಿಜಾತ್ರೆ 9 ದಿನ ನಡೆಯುತ್ತದೆ. ನವಮಿಯ ದಿನ ಇಲ್ಲಿ 9 ಗಡಿಗೆಗಳ ಪೂಜೆ ನಡೆಯುತ್ತದೆ. ಮರುದಿನ ಸೊಲಬಣ್ಣನ ಗೌರವಾರ್ಥ ಹಾಗೂ ಸುರಪುರದ ಅರಸರ ಭಕ್ತಿಯ ಕಾರಣವಾಗಿ ಪಲ್ಲಕ್ಕಿಯು ಸುರಪುರದಿಂದ ತಿಂಥಿಣಿಗೆ ವೈಭವದಿಂದ ಬರುತ್ತದೆ. ಏಕಾದಶಿದಿನ ಮೌನಪ್ಪನ ಪಲ್ಲಕ್ಕಿ ಮತ್ತು ಸುರಪುರದಿಂದ ಬಂದಂಥ ರಾಚೋಟಪ್ಪ ಎಂಬ ವೀರಭದ್ರದೇವರ ಪಲ್ಲಕ್ಕಿಗಳು ಕೂಡಿ ಕೃಷ್ಣಾನದಿಯಲ್ಲಿ ಸ್ನಾನ ಮಾಡುತ್ತವೆ. ದ್ವಾದಶಿಯಂದು ಪುರವಂತರ ಪ್ರಥಮಸೇವೆ, ನಂತರ ಗುಹಾಪ್ರವೇಶ ನಡೆಯುತ್ತದೆ. ಇದೀಗ ತಿಂಥಿಣಿಯು ಸಾಧನಕ್ಷೇತ್ರವಾಗಿ ಎಲ್ಲರನ್ನೂ ಕರೆಯುತ್ತಿದೆ. ಮೌನೇಶ್ವರ ಅಥವಾ ಮೋನಪ್ಪಯ್ಯ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಎಲ್ಲ ಜನಸಮುದಾಯದ ಸಾಕ್ಷಿಕುರುಹಾಗಿ ಉಳಿದಿದ್ದಾರೆ.

ಕೃಷ್ಣಾ ನದಿಯ ಎಡ ದಂಡೆಯ ಮೇಲಿರುವ ಹಿಂದೂ – ಮುಸ್ಲಿಂ ಭಾವೈಕ್ಯತೆಯನ್ನು ಸಾರುವ ಧಾರ್ಮಿಕ ಕೇಂದ್ರವಾಗಿದೆ. ಸುಮಾರು ೧೭ ನೇ ಶತಮಾನದಲ್ಲಿ ಜೀವಿಸಿದ್ದ ಸಂತ ಮೌನಪ್ಪಯ್ಯನ ಗದ್ದುಗೆ ಇಲ್ಲಿದ್ದು ಹಿಂದೂಗಳು ಇವರನ್ನು ಮೌನೇಶ್ವರ ನೆಂದೂ ಮತ್ತು ಮುಸ್ಮಿಮರು ಮೌನುದ್ದೀನ್ ರೆಂದೂ ಭಕ್ತಿಯಿಂದ ಆರಾಧಿಸುತ್ತಾರೆ.