ಟಿಟ್ - ಬಿಟ್ಸ್ - ಇದು ಬ್ರಿಟನ್ನಿನ ಒಂದು ಜನಪ್ರಿಯ ವಾರಪತ್ರಿಕೆ. ಒಂದು ಪೆನಿ ಬೆಲೆಯ 16 ಪುಟಗಳು ಈ ಪತ್ರಿಕೆ 1881ರ ಅಕ್ಟೋಬರ್ 20ರಂದು ಮ್ಯಾಂಚೆಸ್ಟರ್‍ನಲ್ಲಿ ಹೊರಬಿದ್ದಾಗ ಇದರ ಹೆಸರು ಟಿಟ್-ಬಿಟ್ಸ್ ಫ್ರಮ್ ಆಲ್ ದಿ ಮೋಸ್ಟ್ ಇನ್‍ಟರೆಸ್ಟಿಂಗ್ ಬುಕ್ಸ್, ಪೀರಿಯಾಡಿಕಲ್ಸ್ ಅಂಡ್ ನ್ಯೂಸ್ ಪೇಪರ್ಸ್ ಆಫ್ ದಿ ವಲ್ರ್ಡ್, ಎಂದು.

ಇತಿಹಾಸ ಬದಲಾಯಿಸಿ

ಪತ್ರಿಕೆಯ ಸ್ಥಾಪಕ ಜಾರ್ಜ್ ನ್ಯೂನೆಸ್ (1851-1910) ವ್ಯವಹಾರಚತುರ, ವ್ಯಾಪಾರೀ ಸಂಸ್ಥೆಯೊಂದರ ಪ್ರತಿನಿಧಿ. ಒಂದು ಸಂಜೆ ಪತ್ರಿಕೆ ಓದುತ್ತ, ಅದರಲ್ಲಿದ್ದ ಸುದ್ದಿ-ತುಣುಕೊಂದರತ್ತ ಪತ್ನಿಯ ಗಮನ ಸೆಳೆದ. ಸುದ್ದಿಯಲ್ಲಿದ್ದ ಅಸಹಜತೆಯ ಅಂಶ ಅವನಿಗೆ ಮೆಚ್ಚುಗೆಯಾಯಿತು. ಸುದ್ದಿ-ತುಣುಕಿಗೆ ಟಿಟ್-ಬಿಟ್ ಎಂದು ಕರೆದ. ಆಸಕ್ತಿ ಕೆರಳಿಸುವ ಇಂಥ ಸುದ್ದಿ-ತುಣುಕುಗಳನ್ನು ಒಳಗೊಂಡ ಪತ್ರಿಕೆಯೊಂದನ್ನು ಹೊರಡಿಸಲು ಯೋಚಿಸಿದ.

ಆದರೆ ಅಗತ್ಯ ಹಣಶೇಖರಿಸಬೇಕಿತ್ತು. ಆಗ ಮ್ಯಾಂಚೆಸ್ಟರ್‍ನಲ್ಲಿ ಸಸ್ಯಾಹಾರೀ ಫಲಾಹಾರ ಮಂದಿರಗಳು ಜನರನ್ನು ಆಕರ್ಷಿಸಿದ್ದುವು. ಅಂಥ ಒಂದನ್ನು ಜಾರ್ಜ್ ನ್ಯೂನ್ಸ್ ತೆರೆದರು. ಸಾಕಷ್ಟು ಹಣ ಸಂಪಾದನೆಯಾಯಿತು. ಟಿಟ್-ಬಿಟ್ಸ್ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿ ಫಲಾಹಾರ ಮಂದಿರದ ಉದ್ಯಮವನ್ನು ಬಿಟ್ಟ. ಪುಸ್ತಕಗಳು, ನಿಯತ ಕಾಲಿಕೆಗಳು ಮತ್ತು ಪತ್ರಿಕೆಗಳಿಂದ ಆಯ್ದ ತುಣುಕುಗಳಿದ್ದ ಟಿಟ್-ಬಿಟ್ಸ್ ಮೊದಲ ಸಂಚಿಕೆಯಲ್ಲಿ ಜಾಹೀರಾತುಗಳು ಇರಲಿಲ್ಲ. ಸ್ವಲ್ಪ ಕಾಲದ ಅನಂತರ ಅದು ಜಾಹೀರಾತುಗಳನ್ನು ಸ್ವೀಕರಿಸತೊಡಗಿತು. ಈ ಉದ್ದೇಶಕ್ಕಾಗಿ ನ್ಯೂನೆಸ್ ನಿಯತಕಾಲಿಕೆಗೆ ಹಸಿರು ಹೂದಿಕೆ ತೊಡಿಸಿದ. ಅನತಿಸಮಯದಲ್ಲೇ ಪತ್ರಿಕೆ ಅತ್ಯಂತ ಜನಪ್ರಿಯವಾಯಿತು. ಮೂರು ವರ್ಷಗಳ ನಂತರ ಪ್ರಕಟಣ ಕಚೇರಿ ಲಂಡನಿಗೆ ವರ್ಗವಾಯಿತು. ಅತ್ಯಾಕರ್ಷಕ ಜಾಹೀರಾತುಗಳೂ ಪ್ರಸಾರ ಹೆಚ್ಚಿಸುವ ಹೊಸ ತಂತ್ರಗಳೂ ಓದುಗರನ್ನು ಟಿಟ್-ಬಿಟ್ಸ್‍ನತ್ತ ಸೆಳೆದುವು. ರೈಲ್ವೆ ಅಪಘಾತಗಳ ವಿರುದ್ಧ ನೂರು ಪೌಂಡುಗಳ ಉಚಿತ ವಿಮೆ ನೀಡುವ ಪತ್ರಿಕೆಯ ಯೋಜನೆ ಅದರ ಪ್ರಸಾರವನ್ನು ಏಳು ಲಕ್ಷಕ್ಕೆ ಏರಿಸಿತು. ಮೊದಮೊದಲು ಇತರ ಪ್ರಕಟನೆಗಳಿಂದ ತುಣುಕುಗಳನ್ನು ಪ್ರಕಟಿಸುತ್ತಿದ್ದ ನಿಯತಕಾಲಿಕೆ ಕ್ರಮೇಣ ಸ್ವಂತಿಕೆಯತ್ತ ಗಮನ ಹರಿಸಿತು. ನವ ಪತ್ರಿಕೋದ್ಯಮದ ನೇತಾರ ಆಲ್ ಫ್ರೆಡ್ ಹಾಮ್ರ್ಸ್‍ವರ್ತ್ (ಲಾರ್ಡ್ ನಾರ್ತ್‍ಕ್ಲಿಫ್) (1865-1922) ಟಿಟ್-ಬಿಟ್ಸ್‍ಗೆ ತನ್ನ ಲೇಖನಗಳನ್ನು ನೀಡುತ್ತಿದ್ದ. ಜಾರ್ಜ್ ನ್ಯೂನೆಸ್ ಹಿಡಿದ ಹಾದಿ ಆಲ್ ಫ್ರೆಡ್ ಹಾಮ್ರ್ಸ್‍ವರ್ತ್ ಮೇಲೆ ಅಚ್ಚಳಿಯದ ಪ್ರಭಾವ ಬೀರಿತು. ಆದರೂ ಟಿಟ್ ಬಿಟ್ಸ್ ನಂತಹದೆ ಪತ್ರಿಕೆ ಆರಂಭಿಸಿದರು. ಪತ್ರಿಕೆಯ ಹೆಸರು `ಆನ್ಸರ್ಸ್ ಟು ಕರೆಸ್ಪಾಂಡೆಂಟ್ಸ್. ಟಿಟ್ ಬಿಟ್‍ನಲ್ಲಿ ಕೆಲಸ ಮಾಡುತ್ತಿದ್ದ ಆರ್ಥರ್ ಪಿಯರ್‍ಸನ್ ಕೂಡ `ಪಿಯರ್‍ಸನ್ಸ್ ವೀಕ್ಷಿ ಅಂಡ್ ಹೋಮ್‍ನೋಟ್ಸ್ ಎಂಬ ಪತ್ರಿಕೆ ಪ್ರಕಟಿಸಿದ. ಜನಪ್ರಿಯ ಪತ್ರಿಕೋದ್ಯಮ ಕ್ರಾಂತಿಗೆ ಟಿಟ್-ಬಿಟ್ಸ್ ಪತ್ರಿಕೆಯೂ ಕಾರಣ.