ಕೆ.ವಿ .ರಮೇಶ್‌

(ಡಾ. ಕೆ.ವಿ .ರಮೇಶ್‌ ಇಂದ ಪುನರ್ನಿರ್ದೇಶಿತ)

ಡಾ.ಕೆ.ವಿ. ರಮೇಶ್‌ ಅವರು ಭಾರತದ ಇತಿಹಾಸ ಮತ್ತು ಪುರಾತತ್ತ್ವವ ರಂಗದಲ್ಲಿನ ಅತ್ಯಂತ ಶ್ರೇಷ್ಠ ಶಾಸನ ಸಂಶೋಧಕ, ಇತಿಹಾಸ ತಜ್ಞ, ಸಂಸ್ಕೃತ ವಿದ್ವಾಂಸ, ಲಿಪಿಶಾಸ್ತ್ರಜ್ಞ ಮಾತ್ರವಲ್ಲ ನಾಣ್ಯಶಾಸ್ತ್ರ, ಮತ್ತು ಭಾಷಾತಜ್ಞರೂ ಆಗಿದ್ದರು. ರಾಷ್ಟ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಸದಾ ಹಸಿರಾಗಿರಲು ಎರಡು ಮಹತ್ವದ ಕಾರಣಗಳಿವೆ. ಮೊದಲನೆಯದೆಂದರೆ ಕರ್ನಾಟಕದಲ್ಲಿ ಹಲವಾರು ಅಶೋಕನ ಶಾಸನಗಳು ದೊರೆತಿದ್ದರೂ ಸನ್ನತಿಯಲ್ಲಿನ ಶಾಸನಗಳ ಜತೆಗೆ ಅಲ್ಲಿ ಕ್ರಿ.ಪೂ. ೩ನೇ ಶತಮಾನದ ಬೌದ್ಧ ಸ್ತೂಪದ ಅವಶೇಷಗಳ ಪತ್ತೆಗೆ ನಾಂದಿ ಹಾಡಿದ ಹೆಗ್ಗಳಿಕೆ ಅವರದ್ದು. ಅಲ್ಲದೇ ಅತ್ಯಂತ ಸೂಕ್ಷ್ಮವಾದ ಮತ್ತು ವಿವಾದಾಸ್ಪದವಾದ ಬಾಬ್ರಿಮಸೀದಿ ಮೊಕದ್ದಮೆಯಲ್ಲಿ ಅವರು ಕಟ್ಟಡ ಸಂರಚನೆಯ ಬಗೆಗೆ ನೀಡಿದ ಮೌಲಿಕ ಅಭಿಪ್ರಾಯ ಎರಡನೆಯದು.

ಬಾಲ್ಯ ಜೀವನ

ಬದಲಾಯಿಸಿ

ಡಾ.ಕೆ.ವಿ. ರಮೇಶ್‌ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮನೆತನದವರು. ಹುಟ್ಟಿದ್ದು ಕೇರಳದಲ್ಲಿ. ಜನನ ೧೯೩೫ ರ ಜೂನ್‌ ೮ ರಂದು. ತಂದೆ ಕೋಳುವೈಯಲ್‌ ವ್ಯಾಸರಾಯ ಶಾಸ್ತ್ರಿ. ಅವರು ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಹಾಗಾಗಿ ಬೆಳೆದದ್ದು, ಓದಿದ್ದು ಮದ್ರಾಸಿನಲ್ಲಿಯೇ. ಮನೆಯಲ್ಲಿ ಸುಸಂಸ್ಕೃತ ವಾತಾವರಣ. ಬಾಲ್ಯದಲ್ಲಿಯೇ ಕನ್ನಡ, ತಮಿಳು, ತೆಲುಗು, ಮಲೆಯಾಳಂಗಳ ಸಂಪರ್ಕ. ತಂದೆಯಪ್ರಭಾವದಿಂದ ಸಹಜವಾಗಿ ಸಂಸ್ಕೃತ ಹತ್ತಿರವಾಯಿತು. ಅವರು ತಮ್ಮ ಸ್ನಾತಕೋತ್ತರ ಪದವಿಯನ್ನೂ ಸಂಸ್ಕೃತದಲ್ಲಿಯೇ ಸುವರ್ಣ ಪದಕ ಸಮೇತ ಪಡೆದರು . ಶಿಕ್ಷಣ ಮುಗಿದೊಡನೆಯೇ ೧೯೫೬ ರಲ್ಲಿ ಉದ್ಯೋಗವೂ ಸಿಕ್ಕಿತು.

ವೃತ್ತಿ ಜೀವನ

ಬದಲಾಯಿಸಿ

ಉದಕಮಂಡಲದಲ್ಲಿದ್ದದ ಭಾರತೀಯ ಪುರಾತತ್ತ್ವ ಇಲಾಖೆಯಲ್ಲಿ ಶಾಸನ ಸಂಶೋಧನಾ ವಿಭಾಗದಲ್ಲಿ ಸಹಾಯಕ ಲಿಪಿಶಾಸ್ತ್ರಜ್ಞರಾಗಿ ನೇಮಕಾತಿ ಆಯಿತು.. ಅಲ್ಲಿಂದ ಅವರ ಸಾರಸ್ವತ ಯಾತ್ರೆ ಪ್ರಾರಂಭವಾಯಿತು. ಉದಕಮಂಡಲದ ಪರಿಸರ ಅವರ ಪ್ರತಿಭೆಗೆ ಪುಟ ಕೊಟ್ಟಿತು. ಅಲ್ಲಿ ದೇಶದ ವಿವಿಧ ಬಾಗಗಳಿಂದ ಬಂದ ವಿದ್ವಾಂಸರ ಒಡನಾಟ. ಎಷ್ಟು ಓದಿದರೂ ಮುಗಿಯದ ಶಾಸನಗಳ ಸಂಗ್ರಹ, ವಿವಿಧ ಭಾಷಾತಜ್ಞರ ಒಡನಾಟ ಹಿರಿಯ ವಿದ್ವಾಂಸರ ಪ್ರೋತ್ಸಾಹ ಮತ್ತು ಬೆಂಬಲ ದಿಂದ ಅವರು ಬಹು ಬೇಗನೇ ಲಿಪಿಶಾಸ್ತ್ರದಲ್ಲಿ ನಿಷ್ಣಾತರಾದರು. ಜೊತೆಗೆಅವರಿಗಿದ್ದ ಬಹುಭಾಷಾಜ್ಞಾನ ಅಲ್ಲಿ ಬಹಳ ಉಪಯೋಗಕ್ಕೆ ಬಂದಿತು. ಅವರಿಗೆ ವೃತ್ತಿ ಮತ್ತು ಪ್ರವೃತ್ತಿ ಒಂದಾದವು. ಗಳಿಕೆ ಮತ್ತು ಕಲಿಕೆ ಪರಸ್ಪರ ಪೂರಕವಾದವು. ಸಹಜವಾಗಿ ಜ್ಞಾನಭಂಡಾರ ಹೆಚ್ಚಿತು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಡಾ. ಜಿ.ಎಸ್ ದೀಕ್ಷಿತರ ಮಾರ್ಗದರ್ಶನದಲ್ಲಿ ೧೯೬೫ ರಲ್ಲಿ ಪಿಎಚ್‌.ಡಿ ಪದವಿ ಪಡೆದರು. ಅವರು ಪರಿಣಿತಿಯಿಂದಾಗಿ ಇಂಡೊ-ಜಪಾನು ತಂಡದ ಎಂಟು ಅನ್ವೇಷಕರಲ್ಲಿ ಒಬ್ಬರಾಗಿ ಸೇವೆಸಲ್ಲಿಸಿ ಪುರಾತತ್ತ್ವ ಮತ್ತು ಭೌಗೋಳಿಕ ಅನ್ವೇಷಣೆ ಮಾಡಿದರು. ಅಲ್ಲಿ ಅನೇಕ ಐತಿಹಾಸಿಕ ನಿವೇಶನಗಳ ಭೇಟಿ ನೀಡಿ ಶಾಸನಗಳ ಪ್ರತಿ ಮಾಡಿದರು. ಅವರ ಶಾಸನ ಕೃಷಿಯು ನಿರಂತರವಾಗಿ ೧೯೯೩ ವರ್ಷಗಳವರೆಗ ನಡೆಯಿತು ಅಂದರೆ ಅಖಂಡ ೪೩ ವರ್ಷಗಳ ಸೇವೆಯಲ್ಲಿ ಹಂತ ಹಂತವಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು ಮುಖ್ಯ ಲಿಪಿತಜ್ಞ, ,ಡೈರೆಕ್ಟರ್ ಅಫ್ ಎಪಿಗ್ರಫಿ ಹುದ್ದೆಯನ್ನು ಅಲಂಕರಿಸಿದ್ದರು. ಅಂತಿಮವಾಗಿ ಭಾರತೀಯ ಪುರಾತ್ತತ್ವ ಸರ್ವೇಕ್ಷಣದಲ್ಲಿ ಎರಡನೆಯ ಅತ್ಯುನ್ನತ ಸ್ಥಾನವಾದ ಜಾಯಿಂಟ್‌ ಡೈರೆಕ್ಟರ್‌ಅಫ್ ಆರ್ಕಿಯಾಲಜಿ ಎಂಬ ಸ್ಥಾನವನ್ನು ಅಲಂಕರಿಸಿದ್ದರು.

ಸಂಶೋಧನೆ

ಬದಲಾಯಿಸಿ

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಗುಲ್ಬರ್ಗಾ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿಯ ಅಶೋಕನ ಶಿಲಾಶಾಸಗಳ ಮತ್ತು ಅಲ್ಲಿನ ಸ್ತೂಪಗಳ ಅವಶೇಷಗಳ ಮಹತ್ವ ಪೂರ್ಣ ಅಧ್ಯಯನ ಹಾಗೂ ಅವುಗಳು ಕರ್ನಾಟಕದಲ್ಲಿ ದೊರೆತ ಇತರೆ ಅಶೋಕನ ಶಾಶನಗಳಿಗಿಂತ ಹೇಗೆ ಭಿನ್ನವಾಗಿವೆ ಎಂದು ತೋರಿಸಿರುವುದು.ಚಂದ್ರಲಾಂಬ ದೇವಸ್ಥಾನದಲ್ಲಿರುವ ಕಾಳಿಕಾದೇವಿ ಗುಡಿಯ ಮೇಲ್ಛಾವಣೆ ೧೯೮೬ ರಲ್ಲಿ ಕುಸಿಯಿತು. ಅದರೊಡನೆ ವಿಗ್ರಹವೂ ನಾಶವಾಯಿತು. ಅಲ್ಲಿ ಉತ್ಖನನ ಮಾಡಿದಾಗ ಅಡಿಪಾಯದಲ್ಲಿ ನಾಲ್ಕು ಅಶೋಕನ ಶಾಸನಗಳು ಕಂಡವು. ಒಂದು ಶಾಸನವನ್ನೇ ದೇವಿಯ ವಿಗ್ರಹದ ಪೀಠವಾಗಿ ಬಳಸಲಾಗಿತ್ತು.ಅಲ್ಲಿ ದೊರೆತಿರುವ ಟೆರ್ರಕೋಟ, ವಸ್ತುಗಳು ಮತ್ತು ಸುಣ್ಣದ ಕಲ್ಲಿನ ಫಲಕಗಳಿಂದ, ಅವು ನಾಶವಾದ ಮಹಾಸ್ತೂಪದ ( ಅಧೋಲೋಕ ಮಹಾಚೈತ್ಯ) ದ ಭಾಗಗಳೆಂದು ಗುರುತಿಸಲಾಯಿತು. ಅಷ್ಟೇಅಲ್ಲ ಅದರಿಂದ ಅದು ೨೧೦ ಎಕರೆ ವ್ಯಾಪ್ತಿಯ ಕೋಟೆಯಿದ್ದ ರಣಮಂಡಲ ಎಂಬ ಬೌದ್ಧ ವಸತಿ ಪ್ರದೇಶವಾಗಿತ್ತು ಎಂದು ಖಚಿತಪಡಿಸಿದರು. ಅಲ್ಲಿ ಶಾತವಾಹನ ಮತ್ತು ರೋಮನ್‌ ಕಾಲದ ಕರಿ ಶಿಲಾಫಲಕಗಳು ಮತ್ತು ಟೆರ್ರಿಕೋಟಾ ತುಣಕುಗಳು ದೊರೆತಿವೆ. ಆ ಮಹಾಬೌದ್ಧನಿವೇಶನದಲ್ಲಿ. ಇದುವರೆಗ ಕೇವಲ ೨.೫ ಎಕರೆ ಪ್ರದೇಶದ ಉತ್ಖನನ ಮಾತ್ರ ನಡೆದಿದೆ. ಇನ್ನೂ ನಡೆಸಬೇಕಾದ ಸಂಶೋಧನೆ ಮತ್ತು ಭೂಶೋಧನೆ ಬಹಳಷ್ಟಿದೆ. ಈ ಬೌದ್ಧ ನಿವೇಶನದ ಅನ್ವೇಷಣ ಕಾರ್ಯ ಡಾ.ಕೆ.ವಿ. ರಮೇಶ ಅವರ ಕಾಲಾವಧಿಯಲ್ಲಿ ಮೊದಲು ನಡೆಯಿತು. ಅಲ್ಲಿ ಅಶೋಕ ಸಾಮ್ರಾಟ ಸಿಂಹಾಸನದ ಮೇಲೆ ಕುಳಿತಿರುವ ಚಿತ್ರವಿರವ ಶಾಸದ ಏಕೈಕ ಉದಾಹರಣೆ ಇಲ್ಲಿ ಸಿಕ್ಕಿದೆ.ಅವರಿಗೆ ವೃತ್ತಿಯಿಂದ ನಿವೃತ್ತಿಯಾಯಿತೇ ಹೊರತು ಪ್ರವೃತ್ತಿಯಿಂದ ಅಲ್ಲ. ದೆಹಲಿಯ ಪುರಾತತ್ತ್ವ ಇಲಾಖೆಯಿಂದ ನಿವೃತ್ತರಾದ ತಕ್ಷಣವೆ ಮೈಸೂರಿನಲ್ಲಿ ಕೆಲಸ ಮುಂದುವರಿಸಿದರು.

ಮೈಸೂರಿನ ಓರಿಯಂಟಲ್ ರಿಸರ್ಚ ಇನಸ್ಟಿಟ್ಯೂಟಿನ ನಿರ್ದೇಶಕರಾಗಿ ಹೊಸ ಹುದ್ದೆ ವಹಿಸಿಕೊಂಡರು. ಹೊಸ ಹೊಣೆಯನ್ನು ೮ ವರ್ಷ ನಿರ್ವಹಿಸದರು. ಅಲ್ಲಿ ಸಮಶೋಧನಾ ಕಾರ್ಯ ರಭಸವಾಗಿ ಸಾಗಿತು. ಈ ಸುಧೀರ್ಘ ಅವಧಿಯಲ್ಲಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಅವರ ಕೊಡುಗೆ ಅಪಾರ. ಅಲ್ಲಿಂದ ನಿವೃತ್ತರಾದರೂ ಅಜೀವ ಅದರ ಗೌರವ ಸದಸ್ಯರಾಗಿ ಮಾರ್ಗದರ್ಶನ ನೀಡಿದರು. ಅವರ ಸೇವೆಯ ಅವಧಿಯಲ್ಲಿ ದಕ್ಷಿಣ ಭಾರತದ ಹಲವಾರು ರಾಜ ವಂಶಗಳ ಶಾಸನಗಳ ಬೃಹತ್‌ ಸಂಪುಟಗಳನ್ನು ಪ್ರಕಟಿಸಿದರು. ಪಶ್ಚಿಮ ಗಂಗರು, ಬಾದಾಮಿಯ ಚಾಲುಕ್ಯರು, ತುಳುನಾಡು ಶಾಸನಗಳು ಮುಖ್ಯವಾದವುಗಳು. ಭಾರತೀಯ ಶಾಸನ ಮತ್ತು ಲಿಪಿಶಾಸ್ತ್ರಗಳಿಗೆ ಸಂಬಂಧಿಸಿದ ಗ್ರಂಥಗಳು, ಉಪನ್ಯಾಸಗಳು ಮತ್ತು ವಿದ್ವತ್‌ ಪತ್ರಿಕೆಗಳಲ್ಲಿನ ಲೇಖನಗಳಿಂದ ಪುರಾತತ್ತ್ವ ರಂಗಕ್ಕೆ ಗಣನೀಯ ಕಾಣಿಕೆ ಸಲ್ಲಿಸಿದ್ದಾರೆ., ಡಾ. ರಮೇಶ್ ಎಪಿಗ್ರಾಫಿಯಾ ಇಂಡಿಕಾದ ೪೧ ಮತ್ತು ೪೨ ಸಂಪುಟಗಳ ಸಂಪಾದಕರಾಗಿದ್ದರು. ಎಪಿಗ್ರಾಫಿಕಲ್‌ ಸೊಸೈಟಿ ಅಫ್ ಇಂಡಿಯಾ ಮತ್ತು ಪ್ಲೇಸ್‌ನೇಮ್ಸ್‌ ಅಫ್ ಇಂಡಿಯ ದಂಥಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ನಿರಂತರವಾಗಿ ಮೂರುದಶಕಗಳಿಗೂ ಮೀರಿ ಹೆಚ್ಚುಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅವುಗಳ ಬೆಳವಣಿಗೆಗೆ ಕಾರಣರಾಗಿರುವರು.. ಪುರಾತತ್ತ್ವ ಇಲಾಖೆಯ ೧೫೦ನೆಯ ವರ್ಷದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್‌ ಶಾಸನಶಾಸ್ತ್ರದಲ್ಲಿನ ಅವರ ಕೊಡುಗೆ ಪರಿಗಣಿಸಿ ನವದೆಹಲಿಯಲ್ಲಿ ವಿಶೇಷ ಸನ್ಮಾನ ಮಾಡಿದ್ದರು. ಅವರ ವಿದ್ವತ್‌ ಗುರುತಿಸಿದ ಭಾರತೀಯ ಪುರಾತತ್ತ್ವ ಇಲಾಖೆಯು ಅವರನ್ನು ಸೆಪ್ಟಂಬರ್‌ ೨೦೧೨ ರಂದು ಲಿಪಿ ಶಾಸ್ತ್ರದ ರಾಷ್ಟ್ರೀಯ ಪ್ರಾಧ್ಯಾಪಕರನ್ನಾಗಿ ನೇಮಕ ಮಾಡಿತು. ರಾಷ್ಟ್ರೀಯ ಪ್ರಾಧ್ಯಾಪಕರಾಗಿ ಶಾಸನ ಸಂಶೋಧನೆ ಮತ್ತು ಶಾಸನ ವಿಜ್ಞಾನಗಳಲ್ಲಿ ಪ್ರೌಢವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಕಾರ್ಯ ನಿರ್ವಹಿಸುವ ಹೊಣೆ ಅವರದಾಗಿತ್ತು. ಅವರ ವಿದ್ವತ್‌ ಮತ್ತು ವಸ್ತು ನಿಷ್ಠೆಯನ್ನು ಒರೆಗೆ ಹಚ್ಚಿದ್ದು. ಬಾಬ್ರಿ ಮಸೀದಿ ವಿವಾದ. ಮೊಕದ್ದಮೆ ಇತ್ಯರ್ಥಮಾಡಲು ಅಲ್ಲಿ ದರೆತ ಪುರಾತತ್ತ್ವ ವಸ್ತುಗಳ ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ಮಾಹಿತಿ ನೀಡಲು ಸೂಚನೆ ನೀಡಲಾಯಿತು. ಆಗ ಲಿಪಿಶಾಸ್ತ್ರ ಶಾಖೆಯ ಮುಖ್ಯಸ್ಥರಾದ ಡಾ. ರಮೇಶ್ ಅದರ ಅಧ್ಯಯನ ನಡೆಸಿ ವರದಿ ನೀಡಿದರು. ಅವರನ್ನು ಪಾಟಿ ಸವಾಲು ಮಾಡಲು ನ್ಯಾಯಾಲಯಕ್ಕೆ ಕರೆಸಲಾಯಿತು. ಅದರಲ್ಲಿ ಅವರು ಆ ಸ್ಥಳದಲ್ಲಿ ದೊರೆತ ಸಂಸ್ಕೃತಶಾಸನದ ಕಾಲ ಮತ್ತು ವಿಷಯವನ್ನು ಖಚಿತಪಡಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವರದಿಯ ಪ್ರಕಾರ "ಆ ಸ್ಥಳದಲ್ಲಿ ಗಹಡವಾಲ ವಂಶದ ಸಾಮ್ರಾಟ ಗೋವಿಂದ ಚಂದ್ರನಿಂದ ( ಕ್ರಿ. ಶ ೧೧೧೪-೧೧೫೫) ಸಾಕೇತ ಮಂಡಲದ ( ಅಯೋಧ್ಯ) ಒಡೆತನವನ್ನು ಪಡೆದ ಮೇಘಸುತನು ಮಂದಿರ ನಿರ್ಮಿಸಿದನು. ನಂತರ ಅದರ ಮೇಲೆ ಬೃಹತ್ತ್‌ಕಟ್ಟಡ ನಿರ್ಮಾಣವಾಯಿತು. ಆದರೆ ಅದರ ಜೀವಾವಧಿ ಬಹಳ ಕಡಿಮೆಯಾಗಿತ್ತು. ಅದನ್ನು ನಾಶ ಮಾಡಿ ಅದರ ಅವಶೇಷಗಳ ಮೇಲೆ ೧೬ನೆಯ ಶತಮಾನ ಆದಿಯಲ್ಲಿ ವಿವಾದಿತ ಸಂರಚನೆ ನಿರ್ಮಾಣವಾಯಿತು." ಎಂಬುದು ಪುರಾತತ್ತ್ತ್ವ ಇಲಾಖೆಯ ನಿರ್ದೇಶಕರಾಗಿ ಅವರು ನೀಡಿದ ತಜ್ಞ ಅಭಿಪ್ರಾಯವನ್ನು ನ್ಯಾಯಾಲಯವು ಪರಿಗಣಿಸಿತು. ಆದರೆ ಈ ಬಗ್ಗೆ ವಿವಾದಗಳೆದ್ದವು. ಡಾ. ರೊಮಿಲಾ ಥಾಪರ್‌ನಂತಹ ಹಲವು ಇತಿಹಾಸತಜ್ಞರು ಇವರ ವಾದವನ್ನು ಅಲ್ಲಗೆಳೆದರು. ಡಾ. ರಮೇಶ್‌ ಅವರ ಇತ್ತೀಚಿನ ಕೊಡುಗೆ ಎಂದರೆ ನವದೆಹಲಿಯ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್‌ನ ಯೋಜನೆಯಡಿಯಲ್ಲಿ ಸಿದ್ಧಪಡಿಸಿರುವ ಬಹು ಸಂಫುಟಗಳ ದಕ್ಷಿಣ ಭಾರತದ ಶಾಸನಗಳಲ್ಲಿನ ಸಾಮಾಜಿಕ. ಆರ್ಥಿಕಮತ್ತು ಆಡಳಿತ ಪಾರಿಭಾಷಿಕ. ಶಬ್ದ ಕೋಶ. ಇದರ ಪ್ರಥಮ ಸಂಪುಟ ಪ್ರಕಟವಾಗಿದೆ. ಅವರು ನಿಘಂಟುವಿನ ಯೋಜನಾ ಕಾರ್ಯದಲ್ಲಿ ಸಕ್ರಿಯವಾಗಿದ್ದರು ಎರಡನೆಯ ಸಂಪುಟ ಸಿದ್ಧ ಮಾಡುತ್ತಿರುವಾಗಲೇ ಇತಿಹಾಸದ ಪುಟ ಸೇರಿದರು... ಸುಮಾರು ಒಂದುಲಕ್ಷ ಶಾಸನಗಳ ಸಂಗ್ರಹವಾಗಿರುವಾಗ ಈವರೆಗಿನ ಕಾರ್ಯವು ಕೇವಲ 25 ರಿಂದ 30 ಶತಾಂಶವಾಗಿದೆ ಇಂಥಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅವರ ಮಾರ್ಗದರ್ಶನವು ಇಲ್ಲದಾಗಿರುವುದು ಇತಿಹಾಸ ಲೋಕಕ್ಕೆ ತುಂಬಲಾರದ ನಷ್ಟ ಎಂದು ಪುರಾತತ್ತ್ವ ಇಲಾಖೆಯ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುವರು. ಪುರಾತನ ದಾಖಲೆಗಳ ಅರ್ಥೈಸುವಿಕೆಗೆ ಇದೊಂದು ಹಿನ್ನೆಡೆಯಾಗಿದೆ. ಡಾ. ರಮೇಶ್‌ ಅವರು ಕಳೆದ ಬುಧವಾರ ಕಾಲವಶರಾದರು ಅವರ ಹೆಂಡತಿ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.. ಅವರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳೆರಡರಲ್ಲೂ ಕೃತಿ ರಚನೆ ಮಾಡಿರುವರು. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ.

ಕೃತಿಗಳು

ಬದಲಾಯಿಸಿ

1. Indian Epigraphy, 1984.
2. Chalukyas of Vaataapi, 1984.
3. Inscriptions of Western Gangas, 1984, Indian Council of Historical Research, Delhi.
4. A Copper Plate Hoard of the Gupta Period from ‘Bagh', Madhyapradesh, (With others), 1990, Archaeological Survey of India.
5. South Indian Inscriptions, 1990, Published by Director General, Archaeological Survey of India.
6. A History of South Kanara from the earliest times to the fall of Vijayanagara, Research Publication Series,1970, Karnatak University.
7. TuLunADina itihAsa, 1969, Geetha Book House, Mysore.
8. ಕರ್ನಾಟಕ ಶಾಸನ ಸಮೀಕ್ಷೆ , 1971, Bangalore University, Bangalore.
9. South Indian Inscriptions, Vol 16, Telugu Inscriptions of the Vijayanagara Dynasty, Archaeological Survey of India.
10. Dynastic List of Copper Plate Inscriptions noticed in Annual reports on Indian Epigraphy from 1887-1969, by G.S. Gai and K.V. Ramesh, 1986.
11. Archaeological Survey of India.
*ಇವಲ್ಲದೇ ಅವರು ತತ್ವನಿಧಿ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಗ್ರಂಥದ ಸಂಪಾದಕರು ಜೊತೆಗೆ ಹಿರಿಯ ಲಿಪಿತಜ್ಞ ಮತ್ತು ವಿದ್ವಾಂಸರಾದ ಜಿಎಸ್ ಗಾಯಿ,ಬಿ.ಕೆ ಗುರುರಾಜರಾವ್, ಬಿ.ಸಿ. ಛಾಬ್ರ,ಮತ್ತು ಜಿ.ಎಸ್ ದೀಕ್ಷಿತ್‌ರ ಗೌರವ ಸಂಭಾವನಾ ಗ್ರಂಥಗಳ ಸಹ ಸಂಪಾದಕರಾಗಿ ಕಾರ್ಯ ನಿರ್ವಹಿಸಿರುವರು. ಶಾಸನ ಅಧ್ಯಯನವನ್ನು ಕೊನೆಯುಸಿರು ಎಳೆಯುವವರೆಗೆ ಕೈ ಗೊಂಡಿದ್ದರು.

ಉಲ್ಲೇಖಗಳು

ಬದಲಾಯಿಸಿ
*
         ‌‌