ಟೂಸಾನ್ -ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಆರಿಝೋನ ರಾಜ್ಯದ ಒಂದು ನಗರ. ರಾಜ್ಯದ ಅಗ್ನೇಯ ಭಾಗದಲ್ಲಿ ಉ.ಅ. 32' 15' ಮತ್ತು ಪ.ರೇ. 111' ಮೇಲೆ, ಸಮುದ್ರಮಟ್ಟದಿಂದ 2,400' ಎತ್ತರದಲ್ಲಿ, ಪರ್ವತಗಳಿಂದ ಆವೃತವಾದ ಅಗಲವಾದ ಕಣಿವೆಯಲ್ಲಿದೆ. ಜನಸಂಖ್ಯೆ 2,62,892 (1970 ಅಂ.).

ಓಲ್ಡ್ ಪ್ಯೂಬ್ಲೋ ಎಂಬ ಹೆಸರಿದ್ದ ಈ ನಗರ ಸ್ಟ್ಯನಿಷ್ ವಸಾಹತು ನಿರ್ಮಾಣಕಾಲದಿಂದ ಬೆಳೆದಿದೆ. 1867-1877ರಲ್ಲಿ ಈ ನಗರ ಆರಿಝೋನ ಪ್ರದೇಶದ ರಾಜಧಾನಿಯಾಗಿತ್ತು.

ಇಲ್ಲಿಯ ವಾಯುಗುಣ ಇದರ ಅಭಿವೃದ್ಧಗೆ ಮುಖ್ಯ ಕಾರಣ. ಒಣಹವೆ ಮತ್ತು ಬಿಸಿಲಿನಿಂದ ಕೂಡಿದ ಇದರ ಹಿತಕರ ವಾಯುಗುಣ ಪ್ರವಾಸಿಗಳನ್ನು ಆರ್ಕಷಿಸಿದೆ. ಇಲ್ಲಿಯ ಮನೋಲ್ಲಾಸಕರ ಕ್ಷೇತ್ರಗಳು, ಅಪೂರ್ವವಾದ ಮರುಭೂಮಿ ಸಸ್ಯಗಳು, ಸುಂದರವಾದ ಆಳವಾದ ಕಮರಿಗಳಲ್ಲಿ ಹರಿಯುವ ತೋರೆಗಳು, ಸ್ಕೀಯಿಂಗಿಗೆ ಅನುಕೂಲವಾದ ಪರ್ವತ ಶಿಖರದ ಹಿಮ ಮೈ-ಇವುಗಳಿಂದಾಗಿ ಇದು ಚಳಿಗಾಲದ ಆಕರ್ಷಕ ಪ್ರವಾಸಕೇಂದ್ರವಾಗಿದೆ. ಟೂಸಾನ್ ಪರ್ವತದ ತಪ್ಪಲಲ್ಲಿ ಆರಿಝೋನ ಸೊನೋರ ಮರುಭೂಮಿ ವಸ್ತುಸಂಗ್ರಹಾಲಯವಿದೆ. ಮರುಭೂಮಿಯ ವನ್ಯ ಮತ್ತು ಸಸ್ಯ ಜೀವನ ಸಂಗ್ರಹಾಲಯವಿದು.

ಟೂಸಾನಿನಲ್ಲಿ ಅನುಕೂಲಕರ ವಾಯುಗುಣವಿರುವುದರಿಂದ ಇದು ವಿಮಾನ ಚಟುವಟಿಕೆಯ ಕೇಂದ್ರ. ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಮಾನ ಮಾರ್ಗಗಳು ಇಲ್ಲಿ ಸಂಧಿಸುತ್ತವೆ. ಮಿಸೈಲ್ ಆಲೇಖ್ಯ ಮತ್ತು ಎಲೆಕ್ಟ್ರಾನಿಕ್ ತಯಾರಿಕ ಇಲ್ಲಿಯ ದೊಡ್ಡ ಉದ್ಯಮಗಳು. ಇದರ ಸುತ್ತಣ ಪ್ರದೇಶ ಬಹಳ ಹಿಂದಿನಿಂದಲೂ ವ್ಯವಸಾಯದಲ್ಲಿ ಮುಂದುವರಿದಿದೆ. ಇಲ್ಲಿ ವ್ಯಾಪಕವಾಗಿ ನೀರಾವರಿ ಜಮೀನುಗಳಿವೆ. ಆರಿಝೋನ ವಿಶ್ವವಿದ್ಯಾಲಯ ಈ ಸುತ್ತಿನಲ್ಲಿ ಪ್ರಸಿದ್ಧವಾದ ಶಿಕ್ಷಣಸಂಸ್ಥೆ. ಇಲ್ಲಿ ಹಲವು ಶಾಲೆಗಳುಂಟು. ಇಲ್ಲಿಯ ಜನರಲ್ಲಿ ಹೆಚ್ಚು ಸಂಖ್ಯೆಯವರು ಮೆದ್ಸಿಕನರು, ಸ್ಪ್ಯಾನಿಷ್ ಪ್ರಭಾವಕ್ಕೆ ಒಳಗಾದವರು, ಸ್ಪ್ಯಾನಿಷ್ ಭಾಷೆಯನ್ನಾಡುವವರು. ಹಿಂದಿನ ಸ್ಪ್ಯಾನಿಷರಿಂದ ಪಡೆದುಕೊಂಡ ಕೆಲವು ಸಂಪ್ರದಾಯಗಳನ್ನು ಇವರು ಇಂದಿಗೂ ಅನುಸರಿಸುತ್ತಿದ್ದಾರೆ. ಇದು ಅನೇಕ ಕಲಾವಿದರ, ಕವಿಗಳ ವಾಸಸ್ಥಳ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟೂಸಾನ್&oldid=1084713" ಇಂದ ಪಡೆಯಲ್ಪಟ್ಟಿದೆ