ಡಾನ್ (ನದಿ)
ಡಾನ್ - ಯುರೋಪಿನ ಐದನೇ ಉದ್ದವಾದ ನದಿಯಾಗಿದ್ದು ರಶಿಯದ ದೊಡ್ಡ ನದಿಗಳಲ್ಲೊಂದಾಗಿದೆ.
ಇದು ಟೂಲ ಪಟ್ಟಣದ ಆಗ್ನೇಯದಲ್ಲಿ ಉಗಮಿಸಿ, ಆಗ್ನೇಯಾಭಿಮುಖವಾಗಿ, ಬಿಲ್ಲಿನಂತೆ ಬಾಗಿ, ವೋಲ್ಗ ನದಿಗೆ 48 ಮೈಲಿಗಳಷ್ಟು ಹತ್ತಿರದ ವರೆಗೆ ಹರಿದು, ನೈಋತ್ಯ ದಿಕ್ಕಿಗೆ ತಿರುಗಿ, ಟ್ಯಾಗನ್‍ರಾಗ್ ಖಾರಿಯಲ್ಲಿ ಅಝೋವ್ ಸಮುದ್ರವನ್ನು ಸೇರುವ ಈ ನದಿಯ ಉದ್ದ 1,224 ಮೈ. ಇದರ ಜಲಾನಯನ ಪ್ರದೇಶದ ವಿಸ್ತೀರ್ಣ 1,70,849 ಚ.ಮೈ. ಉಗಮದಿಂದ ಸಂಗಮದ ವರೆಗೆ ನದಿಯ ಮಟ್ಟದಲ್ಲಿ ಆಗುವ ಇಳಿತ 623' ಮಾತ್ರ. ಆದ್ದರಿಂದ ನದಿ ಬಲು ನಿದಾನವಾಗಿ ಹರಿಯುತ್ತದೆ. ಫಲವತ್ತಾದ ಕಪ್ಪುನೆಲದ ಪ್ರದೇಶದ ಪೂರ್ವಭಾಗದಲ್ಲಿ ಹರಿಯುವ ಈ ನದಿಯಲ್ಲಿ ಮೀನುಗಳು ಹೇರಳವಾಗಿವೆ. ಇದರ ದಂಡೆಯ ಮೇಲೆ ಉದ್ದಕ್ಕೂ ಹಲವು ಮೀನುಗಾರ ಹಳ್ಳಿಗಳುಂಟು.
ಈ ನದಿ ಪ್ರಾರಂಭದಲ್ಲಿ ಕಿರಿದಾದ ಕಣಿವೆಯ ಮೂಲಕ ಹರಿಯುತ್ತದೆ. ಮಧ್ಯದಲ್ಲಿ ಇದರ ಪಾತ್ರ ಸು. 25 ಮೈ. ಅಗಲವಾಗಿರುವುದುಂಟು. ಕೆಲವು ಕಡೆಗಳಲ್ಲಿ ನದಿಯ ಆಳ 270'-400'. ನದಿಯಲ್ಲಿ ಅನೇಕ ಮಳಲು ದಿಬ್ಬಗಳಿವೆ. ವೋಲ್ಗದ ಬಳಿಯ ಮಹಾತಿರುವಿನಲ್ಲಿ ಟ್ಸಿಮ್ಲ್ಯಾನ್ಸ್ಕಿ ಜಲಾಶಯದೊಳಕ್ಕೆ ಇದು ಹರಿಯುತ್ತದೆ. ಸು. 200 ಮೈ. ಉದ್ದವಿರುವ ಈ ಜಲಾಶಯವನ್ನು ವೋಲ್ಗ-ಡಾನ್ ಕಾಲುವೆ ನಿರ್ಮಾಣದ ಅಂಗವಾಗಿ 1950-51ರಲ್ಲಿ ನಿರ್ಮಿಸಲಾಯಿತು. ಈ ನದಿಯ ಬಲದಂತೆ ಎತ್ತರವೂ ಕಡಿದೂ ಅದ್ದು; ಅಲ್ಲಲ್ಲಿ ಇದು ಕಮರಿಗಳಿಂದ ಛೇದಿಸಲ್ಪಟ್ಟಿದೆ. ಇದರ ಎಡದಂಡೆ ತಗ್ಗು; ಆ ಬದಿಯಲ್ಲಿ ವಿಶಾಲವಾದ ಬಯಲುಗಳಿವೆ. ವಸಂತಕಾಲದಲ್ಲಿ ಹಿಮ ಕರಗಿದಾಗ ಈ ನೆಲ ಪ್ರವಾಹದಿಂದ ಕೂಡಿರುತ್ತದೆ. ಟ್ಸಿಮ್ಲ್ಯಾನ್ಸ್ಕಿ ಜಲಾಶಯದಿಂದಾಗಿ ಕೆಳದಂಡೆಯಲ್ಲಿ ನದಿಯ ಪ್ರವಾಹ ನಿಯಂತ್ರಿತವಾಗಿರುತ್ತದೆ. ನವೆಂಬರ್ ಆದಿಭಾಗದಿಂದ ಮಾರ್ಚ್ ಉತ್ತರಾರ್ಧದ ವರೆಗೆ ನದಿಯ ನೀರು ಗಡ್ಡೆ ಕಟ್ಟಿರುತ್ತದೆ.
ಡಾನ್‍ಗೆ ಅನೇಕ ದೊಡ್ಡ ಉಪನದಿಗಳುಂಟು. ಬಲದಂಡೆಯ ದೊಡ್ಡ ಉಪನದಿಗಳು ಸಸ್ನಾ, ಟಿಕಾಯ ಸಸ್ನಾ, ಚಿರ್ ಮತ್ತು ಡನೆಟ್ಸ್. ಎಡದಂಡೆಯ ಮುಖ್ಯ ಉಪನದಿಗಳು ವರಾನಿಷ್, ಕಪ್ಯಾರ್, ಮೆಡ್ವೆಡಟ್ಸ, ಸಾಲ್ ಮತ್ತು ಮನಿಚ್.
ಡಾನ್ ನದಿಯ ಮುಖದಿಂದ ಹಿಡಿದು ವರಾನಿಷ್‍ನ ಉತ್ತರಕ್ಕೆ 50 ಮೈ. ದೂರದಲ್ಲಿರುವ ಖ್ಲೆಬ್ನೊಯೆ ವರೆಗೂ ನೌಕಾಯಾನ ಸಾಧ್ಯ. ಆದರೆ ಟ್ಸಿಮ್ಲ್ಯಾನ್ಸ್ಕಿ ಜಲಾಶಯದಿಂದ ಮೇಲಕ್ಕೆ ಪಾತ್ರದಲ್ಲಿ ಮರಳು ದಿಬ್ಬಗಳಿರುವುದರಿಂದ ಅಡಚಣೆಗಳು ಅಧಿಕ. ಜಲಾಶಯದಲ್ಲೂ ಅದರಿಂದ ಕೆಳಗೂ ನೌಕಾಯಾನ ಗಮನಾರ್ಹವಾಗಿದೆ. ಸರಕನ್ನೂ ಪ್ರಯಾಣಿಕರನ್ನೂ ಹೊತ್ತು ಸಾಗುವ ಸಮುದ್ರಗಾಮಿ ನೌಕೆಗಳು ಸಂಚರಿಸುತ್ತವೆ. ಮರ, ಪೆಟ್ರೋಲಿಯಂ, ಕಲ್ಲಿದ್ದಲು ಮತ್ತು ಧಾನ್ಯ ಮುಖ್ಯ ಸರಕುಗಳು ವೋಲ್ಗ-ಕಾಮ-ಕ್ಯಾಸ್ಪಿಯನ್ ಜಲಮಾರ್ಗ ವ್ಯವಸ್ಥೆಗೆ ವೋಲ್ಗ-ಡಾನ್ ಕಾಲುವೆಯೂ ಸೇರಿದ ಡಾನ್ ನದೀವ್ಯವಸ್ಥೆ ಮುಖ್ಯವಾದ ಹೆದ್ದಾರಿಯಂತಿದೆ. ಡಾನ್ ವ್ಯವಸ್ಥೆ ಬಲು ಹಿಂದಿನಿಂದಲೂ ಒಂದು ಮುಖ್ಯ ಸಂಪರ್ಕ ಮಾಧ್ಯಮ.
ಡಾನ್ ನದಿಯ ದಂಡೆಯಲ್ಲಿರುವ ಮುಖ್ಯ ನಗರಗಳು ವರಾನಿಷ್ ಮತ್ತು ರಸ್ಟಾಫ್-ನಾ-ಡಾನು. ವೋಲ್ಗ-ಡಾನ್ ಕಾಲುವೆಯ ತುದಿಯ ಬಳಿ ಇರು ಪಟ್ಟಣ ಕಲಾಚ್. ಟ್ಸಿಮ್ಲ್ಯಾನ್ಸ್ಕಿ ಜಲಾಶಯದಿಂದ ಜಲವಿದ್ಯುತ್ ಉತ್ಪಾದನೆಯಾಗುತ್ತದೆ. ಅಲ್ಲಿದೆ ಅದು ಡಾನ್ ಕೆಳದಂಡೆಯ ದ್ರಾಕ್ಷಿ ಮತ್ತು ತರಕಾರಿ ತೋಟಗಳಿಗೆ ನೀರುಣಿಸುತ್ತದೆ.
ಡಾನ್ ಹೆಸರಿನ ಬೇರೆ ನದಿಗಳು
ಬದಲಾಯಿಸಿಡಾನ್ ಎಂಬ ಹೆಸರಿನ ಇನ್ನೆರಡು ನದಿಗಳು ಉಂಟು. ಅವುಗಳಲ್ಲಿ ಒಂದು (83 ಮೈ.) ಸ್ಕಾಟ್ಲೆಂಡಿನಲ್ಲೂ ಇನ್ನೊಂದು (70 ಮೈ.) ಇಂಗ್ಲೆಂಡಿನಲ್ಲೂ ಇವೆ.