ಟೀಮಾರ್- ಈಸ್ಟ್ ಇಂಡೀಸ್ ದ್ವೀಪಸ್ತೋಮದ ಒಂದು ದ್ವೀಪ. ಜಾವಾದಿಂದ ಪೂರ್ವಕ್ಕಿರುವ, ಲೆಸರ್ ಸಂಡ ದ್ವೀಪಗಳಲ್ಲಿ ಅತ್ಯಂತ ದೊಡ್ಡದು, ಅತ್ಯಂತ ಪೂರ್ವದಲ್ಲಿರುವಂಥದು. ದ.ಅ. 8' 15'-10' 30' ಮತ್ತು ಪೂ.ರೇ. 123' 20'-127' 10' ನಡುವೆ, ಸಾವೂ ಮತ್ತು ಟೀಮಾರ್ ಸಮುದ್ರಗಳ ಮಧ್ಯೆ, ಆಸ್ಟ್ರೇಲಿಯದ ವಾಯವ್ಯಕ್ಕೆ ಸು. 400 ಮೈ. ದೂರದಲ್ಲಿ ಎದೆ. ಈ ದ್ವೀಪದ ಉದ್ದ ಸು. 300 ಮೈ. ಅಗಲ 10-65 ಮೈ. ಇದರ ಪಶ್ಚಿಮಾರ್ಧ ಇಂಡೋನೇಷ್ಯರ ಪೂರ್ವ ನೂಸ ಟಿನ್ ಗಾರ ಪ್ರಾಂತ್ಯದ ಒಂದು ಭಾಗ. ಇದರ ವಿಸ್ತೀರ್ಣ 6,120 ಚ.ಮೈ. (15,850 ಚ.ಕಿಮೀ.). ಜನಸಂಖ್ಯೆ 15,850 (1956 ಅಂ.). ಪೂರ್ವಾರ್ಧ ಪೋರ್ಚುಗೀಸ್ ವಸಾಹತು. ಇದರ ವಿಸ್ತೀರ್ಣ 5,763 ಚ.ಮೈ. (14,925 ಚ.ಕಿ.ಮೀ.). ಜನಸಂಖ್ಯೆ 6,10,541 (1970). ಇಂಡೋನೆಷ್ಯ ಭಾಗದಲ್ಲಿರುವ ಕೂಪಾಂಗ್ ಎಂಬುದು ಪೂರ್ವ ನೂಸ ಟೆನ್ ಗಾರ ಪ್ರಾಂತ್ಯದ ರಾಜಧಾನಿ. ಪೋರ್ಚುಗೀಸ್ ಟೀಮಾರಿನ ರಾಜಧಾನಿ ಡಿಲೀ. (ಎಸ್.ಎನ್.ಎಲ್.)

ಭೌತಲಕ್ಷಣಸಂಪಾದಿಸಿ

ಪಶ್ಚಿಮ-ನೈಋತ್ಯದಿಂದ ಪೂರ್ವ ಈಶಾನ್ಯಕ್ಕೆ ಚಾಚಿಕೊಂಡಿರುವ ಟೀಮಾರ್ ದ್ವೀಪ ಪರ್ವತಮಯ. ಬೆಟ್ಟ ಮತ್ತು ಪರ್ವತ ಸೀಮೆಗಳ ನಡುನಡುವೆ ದಕ್ಷಿಣೋತ್ತರವಾಗಿ ಹಬ್ಬಿದ ಕಣಿವೆಗಳುಂಟು. ಅಲ್ಲಲ್ಲಿ ಸಣ್ಣ ಸಣ್ಣ ನದೀಬಯಲುಗಳು. ಕಡಲಂಚಿನಲ್ಲಿ ಅಲೆಗಳಿಂದ ಸಂಚಿತವಾದ ಮೈದಾನಗಳ ಸೆರಗಿನಂತೆ ಗುಲ್ಮವೃಕ್ಷಗಳು ತುಂಬಿದ ಜವುಗು ನೆಲವಿದೆ. ಅಲ್ಲಲ್ಲಿ ಎತ್ತರವಾದ ಹವಳದ ದಿಬ್ಬಗಳೂ ಉಂಟು. ದ್ವೀಪದ ಅತ್ಯುನ್ನತ ಶಿಖರ ರಾಮೆಲೌ. ಇದು ದ್ವೀಪದ ಮಧ್ಯದಲ್ಲಿದೆ. ಇದರ ಎತ್ತರ 9,711' (2,960 ಮೀ.). 7,5000'ಗಿಂತ ಎತ್ತರವಾದ ಹಲವು ಶಿಖರಗಳಿವೆ. ಇವು ಹಳೆಯ ಜ್ವಾಲಾಮುಖಿಗಳು. ದ್ವೀಪದಲ್ಲಿ ಜೀವಂತ ಜ್ವಾಲಾ ಮುಖಿಗಳಾಗಲಿ ಈಚಿನ ಜ್ವಾಲಾಮುಖೀಯ ಶಿಲೆಗಳಾಗಲಿ ಎಲ್ಲ; ಕೆಲವು ಕೆಸರು ಬುಗ್ಗೆಗಳುಂಟು. ಹಳೆಯ ಜ್ವಾಲಾಮುಖೀಯ ಶಿಲಾಪ್ರದೇಶಗಳು ಫಲವತ್ತಾಗಿವೆ. ಕಡಿವಾದ ಕಣಿವೆಗಳಲ್ಲಿ ಮಳೆಗಾಲದಲ್ಲಿ ಹರಿಯುವ ತೊರೆಗಳಿವೆ. ಆದರೆ ಅಲ್ಲಿಯ ನೆಲ ಸುಣ್ಣಕಲ್ಲಿನಿಂದ ಕೂಡಿದ್ದು, ನೀರನ್ನು ಹೀರುವ ಗುಣವುಳ್ಳದ್ದು; ನೀರಾವರಿ ಕಷ್ಟಕರ.

ವಾಯುಗುಣಸಂಪಾದಿಸಿ

ಟೀಮಾರಿನ ವಾಯುಗುಣ ಬಹುತೇಕ ಇತರ ಈಸ್ಟ್ ಇಂಡೀಸ್ ದ್ವೀಪಗಳದ್ದಕ್ಕಿಂತ ಭಿನ್ನವಾದ್ದು. ಒಣ ಹವೆಯ ಋತು ಬಹಳ ದೀರ್ಘವಾದ್ದು. ಆಗ್ನೇಯ ಮಾನ್ಸೂನ್ ಮಾರುತಗಳು ಆಸ್ಟ್ರೇಲಿಯದ ಶುಷ್ಕ ಪ್ರದೇಶಗಳಿಂದ ಬೀಸುವುದರಿಂದ ಅವುಗಳಿಂದ ಮಳೆಯಾಗುವುದಿಲ್ಲ. ಪಶ್ಚಿಮ ಮಾನ್ಸೂನ್ ಮಾರುತುಗಳು ಮಳೆ ತರುತ್ತವೆಯಾದರೂ ಅವುಗಳ ಅವಧಿ ಕಿರಿದು; ಅಲ್ಲದೆ ಅವುಗಳಿಂದ ಮಳೆಯಾಗುವುದೂ ಅನಿಶ್ಚಿತ. ವರ್ಷಾಕಾಲ, ಮಳೆಯ ಪರಿಮಾಣ-ಇವುಗಳ ಭರವಸೆಯಿಲ್ಲ. ಮೇಲ್ಮೈಯ ಲಕ್ಷಣದಿಂದಾಗಿ ಸ್ಥಳದಿಂದ ಸ್ಥಳಕ್ಕೆ ವಾಯುಗುಣ ವ್ಯತ್ಯಾಸವಾಗುತ್ತದೆ.

ಸಸ್ಯ ಪ್ರಾಣಿಗಳುಸಂಪಾದಿಸಿ

ಟೀಮಾರ್‍ನ ಸಸ್ಯಗಳು ನಾನಾ ಬಗೆಯವು. ಸಣ್ಣ ಮರಗಳಿಂದ ಕೂಡಿದ ಸವಾನ ಮಾದರಿಯ ಎತ್ತರದ ಹುಲ್ಲುಗಾಡು ಸಾಮಾನ್ಯ. ಹಿಂದೆ ಇಲ್ಲಿ ಮಾನ್ಸೂನ್ ಕಾಡುಗಳಿದ್ದುವು. ಅನೇಕ ಶತಮಾನಗಳಿಂದ ಇವನ್ನು ಸುಡುತ್ತ ಬಂದದ್ದರ ಪರಿಣಾಮವಾಗಿ ಕಾಡುಗಳು ಬಹುತೇಕ ನಾಶವಾಗಿವೆ. ಜನವಸತಿ ಹೆಚ್ಚಾಗಿ ಇಲ್ಲದ ಎಡೆಗಳಲ್ಲಿ ಈಗಲೂ ಮಾನ್ಸೂರ್ ಕಾಡುಗಳಿವೆ. ಹಿಂದೆ ಈ ಕಾಡುಗಳಲ್ಲಿ ಶ್ರೀಗಂಧ, ಬಣ್ಣದ ಮರ, ಮೇಣ ಮುಂತಾದವು ಕೊರಕುತ್ತಿದ್ದುವು. ಮೊದಮೊದಲು ಪಾಶ್ಚಾತ್ಯ ವ್ಯಾಪಾರಿಗಳು ಇದರಿಂದ ಆಕರ್ಷಿತರಾಗಿ ಇಲ್ಲಿಗೆ ಬಂದರು. ತಗ್ಗಿನ ನೆಲದ ಹುಲ್ಲುಗಾಡುಗಳಲ್ಲಿ ತಾಳೆ ಜಾತಿಯ ಮರಗಳು ಪ್ರಧಾನವಾಗಿವೆ. ಇದಕ್ಕಿಂದ ಎತ್ತರದ ನೆಲದಲ್ಲಿರುವ ಹುಲ್ಲುಗಾವಲುಗಳು ಮೇವಿಗೆ ಅನುಕೂಲವಾಗಿರುವುವಾದರೂ 1910-14ರ ಸುಮಾರಿಗೆ ಡಚ್ಚರು ಇಲ್ಲಿಗೆ ತಂದ ದನಕರುಗಳೊಂದಿಗೆ ಇಲ್ಲಿ ಬಂದ ಅಮೆರಿಕನ್ ಮೂಲದ ಲಂಟವಾಣಿ ಪೊದೆಗಳು ಹಬ್ಬಿವೆ. ಆದರೆ ಸರದಿ ಬೇಸಾಯ ಮಾಡುವ ಜನಕ್ಕೆ ಇದು ಅನುಕೂಲಕರವೆಂದೇ ಭಾವಿಸಲಾಗಿದೆ. ಏಕೆಂದರೆ ಇವು ಬೇಗ ಬೆಳೆಯುತ್ತವೆ. ಇವನ್ನು ಸುಟ್ಟು ನೆಲವನ್ನು ಕೃಷಿಗೆ ಸಿದ್ಧಗೊಳಿಸಲು ಹೆಚ್ಚು ಕಾಳ ಬೇಕಾಗುವುದಿಲ್ಲ. ನೆಲವನ್ನು ಹೆಚ್ಚುಕಾಲ ಬೀಳು ಬಿಡಬೇಕಾಗುವುದಿಲ್ಲ.

ಜನಸಂಪಾದಿಸಿ

ಪೂರ್ವ ಇಂಡೊನೇಷ್ಯದ ಇತರ ದ್ವೀಪಗಳಂತೆ ಇಲ್ಲಿಯ ಜನರೂ ಮಿತ್ರ ಬುಡಕಟ್ಟುಗಳವರು. ಇಲ್ಲಿಯ ಆದಿವಾಸಿಗಳು ಮೂಲತಃ ಮಲೇಷ್ಯನರು. ಆಸ್ಟ್ರಲಾಯ್ಡ್ ಅಂಶಗಳನ್ನೂ ಕಾಣಬಹುದು. ಇವರು ಮೊದಲು ಮೈದಾನಗಳಲ್ಲಿ ಹರಡಿದ್ದರು. ಇಂಡೊನೇಷ್ಯನ್-ಮಲಯ ಜನಾಂಗಗಳು ಇತರ ಇಲ್ಲಿಗೆ ಬಂದಾಗ ಇವರು ಪರ್ವತಪ್ರದೇಶಗಳಿಗೆ ಸರಿದರು. ಇಲ್ಲಿ ಚೀನೀ ಮತ್ತು ಏಷ್ಯನ್ ದೇಶಗಳ ಜನರೂ ಅಲ್ಪಸಂಖ್ಯೆಗಳಲ್ಲಿದ್ದಾರೆ. ಇಲ್ಲಿಯ ಜನ ಬಹುತೇಕ ಸ್ಥಳೀಯ ಧರ್ಮಗಳನ್ನನುಸರಿಸುತ್ತಾರೆ. ಮುಸ್ಲಿಮರೂ ಕ್ರೈಸ್ತರೂ ಉಂಟು.

ಇತಿಹಾಸಸಂಪಾದಿಸಿ

ಇಲ್ಲಿಗೆ ಬಂದ ಐರೋಪ್ಯರಲ್ಲಿ ಪೋರ್ಚುಗೀರಸೇ ಮೊದಲಿಗರು. ಇವರು 1520ರ ಸುಮಾರಿಗೆ ಇಲ್ಲಿಗೆ ಬಂದರು. ವ್ಯಾಪಾರಿಗಳಾಗಿ ಬಂದ ಇವರನ್ನು ಆಕರ್ಷಿಸಿದ ಪದಾರ್ಥ ಗಂಧದ ಮರ. ಅನಂತರ ಇವರು ಇಲ್ಲಿ ನೆಲಸಿ ಅನೇಕ ಕಡೆಗಳಲ್ಲಿ ಕೋಠಿಗಳನ್ನು ಸ್ಥಾಪಿಸಿದರು. 1613ರ ಅನಂತರ ಇಲ್ಲಿಗೆ ಬಂದವರು ಡಚ್ಚರು. ಇವರು ಟೀಮಾರಿನ ನೈಋತ್ಯ ತುದಿಯಾದ ಕೂಪಾಂಗಿನಲ್ಲಿ ನೆಲೆಯೂರಿ ಪೋರ್ಚುಗೀಸರನ್ನು ಉತ್ತರಕ್ಕೂ ಪೂರ್ವಕ್ಕೂ ಒತ್ತರಿಸಿದರು. 1859ರಲ್ಲಿ ಡಚ್ಚರಿಗೂ ಪೋರ್ಚುಗೀಸರಿಗೂ ಆದ ಒಪ್ಪಂದದ ಪ್ರಕಾರ ಇವರಲ್ಲಿ ದ್ವೀಪದ ಹಂಚಿಕೆಯಾಯಿತು. 1904ರಲ್ಲಿ ಈ ಗಡಿಯಲ್ಲಿ ಸ್ವಲ್ಪ ಮಾರ್ಪಾಡುಗಳಾದುವು. 1949ರಲ್ಲಿ ಡಚ್ಚರು ತಮ್ಮ ಅಧೀನದಲ್ಲಿದ್ದ ದ್ವೀಪಭಾಗವನ್ನು ಇಂಡೊನೇಷ್ಯ ಗಣರಾಜ್ಯಕ್ಕೆ ವಹಿಸಿಕೊಟ್ಟರು. ಪೂರ್ವ ಟೀಮಾರಿನ ಜನರು ಪೋರ್ಚುಗೀಸ್ ಆಡಳಿತದಿಂದ ಸ್ವತಂತ್ರರಾಗಲು ಬಂಡಾಯ ಹೂಡಿದ್ದಾರೆ.

ಆರ್ಥಿಕತೆಸಂಪಾದಿಸಿ

ಟೀಮಾರಿನ ಜನರ ಮುಖ್ಯ ಕಸುಬು ಬೇಸಾಯ. ಬೆಂಕಿ ಹಚ್ಚಿ ಕಾಡು ಸುಟ್ಟು ಮಾಡುವ ಸರದಿ ಬೇಸಾಯಕ್ರಮ ವಿಶೇಷವಾಗಿ ಜಾರಿಯಲ್ಲಿದೆ. ಎಲ್ಲರಿಗೂ ಸಾಕಾಗುವಷ್ಟು ನೆಲವಿಲ್ಲವಾದ್ದರಿಂದ ಆಗಾಗ್ಗೆ ನಡೆಯುವ ಕದನಗಳಿಂದಲೂ ಕ್ಷಾಮಗಳಿಂದಲೂ ಜನಸಂಖ್ಯೆ ಬಹಳ ಕ್ಷೀಣಿಸಿದೆ. ಜಮೀನಿನ ನಗ್ನೀಕರಣವನ್ನು ತಡೆಗಟ್ಟಲು ಈಚೆಗೆ ಪುನರರಣ್ಯೀಕರಣ ಕಾರ್ಯ ಕ್ರಮವನ್ನು ಜಾರಿಗೆ ತರಲಾಗಿದೆ. ದ್ವೀಪದ ಮುಖ್ಯ ಬೆಳೆಗಳು ಬತ್ತ, ಮುಸುಕಿನ ಜೋಳ, ಗೆಣಸು, ಇಲ್ಲಿ ಹಂದಿ, ಆಡು, ಕುದುರೆ, ಕೋಳಿ, ಎಮ್ಮೆಗಳನ್ನು ಸಾಕುತ್ತಾರೆ. ಹತ್ತಿಬಟ್ಟೆಯ ನೆಯ್ಗೆ, ಬುಟ್ಟಿ ಹೆಣಿಕೆ-ಇವು ಮುಖ್ಯ ಕೈಕಸಬುಗಳು, ಪೋರ್ಚುಗೀಸ್ ಟೀಮಾರಿನಿಂದ ಕಾಫಿ, ಗಂಧದ ಮರ, ಕೊಬ್ಬರಿ, ಮರಗೆಣಸು, ಮುಸುಕಿನ ಬೋಳ, ರಬ್ಬರ್ ಮತ್ತು ಮೇಣ ನಿರ್ಯಾತವಾಗುತ್ತವೆ. ಆಯಾತಗಳು ಜವಳಿ, ಸಿಮೆಂಟ್, ವಾಹನಗಳು, ಗೋದಿ, ಪೆಟ್ರೋಲ್ ಮುಂತಾದವು. ದಿಲೀಯಿಂದ ಒಳನಾಡಿಗೆ ಒಳ್ಳೆಯ ರಸ್ತೆಗಳಿವೆ. ಇಂಡೊನೇಷ್ಯನ್ ಟೀಮಾರ್ ಬಲು ಹಿಂದುಳಿದಿದೆ. ಡಚ್ಚರು ಆಡಳಿತದಲ್ಲಿ ಅದು ಬಹುಮಟ್ಟಿಗೆ ಹಿಂದೆಬಿತ್ತು. ಕೂಪಾಂಗ್ ನಿಂದ ಪೂರ್ವಕ್ಕೆ ಕೆಲವು ಒಳ್ಳೆಯ ರಸ್ತೆಗಳುಂಟು. ಅಲ್ಲಿ ಒಂದು ವಿಮಾನ ನಿಲ್ದಾಣವಿದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟೀಮಾರ್&oldid=1084613" ಇಂದ ಪಡೆಯಲ್ಪಟ್ಟಿದೆ