ಡಿಸೆಂಬ್ರಿಸ್ಟರು
ಡಿಸೆಂಬ್ರಿಸ್ಟರು ನಿರಂಕುಶ ರಾಜಸತ್ತೆಯ ವಿರುದ್ಧ ರಷ್ಯದಲ್ಲಿ 1825ರ ಡಿಸೆಂಬರಿನಲ್ಲಿ (ರಷ್ಯನ್: ಡಿಕಾಬರ್) ಪ್ರಥಮ ಬಂಡಾಯ ಹೂಡಿದ ಉದಾರ ವಾದಿಗಳು. ಅನಂತರ ಇವರಿಗೆ ಡಿಸೆಂಬ್ರಿಸ್ಟರು ಅಥವಾ ಡಿಕಾಬ್ರಿಸ್ಟರೆಂದು ಹೆಸರಾಯಿತು.
ಬಂಡಾಯದ ಹಿನ್ನೆಲೆ
ಬದಲಾಯಿಸಿಫ್ರಾನ್ಸಿನ ಕ್ರಾಂತಿ ಹಾಗೂ ನೆಪೋಲಿಯನನ ಸಾಮ್ರಾಜ್ಯದಿಂದಾಗಿ ಐರೋಪ್ಯ ದೇಶಗಳಲ್ಲೆಲ್ಲ ಉದಾರವಾದ ಹರಡುತ್ತಿರಲು ರಷ್ಯವೂ ಅದರಿಂದ ಹೊರತಾಗಿರಲಿಲ್ಲ. ರಷ್ಯದ ಕೆಲವು ತರುಣಮನ್ನೆಯರೂ ಕೆಲವು ಸೇನಾಧಿಕಾರಿಗಳೂ ವೈಧಾನಿಕ ಪ್ರಭುತ್ವವನ್ನು ಸ್ಥಾಪಿಸುವ ಕನಸುಕಂಡು ಸೇನೆಯಲ್ಲೂ ಹೊರಗೂ ಗುಪ್ತ ಸಂಘಟನೆ ಮಾಡಿದರು. ಇವರಲ್ಲಿ ಸಾಮ್ರಾಜ್ಯ ರಕ್ಷಕ ಪಡೆಗಳ ಕೆಲವು ಅಧಿಕಾರಿಗಳೂ ಇದ್ದರು. ಮುಕ್ತಿ ಸಂಘ, ಕಲ್ಯಾಣ ಸಂಘ, ಔತ್ತರೇಯ ಸಂಘ, ದಾಕ್ಷಿಣಾತ್ಯ ಸಂಘ ಮುಂತಾದ ಹೆಸರುಗಳಲ್ಲಿ ಇವುರಗಳ ಸಂಘಟನೆ ನಡೆದಿತ್ತು. ವೈಧಾನಿಕ ರಾಜಸತ್ತೆಯ ಸ್ಥಾಪನೆಯ ಜೊತೆಗೆ ಜೀತಗಾರರನ್ನು ಮುಕ್ತಗೊಳಿಸುವುದೂ ಇವರ ಗುರಿಯಾಗಿತ್ತು. 1825ರ ಡಿಸೆಂಬರ್ 1 ರಂದು (ಹೊಸ ಪಂಚಾಂಗ) ಸಾರ್ 1ನೆಯ ಅಲೆಕ್ಸಾಂಡರ್ ಮೃತನಾದಾಗ ಅವನ ಸೋದರರಲ್ಲಿ ಹಿರಿಯನಾದ ಕಾನ್ಸ್‍ಟೆಂಟೈನ್ ಪಟ್ಟಕ್ಕೆ ಬರಬೇಕಾಗಿತ್ತು. ಆತ ಉದಾರವಾದಿ. ಅವನು ರಹಸ್ಯವಾಗಿ ತನ್ನ ಪಟ್ಟಾಧಿಕಾರವನ್ನು ತ್ಯಾಗ ಮಾಡಿದ್ದ. ಆದ್ದರಿಂದ ಅವನ ಸೋದರ ನಿಕೊಲಸನಿಗೆ ಪಟ್ಟವಾಯಿತು. (1825). ಇವನು ನಿರಂಕುಶ ಪ್ರವೃತ್ತಿಯವನೆಂದು ಕುಖ್ಯಾತನಾಗಿದ್ದ. ಇವನು ಪಟ್ಟವೇರಲು ಹಿಂದೆಮುಂದೆ ನೋಡುತ್ತಿದ್ದ ಅವಧಿಯಲ್ಲಿ ಈ ಉದಾರವಾದಿ ಗುಪ್ತಸಂಘಟನೆಯವರು ರಾಜಧಾನಿ ಸೇಂಟ್ ಫೀಟರ್ಸ್‍ಬರ್ಗ್‍ನಲ್ಲೂ ಸ್ವಲ್ಪಮಟ್ಟಿಗೆ ಪಡೋಲಿಯದಲ್ಲೂ ಬಂಡೆದ್ದರು. ನಿಕೊಲಸನ ವಿರುದ್ಧವಾಗಿ ಸೈನಿಕರು ಬಂಡಾಯವೇಳಲು ಪ್ರಚೋದನೆ ನೀಡಿದರು. ಕಾನ್ಸ್‍ಟೆಂಟೈನ್ ಪಟ್ಟಕ್ಕೆ ಬರುವನೆಂಬ ನಿರೀಕ್ಷೆಯಿಂದ ಸೈನಿಕರು ಅವನಿಗೆ ವಿಧೇಯರಾಗಿರಲು ಹಿಂದೆ ಪ್ರತಿಜ್ಞೆ ಮಾಡಿದ್ದರು. ಅವರು ನಿಕೊಲಸನಿಗೆ ವಿಧೇಯರಾಗಿರುವುದಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದಾಗ ಅವರಲ್ಲಿ ಕೆಲವು, ಡಿಸೆಂಬ್ರಿಸ್ಟರ ಪ್ರಚೋದನೆಯಿಂದ, ಅದಕ್ಕೆ ಒಪ್ಪಲಿಲ್ಲ.
ಬಂಡಾಯ
ಬದಲಾಯಿಸಿ1825ರ ಡಿಸೆಂಬರ್ 26 ರಂದು (ಹೊಸ ಪಂಚಾಂಗ; ಹಳೆಯ ಪಂಚಾಂಗದಂತೆ ಡಿಸೆಂಬರ್ 14) ಬಂಡಾಯ ನಡೆಯಿತು. ಆದರೆ ಇದರಲ್ಲಿ ಭಾಗವಹಿಸಿದವರು ಕೇವಲ 2,000 ಸೈನಿಕರು. ಬಂಡಾಯದ ಪ್ರಮುಖರು ತೀರ ಆದರ್ಶವಾದಿಗಳಾಗಿದ್ದರು. ತಮಗೆ ಸಾರ್ವಜನಿಕ ಬೆಂಬಲ ದೊರೆಯದೆಂಬ ಕಲ್ಪನೆಯೇ ಅವರಿಗೆ ಇರಲಿಲ್ಲ. ರಷ್ಯದ ಜನರಿಗೆ ಡಿಸೆಂಟ್ರಿಸ್ಟರ ವಿಚಾರಗಳ ಬಗ್ಗೆ ತಿಳಿವಳಿಕೆಯೇ ಇರಲಿಲ್ಲ. ಕಾನ್ಸ್‍ಟೆಂಟೈನ್ ಅರಸನಾಗಬೇಕು, ತಮಗೆ ಕಾನ್ಸ್‍ಟಿಟ್ಯೂಷನ್ (ಸಂವಿಧಾನ) ಬೇಕು-ಎಂಬುದು ಇವರ ಘೋಷಣೆಯಾಗಿತ್ತು. ಪ್ರದರ್ಶನದಲ್ಲಿ ಪಾಲುಗೊಂಡು ನೂರಾರು ಸೈನಿಕರಿಗೆ ಕಾನ್ಸ್‍ಟಿಟ್ಯೂಷನ್ ಎಂಬುದು ಕಾನ್ಸ್‍ಟೆಂಟೈನ್‍ನ ಹೆಂಡತಿಯ ಹೆಸರಿರರಬೇಕೆಂದು ಅನಿಸಿತ್ತೆಂದು ಹೇಳಲಾಗಿದೆ.
ಅಂದು ನಡೆದ ಬಂಡಾಯ ಕೇವಲ ಒಂದು ನಾಟಕದ ದೃಶ್ಯದಂತೆ ಇತ್ತೆಂದು ಇತಿಹಾಸಕಾರರು ವರ್ಣಿಸಿದ್ದಾರೆ. ಬಂಡಾಯವನ್ನು ಸಾರ್ ನಿಕೊಲಸ್ ಸುಲಭವಾಗಿ ಹತ್ತಿಕ್ಕಿದ. ಕರ್ನಲ್ ಪೆಸ್ಟೆಲ್ ಮುಂತಾದ ಐವರು ನಾಯಕರಿಗೆ ಮರಣ ದಂಡನೆ ವಿಧಿಸಲಾಯಿತು. 31 ಜನರನ್ನು ಸೈಬೀರಿಯಕ್ಕೆ ಸಾಗಿಸಲಾಯಿತು. ನೂರಾರು ಜನಕ್ಕೆ ಕಾರಾಗೃಹ ಮತ್ತು ಗಡಿಪಾರು ಶಿಕ್ಷೆಗಳಾದುವು. ಡಿಸೆಂಬ್ರಿಸ್ಟರ ಬಂಡಾಯ ವಿಫಲಗೊಂಡಿತು. ಆದರೂ ಈ ಅಯಶಸ್ವಿ ಬಂಡಾಯದ ಕಾರ್ಯಕರ್ತರು ಮುಂದಣ ದಶಕಗಳಲ್ಲಿ ರಷ್ಯದಲ್ಲಿ ಸಂಭವಿಸಿದ ಎಲ್ಲ ಉದಾರವಾದಿ ಹಾಗೂ ಕ್ರಾಂತಿಕಾರಿ ಚಳಿವಳಿಗಳ ಕಾರ್ಯಕರ್ತರಿಗೆ ಸ್ಫೂರ್ತಿದಾತರಾಗಿದ್ದರು.