ಟೈ ಪಿಂಗ್ ದಂಗೆಯು ಚೀನದಲ್ಲಿ 1850-1864ರಲ್ಲಿ ಸಂಭವಿಸಿದ ದಂಗೆ.

ಮಾಂಚೂಗಳ ಆಳ್ವಿಕೆಯನ್ನು ಕೊನೆಗೊಳಿಸುವ ಉದ್ದೇಶದಿಂದ ಸ್ಥಳೀಯವಾಗಿ ಆರಂಭವಾದ ಈ ದಂಗೆ ಕ್ರಮೇಣ ಚೀನದ 17 ಪ್ರಾಂತ್ಯಗಳಿಗೆ ವ್ಯಾಪಿಸಿತು. 2 ಕೋಟಿಯಿಂದ 4 ಕೋಟಿಯ ವರೆಗೆ ಜನರು ಈ ದಂಗೆಯಲ್ಲಿ ಮಡಿದಿರಬಹುದುದೆಂಬುದು ಒಂದು ಅಂದಾಜು.

ಕಾರಣಗಳು

ಬದಲಾಯಿಸಿ

ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿ, ಆಡಳಿತದ ಕುಸಿತ ಹಾಗೂ ಅದಕ್ಷತೆಗಳು ಈ ದಂಗೆಗೆ ಮುಖ್ಯ ಕಾರಣಗಳು. ಮಾಂಚೂ ದೊರೆಗಳು ಸೇನಾ ಕ್ಷೇತ್ರದಲ್ಲೂ ಅಶಕ್ತರಾಗಿ ವಿದೇಶಿಯರಿಗೆ ದಾರಿಮಾಡಿ ಕೊಟ್ಟಿದ್ದುದರಿಂದ ಉಂಟಾಗಿದ್ದ ಅತೃಪ್ತಿಯೂ ಈ ದಂಗೆಗೆ ಒಂದು ಕಾರಣ.

 
ಹುಂಗ್ ಷಿಯೂಚೂವಾನ್ ನ 1860 ರ ಸುಮಾರಿನ ಚಿತ್ರ

ಗ್ವಾಂಗ್ಸೀ ಪ್ರಾಂತ್ಯದಲ್ಲಿ ಆರಂಭವಾದ ಈ ದಂಗೆಯ ನಾಯಕ ಹುಂಗ್ ಷಿಯೂಚೂವಾನ್ (1814-1864). ಅಧಿಕಾರಿಗಳನ್ನು ಆಯ್ಕೆ ಮಾಡಲು ಸರ್ಕಾರ ಏರ್ಪಡಿಸುತ್ತಿದ್ದ ಪರೀಕ್ಷೆಗಳಿಗೆ ಕುಳಿತು ಅನುತ್ತೀರ್ಣನಾಗಿದ್ದ ಇವನು 1836ರಲ್ಲಿ ಕ್ರ್ಯಸ್ತಧರ್ಮಪ್ರಚಾರಕನೊಬ್ಬ ಬರೆದ ಒಂದು ಧಾರ್ಮಿಕ ಲೇಖನ ಓದಿ ಪ್ರಭಾವಗೊಂಡ. 1837-1843ರಲ್ಲಿ ಮತ್ತೆ ಪರೀಕ್ಷೆಗೆ ಕುಳಿತು ಅನುತ್ತೀರ್ಣನಾದ. ಮಾನಸಿಕ ಒತ್ತಡಕ್ಕೆ ಒಳಗಾದ. ಕಾಯಿಲೆಯಾಯಿತು. ಆಗ ತಾನು ಸ್ವರ್ಗಕ್ಕೆ ಹೋಗಿ ಏಸುಕ್ರಿಸ್ತನನ್ನು ಕಂಡಂತೆಯೂ, ತನ್ನನ್ನು ಅವನ ತಮ್ಮನಂತೆ ಆತ ಪರಿಗಣಿಸಿದಂತೆಯೂ ಭೂಮಿಯಲ್ಲಿ ತಾನು ಒಂದು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸುವುದಕ್ಕೆ ದೇವರಿಂದ ನಿರ್ದೇಶಿಸಲ್ಪಟ್ಟಂತೆಯೂ ಕನಸು ಕಂಡ. 'ದೇವರ ಆರಾಧಕರು ಎಂಬ ಸಂಘವನ್ನು ಸ್ಥಾಪಿಸಿ ಜನಸಂಘಟನೆ ಮಾಡಿದ. ಮಾಂಚೂಗಳನ್ನು ಉರುಳಿಸಿ ಚೀನದಲ್ಲಿ ಟೈ ಪಿಂಗ್ ಅಥವಾ ಪೂರ್ಣ ಶಾಂತಿಯನ್ನೂ ಸ್ಥಾಪಿಸುವುದೇ ಈ ಸಂಘದ ಸದಸ್ಯರ ಉದ್ದೇಶವಾಗಿತ್ತು. 1850 ರಲ್ಲಿ ಗ್ವಾಂಗ್ಸೀ ಪ್ರಾಂತ್ಯದಲ್ಲಿದ್ದ 30,000 ಜನ ಚೂವಾನನ ಅನುಯಾಯಿಗಳು ದಂಗೆ ಎದ್ದರು. ಅಲ್ಲಿಂದ ಹೂನಾನ್ ಪ್ರಾಂತ್ಯಕ್ಕೆ ಹೋದರು. ದಂಗೆಕಾರರೊಡನೆ ಅತೃಪ್ತ ದೀನದಲಿತ ಜನರೂ ಸೇರಿಕೊಂಡರು. ನ್ಯಾನ್ಕಿಂಗ್ ನಗರವನ್ನು ದಂಗೆಕೋರರು ಮುತ್ತಿದರು.

ಉದ್ದೇಶಗಳು

ಬದಲಾಯಿಸಿ

ದಂಗೆಕೋರರು ಸಾಧಿಸಬಯಸಿದ್ದ ಉದ್ದೇಶಗಳು ಇವು : 1 ಸ್ವತ್ತು, ನೆಲಗಳ ಒಡೆತನ ಸಮಾಜಕ್ಕೆ ಸೇರಬೇಕು. 2 ಮಾನವರಲ್ಲಿ ಭ್ರಾತೃತ್ವ ಏರ್ಪಡಬೇಕು. 3 ಗಂಡು ಹೆಣ್ಣು ಎಂಬ ಭೇದಭಾವ ಇರಬಾರದು.

ವೈಫಲ್ಯ

ಬದಲಾಯಿಸಿ

ಸುವ್ಯವಸ್ಥಿತ ಸಂಘಟನೆಯ ಹಾಗೂ ತಾತ್ತ್ವಿಕ ದೃಷ್ಟಿಯ ಅಭಾವ. ದಂಗೆಯ ನಾಯಕರ ಅದಕ್ಷತೆ-ಇವುಗಳ ಪರಿಣಾಮವಾಗಿ ದಂಗೆ ವಿಫಲವಾಯಿತು. ಮಾಂಚೂ ಸರ್ಕಾರ ಐರೋಪ್ಯರ ಮಿಲಿಟರಿ ನೆರವಿನಿಂದ ಇದನ್ನು ಹತ್ತಿಕ್ಕಿತು.

ಒಟ್ಟಾರೆ ಪರಿಣಾಮ

ಬದಲಾಯಿಸಿ

ಆದರೂ ಟೈ ಪಿಂಗ್ ದಂಗೆ ಮಾಂಚೂ ಸರ್ಕಾರದ ದೌರ್ಬಲ್ಯವನ್ನೂ ತೋರಿಸಿತು. ಇದನ್ನು ಅಡಗಿಸಲು ಸರ್ಕಾರದ ಬೊಕ್ಕಸ ಬರಿದಾಯಿತು. ದಂಗೆ ನಡೆದ ಕಾಲದಲ್ಲಿ ಕಂದಾಯದ ವಸೂಲಿ ನಿಂತಿತು. ಇದರಿಂದ ಸರ್ಕಾರದ ಅದಾಯ ಇಳಿಮುಖವಾಯಿತು. ಸಂಪದ್ಭರಿತವಾಗಿದ್ದ ಕೇಂದ್ರ ಪ್ರಾಂತ್ಯಗಳು ಈ ದಂಗೆಯಿಂದ ದಾರಿದ್ರ್ಯಸ್ಥಿತಿಗೆ ಇಳಿದುವು. ಕೇಂದ್ರ ಸರ್ಕಾರದ ಹಿಡಿತ ಸಡಿಲವಾಗಿ, ಪ್ರಾಂತೀಯ ಮುಖಂಡರ, ಪಾಳೆಯಗಾರರ ಪ್ರಾಬಲ್ಯ ಹೆಚ್ಚಿತು. ಆದರೂ ಟೈ ಪಿಂಗ್ ದಂಗೆ ಅನಂತರದ ಅನೇಕ ಬಂಡಾಯಗಳಿಗೆ ಸ್ಫೂರ್ತಿಯಾಗಿ ಪರಿಣಮಿಸಿ ಅಂತಿಮವಾಗಿ 1911-12ರಲ್ಲಿ ಮಾಂಚೂ ವಂಶದ ಅಧಿಕಾರವನ್ನು ಸುನ್ ಯಾಟ್-ಸೆನ್ ಕೊನೆಗೊಳಿಸುವುದರಲ್ಲಿ ಪರ್ಯವಸಾನಗೊಂಡಿತು.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: