ಇಡ್ಲಿ, ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು ನೀರಿನಲ್ಲಿ ಚೆನ್ನಾಗಿ ನೆನೆಸಿ, ರುಬ್ಬಿ ಹಬೆಯಲ್ಲಿ ತಯಾರಿಸುವ ಒಂದು ತಿನಿಸು. ಈ ಇಡ್ಲಿಯನ್ನು ತಯಾರಿಸಲು ಅದಕ್ಕೇ ಪ್ರತ್ಯೇಕವಾದ ತಟ್ಟೆಗಳನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಇಡ್ಲಿಯು ಅಂಗೈ ಅಗಲ ಇರುತ್ತದೆ. ಮಕ್ಕಳಿಗೆ ಇಷ್ಟವಾದ ಪುಟ್ಟ ಪುಟ್ಟ ಇಡ್ಲಿಗಳನ್ನೂ ಮನೆಗಳಲ್ಲಿ ಮಾಡುವರು. ಹೊಟೆಲ್‍ಗಳಲ್ಲಿ ಹೆಚ್ಚಿನದಾಗಿ ವ್ಯಾಪಾರವಾಗುವ ತಿನಿಸೆಂದರೆ ಇಡ್ಲಿ. ಆರೋಗ್ಯದ ದೃಷ್ಟಿಯಿಂದಲೂ ಇದನ್ನು ಸೇವಿಸುವುದು ಒಳ್ಳೆಯದು. ಸುಲಭವಾಗಿ ಜೀರ್ಣವಾಗುವ ಈ ತಿನಿಸನ್ನು ರೋಗಿಗಳಾದಿಯಾಗಿ ಎಲ್ಲರೂ ತಿನ್ನುವರು.

ಹಲವು ವರ್ಷಗಳ ಹಿಂದೆ ಪ್ರಯೋಗಾತ್ಮಕವಾಗಿ ದೋಸೆಯಷ್ಟು ಅಗಲದ ಇಡ್ಲಿಗಳನ್ನು ಕರ್ನಾಟಕತುಮಕೂರು ಜಿಲ್ಲೆಯ ಕ್ಯಾತ್ಸಂದ್ರದಲ್ಲಿರುವ ನಟರಾಜ ಹೊಟೆಲ್ ಮಾಲೀಕರು ತಯಾರಿಸಿದರು. ಅತಿ ಶೀಘ್ರದಲ್ಲಿಯೇ ಅದು ಪ್ರಸಿದ್ಧವಾಯಿತು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಇರುವ ಆ ಹೊಟೆಲ್‍ಗೆ ಬರುವವರ ಸಂಖ್ಯೆ ಬಹಳವಾಯಿತು. ಕ್ಯಾತ್ಸಂದ್ರ ಊರನ್ನು ತಟ್ಟೆ ಇಡ್ಲಿಯಿಂದಲೇ ಗುರುತಿಸುವಂತಾಯಿತು. ಇನ್ನು ತಟ್ಟೆ ಇಡ್ಲಿ ಎಂದ ತಕ್ಷಣ ಎಲ್ಲರಿಗೂ ಮೊತ್ತ ಮೊದಲಿಗೆ ನೆನಪಾಗುವುದು ನಟರಾಜ ಹೊಟೆಲ್. ಆದರೆ, ರವಿ ಹೊಟೆಲ್ ಕೂಡಾ ಈಗ ಪ್ರಸಿದ್ಧವಾಗಿದೆ. ಒಂದು ಇಡ್ಲಿ ತಿನ್ನಲು ಒಪ್ಪತ್ತಿನ ಹೊಟ್ಟೆ ತುಂಬುವುದೆಂದರೆ ನಂಬಲಾದೀತೇ?