ಟಿಂಗಡೀ- ಹೆಮಿಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಸಸ್ಯಾಹಾರಿಗಳಾದ ಅನೇಕ ತೆರನ ಕೀಟಗಳನ್ನು ಒಳಗೊಂಡಿದೆ. ಇವನ್ನು ಕಲಾಬತ್ತು ತಿಗಣೆಗಳು (ಲೇಸ್ ಬಗ್ಸ್) ಎಂದು ಕರೆಯಲಾಗುವುದು. ವಿವರ ಬಹಳ ಸಣ್ಣಗಾತ್ರದ ಕೀಟಗಳಿವು; ಇವುಗಳ ಉದ್ದ 4-5 mm ದೇಹ ತೆಳುವಾಗಿಯೂ ಚಪ್ಪಟೆಯಾಗಿಯೂ ಇದೆ. ದೇಹದ ಮೇಲೆ ಮುಳ್ಳುಗಳಿರುವುದುಂಟು. ಕೆಲವು ಸಲ ಪ್ರೋನೋಟಮ್ ಭಾಗ ತಲೆಯನ್ನು ಆವರಿಸಿರುವ ಒಂದು ಬಗೆಯ ಕುಂಚಿಗೆಯಾಗಿ ಮಾರ್ಪಟ್ಟಿದೆ. ಜೊತೆಗೆ ಪ್ರೋತೋರ್ಯಾಕ್ಸಿನ್ನಿನ ಆಚೀಚೆ ಹರಡಿರುವ ತಟ್ಟೆಯಾಕಾರದ ಹಾಲೆಗಳೂ ಉಂಟು. ಇವಕ್ಕೆ ಪ್ಯಾರನೋಟ ಎಂದು ಹೆಸರು. ಅಂತೆಯೇ ಉದರಭಾಗದ ಮೇಲೂ ಅಗಲವಾದ ರೆಕ್ಕೆಗಳಂಥ ರಚನೆಗಳಿವೆ. ಇವಕ್ಕೆ ಹೆಮಿಎಲಿಟ್ರ ಎಂದು ಹೆಸರು. ಕುಂಚಿಗೆ, ಪ್ಯಾರನೋಟ ಮತ್ತು ಹೆಮಿಎಲಿಟ್ರಗಳು ತೆಳುವಾಗಿಯೂ ಪಾರದರ್ಶಕವಾಗಿಯೂ ಇರುವುವಲ್ಲದೆ ಇವುಗಳ ಮೇಲೆ ಬಲೆಯ ರೀತಿಯ ವಿನ್ಯಾಸವೂ ಇದೆ. ಇದರಿಂದಾಗಿ ಇವು ಕಲಾಬತ್ತು ವಿನ್ಯಾಸದಂತೆ ಕಾಣುತ್ತವೆ. ಕಲಾಬತ್ತು ತಿಗಣೆಗಳು ಮರಗಿಡಗಳ ಊತಕಗಳನ್ನು ಕೊರೆದು ಮೊಟ್ಟೆಯಿಡುವುವು. ಡಿಂಬಗಳು ಎಲೆಗಳನ್ನು ತಿಂದು ಬೆಳೆಯುತ್ತವೆ. ಇವುಗಳ ಹಾವಳಿಗೆ ತುತ್ತಾದ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಬಿದ್ದುಹೋಗುತ್ತವೆ.

ಕೆಲವು ಪ್ರಭೇದಗಳು (ಕೋಪಿಯಮ್ ಕಾನ್ರ್ಯೂಟಮ್ ಮತ್ತು ಕೋ.ಟ್ಯೂಕ್ರಿಯೈ) ಯೂರೋಪಿನಲ್ಲಿ ಬೆಳೆಯುವ ಟ್ಯೂಕ್ರಿಯಮ್ ಸಸ್ಯಗಳ ಎಲೆಗಂತಿಗಳನ್ನು (ಗಾಲ್ಸ್) ಉಂಟುಮಾಡುವುವು. ಉಳಿದ ಉದಾಹರಣೆಗಳು : 1 ಕೋರಿ ತೂಕ ಸಿಲಿಯೇಟ (ಸಿಕಮೋರ್ ಲೇಸ್ ಬಗ್) : ಉತ್ತರ ಅಮೆರಿಕದ ಸಿಕಮೋರ್ ಮರಗಳ ಪಿಡುಗೆನಿಸಿರುವ ಕೀಟ. 2 ಗರ್ಗಾಫಿಯ ಸೊಲಾನಿ : ಹತ್ತಿ, ಬದನೆ, ಮುಂತಾದ ಗಿಡಗಳ ಮೇಲೆ ಜೀವಿಸುವ ಕೀಟ. 3 ಸ್ಟೆಫನೈಟಿಸ್ ಪೈರಿ : ಯೂರೋಪಿನಲ್ಲಿ ಸೇಬು, ಪಿಯರ್ ಹಣ್ಣಿನ ಗಿಡಗಳಿಗೆ ಹತ್ತುವ ಕೀಟ. 4 ಸ್ಟೆಫನೈಟಿಸ್ ಆಂಬಿಗುವ : ಜಪಾನಿನಲ್ಲಿ ಚೆರಿ ಮತ್ತು ಸೇಬು ಹಣ್ಣಿನ ಗಿಡಗಳಿಗೆ ಅಂಟುತ್ತದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಿಂಗಡೀ&oldid=1085481" ಇಂದ ಪಡೆಯಲ್ಪಟ್ಟಿದೆ