ಟಿಂಡಲ್ ಪರಿಣಾಮ - ವಿಚ್ಛಿನ್ನತೆಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯ ಮೂಲಕ ಬೆಳಕಿನ ದೂಲವೊಂದು ಸಾಗಿದಂತೆ ಅದರ ಪಥದ ಉದ್ದಕ್ಕೂ ಕಾಣುವ ಬೆಳಕಿನ ಚದರಿಕೆ (ಟಿಂಡಾಲ್ ಎಫೆಕ್ಟ್).

ನೀರಿನಲ್ಲಿನ ಹಿಟ್ಟು ನೀಲಿ ಬಣ್ಣದ್ದಾಗಿ ಕಾಣಿಸುತ್ತದೆ. ಏಕೆಂದರೆ ನೀರಿನಲ್ಲಿ ತೇಲುವ ಹಿಟ್ಟಿನ ಕಣಗಳು ಕೆಂಪು ಬೆಳಕಿಗಿಂತ ನೀಲಿ ಬಣ್ಣವನ್ನು ಹೆಚ್ಚು ಚದುರಿಸುವುದರಿಂದ, ಆ ನೀಲಿ ಬಣ್ಣವು ನೋಡುಗನನ್ನು ತಲುಪುತ್ತದೆ.

ದೂಲದ ದೀಪ್ತಿಶೀಲ ಪಥಕ್ಕೆ ಟಿಂಡಾಲ್ ಶಂಕು ಎಂದು ಹೆಸರು (ಸ್ಟಾರ್ಚ್ ದ್ರಾವಣ). ಈ ಪರಿಣಾಮವನ್ನು ಮೈಕಲ್ ಫ್ಯಾರಡೆ ಮೊದಲಿಗೆ ವಿವರಿಸಿದ್ದ (1857). ಆದರೆ ಇದನ್ನು ಮೊತ್ತಮೊದಲಿಗೆ ಸವಿಸ್ತಾರವಾಗಿ ಪರಿಶೋಧಿಸಿದ ಟಿಂಡಾಲನ ಹೆಸರೇ ಇದಕ್ಕೆ ಬಂದಿದೆ. ಸಮಸಾಂದ್ರತೆಯ ತರಲಗಳ ಮೂಲಕ ಹಾಯಿಸಿದ ಬೆಳಕಿನ ದೂಲದ ಪಥ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಆದರೆ ಕಲಿಲ ಇಲ್ಲವೆ ಅದಕ್ಕಿಂತ ದೊಡ್ಡದಾದ ಕಣಗಳನ್ನು ತರಲಗಳಿಗೆ ಬೆರೆಸಿದರೆ ಆಗ ದೂಲದ ಪಥ ಸ್ಪಷ್ಟ ಕಾಣುತ್ತದೆ. ವಿಕ್ಷೇಪಲಾಂದ್ರದ (ಪ್ರೊಜೆಕ್ಷನ್ ಲ್ಯಾಂಟರ್ನ್) ನೆರವಿನಿಂದ ತೆರೆಯ ಮೇಲೆ ಬೀಳುವ ಬೆಳಕಿನ ಪಥವಾಯುವಿನಲ್ಲಿರುವ ನಿಲಂಬಿತ ದೂಳು ಮತ್ತು ಹೊಗೆ ಕಣಗಳಿಂದ ದೃಗ್ಗೋಚರವಾಗುವುದು ಟೆಂಡಾಲ್ ಪರಿಣಾಮದ ಸಾಮಾನ್ಯ ಪರಿಚಿತ ಪ್ರದರ್ಶನ. ನಿಲಂಬಿತ (ಸಸ್ಪೆಂಡೆಡ್) ಕಣಗಳನ್ನು ಘಾತಿಸುವ ಬೆಳಕು ಎಲ್ಲ ದಿಶೆಗಳಿಗೂ ಚದರಿಸಲ್ಪಡುವುದು; ಮತ್ತು ಸಮತಲ ಧ್ರುವೀಕರಣಕ್ಕೆ ಈಡಾಗುವುದು. ಅಂದರೆ ಆಂದೋಳನ ಒಂದೇ ಅಕ್ಷದಲ್ಲಿ ನಡೆಯುವುದು. ಈ ಅಕ್ಷ ಬೆಳಕಿನ ದೂಲಕ್ಕೆ ಲಂಬವಾಗಿದೆ. ಮಾಧ್ಯಮದಲ್ಲಿ ತೋರುವ ದೂಲದ ಪ್ರಕಾಶಮಯ ಪಥಕ್ಕೆ, ಈ ಹಿಂದೆ ಹೇಳಿದಂತೆ, ಟಿಂಡಾಲ್ ಶಂಕು ಎಂದು ಹೆಸರು.

ವಿಶ್ಲೇಷಣೆ

ಬದಲಾಯಿಸಿ

ಪತನ ದೂಲ ಒಂದು ಮಾಧ್ಯಮವನ್ನು ಹಾದುಹೋಗುತ್ತಿರುವಾಗ, ಆ ಮಾಧ್ಯಮಕ್ಕಿಂತ ಭಿನ್ನವಾದ ರಿಫ್ರೇಕ್ಷಣಾಂಕಗಳಿರುವ ಪ್ರಾಂತವನ್ನು ನಿರಂತರವಾಗಿ ಸಂಧಿಸುವುದು. ಈ ಪ್ರಾಂತಗಳೇ ನಿಲಂಬಿತ ಕಣಗಳು. ಆದ್ದರಿಂದ ಪತನದಂಡ ನಮನಗೊಂಡು (ಡಿಫ್ರ್ಯಾಕ್ಷನ್) ತೀವ್ರತೆಯನ್ನು ಕಳೆದುಕೊಳ್ಳುವುದು. ಈ ವಿನಷ್ಟತೀವ್ರತೆ ಮೂಲದೂಲದ ಪ್ರೇಷಿತ ಬಿಂದುವಿನಿಂದ ವಿವಿಧ ಕೋನಗಳಲ್ಲಿ ಕಾಣಬರುವುದು. ಚದರಿದ ಬೆಳಕಿನ ತೀವ್ರತೆ (ಇನ್‍ಟೆನ್ಸಿಟಿ) ಕಣದ ಗಾತ್ರ, ರಿಫ್ರೇಕ್ಷಣಾಂಕ ಮತ್ತು ಕೋನಗಳ ಮೇಲೆ ಸಂಕೀರ್ಣವಾಗಿ ಅವಲಂಬಿಸಿದೆ. 1899ರಲ್ಲಿ ರೇಲೇ ಎಂಬ ವಿಜ್ಞಾನಿ ಚದರಿಕೆಯನ್ನು ಕುರಿತು ಸೈದ್ಧಾಂತಿಕ ಸಂಶೋಧನೆ ನಡೆಸಿ, ಚಿಕ್ಕ ಸಮದೈಶಿಕ (ಐಸೊಟ್ರಾಪಿಕ್, ಅಂದರೆ ಎಲ್ಲ ದಿಶೆಗಳಲ್ಲೂ ಒಂದೇ ಗುಣಗಳಿರುವ) ಕಣಗಳಿಂದ ಚದರಿಸಲ್ಪಟ್ಟಿ ಬೆಳಕಿನ ತೀವ್ರತೆಯು ಉಪಯೋಗಿಸಿದ ಬೆಳಕಿನ ಅಲೆಯುದ್ದದ ನಾಲ್ಕನೆಯ ಘಾತಕ್ಕೆ ವ್ಯುತ್ಕ್ರಮಾನುಪಾತದಲ್ಲಿದೆ ಎಂದು ತೋರಿಸಿದ. ಆದ್ದರಿಂದ ನೀಲ ಬಣ್ಣದ ಬೆಳಕು ಕೆಲವು ಬಣ್ಣಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಚದರಿಸಲ್ಪಡುವುದು. ಅಲ್ಲದೆ ನಿಲಂಬಿತ ಕಣಗಳ ಮೂಲಕ ಹಾದು ಬಂದ ಬೆಳಕು ಬಣ್ಣದ್ದಾಗಿದೆ. ಕಣಗಳ ಗಾತ್ರ ದೊಡ್ಡದಾದಂತೆ ಚದರಿಸಲ್ಪಟ್ಟ ಬೆಳಕಿನ ನೀಲಿ ಬಣ್ಣ ಅದೃಶ್ಯವಾಗಿ ಬಿಳಿಬಣ್ಣ ಕಾಣುವುದು. ಹೀಗೆ ಚದರಿಕೆಗೊಂಡ ಬೆಳಕನ್ನು, ಆ ಊಧ್ರ್ವವಾಗಿ ಧ್ರುವೀಕರಿಸಲ್ಪಟ್ಟ ಬೆಳಕನ್ನು ನಿರ್ಮೂಲಗೊಳಿಸುವಂತೆ ಹಿಡಿದ ನಿಕಾಲ್ ಅಶ್ರಗದ (ಪ್ರಿಸಮ್) ಮೂಲಕ ಹಾಯಿಸಿ ನೋಡಿದಾಗ ಹೆಚ್ಚಿನ ತೀವ್ರತೆಯಿಂದ ನೀಲಿ ವರ್ಣ ಕಾಣಬರುವುದು. ಇದಕ್ಕೆ ಶೇಷ ನೀಲಿ ಎಂದು ಹೆಸರು. ಇದರ ತೀವ್ರತೆ ಅಲೆಯುದ್ದದ ಎಂಟನೆಯ ಘಾತಕ್ಕೆ ವ್ಯುತ್ಕ್ರಮಾನುಪಾತದಲ್ಲಿದೆ. ಕಲಿಲ ಮಾಧ್ಯಮದಲ್ಲಿ ಟಿಂಡಾಲ್ ಶಂಕುವಿನ ಉಜ್ಜ್ವಲತೆ ಕಣ ಮತ್ತು ಮಾಧ್ಯಮಗಳ ರಿಫ್ರೇಕ್ಷಣಾಂಕಗಳ ಅಂತರವನ್ನು ನೇರವಾಗಿ ಅವಲಂಬಿಸಿದೆ. ಬಂಗಾರದ ಜಲೀಯ ದ್ರಾವಣದಲ್ಲಿ ರಿಫ್ರೇಕ್ಷಣಾಂಕದ ಅಂತರ ಬಲು ಹೆಚ್ಚಾಗಿರುವುದರಿಂದ ತೀವ್ರ ಟಿಂಡಾಲ್ ಶಂಕುವನ್ನು ವೀಕ್ಷಿಸಬಹುದು.

ಟೆಂಡಾಲ್ ಪರಿಣಾಮ ಮತ್ತು ಸ್ಫುರದೀಪ್ತಿ (ಫಾಸ್ಫರೆಸೆನ್ಸ್)

ಬದಲಾಯಿಸಿ

ಟೆಂಡಾಲ್ ಪರಿಣಾಮ ಸ್ಫುರದೀಪ್ತಿಗಿಂತ ಭಿನ್ನವಾಗಿದೆ. ಸ್ಫುರದೀಪ್ತಿಯಲ್ಲಿ ಚದರಿಕೆಗೊಂಡ ಬೆಳಕು ಧ್ರುವೀಕರಿಸಲ್ಪಟ್ಟಿರುವುದಿಲ್ಲ. ಅಲ್ಲದೆ ಯಾವೊಂದು ವಿಧದಲ್ಲೂ ಸ್ಫುರದೀಪ್ತಿಯ ಬೆಳಕು ಕಣಗಳ ಗಾತ್ರವನ್ನು ಅವಲಂಬಿಸಿರುವುದಿಲ್ಲ. ದೃಗ್ಗೋಚರ ಹ್ರಸ್ವ ಅಲೆಯುದ್ದವಿರುವ ಅಲೆಯನ್ನು ಪಡೆದು, ಅದನ್ನು ದೀರ್ಘ ಅಲೆಯುದ್ಧವಿರುವ ದೃಗ್ಗೋಚರ ಬೆಳಕಿನ ಅಲೆಯನ್ನಾಗಿ ಪರಿವರ್ತಿಸಬಲ್ಲ ವಸ್ತುಗಳು ದ್ರಾವಣದಲ್ಲಿ ಇರಬಹುದಾದ್ದರಿಂದ ಸ್ಫುರದೀಪ್ತಿ ಮಿಥ್ಯಾ ಟಿಂಡಾರ್ ಪರಿಣಾಮವನ್ನು ನೀಡಬಹುದು, ಅಷ್ಟೆ.

ಉನ್ನತವರ್ಗ ಟಿಂಡಾಲ್ ರೋಹಿತ

ಬದಲಾಯಿಸಿ

ಹೈಡ್ರೊಜನ್ ಸಲ್ಫೈಡನ್ನು (H2S ) ಸಲ್ಫರ ಡೈಆಕ್ಸೈಡ್ (S2O) ದ್ರಾವಣದಲ್ಲಿ ಬುದ್ಬುದೀಕರಿಸಿ ತಯಾರಿಸಿದ ಸ್ಥಿರ ಸಲ್ಫರ್ ಸೊಲ್‍ನಂಥ (ದ್ರವದಲ್ಲಿ ಘನವಸ್ತುವಿನ ಕಣಗಳ ಕಲಿಲ) ಲಾಮರ್ ಸೊಲ್‍ಗಳು ಕಲಿಲ ದ್ರಾವಣಗಳು. ಈ ಕಣಗಳ ತ್ರಿಜ್ಯ (0.2( ) ನಿಂದ (0.8()ವರೆಗಿದೆ. ಈ ಸಂದರ್ಭಗಳಲ್ಲಿ ಬೆಳಕಿನ ಚದರಿಕೆಯನ್ನು ಸಾಮಾನ್ಯ ಸೂತ್ರಗಳಿಂದ ನಿರೂಪಿಸಲಾಗುವುದಿಲ್ಲ. ಕಣದ ಪ್ರತಿಯೊಂದು ಚಿಕ್ಕವಿಭಾಗವೂ ಚದರಿಕೆಯ ಕೇಂದ್ರವಾಗುವುದು ಮತ್ತು ಕಣದ ಒಂದು ಭಾಗದಿಂದ ಚದರಿಕೆಗೊಂಡ ಬೆಳಕು ಇನ್ನೊಂದು ಭಾಗದಿಂದ ಚದರಿಸಲ್ಪಟ್ಟ ಬೆಳಕಿನೊಡನೆ ವ್ಯತಿಕರಣಗೊಳ್ಳಬಹುದು. ಒಂದು ಕಿರಣದಂಡವನ್ನು ಅಂಥ ಸೊಲ್‍ಗಳ ಮೂಲಕ ಹಾಯಿಸಿ ಬೇರೆ ಬೇರೆ ಕೋನಗಳಲ್ಲಿ ವೀಕ್ಷಿಸಿದಾಗ ಬೆಳಕಿನ ಪ್ರತಿಯೊಂದು ಅಲೆಯುದ್ದಕ್ಕೆ ಒಂದು ನಿರ್ದಿಷ್ಟ ರಚನಾತ್ಮಕ ವ್ಯತಿಕರಣ (ಪ್ರಬಲ ದೃಗ್ಗೋಚರ ಚದರಿಕೆ) ಮತ್ತು ವಿನಾಶಕ ವ್ಯತಿಕರಣದ (ದುರ್ಬಲ ದೃಗ್ಗೋಚರ ಚದರಿಕೆ) ಪ್ರರೂಪವನ್ನು ಪಡೆಯಬಹುದು. ಗರಿಷ್ಠ ಮತ್ತು ಕನಿಷ್ಠಗಳ ಸ್ಥಾನವು ಕಣಗಳ ಗಾತ್ರ, ಕೋನ, ಬೆಳಕಿನ ಅಲೆಯುದ್ದ ಮತ್ತು ಕಣ ಮತ್ತು ದ್ರವದ ರಿಫ್ರೇಕ್ಷಣಾಂಕವನ್ನು ಅವಲಂಬಿಸಿದೆ. ಏಕವರ್ಣೀ ಬೆಳಕನ್ನು ಉಪಯೋಗಿಸಿದಾಗ ಗರಿಷ್ಠ ಮತ್ತು ಕನಿಷ್ಠಗಳ ಮಾತ್ರ ಕಾಣುವುದು. ಆದರೆ ಬಿಳಿ ಬೆಳಕಿನಿಂದ ದ್ರಾವಣವನ್ನು ಪ್ರಕಾಶಿಸಿದಾಗ ಚದರಿಕೆಗೊಂಡ ದಂಡದಲ್ಲಿ ಕೆಂಪು ಮತ್ತು ಹಸಿರು ಬೆಳಕು ಪರ್ಯಾಯವಾಗಿ ಕಾಣುವುವು. ಹೀಗೆ ಕ್ರಮಾಗತವಾಗಿ ಬರುವ ವರ್ಣಮಯ ಪಟ್ಟಿಗಳ ಶ್ರೇಣಿಗೆ ಉನ್ನತವರ್ಗ ಟಿಂಡಾಲ್ ರೋಹಿತ ಎಂದು ಹೆಸರು.

ಪ್ರಕೃತಿ ಮತ್ತು ಟಿಂಡಾಲ್ ಪರಿಣಾಮ

ಬದಲಾಯಿಸಿ

ಟಿಂಡಾಲ್ ಪರಿಣಾಮದಿಂದ ಹಲವಾರು ನೈಸರ್ಗಿಕ ವಿದ್ಯಮಾನಗಳು ಕಾಣಬರುವುವು. ವಾಯುವಂಡಲದಲ್ಲಿ ದೂಳು ಹಾಗೂ ಧೂಮಕಣಗಳು ಜಾಸ್ತಿ ಆದಾಗ ಟಿಂಡಾಲ್ ಪರಿಣಾಮದಿಂದ ಆಕಾಶದ ನೀಲವರ್ಣ ವರ್ಧನೆಗೊಳ್ಳುವುದು. ಅಲ್ಲದೆ ವಾಯುಮಂಡಲದ ಮೂಲಕ ಹೆಚ್ಚುದೂರ ಹಾಡು ಹೋಗುವ ಬೆಳಕಿನಿಂದ ನೀಲಿ ಮತ್ತು ನೇರಿಳೆ ಕಿರಣಗಳು ಟಿಂಡಾರ್ ಪರಿಣಾಮದಿಂದ ಕಿತ್ತು ತೆಗೆಯಲ್ಪಡುವುದರಿಂದ ಉಳಿದ ಬೆಳಕಿ ಕೆಂಪು ಅಥವಾ ಹಳದಿ ಬಣ್ಣದ್ದಾಗಿರುವುದು. ಈ ಕಾರಣದಿಂದಲೇ ಸುರ್ಯೋದಯ ಮತ್ತು ಸೂರ್ಯಾಸ್ತ ಕಾಲಗಳಲ್ಲಿ ಮೋಡಗಳು ವರ್ಣಮಯವಾಗಿ ತೋರುತ್ತವೆ. ಅಲ್ಲದೆ ಹಿಮಮಯ ಪರ್ವತಗಳು ಚೆಲುವಾದ ವರ್ಣಛಾಯೆಯನ್ನು ಪಡೆಯುತ್ತವೆ. ದೂರದ ಇಬ್ಬನಿ ಮತ್ತು ಕಾಡಿನ ಬೆಂಕಿಯ ಹೊಗೆಗಳ ನೀಲಿವರ್ಣಛಾಯೆ ಹೊಗೆಸೊಪ್ಪಿನ ಹೊಗೆಯ ನೀಲಿವರ್ಣ ಇವು ಟಿಂಡಾಲ್ ಪರಿಣಾಮಕ್ಕೆ ಇನ್ನೂ ಕೆಲವು ಉದಾಹರಣೆಗಳು.

ಉಪಯೋಗಗಳು

ಬದಲಾಯಿಸಿ

ಕಲಿಲ ಕಣಗಳಿಂದ ಪಡೆವ ಟಿಂಡಾಲ್ ಚದರಿಕೆ ಹಲವಾರು ಕ್ಷೇತ್ರಗಳಲ್ಲಿ ಉಪಯುಕ್ತವಾದ ಒಂದು ಮುಖ್ಯ ವಿಶ್ಲೇಷಕ ಸಾಧನ. ಊದಾಹರಣೆಗಾಗಿ ಕಣಗಳ ಗಾತ್ರ ಹಾಗೂ ಅಣುತೂಕಗಳನ್ನು ನಿರ್ಧರಿಸಲು ಟಿಂಡಾಲ್ ಪರಿಣಾಮ ಉಪಯುಕ್ತ. ಅಂತರನಾಕ್ಷತ್ರಿಕ ಧೂಳು ಅದರ ಮೂಲಕ ಸಾಗುವ ನಕ್ಷತ್ರ ಬೆಳಕನ್ನು ಚದರಿಸುವುದು ಹೀಗೆ. ಚದರಿಕೆಗೊಂಡ ಬೆಳಕಿನ ತೀವ್ರತೆ ಶೋಧಿಸಲು ಅಸಾಧ್ಯವಾದಷ್ಟು ಕಡಿಮೆ ಇದ್ದರೂ ಪ್ರೇಷಿತ ದೂಲವು ಧೂಳಿನ ಗುಣಗಳು, ಮತ್ತು ಬೆಳಕು ಹಾಸು ಬಂದ ಧೂಳಿನ ಪರಿಣಾಮಗಳ ಕುರಿತಾದ ಮಾಹಿತಿಯನ್ನು ನೀಡಬಲ್ಲದು.

ಅತಿಸೂಕ್ಷ್ಮದರ್ಶಕವು ಟಿಂಡಾಲ್ ಪರಿಣಾಮದ ತತ್ತ್ವದ ಮೇಲೆ ಕಾರ್ಯ ನಡೆಸುವ ಉಪಕರಣಗಳ ಪೈಕಿ ಒಂದು. ಇದರಲ್ಲಿ ಅತಿತೀವ್ರ ದೂಲವೊಂದನ್ನು ಕಲಿಲ ದ್ರಾವಣದೊಳಗೆ ನಾಭಿಸಲಾಗುವುದು. ದ್ರಾವಣದ ಈ ವಲಯವನ್ನು ತನ್ನ ಅಕ್ಷವು ಕಿರಣದೂಲಕ್ಕೆ ಲಂಬವಿರುವ ಸೂಕ್ಷ್ಮ ದರ್ಶಕದಿಂದ ವೀಕ್ಷಿಸಲಾಗುವುದು. ಕಣಗಳಿಗೆ ಮಾಧ್ಯಮಕ್ಕಿಂತ ಭಿನ್ನವಾದ ರಿಫ್ರೇಕ್ಷಣಾಂಕ ಇದ್ದರೆ ಅವು ಸೂಕ್ಷ್ಮದರ್ಶಕದ ವಿಘಟನಸಾಮಥ್ರ್ಯಕ್ಕಿಂತಲೂ ಚಿಕ್ಕವಾಗಿದ್ದರೂ ಬೆಳಕಿನ ಚುಕ್ಕಿಗಳಂತೆ ಕಾಣಲು ಸಾಧ್ಯ ಉಂಟು. ಬೆಳಕಿನ ಚುಕ್ಕಿಗಳಷ್ಟೆ ಕಾಣುವುದರಿಂದ ಕಣಗಳ ಆಕಾರವನ್ನು ಅತಿಸೂಕ್ಷ್ಮದರ್ಶಕದಿಂದ ನಿರ್ಧರಿಸಲು ಸಾಧ್ಯವಿಲ್ಲ. ಆದರೂ ಈ ಉಪಕರಣವನ್ನು ಬಳಸಿ ಕಣಗಳ ಚಲನೆಯನ್ನು ಅವಲೋಕಿಸಬಹುದು; ನಿರ್ದಿಷ್ಠ ಗಾತ್ರದಲ್ಲಿರುವ ಕಣಗಳನ್ನು ಗಣಿಸಬಹುದು; ಮತ್ತು ಕಣಗಳ ಸರಾಸರಿ ತೂಕವನ್ನೂ ನಿರ್ಧರಿಸಬಹುದು. ಆದ್ದರಿಂದಲೇ ಕಲಿಲ ರಸಾಯನ ವಿಜ್ಞಾನದ ಮುನ್ನಡೆಯಲ್ಲಿ ಅತಿಸೂಕ್ಷ್ಮ ದರ್ಶಕದ ಪಾತ್ರ ಅತಿ ಹಿರಿದು. ನೆಫೆಲೋಮಾಪಕ ಮತ್ತು ಟಿಂಡಾಲ್ ಮಾಪಕ ಎಂಬುವು ಟಿಂಡಾಲ್ ಪರಿಣಾಮದ ಮೇಲೆ ಕಾರ್ಯನಿರ್ವಹಿಸುವ ಇನ್ನೆರಡು ಉಪಕರಣಗಳು. ಅಲ್ಪಪ್ರಮಾಣದಲ್ಲಿ ನಿಲಂಬಿತವಾಗಿರುವ ದ್ರವ್ಯದ ನಿರ್ಧರಣೆಯನ್ನು ಕುರಿತ ಪರಿಮಾಣಾತ್ಮಕ ವಿಶ್ಲೇಷಣೆಯಲ್ಲಿ ನೆಫೆಲೋಮಾಪಕದ ಬಳಕೆ ಉಂಟು. ವಿಷವಸ್ತುಗಳ ಮತ್ತು ಹೊಗೆಯ ತೀವ್ರತೆ ಮತ್ತು ಕಾಲಕಾಲಕ್ಕೆ ಅವುಗಳ ಸಾಂದ್ರತೆಯಲ್ಲಿ ಆಗುವ ಬದಲಾವಣೆಗಳನ್ನು ಅಳೆಯಲು ಟಿಂಡಾಲ್ ಮಾಪಕದ ಬಳಕೆ ಉಂಟು.


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: