ಡಿಸೆಮ್ವಿರೆಟ್ - ಪುರಾತನ ರೋಮಿನಲ್ಲಿ ಕ್ರಿ.ಪೂ. 5ನೆಯ ಶತಮಾನದಲ್ಲಿದ್ದ ಹತ್ತು ಮಂದಿ ದಂಡಾಧೀಶರನ್ನೊಳಗೊಂಡ ಸಮಿತಿ.

ಹಿನ್ನೆಲೆ ಬದಲಾಯಿಸಿ

ಕ್ರಿ.ಪೂ. 450ಕ್ಕೆ ಹಿಂದೆ ರೋಮಿನಲ್ಲಿ ಲಿಖಿತ ಕಾನೂನುಗಳು ಇರಲಿಲ್ಲ. ರೋಮಿನ ನಿವಾಸಿಗಳಲ್ಲಿ ಪೆಟ್ರಿಷಿಯನರು ಅಲ್ಪಸಂಖ್ಯಾತರಾಗಿದ್ದರೂ ತಾವು ಉತ್ತಮ ಕುಲ ಸಂಜಾತರೆಂಬ ದರ್ಪದಿಂದ ಆಡಳಿತದ ಅಧಿಕಾರವೆಲ್ಲವನ್ನೂ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದರು. ಸಾಮಾನ್ಯರೆನಿಸಿದ, ತಕ್ಕಮಟ್ಟಿಗೆ ಸ್ಥಿತಿವಂತರೂ ಹೆಚ್ಚು ಸಂಖ್ಯಾತೂ ಆದ ಪ್ಲಿಬಿಯನರಿಗೆ ನಿಷ್ಪಕ್ಷಪಾತವಾಗಿ ನ್ಯಾಯವಿತರಣೆ ಮತ್ತು ಆಡಳಿತ ದೊರಕುವುದು ಕಷ್ಟವಾಗಿತ್ತು. ತಮ್ಮ ಅಧಿಕಾರವನ್ನು ಹೆಚ್ಚಿಸಿಕೊಳ್ಳಲು ಇವರು ಪುನಃಪುನಃ ಪ್ರಯತ್ನಿಸುತ್ತಿದ್ದರು. ಪೆಟ್ರಿಷಿಯನರು ಅದನ್ನು ವಿರೋಧಿಸುತ್ತಲೇ ಇದ್ದರು. ಪ್ಲಿಬಿಯನರ ಪ್ರತಿನಿಧಿಗಳಾದ ಟ್ರಿಬ್ಯೂನರು ಆಡಳಿತದಲ್ಲಿ ಸರ್ವಾಧಿಕಾರ ಹೊಂದಿದ್ದ ಸೆನೆಟ್ ಸಭೆಗೆ ಮಾಡಿಕೊಂಡ ಬಿನ್ನಹವನ್ನು ಆ ಸಭೆ ಅನುಮೋದಿಸಲಿಲ್ಲ (ಕ್ರಿ.ಪೂ. 462). ಆದರೆ ತಾತ್ಕಾಲಿಕವಾಗಿ ಸಣ್ಣಪುಟ್ಟ ಔದಾರ್ಯ ತೋರಿಸಿ ಜನರ ಅಸಮಾಧಾನವನ್ನು ಹೋಗಲಾಡಿಸಲು ಪ್ರಯತ್ನಿಸಿತು. ಇದು ವಿಫಲವಾಯಿತು. ಅನಂತರ ಗ್ರೀಸಿನ ಸೋಲಾನನ ನ್ಯಾಯಪದ್ಧತಿಯೇ ಮುಂತಾದವನ್ನು ಅಧ್ಯಯನ ಮಾಡಲು ಮೂರು ಜನರನ್ನು ಅದು ಗ್ರೀಸಿಗೆ ಕಳುಹಿಸಿತು. ಎರಡು ವರ್ಷಗಳ ಅನಂತರ, ಕ್ರಿ.ಪೂ. 452ರಲ್ಲಿ, ಹತ್ತು ಜನ ದಂಡಾಧೀಶರನ್ನೊಳಗೊಂಡ ಸಮಿತಿಯೊಂದನ್ನು ನೇಮಿಸಿ ಕಾನೂನುಗಳನ್ನು ಕ್ರೋಡೀಕರಿಸಿ ಪರಿಷ್ಕರಿಸಲು ಆದೇಶ ನೀಡಲಾಯಿತು. ಈ ಸಮಿತಿಗೆ ಡಿಸೆಮ್ವಿರೆಟ್ ಎಂದು ಹೆಸರಾಯಿತು.

ಸಮಿತಿಯ ಕಾರ್ಯನಿರ್ವಹಣೆ ಬದಲಾಯಿಸಿ

ಈ ಸಮಿತಿ ಮೊದಲು ಹತ್ತು ವಿಭಾಗಗಳಲ್ಲಿ ಪರಿಷ್ಕøತ ಕಾನೂನುಗಳನ್ನು ಪ್ರಕಟಿಸಿತು. ಈ ಸಮಿತಿಯ ಅಧಿಕಾರಕಾಲದಲ್ಲಿ ಹಿಂದಿನ ಎಲ್ಲ ದಂಡಾಧಿಕಾರಗಳನ್ನು ತಳ್ಳಿಡಲಾಯಿತು. ಡಿಸೆಮ್ವಿರ್‍ಗಳು (ಡಿಸೆಮ್ವಿರೈ) ಪ್ಲಿಬಿಯನರ ಹಕ್ಕುಗಳನ್ನು ಕಾಯ್ದಿಡಬೇಕಾಗಿತ್ತು. ಕ್ರಿ.ಪೂ. 450ರಲ್ಲಿ ಮತ್ತೊಂದು ಸಮಿತಿಯ ನೇಮಕವಾಯಿತು. ಇದು ಮತ್ತೆರಡು ವಿಭಾಗಗಳನ್ನು ಪ್ರಕಟಿಸಿತು. ಕೊನೆಯ ಎರಡು ವಿಭಾಗಗಳು ಪ್ಲಿಬಿಯನರಿಗೆ ಅಷ್ಟೇನೂ ಅನುಕೂಲಕರವಾಗಿರಲಿಲ್ಲ. ಈ ಹನ್ನೆರಡು ವಿಭಾಗಗಳೂ ಹನ್ನೆರಡು ಕಟ್ಟಳೆಗಳೆಂದು (ಟೇಬಲ್) ಪ್ರಸಿದ್ಧವಾಗಿದೆ. ಕೊನೆಗೆ ಡಿಸೆಮ್ವಿರ್‍ಗಳ ಆಡಳಿತ ಹಿಂಸಾತ್ಮಕವೂ ಸ್ವೈಚ್ಛಿಕವೂ ಆಯಿತು. ಪ್ರಜೆಗಳು ಅಸಮಾಧಾನಗೊಂಡರು. ಇವರು ಉಚ್ಚಾಟನೆಗೊಂಡರು.

ನ್ಯಾಯಪದ್ಧತಿಗೆ ಕೊಡುಗೆ ಬದಲಾಯಿಸಿ

ಡಿಸೆಮ್ವಿವಿರೆಟ್‍ನ ಹನ್ನೆರಡು ಕಟ್ಟಳೆಗಳು ಹಲವು ದೇಶಗಳ ನ್ಯಾಯಪದ್ಧತಿಯ ತಳಹದಿಯಾಗಿ ನಿಂತಿವೆ. ಪೆಟ್ರಿಷಿಯನ್ ನ್ಯಾಯಾಧೀಶರ ಪಕ್ಷಪಾತ ಮತ್ತು ಟ್ರಿಬ್ಯೂನುಗಳ ಕ್ರಮಬದ್ಧವಲ್ಲದ ನಡವಳಿಕೆಗಳಿಂದ ಸಾಮಾನ್ಯ ಪ್ರಜೆಗಳಿಗೆ ಅವು ರಕ್ಷಣೆ ನೀಡಿದುವು. ಆಸ್ತಿಯ ಹಕ್ಕುಗಳಿಗೆ ಪ್ರಬಲವಾದ ರಕ್ಷಣೆ ದೊರಕಿತು. ಮುಂದೆ ಅನೇಕ ಸಂವೈಧಾನಿಕ ಸುಧಾರಣೆಗಳಿಗೆ ಅವು ಮಾರ್ಗದರ್ಶನ ನೀಡಿದುವು.

ಇತರ ದಶಸದಸ್ಯಮಂಡಲಿಗಳು ಬದಲಾಯಿಸಿ

ರೋಮಿನಲ್ಲಿ ಇತರ ವಿಚಾರಗಳಿಗೆ ಸಂಬಂಧಿಸಿದಂತೆಯೂ ದಶಸದಸ್ಯಮಂಡಲಿಗಳಿದ್ದುವು. ಕ್ರಿ.ಪೂ. 367ರಲ್ಲಿ ಪವಿತ್ರ ಪೂಜಾವಿಧಿಗಳು ಮತ್ತು ಸಿಬಿಲೈನ್ ಗ್ರಂಥಗಳ ರಕ್ಷಣೆಗಾಗಿ ಒಂದು ಮಂಡಳಿ ನೇಮಕವಾಯಿತು. ಇದರಲ್ಲಿ 5 ಜನ ಪೆಟ್ರಿಷಿಯನರೂ 5 ಜನ ಪ್ಲಿಬಿಯನರೂ ಇದ್ದರು. ರೋಮಿನ ಸರ್ವಾಧಿಕಾರಿಯಾಗಿದ್ದ (ಕ್ರಿ.ಪೂ. 82-79) ಸುಲ್ಲ ಎಂಬವನು ಕ್ರಿ.ಪೂ. 81ರಲ್ಲಿ ಇದರ ಸದಸ್ಯರ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಿದ. ದಿವಾಣಿ ವ್ಯವಹಾರಗಳ ವಿಚಾರಣೆಗಾಗಿ ಮತ್ತೊಂದು ದಶಸದಸ್ಯಮಂಡಳಿ ರೋಮ್ ಗಣರಾಜ್ಯದ ಕಾಲದಲ್ಲಿತ್ತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: