ಟೆಂತ್ರಿಡಿನಿಡೀ - ಹೈಮನಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಸುಮಾರು 200 ಜಾತಿಗಳನ್ನೂ 3000 ಪ್ರಭೇದಗಳನ್ನೂ ಒಳಗೊಂಡಿದೆ. ಸಾಮಾನ್ಯ ಬಳಕೆಯಲ್ಲಿ ಇವನ್ನು ಗರಗಸದ ನೊಣಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಅಂಡನಿಕ್ಷೇಪಕ ಗರಗಸದಂತಿರುವುದರಿಂದ ಇವಕ್ಕೆ ಈ ಹೆಸರು ಬಂದಿದೆ.

Tenthredopsis sordida (female)

ಸಣ್ಣ ಇಲ್ಲವೆ ಮಧ್ಯಮಗಾತ್ರದ ಕೀಟಗಳಿವು: ದೇಹದ ಉದ್ದ ಸಾಮಾನ್ಯವಾಗಿ 20 ಮಿ.ಮೀ.ಗಿಂತ ಹೆಚ್ಚಾಗಿರುವುದಿಲ್ಲ. ಪ್ರೌಢ ಕೀಟಗಳು ದೃಢವಾಗಿದ್ದು ಕಣಜಗಳಂತೆ ಕಾಣುತ್ತವೆ. ತಲೆ ಅಗಲ. ಕಣ್ಣುಗಳು ದೊಡ್ಡವು. ಆಂಟೆನೀಗಳಲ್ಲಿ 3, 6, 8 ಅಥವಾ 11 ಖಂಡಗಳಿವೆ. ರೆಕ್ಕೆಗಳು ದೊಡ್ಡವು. ನಿಮ್ನರೀತಿಯ ನರವಿನ್ಯಾಸವುಂಟು. ಉದರ ಭಾಗದಲ್ಲಿ 8 ಖಂಡಗಳಿವೆ. ಅಂಡನಿಕ್ಷೇಪಕದಲ್ಲಿ ಎರಡು ಜೊತೆ ಚಪ್ಪಟೆಯಾದ ಫಲಕಗಳುಂಟು. ಹೊರಗಿನ ಫಲಕಗಳಿಗೆ ಗರಗಸಮಾರ್ಗದರ್ಶಿಗಳೆಂದೂ ಒಳಗಿನವಕ್ಕೆ ಗರಗಸಗಳೆಂದೂ ಹೆಸರು. ಗರಗಸಗಳ ಸಹಾಯದಿಂದ ಎಲೆ ಕಾಂಡ ಇತ್ಯಾದಿಗಳನ್ನು ಚುಚ್ಚಿ ಅವುಗಳೊಳಗೆ ಮೊಟ್ಟೆಗಳನ್ನಿಡುತ್ತವೆ. ಈ ಕೀಟಗಳ ಡಿಂಬಗಳು ಕಂಬಳಿಹುಳುಗಳಂತೆ ಕಾಣುವುವು. ಇವುಗಳ ಎದೆಯ ಭಾಗದಲ್ಲಿ 3 ಜೊತೆ ಕಾಲುಗಳು, ಉದರ ಭಾಗದಲ್ಲಿ 6 ರಿಂದ 8 ಜೊತೆ ಕಾಲುಗಳಿವೆ. ಇವು ಎಲೆಗಳನ್ನು ತಿಂದು ಬದುಕುವುವು. ಎಲೆಗಳನ್ನು ತಿನ್ನುವಾಗ ತಮ್ಮ ದೇಹವನ್ನು ಎಲೆಯ ಅಂಚಿನ ಮೇಲೆ ಸುರುಳಿಯಾಕಾರದಲ್ಲಿ ಎತ್ತಿಕೊಂಡಿರುವುದು, ಇವುಗಳ ವಿಚಿತ್ರ ಲಕ್ಷಣ. ಕೆಲವು ಡಿಂಬಗಳು ಎಲೆಗಳಲ್ಲಿ ಗಾಲ್ ಎಂಬ ಗಂಟುಗಳನ್ನು ಉಂಟುಮಾಡುತ್ತವೆ. ಇವು ಸ್ರವಿಸುವ ಒಂದು ರೀತಿಯ ದ್ರವದಿಂದ ಸಸ್ಯಕೋಶಗಳು ಉತ್ತೇಜನಗೊಂಡು ವಿಪರೀತ ಬೆಳೆಯುವುದರಿಂದ ಗಂಟುಗಳು ರೂಪುಗೊಳ್ಳಬಹುದೆಂದು ನಂಬಲಾಗಿದೆ. ಟೆಂತ್ರಿಡಿನಿಡೀ ಕುಟುಂಬದ ಹಲವಾರು ಕೀಟಗಳು ಮತ್ತು ಡಿಂಬಗಳು ಮರ ಗಿಡಗಳ ಪಿಡುಗುಗಳೆನಿಸಿವೆ. ಉದಾಹರಣೆಗೆ ಅಥೇಲಿಯ ಪ್ರಾಕ್ಸಿಮ ಎಂಬ ಗರಗಸದ ನೊಣ ಸಾಸುವೆ ಮತ್ತು ಎಲೆಕೋಸು ಮುಂತಾದ ಬೆಳೆಗೆ ಬಹಳ ಉಪದ್ರವಕಾರಿಯಾದ ಕೀಟ. ಲಾರ್ಚ್, ಸ್ಟ್ರೂಸ್, ಬರ್ಚ್, ಎಲ್ಮ್ ಮುಂತಾದ ಮರಗಳಿಗೆ ಪ್ರಿಸ್ಟಿಫೊರ ಎರಿಕ್ ಸೋನಿಯೈ, ಪ್ರಿಸ್ಟಿಫರ ಪಾಲಿಟೋಮಸ್, ಫೆನ್ಯೂಸ ಪ್ಯೂಸಿಲ, ಫೆನ್ಯೂಸ ಅಲ್ಮಿ ಎಂಬ ಪ್ರಬೇಧಗಳು ಹರಡಿ ಅಪಾರ ನಷ್ಟವನ್ನು ಉಂಟುಮಾಡುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: