ಟೂವಟಾರ- ರಿಂಕೊಸಿಫೇಲಿಯ ಗಣಕ್ಕೆ ಸೇರಿದ ಏಕೈಕ ಜೀವಂತ ಸರೀಸೃಪ. ಸ್ಫೀನೊಡಾನ್ ಪಂಕ್ಟೇಟಸ್ ಇದರ ಶಾಸ್ತ್ರೀಯ ಹೆಸರು.

ನ್ಯೂಜಿಲೆಂಡಿನಲ್ಲಿ ಹಿಂದೊಮ್ಮೆ ಹೇರಳ ಸಂಖ್ಯೆಯಲ್ಲಿ ಜೀವಿಸಿದ್ದ ಈ ಪ್ರಾಣಿ ಈಗ ಅದರ ಸುತ್ತಲಿನ ಸಣ್ಣ ದ್ವೀಪಗಳಿಗೇ ಸೀಮಿತ.

ಸುಮಾರು 60-75 ಸೆಂ.ಮೀ. ಉದ್ದದ ಪ್ರಾಣಿಯಿದು. ನೋಡಲು ಓತಿಕೇತದಂತೆ ಕಾಣುತ್ತದೆ. ಆದರೂ ಟೂವಟಾರಕ್ಕೂ ಓತಿಗಳಿಗೂ ಕೆಲವು ಮುಖ್ಯ ವ್ಯತ್ಯಾಸಗಳುಂಟು. ಟೂವಟಾರದ ಕಣ್ಣಿನಲ್ಲಿ ನಿಕ್ಟಿಟೇಟಿಂಗ್ ಪೊರೆ ಎಂಬ ಮೂರನೆಯ ರೆಪ್ಪೆಯುಂಟು. ಇದು ಕಣ್ಣುಗುಡ್ಡೆಯ ಮೇಲೆ ಅಡ್ಡಡ್ಡವಾಗಿ ಚಲಿಸುತ್ತದೆ. ಅಲ್ಲದೆ ಕಣ್ಣಿನ ಹಿಂಭಾಗದಲ್ಲಿ ತಲೆಬುರುಡೆಯ ಮೇಲೆ ಒಂದು ಮೂಳೆಕವಾನು ಇದೆ. ಓತಿಗಳಲ್ಲಿ ನಿಕ್ಟಿಟೇಟಿಂಗ್ ಪೊರೆಯಾಗಲಿ ಮೂಲೆಕಮಾನು ಆಗಲಿ ಇಲ್ಲ. ಟೂವಟಾರಕ್ಕೆ ನಾಲ್ಕು ಕಾಲುಗಳು, ಬಲವಾದ ಒಂದು ಬಾಲ, ಕತ್ತು ಮತ್ತು ಬೆನ್ನುಗಳ ಮೇಲೆ ಗರಗಸದಂಥ ಹುರುಪೆಗಳ ಒಂದು ಉಬ್ಬೇಣು ಉಂಟು. ದೇಹದ ಮೇಲೆಲ್ಲ ಶಲ್ಕಗಳ ಹೊದಿಕೆ ಇದೆ. ಟೂವಟಾರ ತುಂಬ ಗೋಪ್ಯ ಸ್ವಭಾವದ ಪ್ರಾಣಿ. ಹಗಲೆಲ್ಲ ಬಿಲಗಳಲ್ಲಿ ಹುದುಗಿಕೊಂಡಿದ್ದು ರಾತ್ರಿ ಆಹಾರಾನ್ವೇಷಣೆಗೆ ಹೊರಡುತ್ತದೆ. ಸಾಧಾರಣವಾಗಿ ಬಸವನಹುಳು ಮತ್ತು ಕ್ರಿಮಿಕೀಟಗಳು ಇದರ ಆಹಾರ. ಸಾಮಾನ್ಯವಾಗಿ ಇತರ ಪ್ರಾಣಿಗಳು ತನ್ನ ವಾಸಸ್ಥಳಕ್ಕೆ ಪ್ರವೇಶಿಸಿದಾಗ ಅಥವಾ ಮೊಟ್ಟೆಯಿಡುವ ವೇಳೆಗಳಲ್ಲಿ ಇದು ಒಂದು ವಿಧವಾಗಿ ಲೊಚಗುಟ್ಟುತ್ತದೆ. ಇದರಲ್ಲಿ ನಿಷೇಚನೆ ಆಂತರಿಕ. ಮಣ್ಣಿನ ಕುಳಿಗಳಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳಿಗೆ ತೊಗಲಿನಂತಿರುವ ಚಿಪ್ಪಿದೆ. ಸುಮಾರು 12-13 ತಿಂಗಳ ಅನಂತರ ಮೊಟ್ಟೆಗಳನ್ನು ಒಡೆದುಕೊಂಡು ಮರಿಗಳು ಹೊರಬರುತ್ತವೆ. ಸಾಮಾನ್ಯವಾಗಿ ಮರಿಗಳ ಮೂತಿಯಲ್ಲಿ ಹರಿತವಾದ ರಚನೆಯೊಂದಿರುತ್ತದೆ. ಇದರ ಸಹಾಯದಿಂದ ಮರಿ ಮೊಟ್ಟೆಯ ಚಿಪ್ಪನ್ನು ಒಡೆಯುತ್ತದೆ. ಮರಿ ಹೊರಬಂದಮೇಲೆ ಈ ರಚನೆ ಅಳಿದುಹೋಗುತ್ತದೆ. ಮರಿಗಳಿಗೆ 6 ತಿಂಗಳವರೆಗೂ ನೆತ್ತಿಯ ಮೇಲೆ ಒಂದು ಅನಾಚ್ಛಾದಿತ ಗುರುತು ಇರುತ್ತದೆ. ಇದಕ್ಕೆ ಪೈನಿಯಲ್ ಕಣ್ಣು ಎಂದು ಹೆಸರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟೂವಟಾರ&oldid=1084709" ಇಂದ ಪಡೆಯಲ್ಪಟ್ಟಿದೆ