ಟಾಕಮೀನಿ ಜೊಕಿಚಿ
ಟಾಕಮೀನಿ ಜೊಕಿಚಿ (1854-1922). ಜಪಾನೀ ಅಮೆರಿಕನ್ ರಸಾಯನ ವಿಜ್ಞಾನಿ. ಹೃದ್ರೋಗಚಿಕಿತ್ಸೆಯಲ್ಲಿ ಹೃದಯೋತ್ತೇಜಕ ವಾಗಿಯೂ ಉಬ್ಬಸ ಮುಂತಾದ ರೋಗಗಳ ಚಿಕಿತ್ಸೆಯಲ್ಲಿ ಔಷಧಿಯಾಗಿಯೂ ಬಳಸುವ ಆಡ್ರಿನಲಿನ್ ಅಥವಾ ಎಪಿನೆಫ್ರೀನನ್ನು ಅಡ್ರೀನಲ್ ಗ್ರಂಥಿಗಳಿಂದ ಬೇರ್ಪಡಿಸಿ ಮೊತ್ತಮೊದಲ ಬಾರಿಗೆ ಹಾರ್ಮೋನ್ ಒಂದನ್ನು ತಯಾರಿಸಿ ಖ್ಯಾತಿಪಡೆದ.
ಬದುಕು
ಬದಲಾಯಿಸಿಟಾಕಮೀನಿ ಜಪಾನಿನ ಟಕ ಓಕ ಎಂಬಲ್ಲಿ 1854ರ ನವೆಂಬರ್ 3ರಂದು ಜನಿಸಿದ. ಅಮೆರಿಕನ್ ನೌಕಾ ಬಲದ ಅಧಿಕಾರಿ ಕಮಡೋರ್ ಪೆರ್ರಿಯ ಪ್ರಯತ್ನದ ಫಲವಾಗಿ ಪಾಶ್ಚಾತ್ಯರು ಜಪಾನಿನ ಷಿಮೋಡ ಮತ್ತು ಹಕೊಡಾಟೆ ಬಂದರುಗಳಿಗೆ ಪ್ರವೇಶ ದೊರಕಿಸಿಕೊಂಡದ್ದು ಅದೇ ವರ್ಷ. ಆಗ ಉಭಯ ರಾಷ್ಟ್ರಗಳೂ ಮಾಡಿಕೊಂಡ ಕನಗಾವ ಕರಾರು ಜಪಾನಿನ ಪಾಶ್ಚಾತ್ಯೀಕರಣಕ್ಕೆ ದಾರಿ ಮಾಡಿಕೊಟ್ಟಿತು ಎನ್ನಬಹುದು. ಅದರ ಪರಿಣಾಮವಾಗಿ ಪಾಶ್ಚಾತ್ಯ ಶಿಕ್ಷಣ ಪಡೆದ ಮೊದಲಿಗರಲ್ಲಿ ಟಾಕಮೀನಿಯೂ ಒಬ್ಬ. ಅವನು 1879ರಲ್ಲಿ ಟೋಕಿಯೊ ನಗರದ ಇಂಪಿರಿಯಲ್ ವಿಶ್ವವಿದ್ಯಾಲಯದ ಪದವೀಧರನಾದ. ರಾಸಾಯನಿಕ ಎಂಜಿನಿಯರಿಂಗಿನಲ್ಲಿ ವಿಶೇಷ ಶಿಕ್ಷಣ ಪಡೆದ ಟಾಕಮೀನಿ 1887ರಲ್ಲಿ ಟೋಕಿಯೊದಲ್ಲಿ ಸೂಪರ್‍ಫಾಸ್ಟೇಟ್ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಜಪಾನಿನ ರಾಸಾಯನಿಕ ಗೊಬ್ಬರ ಕೈಗಾರಿಕೆಯ ಆದ್ಯ ಪ್ರವರ್ತಕನಾದ. 1890ರಲ್ಲಿ ಈತ ಅಮೆರಿಕಕ್ಕೆ ವಲಸೆ ಹೋಗಿ ನ್ಯೂಜೆರೆಸಿ ಸಂಸ್ಥಾನದ ಕ್ಲಿಫ್ಟನ್‍ನಲ್ಲಿ ಒಂದು ಸಂಶೋಧನಾಲಯವನ್ನು ಸ್ಥಾಪಿಸಿದ. ತನ್ನ ಜೀವಮಾನದ ಕೊನೆಯ ವರೆಗೂ ಅಮೆರಿಕದಲ್ಲೇ ಉಳಿದು 1922ರ ಜುಲೈ 22ರಂದು ನ್ಯೂಯಾರ್ಕ್‍ನಲ್ಲಿ ಮಡಿದ.
ಸಾಧನೆ
ಬದಲಾಯಿಸಿಟಾಕಮೀನಿಯ ಅತ್ಯಂತ ಮುಖ್ಯ ವೈಜ್ಞಾನಿಕ ಸಾಧÀನೆಯೆಂದರೆ ಅಡ್ರೀನಲ್ ಗ್ರಂಥಿಗಳಿಂದ ಅಡ್ರಿನಲೀನನ್ನು ಪ್ರತ್ಯೇಕಿಸಿದ್ದು (1901). ಅದರ ರಾಸಾಯನಿಕ ನಾಮ ಎಪಿನೆಫ್ರೀನ್. ಆಗ ಇನ್ನೂ ಹಾರ್ಮೋನ್ ಸಿದ್ಧಾಂತ ರೂಪುಗೊಂಡಿರಲಿಲ್ಲವಾದ್ದರಿಂದ ತಾನು ತಯಾರಿಸಿದುದು ಒಂದು ಹಾರ್ಮೋನು ಎಂಬುದೂ ತಾನೇ ಮೊತ್ತÀಮೊದಲ ಹಾರ್ಮೋನನ್ನು ತಯಾರಿಸಿದವನು ಎಂಬುದೂ ಅವನಿಗೆ ಗೊತ್ತಿರಲಿಲ್ಲ. ಅಡ್ರಿನಲೀನ್ ಎಂಬ ವಾಣಿಜ್ಯನಾಮದಿಂದ ಅದು ಈಗ ಪ್ರಸಿದ್ಧವಾಗಿದೆ ಮತ್ತು ವೈದ್ಯಕೀಯದಲ್ಲಿ ಬಹಳ ಉಪಯುಕ್ತವೆನಿಸಿದೆ. ಪಿಷ್ಟವನ್ನು (ಸ್ಟಾರ್ಚ್) ಜಲವಿಚ್ಛೇದಿಸಬಲ್ಲ ಎಂಜೈಮ್ ಒಂದನ್ನು ಅಕ್ಕಿಯಿಂದ ಬೇರ್ಪಡಿಸಿದುದು ಅವನ ಇನ್ನೊಂದು ವೈಜ್ಞಾನಿಕ ಸಾಧನೆ. ಸುಮಾರು ಎಂಬತ್ತು ವರ್ಷ ಮುಂಚೆ, 1833ರಲ್ಲಿ ಫ್ರೆಂಚ್ ರಸಾಯನವಿಜ್ಞಾನಿ ಪಾಯೆನ್, ಮಾಲ್ಟ್‍ನಿಂದ ತಯಾರಿಸಿದ ಡಯಾಸ್ಟೇಸ್ ಸಹ ಪಿಷ್ಟವನ್ನು ಜಲವಿಚ್ಛೇದಿಸಬಲ್ಲದಾದ್ದರಿಂದ ಟಾಕಮೀನಿ ತಯಾರಿಸಿದ ಎಂಜೈಮಿಗೆ ಟಾಕಾಡಯಾಸ್ಪೇಸ್ ಎಂಬ ಹೆಸರು ಬಂತು. ಕೈಗಾರಿಕೆಗಳಲ್ಲಿ ಅದನ್ನು ಉಪಯೋಗಿಸುವ ವಿಧಾನಗಳನ್ನೂ ಟಾಕಮೀನಿ ರೂಪಿಸಿದ.