ಡಚ್ ವೆಸ್ಟ್ ಇಂಡಿಯ ಕಂಪನಿ
ಡಚ್ ವೆಸ್ಟ್ ಇಂಡಿಯ ಕಂಪನಿ - 1621ರಲ್ಲಿ ನೆದರ್‍ಲೆಂಡ್ಸ್‍ನ ವಿಧಾನಮಂಡಲದ (ಸ್ಟೇಟ್ಸ್-ಜನರಲ್) ಏಕಸ್ವ ಪತ್ರ (ಲೆಟರ್ಸ್ ಪೇಟೆಂಟ್) ಪಡೆದು ಸ್ಥಾಪಿತವಾದ ಒಂದು ಕಂಪನಿ. ಸ್ಪೇನ್ ಮತ್ತು ಪೋರ್ಚುಗಲ್ ವಸಾಹತುಗಳಲ್ಲಿ ಡಚ್ಚರು ನಡೆಸುತ್ತಿದ್ದ ನಿಷಿದ್ಧ ವ್ಯಾಪಾರವನ್ನು ನಿಯಂತ್ರಿಸಿ ರಕ್ಷಿಸುವುದು ಮತ್ತು ಇವೆರಡೂ ಖಂಡಗಳಲ್ಲೂ ಅವುಗಳ ಸುತ್ತಮುತ್ತಣ ದ್ವೀಪಗಳಲ್ಲೂ ವಸಾಹತುಗಳನ್ನು ಸ್ಥಾಪಿಸುವುದು ಇದರ ಉದ್ದೇಶ. ಇದು ಆಮ್‍ಸ್ಟರ್ ಡ್ಯಾಮ್. ಜೀóಲಂಡ್, ಮ್ಯೂಸ್ (ರಾಟರ್‍ಡ್ಯಾಮ್), ನಾರ್ತ್ ಡಿಪಾರ್ಟ್‍ಮೆಂಟ್ (ಪಶ್ಚಿಮ ಫ್ರೀಜ್óಲಂಡ್ ಮತ್ತು ಹೋರ್ನ್) ಮತ್ತು ಗ್ರೋನಿಂಗನ್‍ನಲ್ಲಿ ಸ್ಥಾಪಿತವಾದ ಐದು ಶಾಖೆಗಳಿಂದ ಕೂಡಿತ್ತು.
ಏಳು-ಬೀಳು
ಬದಲಾಯಿಸಿಪೈಪೋಟಿಯಿಂದಲೇ ಈ ಸಂಸ್ಥೆ ಜನ್ಮ ತಳೆಯಿತಾದರೂ, ತನ್ನ ವೈಭವದ ದಿನಗಳಲ್ಲಿಯೂ ಇದರ ಸಾಧನೆ ಡಚ್ ಈಸ್ಟ್ ಇಂಡಿಯ ಕಂಪನಿಯ ಸಾಧನೆಯನ್ನು ಸರಿಗಟ್ಟಲಾರದೆ ಹೋಯಿತು. ಆ ದಿನಗಳಲ್ಲಿನ ಅತ್ಯಂತ ಲಾಭದಾಯಕವಾಗಿದ್ದ ಗುಲಾಮರ ವ್ಯಾಪಾರದಲ್ಲಿ ಇದು ತೊಡಗಿದ್ದರೂ ಡಚ್ ವ್ಯಾಪಾರದ ಏಕಸ್ವಾಮ್ಯವನ್ನು ಪಡೆದುಕೊಂಡಿದ್ದರೂ ಸ್ಪೇನ್ ಮತ್ತು ಪೋರ್ಚುಗಲ್ ರಾಷ್ಟ್ರಗಳೊಂದಿಗೆ ಇದು ಸತತವಾಗಿ ಘರ್ಷಣೆಯಲ್ಲಿ ನಿರತವಾಗಬೇಕಾಗಿತ್ತು. ಆದ್ದರಿಂದ ಆರ್ಥಿಕವಾಗಿ ಇದು ಹೆಚ್ಚು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.
ಆಫ್ರಿಕದಲ್ಲಿ ಹಾಗೂ ಅಮೆರಿಕಗಳಲ್ಲಿ ಅನೇಕ ಡಚ್ ವಸಾಹತುಗಳನ್ನು ಸ್ಥಾಪಿಸುವುದರಲ್ಲಿ ಈ ಸಂಸ್ಥೆ ಯಶಸ್ವಿಯಾಯಿತು. 1630ರಲ್ಲಿ ಬ್ರಜಿóಲಿನ ಪೆರ್ನಮ್ಟ್ಯೂಕೋದಲ್ಲಿ ಡಚ್ಚರು ಕಾಲೂರಿ, ಕ್ರಮೇಣ ಬ್ರಜಿóಲಿನ ಬಹುಭಾಗವನ್ನು ಜಯಿಸಿ 1634ರವರೆಗೂ ಅದರ ಮೇಲೆ ಹತೋಟಿ ಹೊಂದಿದ್ದರು. ಅನಂತರ ಇವರು ಪೋರ್ಚುಗೀಸರ ಬಲವನ್ನು ಎದುರಿಸಬೇಕಾಯಿತು. 1661ರಲ್ಲಿ ಬ್ರಜಿóಲ್ ಮೇಲಣ ಹಕ್ಕನ್ನು ಕಂಪನಿ ತ್ಯಜಿಸಿತು. 1667ರ ಬ್ರೇಡಾ ಕೌಲಿನಂತೆ ನ್ಯೂ ನೆದರ್ಲೆಂಡನ್ನು ಇಂಗ್ಲೆಂಡಿಗೆ ಬಿಟ್ಟುಕೊಟ್ಟಿತು. ಬದಲಾಗಿ ಡಚ್ ಗೀಯಾನವನ್ನು (ಸುರಿನಾಮ್) ಪಡೆಯಿತು. ಕಂಪನಿ ಪರಬಲವಾಗಿದ್ದಾಗ ಪೋರ್ಚುಗೀಸರ ಕೆಲವು ಪ್ರದೇಶಗಳನ್ನು ಈ ಸಂಸ್ಥೆ ವಶಪಡಿಸಿಕೊಂಡಿತ್ತು. ಉತ್ತರ ಅಮೆರಿಕದಲ್ಲಿ ಇದು 1624ರಲ್ಲಿ ಹಡ್ಸನ್ ನದಿಯ ದಂಡೆಯಲ್ಲಿ ಫೋರ್ಟ್ ಆರೆಂಜ್ (ಈಗಿನ ಆಲ್ಬನಿ) ನಗರವನ್ನೂ 1625ರಲ್ಲಿ ನ್ಯೂ ಆಮ್‍ಸ್ಟರ್‍ಡ್ಯಾಮ್ (ಇಂದಿನ ನ್ಯೂ ಯಾರ್ಕ್) ನಗರವನ್ನೂ ಸ್ಥಾಪಿಸಿತು. 1633ರಲ್ಲಿ ಕನೆಟಿಕಟ್ ನದಿಯ ದಂಡೆಯಲ್ಲಿ (ಇಂದಿನ ಹಾರ್ಟ್ ಫರ್ಡ್ ನಿವೇಶನದಲ್ಲಿ) ವ್ಯಾಪಾರ ಕೇಂದ್ರವನ್ನೂ ಕೋಟೆಯನ್ನೂ ಇದು ನಿರ್ಮಿಸಿತ್ತು. ಅಮೆರಿಕದ ಈ ವಸಾಹತುಗಳನ್ನೂ ಹಿಡುವಳಿಗಳನ್ನೂ ಒಟ್ಟಿನಲ್ಲಿ ನ್ಯೂ ನೆದರ್‍ಲೆಂಡ್ಸ್ ಎಂದು ಹೆಸರಿಸಲಾಯಿತು. ಮುಂದೆ ಇದು ನ್ಯೂ ಯಾರ್ಕ್ ಸಂಸ್ಥಾನವಾಗಿ ರೂಪುಗೊಂಡಿತು. ಬ್ರಿಟಿಷರು ಈ ವಲಯದ ಮೇಲೆ ತಮ್ಮ ಹಕ್ಕನ್ನು ಘೋಷಿಸಿದರು. ಆದರೆ, ಇಂಗ್ಲೆಂಡು ಈ ಅವಧಿಯಲ್ಲಿ ಫ್ರಾನ್ಸ್ ಮತ್ತು ಸ್ಪೇನ್ ದೇಶಗಳೊಡನೆ ಯುದ್ಧದಲ್ಲಿ ನಿರತವಾಗಿದ್ದುದರಿಂದ 1664ರ ವರೆಗೆ ಡಚ್ಚರು ನಿಶ್ಚಿಂತರಾಗಿರಲು ಸಾಧ್ಯವಾಯಿತು. ಡಚ್ ವೆಸ್ಟ್ ಇಂಡಿಯ ಕಂಪನಿ ಅನೇಕ ವಸಾಹತುಗಳನ್ನೂ ಹಿಡುವಳಿಗಳನ್ನೂ ಸ್ಥಾಪಿಸಿತಾದರೂ ದುರ್ಬೇಧ್ಯ ವಸಾಹತು ಶಕ್ತಿಯಾಗಿ ಇದು ಎಂದೂ ಬೆಳೆಯಲಿಲ್ಲ. 1664ರಲ್ಲಿ ಬ್ರಿಟಿಷ್ ನೌಕಾದಳವೊಂದು ನ್ಯೂ ಆಮ್‍ಸ್ಟರ್ ಡ್ಯಾಮ್‍ಗೆ ಬಂದಾಗ ಈ ಸಂಸ್ಥೆ ಯಾವುದೇ ಪ್ರತಿರೋಧವನ್ನೂ ಒಡ್ಡದೆ, ಬೇಷರತ್ತಾಗಿ ಶರಣಾಗತವಾಯಿತು. 1674ರಲ್ಲಿ ವಿಧ್ಯುಕ್ತವಾಗಿ ಈ ಸಂಸ್ಥೆ ವಿಸರ್ಜಿತವಾಯಿತು. ಆದರೆ 1675ರಲ್ಲಿ ಇದನ್ನು ಪುನಸ್ಸಂಘಟಿಸಲಾಯಿತು. ಮುಂದೆ ಸುಮಾರು ಒಂದು ಶತಮಾನ ಕಾಲ-18ನೆಯ ಶತಮಾನದ ಕೊನೆಯವರೆಗೆ-ಇದು ಪ್ರಮುಖವಾಗಿ ವೆಸ್ಟ್‍ಇಂಡೀಸ್ ಮತ್ತು ಡಚ್ ಗೀಯಾನಗಳಲ್ಲಿ ಕಾರ್ಯನಿರತವಾಗಿತ್ತು.