ಟ್ರ್ಯಾನ್ಸ್‌ವಾಲ್
ಟ್ರ್ಯಾನ್ಸ್‍ವಾಲ್ ದಕ್ಷಿಣ ಆಫ್ರಿಕ ಗಣರಾಜ್ಯದ ಅತ್ಯಂತ ಉತ್ತರದ ಪ್ರಾಂತ್ಯ.
ಭೌಗೋಳಿಕ ಮಾಹಿತಿ
ಬದಲಾಯಿಸಿಇದರ ಪೂರ್ವದ ಗಡಿ ಲೆಬೊಂಬೋ ಪರ್ವತದ ನೆತ್ತಿಗೆರೆ. ಉತ್ತರ ಪಶ್ಚಿಮಗಳಲ್ಲಿ ಲಿಂಪೋಪೋ ನದಿಯೇ ಇದರ ಮೇರೆ. ದಕ್ಷಿಣದ ಅಂಚಿನಲ್ಲಿ ವಾಲ್ ನದಿ ಹರಿಯುತ್ತದೆ. ಟ್ರ್ಯಾನ್‍ವಾಲ್‍ನ ವಿಸ್ತೀರ್ಣ 1,09,621 ಚ. ಮೈ. ಜನಸಂಖ್ಯೆ 73,94,961 (1967).
ಇದರ ಬಹುಭಾಗ ಪರ್ವತದ ತಪ್ಪಲುಪ್ರದೇಶ. ಹುಲ್ಲುಗಾವಲಿನಿಂದ ಕೂಡಿದೆ. ಈ ಪ್ರಾಂತ್ಯದ ಒಟ್ಟು ಪ್ರದೇಶದ 1/3 ಭಾಗ ಸಮುದ್ರ ಮಟ್ಟದಿಂದ ಸರಾಸರಿ 5,000-6,400 ಎತ್ತರದಲ್ಲಿದೆ. ಕಮಾಟೀ, ಪಾಂಗೋಲ ಮುಂತಾದ ಮುಖ್ಯ ನದಿಗಳು ಪೂರ್ವಾಭಿಮುಖವಾಗಿ ಹರಿದು ಹಿಂದೂ ಸಾಗರವನ್ನು ಸೇರುತ್ತವೆ. ಎತ್ತರಕ್ಕೆ ಅನುಗುಣವಾಗಿ ವಾಯುಗುಣ ವ್ಯತ್ಯಾಸವಾಗುತ್ತದೆ. ಚಳಿಗಾಲದ ಅತ್ಯಂತ ಕಡಿಮೆ ಉಷ್ಣತೆ ಇರುವುದು ಹೈ ವೆಲ್ಡ್‍ನ ಪೂರ್ವಭಾಗದಲ್ಲಿ. ಅಲ್ಲಿ ಜುಲೈನ ಮಾಧ್ಯ ಉಷ್ಣತೆ 7. (45ಲಿಈ). ಪೂರ್ವದ ಲೋ ವೆಲ್ಡ್ ಮತ್ತು ಲಿಂಪೋಪೋ ಕಣಿವೆಯಲ್ಲಿ ಅತ್ಯಂತ ಹೆಚ್ಚಿನ ಉಷ್ಣತೆ ಇರುತ್ತದೆ. ವಾರ್ಷಿಕ ವ, ಳೆ 15"-50". ಪ್ರದೇಶದಿಂದ ಪ್ರದೇಶಕ್ಕೆ ಇದು ವ್ಯತ್ಯಾಸವಾಗುತ್ತದೆ.
ಕೃಷಿ,ಕೈಗಾರಿಕೆಗಳು
ಬದಲಾಯಿಸಿಮುಸುಕಿನ ಜೋಳ ಈ ಪ್ರದೇಶದ ಪ್ರಮುಖ ಬೆಳೆ. ದಕ್ಷಿಣ ಆಫ್ರಿಕದ ಒಟ್ಟು ಬೆಳೆಯಲ್ಲಿ 50%ರಷ್ಟು ಇಲ್ಲಿಯೇ ಬೆಳೆಯುತ್ತದೆ. ಈ ಪ್ರಾಂತ್ಯದ ದಕ್ಷಿಣಭಾಗ ಅತ್ಯಂತ ಫಲವತ್ತಾದ ಪ್ರದೇಶ. ಗೋದಿ, ತಂಬಾಕು ಮುಂತಾದವನ್ನು ಇಲ್ಲಿ ಬೆಳೆಯುತ್ತಾರೆ. ಆಫ್ರಿಕದ ಒಟ್ಟು ತಂಬಾಕಿನ ಬೆಳೆಯಲ್ಲಿ 85% ಇಲ್ಲಿ ಬೆಳೆಯುತ್ತದೆ. ಇವಲ್ಲದೆ ಕಿತ್ತಳೆ ಮುಂತಾದ ನಿಂಬೆ ಜಾತಿಯ ಹಣ್ಣುಗಳನ್ನೂ ಇಲ್ಲಿ ಹೇರಳವಾಗಿ ಬೆಳೆಯುತ್ತಾರೆ. ಹುಲ್ಲುಗಾವಲು ಪ್ರದೇಶ ಹೇರಳವಾಗಿರುವುದರಿಂದ ಹೈನು ಉದ್ಯಮ ಚೆನ್ನಾಗಿ ಬೆಳೆದಿದೆ.
ಹೇರಳವಾಗಿ ದೊರೆಯುವ ಖನಿಜಸಂಪತ್ತಿನಿಂದಾಗಿ ಟ್ರ್ಯಾನ್ಸ್‍ವಾಲ್ ತುಂಬ ಪ್ರಸಿದ್ಧವಾಗಿದೆ. ಜೋಹ್ಯಾನಸ್‍ಬರ್ಗ್ ಸಮೀಪವಿರುವ ವಿಟ್‍ವಾಟರ್ಸ್‍ರ್ಯಾಂಡ್ ಚಿನ್ನದ ಗಣಿ ಪ್ರಪಂಚದಲ್ಲೇ ಅತ್ಯಂತ ಪ್ರಖ್ಯಾತವಾದ್ದು. ಈ ಪ್ರಾಂತ್ಯದ ರಾಜಾಧಾನಿಯಾದ ಪ್ರೀಟೋರೀಯದ ಸಮೀಪದಲ್ಲೆ ಅಮೂಲ್ಯವಾದ ವಜ್ರದ ಗಣಿಗಳಿವೆ. ಇವಲ್ಲದೆ ಕಲ್ಲಿದ್ದಲು, ಕಬ್ಬಿಣ, ಬೆಳ್ಳಿ, ಪ್ಲಾಟಿನಂ ಮುಂತಾದ ಖನಿಜಗಳೂ ಈ ಪ್ರಾಂತ್ಯದಲ್ಲಿ ಹೇರಳವಾಗಿ ದೊರೆಯುತ್ತವೆ.
ಇತಿಹಾಸ
ಬದಲಾಯಿಸಿಇಲ್ಲಿ ಸು. 1800ರಲ್ಲಿ ಜನವಸತಿ ವಿರಳವಾಗಿತ್ತು. ಬಂಟು ಮತ್ತು ಹೊಟೆಂಟೋಪ್ ಜನಾಂಗದವರು ಹೆಚ್ಚಾಗಿ ನೆಲಸಿದ್ದರು. ಅನಂತರ ಜûೂಲೂ ಜನಾಂಗದವರು ವಲಸೆ ಬಂದರು. 1836-38ರ ಅವಧಿಯಲ್ಲಿ ಬೋಯರರು ವಾಲ್ ನದಿಯ ಉತ್ತರದಲ್ಲಿ ಸ್ವತಂತ್ರವಾದ ರಾಜ್ಯವನ್ನು ಸ್ಥಾಪಿಸಿದರು. 1852ರ ಕೌಲಿನ ಪ್ರಕಾರ ಬ್ರಿಟಿಷರು ಈ ಹೊಸ ನಾಡಿನ ಸ್ವಾತಂತ್ರ್ಯವನ್ನು ಮನ್ನಿಸಿದರು. ಬೋಯರರು ಸ್ಥಳೀಯ ಆಫ್ರಿಕನರನ್ನು ಹೀನವಾಗಿ ನಡೆಸಿಕೊಳ್ಳುತ್ತಿರುವುದನ್ನೂ, ಜûೂಲೂ ಜನರ ದಾಳಿಗೆ ಈ ನಾಡು ಆಗಾಗ ಒಳಗಾಗುತ್ತಿದ್ದುದನ್ನೂ ಕಾರನ ಮಾಡಿಕೊಂಡು, ಇದನ್ನು ರಕ್ಷಿಸುವ ನೆಪದಿಂದ 1877ರಲ್ಲಿ ಬ್ರಿಟಿಷರು ಟ್ರ್ಯಾನ್ಸ್‍ವಾಲನ್ನು ಆಕ್ರಮಿಸಿಕೊಂಡರು. ಈ ಮಧ್ಯೆ 1867ರಲ್ಲಿ ಇಲ್ಲಿ ವಜ್ರ ನಿಕ್ಷೇಪ ಪತ್ತೆಯಾಯಿತು. ಗ್ರೀಕ್ವಲ್ಯಾಂಡ್ ವೆಸ್ಟ್ 1877-81ರ ಅವಧಿಯಲ್ಲಿ ಬ್ರಿಟಿಷರ ವಶದಲ್ಲಿತ್ತು. ಇದನ್ನು ವಿರೋಧಿಸಲು 1880-81ರಲ್ಲಿ ಅಲ್ಲಿನ ಬೋಯರರು ದಂಗೆಯೆದ್ದರು. ಪರಿಣಾಮವಾಗಿ 1881ರಲ್ಲಿ ಗ್ರೀಕ್ವಲ್ಯಾಂಡ್ ವೆಸ್ಟ್ ಪುನಃ ದಕ್ಷಿಣ ಆಫ್ರಿಕಕ್ಕೆ ಸೇರಿತು. 1886ರಲ್ಲಿ ಈ ಪ್ರಾಂತ್ಯದ ಚಿನ್ನದ ನಿಕ್ಷೇಪಗಳ ಶೋಧನೆಯಾಯಿತು. ಅನೇಕ ವಿದೇಶಿ ವಸಾಹತುಗಳು ಬರಲಾರಂಭಿಸಿದುವು. 1899-1902ರ ಆಂಗ್ಲೋಬೋಯರ್ ಯುದ್ಧದಲ್ಲಿ ಬೋಯರರ ಸೋಲಿನಿಂದಾಗಿ ಟ್ರ್ಯಾನ್ಸ್‍ವಾಲ್ ಬ್ರಿಟಿಷರಿಗೆ ಸೇರಿತು. 1906ರಲ್ಲಿ ಇಲ್ಲಿ ಜವಾಬ್ದಾರಿ ಸರ್ಕಾರದ ಸ್ಥಾಪನೆಯಾಯಿತು. 1910ರಲ್ಲಿ ದಕ್ಷಿಣ ಆಫ್ರಿಕ ಸಂಯುಕ್ತ ಗಣರಾಜ್ಯದಲ್ಲಿ ಇದನ್ನು ಸೇರಿಸಲಾಯಿತು. ಇಂದು ಟ್ರ್ಯಾನ್ಸ್‍ವಾಲಿನಲ್ಲಿ ಬಂಟು ಜನಾಂಗವಲ್ಲದೆ ಬಿಳಿಯರೂ ಏಷ್ಯನರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.
ಈ ಪ್ರಾಂತ್ಯವನ್ನು ಆಡಳಿತದ ಅನುಕೂಲಕ್ಕಾಗಿ 53 ಜಿಲ್ಲೆಗಳನ್ನಾಗಿ ವಿಭಾಗಿಸಲಾಗಿದೆ. ಪ್ರಾಂತ್ಯದಲ್ಲಿ ನಾಲ್ಕು ವಿಶ್ವವಿದ್ಯಾಲಯಗಳಿವೆ. ಬಿಳಿಯರಿಗೆ ಪ್ರತ್ಯೇಕವಾದ ಶಾಲಾ-ಕಾಲೇಜುಗಳಿವೆ. ಬಂಟೂ ಜನಾಂಗದವರಿಗೂ ಏಷ್ಯನರಿಗೂ ಪ್ರತ್ಯೇಕವಾದ ಶಿಕ್ಷಣ ಸಂಸ್ಥೆಗಳು ಇವೆ. ಪ್ರಿಟೋರೀಯ ಟ್ರ್ಯಾನ್ಸ್‍ವಾಲಿನ ರಾಜಧಾನಿ. ಜರ್ಮಸ್ಟನ್, ಸ್ಟ್ರಿಂಗ್ಸ್, ಬೆನೋನೀ-ಇವು ಇಲ್ಲಿಯ ಪ್ರಮುಖ ಪಟ್ಟಣಗಳು. ದಕ್ಷಿಣ ಆಫ್ರಿಕದ ಅತ್ಯಂತ ದೊಡ್ಡ ಪಟ್ಟಣವಾದ ಜೋಹ್ಯಾನಸ್‍ಬರ್ಗ್ (14,32,643) ಇರುವುದೂ ಈ ಪ್ರಾಂತ್ಯದಲ್ಲೇ.