ಡಾಬ್ರೂಜ
ಡಾಬ್ರೂಜ ಪೂರ್ವ ಯೂರೋಪಿನ ಒಂದು ಪ್ರದೇಶ; ಡ್ಯಾನ್ಯೂಬ್ ನದಿಯ ದಕ್ಷಿಣದಲ್ಲಿದೆ. ಕಪ್ಪು ಸಮುದ್ರದ ತೀರಪ್ರದೇಶವಾದ ಇದು ರೂಮೇನಿಯದ ಆಗ್ನೇಯ ಭಾಗ ಮತ್ತು ಬಲ್ಗೇರಿಯದ ಈಶಾನ್ಯ ಭಾಗಗಳನ್ನು ಒಳಗೊಂಡಿದೆ. ವಿಸ್ತೀರ್ಣ 8,979 ಚ.ಮೈ. ಕನ್‍ಸ್ಟಾನ್ಸ ಎಂಬುದು ಈ ಪ್ರದೇಶದ ಪ್ರಮುಖ ಪಟ್ಟಣ. ಈ ಪಟ್ಟಣದ ಜನಸಂಖ್ಯೆ 1,72,464 (1970). ಡಾಬ್ರೂಜ ಪ್ರದೇಶದಲ್ಲಿ ಸಣ್ಣಪುಟ್ಟ ಬೆಟ್ಟಗುಡ್ಡಗಳೂ ಹುಲ್ಲುಗಾವಲುಗಳೂ ಇವೆ. ವಿಶಾಲ ಸಮುದ್ರದಿಂದ ದೂರವಿರುವುದರಿಂದ ಇಲ್ಲಿಯದು ಶುಷ್ಕ ವಾಯುಗುಣ. ದಕ್ಷಿಣದ ಎತ್ತರದ ನೆಲ ಫಲವತ್ತಾದ್ದು. ಇಲ್ಲಿ ಹೆಚ್ಚಾಗಿ ಮೆಕ್ಕೆಜೋಳವನ್ನು ಬೆಳೆಯುತ್ತಾರೆ.
ಇತಿಹಾಸ
ಬದಲಾಯಿಸಿಕ್ರಿ.ಪೂ. 6ನೆಯ ಶತಮಾನದಲ್ಲಿ ಡಾಬ್ರೂಜದಲ್ಲಿ ಗ್ರೀಕ್ ವಸಾಹತುಗಳು ಏರ್ಪಟ್ಟಿದ್ದುವು. ಕ್ರಿ.ಪೂ.5 ಮತ್ತು 4ನೆಯ ಶತಮಾನಗಳಲ್ಲಿ ಸಿತಿಯನ್ನರು ಸ್ಥಳೀಯ ತ್ರೇಸಿಯನರನ್ನು ಹತ್ತಿಕ್ಕಿದರು. ಆದ್ದರಿಂದ ಈ ಪ್ರದೇಶಕ್ಕೆ ಸಿತಿಯ ಮೈನರ್ ಮತ್ತು ಸಿತಿಯ ಪೊಂಟಿಕ ಎಂಬ ಹೆಸರುಗಳು ಬಂದುವು. ಕ್ರಿ.ಪೂ.75ರ ಅನಂತರ ಇದು ರೋಮನರ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಇದು ಗಾತ್, ಆಲನ್ ಮತ್ತು ಹೂಣ ಜನಗಳ ದಾಳಿಗೆ ಒಳಗಾಗುತ್ತಿತ್ತು. 7ನೆಯ ಶತಮಾನದ ಅಂತ್ಯದಲ್ಲಿ ಇದು ಬಲ್ಗೇರಿಯನರ ಆಕ್ರಮಣಕ್ಕೆ ಒಳಗಾಯಿತು. 1018ರಲ್ಲಿ ಇದನ್ನು ಬಿeóÁಂಟಿನರು ಮತ್ತೆ ವಶಪಡಿಸಿಕೊಂಡರು. 1186ರಲ್ಲಿ ಇದು ರೂಮೇನಿಯನ್-ಬಲ್ಗೇರಿಯನ್ ಸಾಮ್ರಾಜ್ಯದಲ್ಲಿ ಸೇರಿತು. 15ನೆಯ ಶತಮಾನದಿಂದ ಈ ಪ್ರದೇಶ ಆಟೊಮನರ ಆಡಳಿತಕ್ಕೆ ಒಳಪಟ್ಟಿತು. 1878ರಲ್ಲಿ ಬರ್ಲಿನ್ ಕಾಂಗ್ರೆಸ್ ಈ ಪ್ರದೇಶದ ಬಹುಭಾಗವನ್ನು ರೂಮೇನಿಯಕ್ಕೆ ಕೊಟ್ಟಿತು. ಬಲ್ಗೇರಿಯ 1913ರಲ್ಲಿ ದಕ್ಷಿಣ ಡಾಬ್ರೂಜವನ್ನು ರೂಮೇನಿಯಕ್ಕೆ ಬಿಟ್ಟುಕೊಡಬೇಕಾಗಿ ಬಂದಿದ್ದು, 1940ರಲ್ಲಿ ಮತ್ತೆ ಪಡೆಯಿತು.